ಇತ್ತೀಚೆಗೆ ವಿಶ್ವಕಪ್‌ನ ಭಾರತ ಮತ್ತು ದಕ್ಷಿಣ ಆಫ್ರಿಕಾದ ಪಂದ್ಯ ನಡೆದ ದಿನದಿಂದ ಹೊಸ ಚರ್ಚೆ ಹುಟ್ಟಿಕೊಂಡಿದೆ. ಮಹೇಂದ್ರ ಸಿಂಗ್ ಧೋನಿ ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್‌ನಲ್ಲಿ ಬಲಿದಾನ್ ಬ್ಯಾಡ್ಜ್ ಚಿತ್ರ ಬಳಸಿದ್ದರು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಗೆ ದೂರು ನೀಡಲಾಯಿತು. ಪಾಕಿಸ್ತಾನದ ವಿದೇಶಾಂಗ ಇಲಾಖೆ ಇಷ್ಟೊಂದು ಕೆಲಸ ಕಾರ್ಯಗಳು ಇಲ್ಲದೆ ಕುಳಿತಿದೆ ಎಂದು ಮತ್ತೆ ಸಾಬೀತಾಯಿತು.
ಅದು ಬಿಡಿ, ಏನಾದರೂ ಆಗಲಿ ಅವರು ಆ ಚಿಹ್ನೆಯನ್ನು ಧರಿಸಿಯೇ ಆಡಬೇಕು ಇಲ್ಲವೇ ಭಾರತ ಪಂದ್ಯಾವಳಿಯನ್ನು ಬಹಿಷ್ಕರಿಸಬೇಕು ಎಂಬಲ್ಲಿಗೆ ವಾದಗಳು ಬಂದು ನಿಂತಿದ್ದವು. ಆದದ್ದು ಇಷ್ಟೇ, ಧೋನಿಯವರು ಭಾರತೀಯ ವಿಶೇಷ ಪಡೆಗಳ ಆ ಚಿಹ್ನೆಯ ಧರಿಸಿದ್ದು ಕ್ರಿಕೆಟ್ ನಿಯಮಗಳಿಗೆ ವಿರುದ್ಧವಾಗಿದೆ ಎಂಬುದು ಸಂಸ್ಥೆಯ ಮಾತಾಗಿತ್ತು. ಇಷ್ಟೆಲ್ಲ ಆದ ಮೇಲೆ ಆ ಚಿಹ್ನೆಗೆ ಬಹಳ ಮಹತ್ವ ಬಂದು, ಫೇಸ್‌ಬುಕ್, ವಾಟ್ಸ್’ಆ್ಯಪ್‌ಗಳಲ್ಲಿ ಹರಿದಾಡಿತು. ಧೋನಿಯವರಿಗೆ ಭರಪೂರ ಬೆಂಬಲ ರಾಜಕಾರಣಿಗಳು, ಭಾರತೀಯ ಕ್ರಿಕೆಟ್ ಸಂಸ್ಥೆ ಮತ್ತು ಅಭಿಮಾನಿಗಳಿಂದ ಹರಿದು ಬಂದಿತು.
ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಸರ್ಕಾರೀ ಇಲಾಖೆಗಳಲ್ಲಿ, ಸೇನೆಯಲ್ಲಿ ಉದ್ಯೋಗ ನೀಡಿ ಗೌರವಿಸುವ ಪದ್ಧತಿ ಮೊದಲಿನಿಂದಲೂ ಜಾರಿಯಲ್ಲಿದೆ. ಸಚಿನ್ ತೆಂಡೂಲ್ಕರ್ ನೌಕಾ ಸೇನೆಯಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದರು. ಅಂತೆಯೇ 2011 ರಲ್ಲಿ ಮಹೇಂದ್ರ ಸಿಂಗ್ ಧೋನಿಯವರಿಗೆ ಭಾರತೀಯ ವಾಯುಸೇನೆಯ ಪ್ಯಾರಾಚೂಟ್ ರೆಜಿಮೆಂಟ್’ನ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿತ್ತು.
ಭಾರತೀಯ ಸೇನೆಯಲ್ಲಿ ವಿಶೇಷ ಪಡೆಗಳ ದೊಡ್ಡ ಪಾತ್ರವಿದ್ದು, ಅದರಲ್ಲಿ ಅಸ್ಸಾಂ ರೈಫಲ್ಸ್, ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್, ಗಡಿ ಭದ್ರತಾ ಪಡೆ ಇತ್ಯಾದಿ ಸೇರಿವೆ. ಅದರಲ್ಲಿ 1952 ರಲ್ಲಿ ಆರಂಭವಾದ ಪ್ಯಾರಾಚೂಟ್ ರೆಜಿಮೆಂಟ್ ಕೂಡ ಒಂದು ವಿಭಾಗ. 1965ರ ಭಾರತ ಪಾಕ್ ಯುದ್ಧದಿಂದ ಹಿಡಿದು ಇತ್ತೀಚಿನ ಉರಿ ದಾಳಿಯ ತನಕ ಪ್ಯಾರಾಚೂಟ್ ರೆಜಿಮೆಂಟ್ ತನ್ನ ಹಿರಿಮೆಯನ್ನು ಮೆರೆದಿದೆ.
ಈ ಬ್ಯಾಡ್ಜ್ ಪ್ಯಾರಾಚೂಟ್ ರೆಜಿಮೆಂಟ್‌ಗೆ ಸಂಬಂಧಿಸಿದ್ದು, ಕೆಳಮುಖವಾಗಿರುವ ಖಡ್ಗ ಮತ್ತು ಅದಕ್ಕೆ ಎರಡು ರೆಕ್ಕೆಗಳನ್ನು ಹೊಂದಿದೆ ಮತ್ತು ಅದರ ಕೆಳ ಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ’ಬಲಿದಾನ್’ ಎಂದು ಬರೆದಿರಲಾಗುತ್ತದೆ. ಇದೊಂದು ವಿಶಿಷ್ಟ ಗುರುತಾಗಿದ್ದು, ತುಂಬಾ ಮಹತ್ವ ಹೊಂದಿದೆ. ಈ ಚಿನ್ಹೆಯನ್ನು ಯಾರೂ ಸುಮ್ಮನೆ ಬಳಸುವಂತಿಲ್ಲ. ಕೇವಲ ಪ್ಯಾರಾ ಕಮಾಂಡೋಗಳು ಕೆಲವು ದೈಹಿಕ ಕಸರತ್ತುಗಳ ಮಾಡಿ, ಸಾಮರ್ಥ್ಯ ಸಾಬೀತು ಪಡಿಸಿದರೆ ಮಾತ್ರ ಸಿಗುತ್ತದೆ. ಬಲಿದಾನ್ ಬ್ಯಾಡ್ಜ್’ನ್ನು ಬಲ ಜೇಬಿನ ಮೇಲೆ, ನಾಮ ಫಲಕದ ಕೆಳಗೆಯೇ ಧರಿಸತಕ್ಕದ್ದು. 2015 ರಲ್ಲಿ ಮಹೇಂದ್ರ ಸಿಂಗ್ ಧೋನಿಯವರು ಆಗ್ರಾದಲ್ಲಿ ಅಂತಹ ತರಬೇತಿ ಪಡೆದಿದ್ದರು.
ಬಲಿದಾನ ಶಬ್ದ – ಪ್ಯಾರಾಚೂಟ್ ರೆಜಿಮೆಂಟ್’ನ ಬ್ಯಾಡ್ಜ್’ನ ಮೇಲಿರುವ ಬಲಿದಾನ್ ಶಬ್ದವು ದೇವನಾಗರಿ ಲಿಪಿಯಲ್ಲಿದ್ದು, ಇದನ್ನು ಯುದ್ಧನಾದದಿಂದ ಪಡೆಯಲಾಗಿದೆ. ಯುದ್ಧನಾದದ ಸಾಲುಗಳು ಹೀಗಿವೆ ’ಶೌರ್ಯಂ ದಕ್ಷೇ ಯುದ್ದಂ, ಬಲಿದಾನ್ ಪರಮೋಧರ್ಮಃ’. ಈ ಸಾಲೇ ಹೇಳುವಂತೆ ದೇಶಕ್ಕಾಗಿ ಪ್ರಾಣ ನೀಡುವುದಕ್ಕಿಂತ ಮಹತ್ವದ ಕೊಡುಗೆ ಮತ್ತೊಂದಿಲ್ಲ, ಅದೇ ಪರಮೋಚ್ಚ ಧರ್ಮ ಎನ್ನುತ್ತದೆ.
ರೆಜಿಮೆಂಟ್’ನ ಮೋಟೊ ಕೂಡ ಅದೇ ಅರ್ಥದಲ್ಲಿದೆ. ’Men Apart, Every Man An Emperor’ ಅಂದರೆ ಗುಂಪುಗಳಿಲ್ಲದೆಯೂ ಪ್ರತಿ ವ್ಯಕ್ತಿಯೂ ಒಬ್ಬ ಸಾಮ್ರಾಟ. ಇಲ್ಲಿರುವ ಪ್ರತಿ ಸೈನಿಕನೂ ಒಂದು ಸೇನೆಗೆ ಸಮ ಎಂಬ ಅರ್ಥ ತರುತ್ತದೆ. ಮಾಜಿ ಕರ್ನಲ್ ಬಲಿದಾನ್ ಬ್ಯಾಡ್ಜ್ ಕುರಿತು ಹೀಗೆ ಹೇಳುತ್ತಾರೆ ‘ನೀನು ನಿನ್ನ ಮಹತ್ವದ ಜೀವನವನ್ನು ದೇಶಕ್ಕಾಗಿ ನೀಡಿದ್ದೀಯಾ, ಅದೇ ನಿನ್ನ ಅತೀ ದೊಡ್ಡ ತ್ಯಾಗ’. ಅಂತೆಯೇ ಒಬ್ಬ ವ್ಯಕ್ತಿ ಅಷ್ಟು ಧೈರ್ಯಶಾಲಿ ಮತ್ತು ದಕ್ಷ ಆದಲ್ಲಿ ಮಾತ್ರ ಸೇನೆಯಿಂದ ಈ ಗೌರವ ಪಡೆಯಲು ಸಾಧ್ಯ.
ಈಗ ಮಹೇಂದ್ರ ಸಿಂಗ್ ಧೋನಿಯವರ ವಿಚಾರಕ್ಕೆ ಮತ್ತೆ ಬರೋಣ. ಅವರು ಕ್ರಿಕೆಟ್ ಜಗತ್ತಿನ ಧ್ರುವತಾರೆ. ಇಂದಿಗೂ ಭಾರತೀಯ ಕ್ರಿಕೆಟ್ ತಂಡದ ಆಧಾರ ಸ್ಥಂಭ. ವಿವಾದಕ್ಕೆ ಕಾರಣವಾದ ಅಂಶವೆಂದರೆ ಧೋನಿಯವರ ಗ್ಲೌಸ್. ಅದಕ್ಕೆ ಸಂಬಂಧಿಸಿದಂತೆ ಐಸಿಸಿಯ ನಿಯಮ ನೋಡುವುದಾದರೆ, ಆಟಗಾರರು ಅಥವಾ ಸಿಬ್ಬಂದಿ ತಮ್ಮ ಧಿರಿಸಿನಲ್ಲಿ ಯಾವುದೇ ರಾಜಕೀಯ, ಧಾರ್ಮಿಕ, ಜನಾಂಗೀಯ ವಿಚಾರಕ್ಕೆ ಸಂಬಂಧಿಸಿದ ಮುದ್ರೆಗಳನ್ನು ಧರಿಸಬಾರದು. ಗ್ಲೌಸ್‌ನಲ್ಲಿ ಕೇವಲ ಪ್ರಾಯೋಜಕರ ಚಿಹ್ನೆ ಧರಿಸಲು ಅವಕಾಶವಿದ್ದು, ಹೆಚ್ಚುವರಿ ಮುದ್ರೆ ನಿಯಮಾವಳಿಗಳ ಉಲ್ಲಂಘನೆ ಆಗುತ್ತದೆ. ಐಸಿಸಿ ನಿಯಮಗಳ ಎ 1 ವಿಧಿ ಅನ್ವಯ ಆಟಗಾರರು ಮುಂಚಿತವಾಗಿ ಅನುಮತಿ ಪಡೆದುಕೊಳ್ಳಬೇಕು.
ಕ್ರಿಕೆಟ್ ಅಂಗಣದಲ್ಲಿ ಕೆಲ ಕಾರಣಗಳಿಗೆ ಕಪ್ಪು ಪಟ್ಟಿ ಧರಿಸಲು ಯಾವಾಗಲೂ ಅವಕಾಶವಿದೆ. ಅಲ್ಲದೆ ಭಾರತ ತಂಡವು ಪುಲ್ವಾಮ ದಾಳಿಯ ಖಂಡಿಸಿ ಸೇನಾ ಕ್ಯಾಪ್ ಧರಿಸಿ ಆಡಿತ್ತು. ಇನ್ನು ನಮಾಜ್ ವಿಷಯಕ್ಕೆ ಬಂದರೆ, ಪ್ರತಿ ಆಟಗಾರನಿಗೂ ಅವಕಾಶವಿದೆ. ಅಂತೆಯೇ ಶತಕ ಬಾರಿಸಿದಾಗ, ವಿಕೆಟ್ ಪಡೆದಾಗ ಆಟಗಾರರು ಕೈ ಮುಗಿಯುವುದು, ನೆಲಕ್ಕೆ ನಮಿಸುವುದು ಹೀಗೆ ಅವರದ್ದೇ ಆಚರಣೆ ಮಾಡಬಹುದು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಹೇಂದ್ರ ಸಿಂಗ್ ಧೋನಿಯವರು ಧರಿಸಿದ ಚಿತ್ರದಲ್ಲಿ ಬಲಿದಾನ್ ಎಂಬ ಶಬ್ದ ಇರಲಿಲ್ಲ. ಅದನ್ನು ಐಸಿಸಿ ಮತ್ತು ಜನ ಗಮನಿಸಿರಬಹುದು. 2014 ರ ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ಅತಿಥೇಯ ತಂಡದ ಮೋಯಿನ್ ಅಲಿ ಗಾಜಾ ಉಳಿಸಿ, ಪ್ಯಾಲೆಸ್ತೇನ್ ಬಂಧ ಮುಕ್ತಗೊಳಿಸಿ ಎಂಬಂತಹ ಕೈ ಪಟ್ಟಿ ಧರಿಸಲು ಐಸಿಸಿ ನಿರಾಕರಿಸಿತ್ತು.
ವಿಷಯ ಇಷ್ಟೇ ಕ್ರಿಕೆಟ್ ಒಂದು ಉದ್ಯೋಗ. ಹಣಕ್ಕಾಗಿ ಐಪಿಎಲ್, ಬಿಗ್ ಬ್ಯಾಷ್, ಕೌಂಟಿ ಮತ್ತು ಚಾಂಪಿಯನ್ಸ್ ಲೀಗ್ ತರಹದ ಹಲವು ಪಂದ್ಯಾವಳಿಗಳನ್ನು ನಡೆಸಲಾಗುತ್ತದೆ. ಇದಕ್ಕೂ, ದೇಶಪ್ರೇಮಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಭಾರತ ಸರ್ಕಾರಕ್ಕೆ ವಿನಂತಿಯೆಂದರೆ, ಇಂತಹ ಗೌರವಗಳನ್ನು ಅಥ್ಲೆಟಿಕ್ಸ್, ಬಾಕ್ಸಿಂಗ್ ಮತ್ತು ಕುಸ್ತಿಯ ಆಟಗಾರರಿಗೆ ನೀಡಿದರೆ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರಕುತ್ತದೆ. ಪುಲ್ವಾಮ ದಾಳಿಯ ಸಮಯದಲ್ಲಿ, ಜನರೆಲ್ಲಾ ವಿಶ್ವಕಪ್ ಪಾಕ್ ಪಂದ್ಯ ಬೇಡ ಎನ್ನುವಾಗ, ಭಾರತ ಕ್ರಿಕೆಟ್ ಆಡಿ ಪಾಕಿಸ್ತಾನವನ್ನು ಸೋಲಿಸಿ ನಮ್ಮ ತಾಕತ್ತು ಮೆರೆಯಬೇಕು ಎಂದಿದ್ದರು ಕ್ರಿಕೆಟ್ ದೇವರು ಎನಿಸಿಕೊಂಡಿದ್ದವರು.
ಅಲ್ಲದೆ, ಎಂ.ಎಸ್. ಧೋನಿಯವರು ಈ ಬಲಿದಾನ್ ಇಲ್ಲದ ಗುರುತನ್ನು ಟೋಪಿಯಲ್ಲಿ ಪ್ರಯಾಣಗಳಲ್ಲಿ ಧರಿಸಿರುವ ಚಿತ್ರಗಳು ಇಂಟರ್’ನೆಟ್’ನಲ್ಲಿ ಲಭ್ಯವಿವೆ. ಐಸಿಸಿ ಇದನ್ನು ಧರಿಸಲೇಬಾರದು ಎಂದೂ ಸಹ ಹೇಳಿದ್ದಲ್ಲ, ಬದಲಿಗೆ ತಮಗೆ ಮೊದಲೇ ತಿಳಿಸಬೇಕಾಗಿತ್ತು ಎಂದಿದೆ. ಮುಂದುವರೆದಂತೆ, ಮಹೇಂದ್ರ ಸಿಂಗ್ ಧೋನಿಯವರು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನಾನು ಇನ್ನು ಹೆಚ್ಚಿನ ಒತ್ತಡ ಸಹಿಸಲಾರೆ ಎಂದು ಹೇಳಿ, ಆ ಚಿತ್ರವಿಲ್ಲದ ಗ್ಲೌಸ್ ತೊಟ್ಟು ಆಡಿದ್ದಾರೆ. ಗಂಟೆಗಳ ಲೆಕ್ಕದಲ್ಲಿ ಕೋಟಿಗಳ ಎಣಿಸುವ ಈ ಕ್ರೀಡೆಯಲ್ಲಿ ಜನ ತುಸು ಹೆಚ್ಚೇ ಉದ್ವೇಗಕ್ಕೆ ಒಳಗಾಗುತ್ತಾರೆ. ಆಟಗಾರನನ್ನು ಯೋಧನಂತೆ ಬಿಂಬಿಸುವ ಅಗತ್ಯ ಇರಲಿಲ್ಲ. ಇದು ಕೇವಲ ಒಂದು ಪ್ರಚಾರ ಪಡೆಯುವ ವಿಧಾನವಾಗಿದೆ.
-ಲೇಖನ: ಸಚಿನ್ ಪಾರ್ಶ್ವನಾಥ್,
ಬ್ಯಾಕೋಡು, ಸಾಗರ(ತಾ.), ಶಿವಮೊಗ್ಗ
Discussion about this post