ಹುಬ್ಬಳ್ಳಿ: ನ್ಯಾ.ದೀಪಕ್ ಮಿಶ್ರಾ, ಇವರು ಸುಪ್ರೀಂ ಕೋರ್ಟ್ ಘನತೆಯನ್ನೇ ಹೆಚ್ಚಿಸುತ್ತಿರುವ ಮುಖ್ಯ ನ್ಯಾಯಮೂರ್ತಿಗಳು.. ಇಂತಹ ನ್ಯಾಯಾಧೀಶರು ಈಗ ನ್ಯಾಯಾಂಗ ಮರೆಯಲಾಗದಂತಹ ಘಟನೆಗೆ ಸ್ವತಃ ಕಾರಣಕರ್ತರಾಗಿದ್ದಾರೆ.
ಹೌದು… ನೂತನ ನ್ಯಾಯಾಲಯಗಳ ಸಂಕೀರ್ಣ ಉದ್ಘಾಟನೆಗಾಗಿ ನ್ಯಾ.ದೀಪಕ್ ಮಿಶ್ರಾ ಹುಬ್ಬಳ್ಳಿಗೆ ಆಗಮಿಸಿದ್ದರು. ಈ ವೇಳೆ ನಡೆಸಿದ ವಿಶೇಷ ಲೋಕ ಅದಾಲತ್ ನಲ್ಲಿ ಗಂಡ ಹೆಂಡಿರ ನಡುವಿನ ವಿಚ್ಛೇದನ ಪ್ರಕರಣವನ್ನು ಬಗೆಹರಿಸಿ, ದಂಪತಿ ಹಾಗೂ ಮಕ್ಕಳನ್ನು ಒಂದು ಮಾಡಿರುವ ಅಪರೂಪದ ಪ್ರಕರಣ ನಡೆದಿದೆ.
2000 ಇಸವಿಯಲ್ಲಿ ಜಗದೀಶ್ ಶೆಳಗಿ ಹಾಗೂ ಪಾರ್ವತಿ ದಂಪತಿ 2015ರಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಸಿಜೆ ಐ ನಡೆಸಿದ ವಿಶೇಷ ಲೋಕ ಅದಾಲತ್‌ನಲ್ಲಿ ಅವರ ಮುಂದೆಯೇ ಬಂದಿತು.
ಈ ವೇಳೆ ವಿಚಾರಣೆ ನಡೆಸಿದ ನ್ಯಾ.ದೀಪಕ್ ಮಿಶ್ರಾ, ಅರ್ಜಿ ಸಲ್ಲಿಸಿದ್ದ ದಂಪತಿ ಹಾಗೂ ಅವರ ಮಕ್ಕಳನ್ನು ಕರೆಯಿಸಿ, ಮಾತನಾಡಿದರು. ಇಂದು ನೀವಿಬ್ಬರೂ ಹಟಕ್ಕೆ ಬಿದ್ದು ವಿಚ್ಛೇದನ ಪಡೆದರೆ, ಮುಂದೆ ನಿಮ್ಮ ಮಕ್ಕಳ ಯಾವ ರೀತಿಯ ಕೌಟುಂಬಿಕ ಜೀವನ ಕಟ್ಟಿಕೊಳ್ಳಲು ನೀವು ದಾರಿ ತೋರುತ್ತೀರಿ? ಮುಂದೆ ಅವರ ವಿವಾಹ ಹೇಗೆ ಮಾಡುತ್ತೀರಿ? ಇಂತಹ ಪ್ರಕರಣಗಳಿಂದ ನಾಳೆ ಭವಿಷ್ಯದಲ್ಲಿ ಮಕ್ಕಳು ವಿವಾಹವಾಗಲು ಹಿಂದೇಟು ಹಾಕುತ್ತಾರೆ. ಕುಟುಂಬ ವ್ಯವಸ್ಥೆಯಲ್ಲಿಯೇ ಮಕ್ಕಳು ನಂಬಿಕೆ ಕಳೆದುಕೊಳ್ಳುತ್ತಾರೆ. ಇದರಿಂದ ಸಮಾಜ ಹಾಳಾಗುತ್ತದೆ. ನಿಮ್ಮ ಮಕ್ಕಳಿಗಾಗಿ ಹಾಗೂ ಭವಿಷ್ಯಕ್ಕಾಗಿ ನೀವಿಬರೂ ಒಂದಾಗಿ ಜೀವಿಸಿ ಎಂದು ಸಲಹೆ ನೀಡಿದರು.
ಪವಾಡವೆಂಬಂತೆ ಇಷ್ಟು ವರ್ಷ ವಿಚ್ಛೇದನಕ್ಕಾಗಿ ಹೋರಾಡುತ್ತಿದ್ದ ದಂಪತಿ, ನ್ಯಾ. ದೀಪಕ್ ಮಿಶ್ರಾ ಅವರ ಮಾತಿನಂತೆ ಒಪ್ಪಿಕೊಂಡು, ಪ್ರಕರಣ ಹಿಂಪಡೆದು, ಒಟ್ಟಾಗಿ ಬಾಳುತ್ತೇವೆ ಎಂದರು. ಇದರಿಂದ ಇಡಿಯ ವಾತಾವರಣ ಸಂಭ್ರಮದಲ್ಲಿ ಮುಳುಗಿತು.
ಈ ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಸ್ಥಾನದಲ್ಲಿ ಕುಳಿತಿರುವ ನ್ಯಾ. ದೀಪಕ್ ಮಿಶ್ರಾ ಕೌಟುಂಬಿ ಪ್ರಕರಣವನ್ನು ಆಸಕ್ತಿ ವಹಿಸಿ, ಒಂದು ಕುಟುಂಬ ಒಂದಾಗಿ ಬಾಳುವಂತೆ ಮಾಡಿದ್ದು ನಿಜಕ್ಕೂ ನ್ಯಾಯಾಂಗ ವ್ಯವಸ್ಥೆಯ ಘನತೆಯನ್ನು ಹೆಚ್ಚಿಸಿದೆ.
ನಮ್ಮ ಸಿಜೆಐ, ನಮ್ಮ ಹೆಮ್ಮೆ
Discussion about this post