ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-24 |
ಹಬ್ಬಗಳು ಎಂದರೆ ನೆನಪಿಗೆ ಬರುವುದು ಹೊಸ ಬಟ್ಟೆ, ಸಿಹಿ ತಿಂಡಿ, ತರತರಾವರಿ ಭೋಜನ, ಬಿಟ್ಟರೆ ನೆಂಟರು. ಸಾಮಾನ್ಯವಾಗಿ ಮಕ್ಕಳಿಗೆ ಹಬ್ಬ ಎಂದರೆ ನೆನಪಿಗೆ ಬರುವುದು ಇಷ್ಟೇ. ಇಷ್ಟೇನಾ ಹಬ್ಬಗಳೆಂದರೆ?
ಹಬ್ಬಗಳೆಂದರೆ ಇಷ್ಟೇ ಅಂತೂ ಅಲ್ಲವೇ ಅಲ್ಲ. ಬೆಳಗ್ಗೆ ಬೇಗ ಎದ್ದು, ಸ್ನಾನ ಮಾಡಬೇಕು. ನಂತರ, ಮೈತುಂಬುವಂತಹ ಹೊಸದಾದ ಪಾರಂಪರಿಕವಾದ ಉಡುಗೆ-ತೊಡುಗೆ ಹಾಕಿಕೊಳ್ಳಬೇಕು. ದೇವರಿಗೆ ನಮಸ್ಕರಿಸಿ, ಮನೆಯಲ್ಲಿರುವ ಹಿರಿಯರಿಗೆ ನಮಸ್ಕರಿಸಿ, ಶುಭಾಶಯಗಳನ್ನು ತಿಳಿಸಿ, ದೇವರ ನೈವೇದ್ಯವನ್ನು ಮೆಲ್ಲುವವರಾಗಿ, ನಂತರದಲ್ಲಿ ನಮ್ಮ ನಮ್ಮ ಕಾರ್ಯಗಳಲ್ಲಿ ತೊಡಗಬಹುದು.
Also Read>> ಇಶಾ ಫೌಂಡೇಶನ್ ಶಿವರಾತ್ರಿ ಕಾರ್ಯಕ್ರಮ | ಡಿ.ಕೆ. ಶಿವಕುಮಾರ್, ಗೃಹ ಸಚಿವ ಅಮಿತ್ ಶಾ ಭಾಗಿ
ಎಲ್ಲ ಹಬ್ಬಗಳಲ್ಲೂ ಸಂಭ್ರಮ ಎನ್ನುವುದು ಸಾಮಾನ್ಯವಾದರೂ, ಒಂದೊಂದು ಹಬ್ಬದಲ್ಲಿ ಒಂದೊಂದು ವಿಶೇಷತೆಯಿದೆ. ಆ ರೀತಿ ಕೆಲವು ಹಬ್ಬಗಳ ಬಗ್ಗೆ ಇಲ್ಲಿ ತಿಳಿಯೋಣ:
ಯುಗಾದಿ
ಹೊಸ ಸಂವತ್ಸರದ ಮೊದಲ ದಿನವೇ ಈ ಹಬ್ಬವು. ಮನೆಯ ಬಾಗಿಲುಗಳಿಗೆ ಮಾವಿನ ಎಲೆಗಳ ತೋರಣಗಳಿಂದ ಅಲಂಕರಿಸಿ, ಮನೆಯನ್ನು ಮಿಂಚಿಸುವುದು. ಬೇವು ಮತ್ತು ಬೆಲ್ಲದ ರಸಪಾಕವನ್ನು ಮಾಡಿರುತ್ತಾರೆ. ಬೇವು- ಬೆಲ್ಲ ತಿಂದು ಸುಖದಿಂದ ಬಾಳಿರಿ ಎಂದರೆ ಬೇವು- ಕಷ್ಟ, ಬೆಲ್ಲ- ಸುಖ, ಗಳನ್ನು ಸಮಾನವಾಗಿ ತೆಗೆದುಕೊಂಡು ಜೀವನವನ್ನು ನಿರಾತಂಕದಿಂದ ಸಾಗಿಸಿರಿ. ಎಂಬುದಾಗಿ ಹಿರಿಯರು ಹೇಳುತ್ತಾರೆ. ಸಾಯಂಕಾಲ ಆಚಾರ್ಯರು ಅಥವಾ ಸ್ವಾಮಿಗಳು ಪಂಚಾಂಗ ವಾಚನ ಮಾಡುತ್ತಾರೆ. ಈ ಹಬ್ಬವೇ ಯುಗಾದಿ.
ಶ್ರೀಕೃಷ್ಣ ಜನ್ಮಾಷ್ಟಮಿ
ಸೆರೆ ಮನೆಯಲ್ಲಿರುವ ತಾಯಿಯಾದ ದೇವಕಿಯ ಗರ್ಭದಲ್ಲಿ ಹುಟ್ಟಿದವನೇ, ಪುಟ್ಟ ಶಿಶು ಶ್ರೀಕೃಷ್ಣ. ಹುಟ್ಟಿದ ಮರುಕ್ಷಣದಲ್ಲಿ ನೋಡಿದರೆ…. ಆಶ್ಚರ್ಯ! ಅದ್ಭುತ!ಆನಂದ! ಪರಮಾನಂದ! ಶಂಖಚಕ್ರಧಾರನಾದ ಭಗವಂತನು…. ಹುಟ್ಟಿದ ದಿನ ಅಂದು ಶ್ರಾವಣ ಕೃಷ್ಣ ಅಷ್ಟಮಿ.
ಕೃಷ್ಣ ಹುಟ್ಟಿದ್ದು ರಾತ್ರಿ ಚಂದ್ರೋದಯ ಸಮಯಕ್ಕೆ. ಆ ದಿನದಂದು ಉಪವಾಸ ಮಾಡಿ, ಮರುದಿನ ಬೆಳಿಗ್ಗೆ ಬೇಗ ಪಾರಣೆ ಮಾಡುವುದು. ಕೃಷ್ಣನಿಗಾಗಿ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಉಂಡೆ, ರಸಾಯನ, ಕಜ್ಜಾಯ ಮತ್ತು ಇತರಪದಾರ್ಥಗಳನ್ನು ತಯಾರು ಮಾಡಿ, ಮನೆಯನ್ನು ದೀಪ, ರಂಗೋಲಿ ಮತ್ತು ಹೂವುಗಳಿಂದ ಅಲಂಕರಿಸಿದರೆ.. ಏಕೆ ಕೃಷ್ಣ ಬರುವುದಿಲ್ಲ? ಬಂದೇ ಬರುತ್ತಾನೆ. ಬರಲೇಬೇಕು. ಎಂಬ ಭರವಸೆಯಿಂದ ಆಚರಿಸುವ ಹಬ್ಬವಿದು. ನನಗಂತೂ ಜನ್ಮಾಷ್ಟಮಿ ಎಂದರೆ ಪ್ರಾಣ. ನಿಮಗೆ?
ನವರಾತ್ರಿ
ನವರಾತ್ರಿಯು ದಸರಾ ಎಂದು ಕರೆಸಿಕೊಳ್ಳುತ್ತದೆ. ಗೊಂಬೆ ಕೂಡಿಸುತ್ತಾರೆ. ಹಾಗೆಂದರೇನು? ಹಾಗೆಂದರೆ, ಮೆಟ್ಟಿಲುಗಳನ್ನು ಜೋಡಿಸಿ, ಮೊದಲನೇ ಮೆಟ್ಟಿಲಿನಲ್ಲಿ ಪಟ್ಟದ ಗೊಂಬೆ ಜೋಡಿಸುತ್ತಾರೆ. ಎರಡು- ಮೂರು- ನಾಲ್ಕು ಮತ್ತು ಐದನೇ ಮೆಟ್ಟಿಲುಗಳಲ್ಲಿ ರಾಮಾಯಣ, ಮಹಾಭಾರತ, ಭಾಗವತ, 18 ಪುರಾಣಗಳು ಮತ್ತು ಹಲವಾರು ಕಥೆಗಳ ಸನ್ನಿವೇಶದ ಬೊಂಬೆಗಳನ್ನು ಜೋಡಿಸಿ, ಅದರಲ್ಲಿ ದೇವರನ್ನು ಅನುಸಂಧಾನ ಮಾಡಿ ಪೂಜೆ ಮಾಡುವುದು ಕೆಲವು ಮನೆಗಳ ಪದ್ಧತಿಯಾಗಿದೆ. ಇದು ದೇಶಾದ್ಯಂತ ಆಚರಿಸುವ ಪ್ರಸಿದ್ಧ ಹಬ್ಬ ಹಾಗೂ ಮೈಸೂರಿನ ದಸರ ಮತ್ತು ಜಂಬೂಸವಾರಿ ಮನೆಮಾತಾಗಿದೆ.ಮೈಸೂರಿನ ದಸರ ಸಮಯದಲ್ಲಿ ಕಾಲಿಡಲಾಗದಷ್ಟು ಜನಸಾಗರ; ಅಷ್ಟು ಆಸಕ್ತಿ ಜನರಿಗೆ ದಸರೆಯನ್ನು ನೋಡಲು. ಕನ್ನಡ ನಾಡಿನ ನಾಡಹಬ್ಬ ಆಗಿರುವುದರಿಂದ ಬಹುಪ್ರಸಿದ್ಧ. ಎಲ್ಲೆಡೆ ರಾಮನು ರಾವಣನನ್ನು ಕೊಲ್ಲುವ ಗೊಂಬೆ ಮತ್ತು ಚಿತ್ರವನ್ನು ಹಾಕುತ್ತಾರೆ. ಆದರೆ ಏಕೆ? ರಾಮನ ಚಿತ್ರ ರಾಮನವಮಿಯಂದು ಹಾಕಬೇಕಲ್ಲವೇ? ಏಕೆಂದರೆ, ರಾಮನು ರಾವಣನು ಕೊಂದದ್ದು ನವರಾತ್ರಿಯಲ್ಲೇ. ಒಂಬತ್ತು ದಿನಗಳ ಕಾಲ ಮನೆಯಲ್ಲಿ ಅಖಂಡ ದೀಪ ಹಚ್ಚುತ್ತಾರೆ. ಒಂದೊಂದು ದಿನದಲ್ಲಿ ಒಂದೊಂದು ದುರ್ಗೆಯ ಸನ್ನಿಧಾನವಿರುವುದು. ಕುಲದೇವರ ಪೂಜೆ ನವರಾತ್ರಿಯಲ್ಲಿ ನಡೆಯುವುದು.
ದೀಪಾವಳಿ
ದೀಪಾವಳಿಯು ಮೂರು ದಿನಗಳಲ್ಲಿ ಆಚರಿಪಗೂಂಡಿದೆ.
- ನೀರು ತುಂಬುವ ಹಬ್ಬ: ಜಲ ಪೂರ್ಣತ್ರಯೋದಶಿ
- ನರಕ ಚತುರ್ದಶಿ
- ಬಲಿಪಾಡ್ಯಮಿ
ದೀಪಾವಳಿಯು ದೀಪದ ಹಬ್ಬ. ಸಂಜೆ ಪಟಾಕಿ ಹಾರಿಸಬೇಕು. (ಇತಿಮಿತಿ ಒಡನೆ) ನಮ್ಮ ಮನೆಗೆ ಆಕಾಶಬುಟ್ಟಿ, ಪ್ರತಿಯೊಂದು ಮೂಲೆಯಲ್ಲಿ ಸಹ ದೀಪವಿಟ್ಟು ಮನೆಯನ್ನು ಬೆಳಗುವ ಹಬ್ಬವಿದು.ನೀರು ತುಂಬುವ ಹಬ್ಬ
ಮನೆಯಲ್ಲಿ ಇರುವ ಎಲ್ಲಾ ತಂಬಿಗೆ ಮತ್ತು ಬಿಂದಿಗೆಗಳಿಗೆ ಸುಣ್ಣ( ಬಿಳಿ )ಕೆಮ್ಮಣ್ಣು (ಕೆಂಪು ಕಂದು)ಗಳನ್ನು ಹಚ್ಚಿ ಗಂಗೆ ಬಂದಿದ್ದಾಳೆಂದು (ಸರ್ವಕಾಲದಲ್ಲಿ ಗಂಗೆ ಇರುವಳು. ಈ ಸಮಯದಲ್ಲಿ ವಿಶೇಷ ಸನ್ನಿಧಾನವಿರುತ್ತದೆ) ಆ ಬಿಂದಿಗೆಗಳಿಗೆ ನಮಸ್ಕರಿಸುತ್ತಾರೆ. ಅಂದು ಮೂರು ವರ್ಷದ ಕೆಳಗಿನ ಮಕ್ಕಳಿಗೆ ಬಿಂದಿಗೆಯಲ್ಲಿರುವ ನೀರನ್ನು ಸಾಧಾರಣ ನೀರಿಗೆ ಬೆರಸಿ, ಅದರಿಂದ ಸ್ನಾನ ಮಾಡಿಸುತ್ತಾರೆ ಎಂಬುದು ಕೇಳಿ ಬಂದಿದೆ.
ನರಕ ಚತುರ್ದಶಿ
ನರಕ (ಅಸುರ) ನನ್ನು ಕೊಂದ ದಿನ ಅದು. ಶ್ರೀ ಕೃಷ್ಣನು ಅಸುರನಾದ ನರಕನನ್ನು ಕೊಂದ ನೆನಪಿಗೆ ಈ ಹಬ್ಬವು ಆಚರಿಸಲ್ಪಟ್ಟಿದೆ.
ಮುಂಜಾನೆ ಅರುಣೋದಯ ಸಮಯಕ್ಕೆ ಹಿರಿಯರು ಎಣ್ಣೆ ಹಚ್ಚುತ್ತಾರೆ. ಬಂಗಾರದ ಉಂಗುರದಿಂದ ತಲೆಗೆ ಒಂದೆರಡು ತೊಟ್ಟು ಎಣ್ಣೆ ಹಚ್ಚುವರು. ನಂತರ ಆರತಿ ಮಾಡಿ ನೂತನವಾದ ವಸ್ತ್ರಗಳನ್ನು ನೀಡುತ್ತಾರೆ. ಅನುಕೂಲವಿದ್ದಲ್ಲಿ, ಹತ್ತಿರದಲ್ಲಿ ಸನ್ಯಾಸಿಗಳಿದ್ದರೆ, ಅವರಲ್ಲಿ ಎಣ್ಣೆಯನ್ನು ಹಲವರು ಪಡೆಯುತ್ತಾರೆ. ನಂತರ ಅಭ್ಯಂಜನ ಸ್ನಾನ ಮಾಡಬೇಕು. ಬಳಿಕ ಸಂಜೆ, ಪಟಾಕಿ ಹಾರಿಸಬೇಕು. (ವಾಯು- ಶಬ್ದ ಮಾಲಿನ್ಯಗಳನ್ನು ಆದಷ್ಟು ನಿಯಂತ್ರಿಸಿ).
ಬಲಿಪಾಡ್ಯಮಿ
ಬಲಿಪಾಡ್ಯಮಿಯ ದಿನ ಬಲಿ ಮಹಾ ಚಕ್ರವರ್ತಿಯ ತಲೆಯ ಮೇಲೆ ಕಾಲಿಟ್ಟು ಸುತಲಲೋಕಕ್ಕೆ ಕಳಿಸಿ, ಇಂದಿಗೂ ವಾಮನ ರೂಪಿ ಪರಮಾತ್ಮನು ಬಲಿಯ ಮನೆಯನ್ನು ಕಾಯುತ್ತಿದ್ದಾನೆ. ದೀಪದ ಹಬ್ಬವಾದ ದೀಪಾವಳಿಯ ಸಂಭ್ರಮವು ಹೀಗಿರುವುದು.ಸಂಕ್ರಾಂತಿ
ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಬದಲಾಗುವ ಪರ್ವಕಾಲವೇ ಸಂಕ್ರಾಂತಿ. ಎಳ್ಳು ಬೆಲ್ಲ ತಿನ್ನುತ್ತೇವೆ, ಆದರೆ ಏಕೆ? ಬೆಲ್ಲ, ಎಳ್ಳು, ಕಡಲೆ ಬೀಜ ಮತ್ತು ಕೊಬ್ಬರಿಯ ಸಮನ್ವಿತಪಾಕಬೇಕೆ?ದಕ್ಷಿಣಾಯನದ ಪಿತ್ತ ಪದಾರ್ಥಗಳು ಎಳ್ಳು, ಕೊಬ್ಬರಿ ಮತ್ತು ಶೇಂಗಾ ಬೀಜ. ಉತ್ತರಾಯಣದ ಬೆಲ್ಲ ಆ ಉಷ್ಣ ಪದಾರ್ಥಗಳನ್ನು ಸಮತೋಲನ ಮಾಡುವಂತ ಪದಾರ್ಥ. “ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡಿ”ಎಂಬುದಾಗಿ ಹಿರಿಯರು ಹೇಳಿ ನಮ್ಮನ್ನು ಹರಸುವುದು ಪದ್ಧತಿ. ಅಂದಿನ ದಿನ ಕೃಷ್ಣನಿಗೆ ವಿಶೇಷ ಬಲ್ಲದ ನೈವೇದ್ಯ ಹಲವಾರು ಮನೆಗಳಲ್ಲಿ ನಡೆಯುತ್ತದೆ.
ಮನೆಯಲ್ಲಿರುವ ಎಲ್ಲರಿಗೂ ಎಳ್ಳು ಬೆಲ್ಲ ಕೊಡುವುದು. ಹಿರಿಯವರಾಗಿದ್ದರೆ ನಮಸ್ಕರಿಸುವುದು. ಕಿರಿಯವರಾಗಿದ್ದರೆ ಹರಸುವುದು. ಅಕ್ಕ ಪಕ್ಕ ಮನೆಯವರಿಗೆ ಎಳ್ಳು ಬೆಲ್ಲ ಕೊಟ್ಟು, ಸಕ್ಕರೆ ಅಚ್ಚು, ಕಬ್ಬು, ಹಣ್ಣು, ಹೂವು ಮತ್ತು ದಕ್ಷಿಣ ಕೊಡುವುದು ಒಂದು ಪದ್ಧತಿ ಆದರೆ ಬಂಧು ಬಳಗದವರ ಮನೆಗಳಿಗೆ ತೆರಳಿ, ಎಳ್ಳು ಬೆಲ್ಲ ಕೊಟ್ಟು, ಸ್ವಲ್ಪ ಹೊತ್ತು ಹಬ್ಬದ ಕುರಿತು ಮಾತನಾಡಿ ಸಂತಸ ಪಡುವುದು ಮತ್ತೊಂದು ಪದ್ದತಿ. ಇನ್ನೊಂದು ಪದ್ದತಿ ಏನೆಂದರೆ, ಸಂಜೆ ಹೊತ್ತು ಒಂದರಿಂದ ಐದು ವರ್ಷದ ಒಳಗಿನ ಮಕ್ಕಳಿಗೆ ಹಣ್ಣು/ ಉತ್ಸವ ಮಾಡುತ್ತಾರೆ ಮಕ್ಕಳಿಗೆ ಆಗಿರುವ ಎಲ್ಲಾ ದೃಷ್ಟಿಗಳ ಪರಿಹಾರಕ್ಕೆ ಇದು. ಅರಳು/ ಮಂಡಕ್ಕಿಯೊಂದಿಗೆ ಮಕ್ಕಳಿಗೆ ಇಷ್ಟವಾದ ಪೆಪ್ಪರ್ಮೆಂಟು, ನಾಣ್ಯಗಳು ಕಳಿಸಿ ಮಕ್ಕಳ ತಲೆಯ ಮೇಲೆ ಸುರಿಯುತ್ತಾರೆ. ಮಕ್ಕಳು ಅದರಲ್ಲಿ ನಾಣ್ಯಗಳು ಮತ್ತು ಪೇಪರುಮೆಂಟುಗಳು ಹಣ್ಣುಗಳನ್ನು ಆರಿಸಿಕೊಳ್ಳುತ್ತಾರೆ. ಈ ಸಂತಸ ಪಡಿಸುವ ಹಬ್ಬವೇ ಸಂಕ್ರಾಂತಿ. ಇದು ಜನವರಿ 14 ಅಥವಾ 15ರಂದು ಬರುವುದು.
ಹೋಲಿ
ಹೋಳಿಕದಹನ ಮಾಡಿದ ದಿನವೇ ಅಂದು ಓಕಳಿ ಮತ್ತು ಹೋಲಿ ಮುಂತಾದ ಹೆಸರುಗಳಲ್ಲಿ ಈ ಹಬ್ಬವು ಕರೆಸಿಕೊಂಡಿದೆ. ಕೃಷ್ಣನು ಸಹ ಹೋಲಿ ಆಡುತ್ತಿದ್ದನೆಂದು ಉಲ್ಲೇಖ. ಬಣ್ಣ ಬಣ್ಣದ ಪುಡಿಗಳು ಮತ್ತು ನೀರಿನಿಂದ ಆಟವಾಡಿ, ಕೃಷ್ಣನನ್ನು ನೆನೆಯಬೇಕು. ಇತ್ತೀಚೆಗೆ ರಾಸಾಯನಿಕ ಪದಾರ್ಥಗಳನ್ನು ಬಣ್ಣಗಳೊಂದಿಗೆ ಮಿಶ್ರಿತಗೊಳಿಸುತ್ತಿದ್ದಾರೆ. ಹಾಗಾಗಿ ಆರ್ಗಾನಿಕ್ ಬಣ್ಣಗಳಿಂದ ಆಟವಾಡುವುದು ಸೂಕ್ತ. ಇಂದಿಗೂ ಕಟ್ಟಿಗೆಯನ್ನು ಹೋಳಿಕ ಎಂದು ತಿಳಿದು ಅದನ್ನು ಭಸ್ಮ ಮಾಡುವುದು ಪ್ರಸಿದ್ಧ.
ಈ ರೀತಿಯ ಅನೇಕ ಹಬ್ಬಗಳು ನಮ್ಮವು. ಒಂದೊಂದು ಹಬ್ಬದ ಬಗ್ಗೆ ಎಷ್ಟು ತಿಳಿದರೂ ಸಾಲದು. ಭಾರತದಲ್ಲಿ ವರ್ಷಕ್ಕೆ ಕನಿಷ್ಠ 50+ ಹಬ್ಬಗಳು ಆಚರಿಸಲ್ಪಟ್ಟಿವೆ. ಎಲ್ಲ ಹಬ್ಬಗಳ ಬಗ್ಗೆ ಇನ್ನಷ್ಟು ತಿಳಿದು ಆಚರಿಸುವ ಪ್ರಯತ್ನ ಇನ್ನುಮುಂದೆ ನಮ್ಮದಾಗಿರಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post