ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್’ಗೆ ಪಾಕಿಸ್ಥಾನ ಸೇರಿದಂತೆ ಉಗ್ರರ ನೆಲೆಗಳು ಚೆಡ್ಡಿ ಒದ್ದೆ ಮಾಡಿಕೊಂಡು, ಜೀವ ಉಳಿದರೆ ಸಾಕು ಎಂಬಂತೆ ತತ್ತರಿಸಿ ಹೋಗಿದ್ದವು. ಆ ರೀತಿ ಅಟ್ಟಾಡಿಸಿ, ಬೇಟೆಯಾಡಿದ್ದರು ನಮ್ಮ ಯೋಧರು.
ಅದೇ ರೀತಿ, ಇಂದು ಪ್ರತಿಪಕ್ಷಗಳನ್ನು ಭೌತಿಕವಾಗಿ ಅಟ್ಟಾಡಿಸಿಲ್ಲ ಎನ್ನುವುದನ್ನು ಬಿಟ್ಟರೆ, ದೀವಾಳಿಯಾಗಿರುವ ಪ್ರತಿಪಕ್ಷಗಳು ಭೌದ್ದಿಕತೆಯನ್ನು ಮಾತ್ರ ಜಂಘಾಬಲವೇ ಉಡುಗಿ ಹೋಗುವಂತೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅಂಡ್ ಟೀಂ.
ಸಾರ್ವತ್ರಿಕ ಚುನಾವಣೆಗೆ ಇನ್ನೆರಡು ತಿಂಗಳು ಬಾಕಿಯಿರುವಂತೆಯೇ ಮಧ್ಯಂತರ ಬಜೆಟ್ ಮಂಡಿಸಿರುವ ಮಂಡಿಸಿರುವ ಮೋದಿ ಸರ್ಕಾರ ಮಾಡಿರುವ ಘೋಷಣೆಗಳು ಎಷ್ಟು ಜನಪ್ರಿಯವಾಗಿದೆಯೋ, ಅಷ್ಟೇ ಅಭಿವೃದ್ದಿಗೆ ಪೂರಕವೂ ಆಗಿದ್ದು, ಇದು ಪ್ರತಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿವೆ.
ಇನ್ನು, ಚುನಾವಣೆಯ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್ ಮಂಡಿಸಲಾಗಿದೆ ಎನ್ನುವುದು ಒಂದಷ್ಟು ಸತ್ಯವೇ ಆಗಿದ್ದರೂ, ಬಡ ಹಾಗೂ ಮಧ್ಯಮ ವರ್ಗದ ಜನತೆಯ ಹಿತ ಮತ್ತು ದೇಶದ ಆರ್ಥಿಕತೆಯ ಮುನ್ನೋಟವನ್ನೂ ಸಹ ಗಮನದಲ್ಲಿರಿಸಿ ರೂಪಿಸಲಾಗಿದೆ ಎನ್ನುವುದೂ ಸಹ ಸತ್ಯವೇ.
ಮೇಲ್ನೊಟಕ್ಕೆ ನೋಡುವುದಾದರೆ, ಮದ್ಯಮ ವರ್ಗದಿಂದ ಕಾರ್ಮಿಕ ವರ್ಗದವರೆಗೆ, ರೈತರ ಬೆಳವಣಿಗೆಯಿಂದ ಉದ್ಯಮಿಗಳ ಆಭಿವೃದ್ದಿವರೆಗೆ, ಉತ್ಪಾದನಾ ಕ್ಷೇತ್ರದಿಂದ ಎಂಎಸ್’ಎಂಇ ವಲಯದವರೆಗೆ, ಆರ್ಥಿಕತೆಯ ಬೆಳವಣಿಗೆಯಿಂದ ನವ ಭಾರತ ರಚನೆವರೆಗೆ ಪ್ರತಿಯೊಬ್ಬರನ್ನೂ ಈ ಮಧ್ಯಂತರ ಬಜೆಟ್ ನಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಪ್ರಧಾನಿಯವರು ಹೇಳಿರುವುದು ಗೋಚರಿಸುತ್ತದೆ.
ಇನ್ನುಳಿದಂತೆ, ಪ್ರಮುಖವಾಗಿ ಆದಾಯ ತೆರಿಗೆ ಮಿತಿಯನ್ನು 5 ಲಕ್ಷಕ್ಕೆ ಏರಿಕೆ ಮಾಡುವ ಜೊತೆಯಲ್ಲಿ ಉಳಿತಾಯ ಯೋಜನೆಗಳಲ್ಲಿ ತೊಡಗಿಸಿದ್ದರೆ 6.5 ಲಕ್ಷದವರೆಗೂ ಮಿತಿಯನ್ನು ನಿಗದಿಪಡಿಸಿರುವುದು 3 ಕೋಟಿ ಭಾರತೀಯರಿಗೆ ಉಪಕಾರಿಯಾಗುತ್ತದೆ ಎಂದರೆ ಅದಕ್ಕಿಂತಲೂ ಅಚ್ಛೇದಿನ್ ಇನ್ನೇನು ಬೇಕು?
ಅತ್ಯಂತ ಮಹತ್ವದ ವಿಚಾರ ಎಂದರೆ ತಾವು ಅಧಿಕಾರಕ್ಕೆ ಬಂದಾಗಿನಿಂದಲು ಪ್ರಧಾನಿ ಮೋದಿ ದೇಶದ ಭದ್ರತೆಗೆ ಹೆಚ್ಚಿನ ಮಹತ್ವ ನೀಡಿದ್ದು ಮಾತ್ರವಲ್ಲದೇ ಅದನ್ನು ಕೃತಿಯಲ್ಲಿ ಮಾಡಿ ತೋರಿಸಿದ್ದಾರೆ ಎನ್ನುವುದಕ್ಕೆ 2014ರಿಂದ ಇಂದಿನವರೆಗೂ ದೇಶದಲ್ಲಿ ಒಂದೇ ಒಂದು ಭಾರೀ ಪ್ರಮಾಣದ ಭಯೋತ್ಪಾದಕ ದಾಳಿಗಳು ನಡೆದಿಲ್ಲ ಎನ್ನುವುದು. ಇಂತಹ ಮೋದಿ, ಈ ಬಜೆಟ್’ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 3 ಲಕ್ಷ ಕೋಟಿ ರೂ.ಗಳ ಅನುದಾನ ನೀಡುವ ಮೂಲಕ ದೇಶಕ್ಕಾಗಿ ತಮ್ಮ ಬದ್ದತೆ ಎಂತಹುದ್ದು ಎಂಬುದನ್ನು ಸಾಬೀತು ಮಾಡಿದ್ದಾರೆ.
ಇದರೊಂದಿಗೆ, ಅಸಂಘಟಿತ ವಲಯದಲ್ಲಿರುವ ಸುಮಾರು 10 ಕೋಟಿ ಕಾರ್ಮಿಕರಿಗೆ ಉಪಯೋಗವಾಗುವ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದು, ಈ ಯೋಜನೆಯಡಿ ಪ್ರತಿ ತಿಂಗಳು 3000 ರೂಪಾಯಿ ಪಿಂಚಣಿ ದೊರೆಯುವುದು, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿರುವುದು, ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣಿ ವ್ಯವಸ್ಥೆ, ಕೆಳ ಹಾಗೂ ಮಧ್ಯಮ ವರ್ಗದ ನೌಕರರಿಗೆ ವರದಾನವಾಗಿರುವ ಇಎಸ್’ಐ ಆದಾಯ ಮಿತಿ ಏರಿಕೆ, 15 ಸಾವಿರದಿಂದ 21 ಸಾವಿರಕ್ಕೆ ಮಿತಿ ಏರಿಕೆ ಮಾಡಿರುವುದು, ಸಂಘಟಿತ ವಲಯ ಕಾರ್ಮಿಕರಿಗೆ ಪಿಂಚಣಿ, ಮೀನುಗಾರರು, ಪಶುಸಂಗೋಪನಾ ಕ್ಷೇತ್ರದವರಿಗೆ ಶೇ.೨ರಷ್ಟು ಬಡ್ಡಿ ವಿನಾಯಿತಿ ನೀಡಿರುವುದು, ಕಾರ್ಮಿಕ ಕನಿಷ್ಟ ಆದಾಯ 21 ಸಾವಿರಕ್ಕೆ ಏರಿಕೆ ಮಾಡಿರುವುದು, ರೈತರಿಗೆ ವಾರ್ಷಿಕ 6 ಸಾವಿರ ಸಹಾಯಧನ ನೀಡುವುದು, ಹಿರಿಯ ಉದ್ಯೋಗಿಗಳಿಗೆ ತೆರಿಗೆ ರಹಿತ ಗ್ರಾಚ್ಯುಟಿ ಮಿತಿ 30 ಲಕ್ಷ ರೂ. ಗೆ ಏರಿಕೆ ಮಾಡಿರುವಂತಹ ಘೋಷಣೆಗಳು ಜನಸಾಮಾನ್ಯರಿಗೆ ಅಚ್ಛೇದಿನ್ ಕನಸನ್ನು ನನಸು ಮಾಡಿದೆ.
ಕಳೆದ ನಾಲ್ಕು ಬಜೆಟಲ್ಲಿ ಜನಪ್ರಿಯ ಯೋಜನೆಗಳನ್ನು ಘೋಷಿಸದೇ, ಯಾರು ಏನಾದರೂ ಅಂದುಕೊಳ್ಳಲಿ ಮೊದಲು ದೇಶದ ಆರ್ಥಿಕ ಸ್ಥಿತಿಯನ್ನು ಸರಿಪಡಿಸಿ, ಸಬಲಗೊಳಿಸಬೇಕು ಎಂದು ಜನಪ್ರಿಯವಲ್ಲದ ಯೋಜನೆಗಳನ್ನು ಘೋಷಣೆ ಮಾಡಿದ್ದರು ಮೋದಿ. ಆದರೆ, ಈಗ ಒಂದು ಹಂತಕ್ಕೆ ಬಂದಿರುವುದು ಹಾಗೂ ಚುನಾವಣೆ ಮುಂದಿಟ್ಟುಕೊಂಡು ಜನಸಾಮಾನ್ಯರ ಬಜೆಟ್ ಮಂಡಿಸಿದ್ದಾರೆ.
ಕಳೆದ ನಾಲ್ಕು ಬಜೆಟನ್ನು ಕಂಡು ಟೀಕಿಸಿದ್ದ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು, ಈ ಬಾರಿಯೂ ಅಂತಹುದ್ದೆ ಬಜೆಟ್ ಮಂಡನೆಯಾಗುತ್ತದೆ. ಸದನದಲ್ಲೆ ಮೋದಿ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವ ಎಂದು ಕಾದಿತ್ತು.
ಆದರೆ, ತೀರಾ ಬುದ್ದಿವಂತಿಕೆಯಿಂದ ಮೋದಿ ಸರ್ಕಾರ ಮಂಡಿಸಿರುವ ಜನಪ್ರಿಯ ಹಾಗೂ ಆರ್ಥಿಕತೆಗೆ ಪೂರಕವಾದ ಬಜೆಟ್ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳನ್ನು ಪೆಂಗನಂತಾಗಿಸಿದೆ. ಆದರೆ, ವಿರೋಧಿಸಲೇಬೇಕು ಎಂಬ ಕಾರಣಕ್ಕಾಗಿ ಕಾಂಗ್ರೆಸ್’ಗೆ ಸೇರಿದ ಗ್ರಾಮ ಪಂಚಾಯ್ತಿ ಸದಸ್ಯನಿಂದ ಹಿಡಿದು, ಲೋಕಸಭೆಯ ನಾಯಕನವರೆಗೂ ಇಲ್ಲಸಲ್ಲದ ಕೊಂಕು ತೆಗೆಯುತ್ತಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂಗಳಾರತಿಯೂ ಆಗುತ್ತಿದೆ.
ಬಜೆಟಲ್ಲಿ ಮೋದಿ ನೀಡಿದ ಘೋಷಣೆಗಳು ಪ್ರತಿಪಕ್ಷಗಳ ಪುಂಗಿಯನ್ನು ಬಂದ್ ಮಾಡಿಸಿವೆ. ನೀವು ಬಜೆಟ್ ಅಧಿವೇಶನದ ವೀಡಿಯೋ ನೋಡಿ… ಪ್ರತಿಪಕ್ಷ ಸಾಲಿನಲ್ಲಿ ಕುಳಿತಿದ್ದ ಯಾವೊಂದು ಮುಖದಲ್ಲಾದರೂ ಒಂದು ಚೂರು ಕಳೆಯಾಗಲಿ, ಆಕ್ರೋಶವಾಗಲಿ ಹೋಗಲಿ ಸಮರ್ಥವಾಗಿ ಎದುರಿಸುವ ಮನಃಸ್ಥಿತಿಯಾಗಲೀ ಕಾಣಲೇ ಇಲ್ಲ.
ಒಟ್ಟಿನಲ್ಲಿ ಚುನಾವಣೆಗೂ ಎರಡು ತಿಂಗಳು ಮೋದಿ ನಡೆಸಿದ ಸರ್ಜಿಕಲ್ ಸ್ಟ್ರೈಕ್’ಗೆ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ತತ್ತರಿಸಿ ಹೋಗಿದ್ದು, ಮತಿಭ್ರಮಣೆಗೆ ಒಳಗಾದಂತೆ ವರ್ತಿಸುತ್ತಿವೆ. ಚುನಾವಣೆಗೆ ಇನ್ನೆರಡು ತಿಂಗಳು ಬಾಕಿ ಇದೆ. ಪಾಪ, ಚೌಕಿದಾರ ನೀಡಿದ ಹೊಡೆತದ ಪೆಟ್ಟಿನ ನೋವನ್ನು ಶಮನ ಮಾಡಿಕೊಳ್ಳಲೂ ಸಹ ಪ್ರತಿಪಕ್ಷಗಳಿಗೆ ಸಮಯವಿಲ್ಲ. ಇನ್ನೇನಾದರೂ ಚುನಾವಣೆಯಲ್ಲೂ ಸೋತರೆ!
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post