ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊರೋನ ವೈರಸ್ ಕೇವಲ ಚೀನಾಕ್ಕಲ್ಲ, ಇಡೀ ಜಗತ್ತಿಗೆ ಮುತ್ತಿಗೆ ಹಾಕಲಿದೆ ಎಂಬ ಸುದ್ದಿ ಇಡೀ ಜಗತ್ತಿಗೆ, ಜಗತ್ತನ್ನಾಳುವ ಅನೇಕ ದೇಶಗಳ ನಾಯಕರಿಗೆ ಅರಿವಾಗುವಷ್ಟರಲ್ಲಿ ವೈರಸ್ ಎಲ್ಲಾ ದೇಶಗಳ ಗಡಿಗಳೊಳಗೆ ಪ್ರವೇಶಿಸಿಯಾಗಿತ್ತು.
ಅನೇಕ ದೇಶಗಳು ಸಂಪೂರ್ಣ ರಾಷ್ಟ್ರೀಯ ಲಾಕ್ ಡೌನ್ ಅನಿವಾರ್ಯವೆಂಬ ಪರಿಸ್ಥಿತಿ ಎದುರಾದಾಗಲೂ ಲಾಕ್ ಡೌನ್ ಘೋಷಿಸಲು ಒಂದೋ ತಡ ಮಾಡಿದವು ಇಲ್ಲವೇ ಘೋಷಿಸಲು ಹಿಂದೇಟು ಹಾಕಿದವು. ಕಾರಣ ಲಾಕ್ ಡೌನ್ ಆ ದೇಶದ ಎಕಾನಮಿ ಅಂದರೆ ಆರ್ಥಿಕ ಬೆಳವಣಿಗೆಯನ್ನು ತತ್ಕಾಲೀನವಾಗಿ ಸ್ವಲ್ಪ ಕಾಲ ಸ್ತಬ್ಧಗೊಳಿಸಬಹುದೆಂಬ ಭಯ.
ಆದರೆ ಭಾರತದ ಪ್ರಧಾನಿ ಎಕಾನಮಿಗಿಂತಲೂ ತನ್ನ ಪ್ರೀತಿಯ ಜನರೇ ತನಗೆ ಮುಖ್ಯ ಎಂದು ಕಂಪ್ಲೀಟ್ ನ್ಯಾಷನಲ್ ಲಾಕ್ ಡೌನ್ ಎಂಬ ಬೋಲ್ಡ್ ಡಿಸಿಷನ್ ಘೋಷಿಸಿಯೇ ಬಿಟ್ಟರು.
ಇಂದು ಜಗತ್ತಿನ ಮುಂಚೂಣಿ ರಾಷ್ಟ್ರಗಳ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಬಹುತೇಕ ರಾಷ್ಟ್ರಗಳು ಪೈಪೋಟಿಯಲ್ಲಿವೆ ಹಾಗೂ ಮುಂಚೂಣಿ ಮತ್ತು ಯಶಸ್ವೀ ರಾಷ್ಟ್ರಗಳ ಹಣೆಪಟ್ಟಿ ಇಂದು ನಿರ್ಧಾರವಾಗುತ್ತಿರುವುದು ಆಯಾ ದೇಶಗಳ ಎಕಾನಮಿ ಆಧಾರದ ಮೇಲೆ.
ಅಮೆರಿಕಾ ಜಗತ್ತಿನ ಶೇ.50 ಭಾಗದಷ್ಟು ಸಂಪತ್ತನ್ನು ತನ್ನಲ್ಲಿರಿಸಿಕೊಂಡು ವಿಶ್ವದ ಮುಂಚೂಣಿ ರಾಷ್ಟ್ರದ ಹಣೆಪಟ್ಟಿ ಗಳಿಸಿದ್ದರೆ, ಎರಡನೆಯ ಸ್ಥಾನದಲ್ಲಿರುವ ಚೀನಾ ಭಾರೀ ದೂರದಲ್ಲಿದೆ.
ನಿಮಗಿದನ್ನು ಅರ್ಥ ಮಾಡಿಸಲು ಒಂದು ಸರಳ ಉದಾಹರಣೆ ಕೊಡುತ್ತೇನೆ.
ಮೊದಲೆಲ್ಲಾ ಒಂದು ಚಲನಚಿತ್ರ ಯಶಸ್ವಿಯಾಗಿದೆಯೆಂದರೆ ಅದಕ್ಕೆ ರುಜುವಾತಾಗಿ ಪರಿಗಣಿಸುತ್ತಿದ್ದುದು ಚಲನಚಿತ್ರ ಎಷ್ಟು ದಿನ ಓಡಿದೆ ಎಂಬ ಅಳೆತೆಗೋಲನ್ನು. (ಕನ್ನಡದ ರಾಜಕುಮಾರ್ ಅವರ ಬಂಗಾರದ ಮನುಷ್ಯ ಮತ್ತು ಹಿಂದಿಯ ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ ಚಿತ್ರಗಳನ್ನು ನೆನಪಿಸಿಕೊಳ್ಳಿ).
ಆದರೆ ಈಚೀಚೆಗೆ ಚಿತ್ರಗಳ ಯಶಸ್ಸಿಗೆ ಅಳತೆಗೋಲಾಗಿರುವುದು ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಹಣಗಳಿಸಿದೆಯೆಂಬ ಅಂಕಿ ಅಂಶಗಳು.
ಹಾಗೆಯೇ ಜಗತ್ತಿನ ರಾಷ್ಟ್ರಗಳದ್ದು ಮುಗಿಯದ ಓಟ. ಮುಂಚೂಣಿ ಪದವಿಯ ಗಳಿಕೆ ಒಂದು ಭಾಗವಾದರೆ ಆ ಪದವಿಯನ್ನು ಉಳಿಸಿಕೊಳ್ಳಲು ಮತ್ತೊಂದು ಪ್ಯಾರಲಲ್ ರೇಸ್. ಲಾಕ್ ಡೌನ್ ಘೋಷಣೆಯಿಂದ ಆಯಾ ದೇಶಗಳ ಆರ್ಥಿಕ ಅಭಿವೃದ್ಧಿ ಕೊಂಚ ಕಾಲ ಸ್ತಬ್ಧವಾಗಿಬಿಡಬಹುದೆಂಬ ಆತಂಕ ಬಹುತೇಕ ದೇಶಗಳದ್ದು.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಮುಂದುವರೆದ ರಾಷ್ಟ್ರಗಳಲ್ಲಿ ಸಂಪೂರ್ಣ ಲಾಕ್ ಡೌನ್ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತಲೂ ಸುಲಭ. ಏಕೆಂದರೆ, ಮುಂದುವರೆದ ರಾಷ್ಟ್ರಗಳ ಬಳಿಯಿರುವ ಅಗಾಧ ಸಂಪತ್ತಿನ ಸಹಾಯದಿಂದ ತಾನು ಲಾಕ್ ಡೌನ್ ಗೆ ಒಳಗಾದಾಗಲೂ ಅಗತ್ಯ ವಸ್ತುಗಳ ಕೊರತೆ ಬಿದ್ದರೆ, ದೇಶದ ಆಂತರಿಕ ಉತ್ಪಾದನೆ ನಿಂತು ಹೋದರೆ ಹೊರಗಿನಿಂದ ಆಮದು ಮಾಡಿಕೊಳ್ಳಲು ಹಾಗೂ ಅದನ್ನು ತನ್ನ ದೇಶದ ಜನರಿಗೊದಗಿಸಲು – ಹಂಚಲು ಅಪರಿಮಿತ ಆರ್ಥಿಕ ಸಂಪನ್ಮೂಲಗಳಿರುತ್ತವೆ.
ಅಮೆರಿಕಾದ ವಿಶ್ವವಿದ್ಯಾಲಯವೊಂದರಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ಮಲೇಷ್ಯಾ ಮೂಲದ ಮಿತ್ರರೊಬ್ಬರೊಂದಿಗೆ ಚರ್ಚಿಸುತ್ತಿದಾಗ ಅವರು ತಿಳಿಸಿದ್ದು ಎ7 ಗ್ರೂಪ್ ನ ಎಲ್ಲಾ ರಾಷ್ಟ್ರಗಳ ವಾರ್ಷಿಕ ತಲಾ ಬಜೆಟ್ ಮೊತ್ತವು ಕನಿಷ್ಠ ಪಕ್ಷ ವಿಶ್ವದ 100 ಇತರ ರಾಷ್ಟ್ರಗಳ ವಾರ್ಷಿಕ ಬಜೆಟ್ ಮೊತ್ತವನ್ನು ಒಟ್ಟುಗೂಡಿಸುವುದರ ಒಟ್ಟು ಮೊತ್ತಕ್ಕಿಂತಲೂ ಹೆಚ್ಚಾಗಿರುತ್ತದೆ ಎಂಬ ಅಂಕಿ ಅಂಶವನ್ನವರು ಹಂಚಿಕೊಂಡರು.
ಹೀಗಿರುವಾಗ ಮುಂದುವರೆದ ರಾಷ್ಟ್ರಗಳು ಒಂದಷ್ಟು ಕಾಲ ಲಾಕ್ ಡೌನ್ ಘೋಷಿಸಿದರೂ ಆ ದೇಶದ ಸಮಸ್ತ ವಾಸಿಗಳಿಗೆಲ್ಲರಿಗೂ ಆಹಾರ ಮತ್ತು ಅಗತ್ಯ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಿದರೂ ಆ ದೇಶಗಳು ಬಡರಾಷ್ಟ್ರಗಳಾಗಿಯಂತೂ ಬದಲಾಗುವುದಿಲ್ಲ.
ಹಾಗಿದ್ದರೆ ಅಮೆರಿಕಾ ಒಳಗೊಂಡಂತೆ ಅನೇಕ ರಾಷ್ಟ್ರಗಳು ಲಾಕ್ ಡೌನ್ ಗೆ ಹಿಂದೇಟು ಹಾಕಿದ್ದೇಕೆ? ಏಕೆಂದರೆ ಆ ರಾಷ್ಟ್ರಗಳಿಗೆ ಜಾಗತಿಕ ಆರ್ಥಿಕ ರೇಸ್’ನಲ್ಲಿ ಹಿಂದೆ ಸರಿಸಲ್ಪಡುವ ಭಯ. ಭಾರತದಂತಹ ರಾಷ್ಟ್ರಗಳ ಪರಿಸ್ಥಿತಿ ಇದಕ್ಕಿಂತಲೂ ಭಿನ್ನ. ಭಾರತ ವಿಶ್ವದ ಟಾಪ್ 5 ಆರ್ಥಿಕ ಶಕ್ತಿಗಳ ಪಟ್ಟಿಗೆ ಎಂಟ್ರಿ ಅದಾಗಲೇ ಕೊಟ್ಟಾಗಿದೆ. ವಿಶ್ವದ ಅತಿವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆ ಎಂಬ ವಿಶಿಷ್ಟ ಹೆಗ್ಗುರುತನ್ನೂ ಪಡೆದಾಗಿದೆ.
ಆದರೆ, ಈ ವಿಚಾರದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ನಿಲುವು ನಿಜಕ್ಕೂ ವಿಶ್ವದ ಮೂಲೆ ಮೂಲೆಯಲ್ಲಿರುವ ಭಾರತೀಯರೆಲ್ಲರಿಗೂ ರೋಮಾಂಚನವಾದೀತು.
ಎಕಾನಮಿ ಕೆಳಗಿಳಿದರೆ ಇಳಿಯಲಿ. ಅದನ್ನು ಮೇಲೆತ್ತಬಲ್ಲೆವು. ಆ ಪೂರ್ಣ ಸಾಮರ್ಥ್ಯ ದೇವರು ಕೊಟ್ಟಿದ್ದಾನೆ. ಆದರೆ ನನಗೆ ನನ್ನ ಪ್ರೀತಿಯ ಜನ ಮುಖ್ಯ. ಜಗತ್ತು ಓಡುವ ರೇಸ್ ರನ್ ಗಿಂತಲೂ ನನ್ನ ಜನ ಮುಖ್ಯ. ಯಾವ ವ್ಯಕ್ತಿಗೆ ತನ್ನ ಪ್ರೀತಿಯ ಜನರ ಮುಂದೆ ಮಿಕ್ಕೆಲ್ಲಾ ವಿಚಾರಗಳು ಗೌಣವೆನ್ನುವಷ್ಟು ಭಾವನಾತ್ಮಕ ಅಗಾಧತೆ ಇರುತ್ತದೆಯೋ, ಆ ವ್ಯಕ್ತಿ ತನ್ನ ಗುರಿಯನ್ನು ಸರಿದಾರಿಯಲ್ಲಿ ಸಾಧಿಸಿಕೊಳ್ಳುವುದು ಶಿಲಾ ಲೇಖನದಷ್ಟೇ ಸ್ಪಷ್ಟ.
ಅಂತಹ ವ್ಯಕ್ತಿ, ಅಂತಹ ಪ್ರಾಮಾಣಿಕ ಹೋರಾಟಗಳು ಗುರಿಯನ್ನು ತಲುಪಿಸುವುದಲ್ಲದೆ, ಹಾದಿಯಲ್ಲಿ ಕಳೆದುಕೊಂಡದ್ದೆಲ್ಲವನ್ನೂ ಕಾಲ ಹುಡುಕಿ ಹುಡುಕಿ ಹಿಂದಿರುಗಿಸುವ ಸಮಯ ಬಂದೇ ಬರುತ್ತದೆ.
ಬೇರೆಲ್ಲವನ್ನೂ ಎದುರಿಸಿ ಗೆದ್ದುಬಿಡಬಲ್ಲೆವು ಆದರೆ ನಮ್ಮ ಜನರಿಲ್ಲದೆ ನಾವು ಏನೇನೂ ಅಲ್ಲ. ಅಂತಹ unconditional love, ತನ್ನ ಪ್ರೀತಿಯ ಜನರೆಡೆಗೆ ತೋರುವ ಗುಣವಿದೆಯಲ್ಲ, ಅದನ್ನು ಕೊಟ್ಟ ಭಾರತ ಭೂಮಿಯ ಮಣ್ಣಿನ ಕಣಕಣಕ್ಕೂ ಮತ್ತೆ ಮತ್ತೆ ನೂರು ಬಾರಿ ನಮಿಸಬೇಕು…..
Get in Touch With Us info@kalpa.news Whatsapp: 9481252093
Discussion about this post