ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಒಂದೇ ನಿಮಿಷ, ಎರಡೇ ಸಾಲು… ಹೊರನಡೆದ ರಾಜ್ಯಪಾಲರು…
ಹೌದು… ರಾಜ್ಯ ವಿಧಾನಮಂಡಲ ಇಂದು ಇದೇ ಮೊದಲ ಬಾರಿಗೆ ಅಪರೂಪದ ಹಾಗೂ ವಿವಾದಾತ್ಮಕ ಕ್ಷಣವೊಂದಕ್ಕೆ ಸಾಕ್ಷಿಯಾಗಿದ್ದು, ಅಧಿವೇಶನದಲ್ಲಿ ಪಾಲ್ಗೊಂಡ ರಾಜ್ಯಪಾಲರು #GovernorofKarnataka ಭಾಷಣ ಓದದೇ ಹೊರಟಿದ್ದಾರೆ.
ರಾಜ್ಯ ಸರ್ಕಾರ ನಿಗದಿಪಡಿಸಿದಂತೆ ಜ.22ರ ಇಂದಿನಿಂದ 31ರವರೆಗೂ ವಿಧಾನ ಮಂಡಲ ಅಧಿವೇಶನ ಕರೆದಿತ್ತು. ಅದರಂತೆ ಇಂದು ರಾಜ್ಯಪಾಲ ಥಾವರ ಚಂದ್ ಗೆಲ್ಹೋಟ್ ಅವರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಬೇಕಿತ್ತು. ಆದರೆ, ರಾಜ್ಯಪಾಲರು ಮುಖ್ಯಮಂತ್ರಿ, ಸ್ಪೀಕರ್ ಹಾಗೂ ಇತರರಿಗೆ ಶುಭಕೋರಿ, ಪೂರ್ಣ ಭಾಷಣ ಓದದೇ ಹೊರಟು ಹೋದರು.
ವಿಧಾನಸಭೆಯಲ್ಲಿ ಮಾತನಾಡಿದ ರಾಜ್ಯಪಾಲರು, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿ ಸಾಧಿಸುವತ್ತ ಸರ್ಕಾರ ಸರ್ವರೀತಿಯಲ್ಲಿ ಕಟಿಬದ್ಧವಾಗಿದೆ. ಜೈ ಹಿಂದ್, ಜೈ ಕರ್ನಾಟಕ ಎಂದಷ್ಟೇ ಹೇಳಿ ಎಂದು ಹೇಳಿ ಭಾಷಣ ಮುಕ್ತಾಯಗೊಳಿಸಿ, ಹೊರ ನಡೆದರು.
ರಾಜ್ಯಪಾಲರು ಭಾಷಣ ಪೀಠದಿಂದ ಕೆಳಗಿಳಿದು ಬಂದಾಗ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ರಾಜ್ಯಪಾಲರಿಗೆ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟು ಚಿಕ್ಕ ಭಾಷಣ ನಿರೀಕ್ಷಿಸದ ಸಚಿವರು ಹಾಗೂ ಶಾಸಕರು ಅಚ್ಚರಿಗೊಳಗಾಗಿದ್ದು, ತಕ್ಷಣವೇ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅವರನ್ನು ಅಡ್ಡಗಟ್ಟಿ ಭಾಷಣ ಓದುವಂತೆ ಕೇಳಿಕೊಂಡರು.
ರಾಜ್ಯಪಾಲರ ನಡೆಗೆ ಕಾರಣವೇನು?
ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣದ ಕರಡು ಪ್ರತಿಯಲ್ಲಿದ್ದ 11 ಪ್ಯಾರಾಗಳನ್ನು ತೆಗೆದುಹಾಕುವಂತೆ ರಾಜ್ಯಪಾಲರು ಸೂಚಿಸಿದ್ದರು. ಇದಕ್ಕೆ ಸರ್ಕಾರ ಒಪ್ಪದೆ ಹೋದ ಪರಿಣಾಮ ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವೆ ತೀವ್ರ ಬಿಕ್ಕಟ್ಟು ಉಂಟಾಗಿತ್ತು. ಇದೇ ಕಾರಣದಿಂದ ರಾಜ್ಯಪಾಲರು ಸಂಪೂರ್ಣ ಭಾಷಣ ಓದದೆ ಕೇವಲ ಎರಡು ಸಾಲಿನಲ್ಲಿ ಭಾಷಣ ಮುಗಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇನ್ನೊಂದೆಡೆ, ಈ ಬೆಳವಣಿಗೆಯು ರಾಜ್ಯಪಾಲ-ಸರ್ಕಾರ ನಡುವಿನ ಸಂಬಂಧದಲ್ಲಿ ಮತ್ತಷ್ಟು ಬಿರುಕು ಮೂಡಿಸಬಹುದೆಂಬ ಚರ್ಚೆಯೂ ಆರಂಭವಾಗಿದೆ.
ಸಚಿವರು ಹಾಗೂ ಕಾಂಗ್ರೆಸ್ ಶಾಸಕರು ಇದನ್ನು ಸಂವಿಧಾನಾತ್ಮಕ ಪದ್ಧತಿಗೆ ವಿರುದ್ಧವಾದ ನಡೆ ಎಂದು ಟೀಕಿಸಿದ್ದಾರೆ. ಜನರಿಂದ ಆಯ್ಕೆಯಾದ ಸರ್ಕಾರದ ನೀತಿ-ಕಾರ್ಯಕ್ರಮಗಳನ್ನು ಸದನದ ಮುಂದೆ ಮಂಡಿಸುವುದು ರಾಜ್ಯಪಾಲರ ಕರ್ತವ್ಯ ಎಂದು ಅವರು ವಾದಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲರ ಈ ನಡೆ ಸಂವಿಧಾನ ವಿರೋಧಿಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















