ಕಲ್ಪ ಮೀಡಿಯಾ ಹೌಸ್ | ಮುಂಬೈ |
ರನ್ ವೇನಲ್ಲಿ ಲ್ಯಾಂಡ್ ಆಗಲು ಇನ್ನೇನು ಕೇವಲ 100 ಅಡಿ ಮಾತ್ರ ಬಾಕಿಯಿತ್ತು. ಮೊದಲ ಬಾರಿ ವಿಫಲಗೊಂಡು, ಎರಡನೇ ಬಾರಿ ಇಳಿಯಲು ವಿಮಾನ ಪ್ರಯತ್ನಿಸುತ್ತಿತ್ತು. ಆದರೆ, ಅಷ್ಟರಲ್ಲೇ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿತು… ಇದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿ ಐವರನ್ನುಬಲಿ ಪಡೆದ ವಿಮಾನ ದುರಂತದ ಕೊನೆ ಕ್ಷಣದ ಚಿತ್ರಣ.
ಘಟನೆ ಕುರಿತಂತೆ ಪ್ರತ್ಯಕ್ಷದರ್ಶಿಯೊಬ್ಬರು ರಾಷ್ಟ್ರೀಯ ಮಾಧ್ಯಮಗಳಿಗೆ ಮಾತನಾಡಿದ್ದು, ವಿಮಾನ ಪತನದ ದೃಶ್ಯಗಳನ್ನು ತೆರೆದಿಟ್ಟಿದ್ದಾರೆ.
ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಎರಡನೇ ಬಾರಿ ರನ್ ವೇನಲ್ಲಿ ಲ್ಯಾಂಡ್ ಆಗಲು ಇಳಿಯುವ ಹಂತದಲ್ಲಿದ್ದಾಗ ಪತನಗೊಂಡಿದೆ.
ಫ್ಲೈಟ್ ರಾಡಾರ್ ದತ್ತಾಂಶದ ಪ್ರಕಾರ ಬಾಂಬಾರ್ಡಿಯರ್ ಲಿಯರ್ಜೆಟ್ 45 (ವಿಟಿ-ಎಸ್’ಎಸ್ಕೆ) ಮುಂಬೈ ವಿಮಾನ ನಿಲ್ದಾಣದಿಂದ ಬೆಳಗ್ಗೆ 8:10ಕ್ಕೆ ಟೇಕಾಫ್ ಆಗಿತ್ತು. ಅರಬ್ಬಿ ಸಮದ್ರದ ಮೇಲೆ ಹಾರಿ 8:30ಕ್ಕೆ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ಪೈಲಟ್ ಪ್ರಯತ್ನಿಸಿದ್ದಾರೆ.
ರನ್ ವೇನಲ್ಲಿ ಇಳಿಸಲು ಮೊದಲ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಎರಡನೇ ಬಾರಿ ಇಳಿಸಲು ಮುಂದಾಗಿದ್ದಾರೆ. ಬೆಳಗ್ಗೆ 8:42 ರ ಸುಮಾರಿಗೆ ಎರಡನೇ ಬಾರಿಗೆ ಇಳಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ವಿಫಲವಾಗಿ ವಿಮಾನ ಪತನಗೊಂಡಿದೆ. 8:45ರ ವೇಳೆಗೆ ಅವರ ವಿಮಾನ ಬಾರಾಮತಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಲ್ಯಾಂಡ್ ಆಗುವ ಕೆಲ ಸೆಕೆಂಡ್ ಮೊದಲು ವಿಮಾನ ಪತನವಾಗಿದೆ.
ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ ವಿಮಾನ ರನ್ ವೇ ಬಳಿಯೇ ಹಾರುತ್ತಿತ್ತು. ರನ್ ವೇ ಸಮೀಪಿಸಲು ಇನ್ನೇನು 100 ಅಡಿ ಇದ್ದಾಗ ಪತನಗೊಂಡು ಬಿದ್ದಿದೆ. ವಿಮಾನ ನೆಲಕ್ಕೆ ಬಿದ್ದ ಕೂಡಲೇ ದೊಡ್ಡ ಸ್ಫೋಟಗೊಂಡಿತು. ನಂತರ 4-5 ಹೆಚ್ಚಿನ ಸ್ಫೋಟಗಳು ಸಂಭವಿಸಿದವು ಎಂದು ತಿಳಿಸಿದ್ದಾರೆ.
ವಿಮಾನ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಳ್ಳುವುದನ್ನು ನೋಡಿದ ಕೂಡಲೇ ನಾವು ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ಹೊರಗೆ ತೆಗೆಯಲು ಪ್ರಯತ್ನಪಟ್ಟೆವು. ಆದರೆ ಬೆಂಕಿಯ ಜ್ವಾಲೆಯಿಂದ ನಮಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
16 ವರ್ಷ ಹಳೆಯದಾದ ವಿಮಾದಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ. ಬಹುಶಃ ಕಳಪೆ ಗೋಚರತೆಯ ಕಾರಣದಿಂದಾಗಿ ವಿಮಾನ ಪತನ ಹೊಂದಿರಬಹುದು ಎಂದು ವಿಮಾನ ನಿರ್ವಾಹಕ ಕಂಪನಿ ವಿಎಸ್’ಆರ್ ವೆಂಚರ್ಸ್ ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















