ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಜಿಲ್ಲೆಯ ಹುಲುಗಿ ಗ್ರಾಮ ಶ್ರೀ ಹುಲುಗೆಮ್ಮ ದೇವಾಲಯಕ್ಕೆ ಹೆಸರುವಾಸಿ. ದೇಶದ ಅನೇಕ ಊರುಗಳಿಂದ ಈ ಗ್ರಾಮದ ದೇವಿಯ ದರ್ಶನವನ್ನು ಪಡೆಯಲು ಬರುತ್ತಾರೆ.
ಇದು ತುಂಗಭದ್ರಾ ನದಿ ದಡದ ಮೇಲೆ ಶ್ರೀ ಹುಲುಗೆಮ್ಮ ದೇವಿ ನೆಲಸಿರುವುದು ಒಂದು ಕಡೆಯಾದರೆ, ಕಳೆದ ಸುಮಾರು 90 ವರ್ಷಗಳ ಹಳೆಯದಾದ ಮುಖ್ಯ ಪ್ರಾಣ ದೇವರ ದೇವಸ್ಥಾನವು ಇಲ್ಲಿನ ಎಸ್ ಜೆ ಎಸ್ ಇಂಡಸ್ಟ್ರೀಯಲ್ ಕಾಲೋನಿ ಆವರಣದಲ್ಲಿ ಇರುತ್ತದೆ. ಪ್ರಾಣದೇವರ ಮುಂಭಾಗದಲ್ಲಿ ಕಳೆದ 42 ವರ್ಷಗಳ ಹಿಂದೆ ಸ್ಥಾಪಿತವಾಗಿರುವ ಕಲಿಯುಗದ ಕಾಮಧೇನು ಭಕ್ತೋದ್ಧಾರಕ ಶ್ರೀಶ್ರೀಗುರು ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸ್ಥಾಪಿಸಿರುತ್ತಾರೆ.
ಹುಲಿಗಿ, ಮುನಿರಾಬಾದ್, ಹೊಸಹಳ್ಳಿ, ಲಿಂಗಾಪುರ, ಮುದ್ಲಾಪುರ ಮತ್ತು ಸುತ್ತಮುತ್ತಲಿನ ಭಕ್ತರು ಶ್ರೀ ರಾಯರ ದರ್ಶನವನ್ನು ಪಡೆಯಲು ಆಗಮಿಸುತ್ತಾರೆ. ಪ್ರತಿ ಗುರುವಾರ, ಭಾನುವಾರ ಭಕ್ತರು ಬರುವುದು ಹೆಚ್ಚು. ಜಾಗೃತ ಸ್ಥಳವಾದ ಶ್ರೀ ರಾಯರ ಮಠ ಮತ್ತು ಮುಖ್ಯಪ್ರಾಣ ದೇವರು ಇಲ್ಲಿ ಭಕ್ತರ ಅಪೇಕ್ಷೆ ಗಳನ್ನು ಬಗೆಹರಿಸಿ ಧಾರ್ಮಿಕ ಕೆಲಸ ಕಾರ್ಯಗಳನ್ನು ಹೆಚ್ಚಿಸಿಕೊಂಡು ಭಕ್ತರಿಗೆ ನಂಬಿಕೆಯ ಮಹತ್ವವನ್ನು ತಿಳಿಸಿಕೊಡುವ ಕಲಿಯುಗದ ಕಾಮದೇನುವಾಗಿ ನೆಲೆಸಿದ್ದಾರೆ.
ಕಳೆದ 42 ವರ್ಷಗಳಿಂದ ಸ್ಥಳೀಯ ಬ್ರಾಹ್ಮಣ ಪರಿವಾರ, ಶ್ರೀ ರಾಘವೇಂದ್ರ ಸೇವಾ ಸಮಿತಿ ಸಮಸ್ತ ಜನರು ಮತ್ತು ಭಕ್ತರ ಸಹಕಾರದೊಂದಿಗೆ ವಿಜೃಂಭಣೆಯಿಂದ ಪ್ರತಿ ವರ್ಷ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವನ್ನು ಆಯೋಜಿಸಿ ಸುಮಾರು 2000 ಕ್ಕೂ ಹೆಚ್ಚಿನ ಭಕ್ತರು ಮೂರು ದಿನದ ಆರಾಧನಾ ಕಾರ್ಯದಲ್ಲಿ ಭಾಗವಹಿಸಿ ಶ್ರೀ ರಾಯರ ಆಶೀರ್ವಾದ ಪಡೆಯುತ್ತಾರೆ.
ಶ್ರೀಮಠದಲ್ಲಿ ಬಂದ ಭಕ್ತರಿಗೆ ಭೋಜನ ವ್ಯವಸ್ಥೆ ಮಾಡಲು ಜುಲೈ-ಆಗಸ್ಟ್ ತಿಂಗಳಲ್ಲಿ ಮಳೆಗಾಲ, ಅಡುಗೆ ಮಾಡಲು ಮತ್ತು ಭಕ್ತರಿಗೆ ಊಟಕ್ಕೆ ಹಾಕಲು ತುಂಭಾ ತೊಂದರೆ ಆಗುತ್ತಿತ್ತು. ಈ ಬಾರಿ ಭಕ್ತರು ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ಭೋಜನ ಶಾಲೆಯನ್ನು ಕಟ್ಟಿಸಿ ಸುಮಾರು 500 ಕ್ಕೂ ಹೆಚ್ಚಿನ ಭಕ್ತರು ಒಟ್ಟಾಗಿ ಊಟಕ್ಕೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.
ಇತ್ತೀಚೆಗೆ ಮಠದ ಆವರಣದಲ್ಲಿ ಸಮಸ್ತ ಭಕ್ತರ ಸಮ್ಮುಖದಲ್ಲಿ ಸ್ಥಳೀಯ ಎಸ್’ಜೆಎಜ ಸಕ್ಕರೆ ಕಾರ್ಖಾನೆಯ ಮಾಲೀಕರ ವಂಶಸ್ಥರಾದ ಶ್ರೀಮತಿ ವಸುದಾ ಜೈನ್ ಭೋಜನ ಶಾಲೆಯನ್ನು ಉದ್ಘಾಟಿಸಿ ಸಂತಸ ಹಂಚಿಕೂಂಡರು.
ಈ ಸಂದರ್ಭದಲ್ಲಿ ಶ್ರೀರಾಘವೇಂದ್ರ ಅಷ್ಟೋತ್ತರ ಮತ್ತು ಸತ್ಯನಾರಾಯಣ ಪೂಜೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಾಯರ ಬೃಂದಾವನಕ್ಕೆ ಹಾಗೂ ಮುಖ್ಯಪ್ರಾಣ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ ದೊಂದಿಗೆ ಅಲಂಕಾರ ಮಾಡಲಾಗಿತ್ತು. ಸಮಸ್ತ ಭಕ್ತರು ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೆ ಕಾರಣೀಭೂತರಾದರು.
ವರದಿ: ಮುರುಳೀಧರ್ ನಾಡಿಗೇರ್, ಕೊಪ್ಪಳ
(9008017727)
Get in Touch With Us info@kalpa.news Whatsapp: 9481252093
Discussion about this post