ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನಿಧನಕ್ಕೆ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಎಲ್ಲರೂ ಪ್ರೀತಿಸಿದ, ಎಲ್ಲರನ್ನೂ ಪ್ರೀತಿಸಿದ ಮಗುವಿನ ಮನಸ್ಸಿನ ಮಹಾಜ್ಞಾನಿಗಳು ಇಲ್ಲದ ಶೂನ್ಯ ಎಂದೂ ತುಂಬದು ಎಂದು ಸ್ವಾಮೀಜಿಯವರು ತಮ್ಮ ಶೋಕ ಸಂದೇಶದಲ್ಲಿ ಬಣ್ಣಿಸಿದ್ದಾರೆ.
ನಮ್ಮ ಸಂನ್ಯಾಸ ಸ್ವೀಕಾರ, ಪೀಠಾರೋಹಣ ಹಾಗೂ ಎಲ್ಲ ಮಹತ್ಕಾರ್ಯಗಳಲ್ಲಿ ಪೇಜಾವರ ಶ್ರೀಗಳು ಜತೆಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಶ್ರೀಮಠದ ಹಲವು ಕಾರ್ಯಕ್ರಮಗಳಲ್ಲಿ ಜತೆಯಾಗುತ್ತಿದ್ದ ಪೇಜಾವರ ಶ್ರೀಗಳು ಕಳೆದ ವರ್ಷ ನಡೆದ ವಿಶ್ವ ಹವ್ಯಕ ಸಮ್ಮೇಳನದಲ್ಲೂ ಪಾಲ್ಗೊಂಡಿದ್ದರು. ರಾಮ-ಕೃಷ್ಣರ ಅಪೂರ್ವ ಬಾಂಧವ್ಯವನ್ನು ಬಣ್ಣಿಸಲು ಪದಗಳೇ ಇಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಜೀವನದ ಕೊನೆಯ ವರೆಗೂ ರಾಷ್ಟ್ರ-ಧರ್ಮ ಕಾರ್ಯದ ಬಗ್ಗೆ ಅದಮ್ಯ ಉತ್ಸಾಹವುಳ್ಳ ಪೇಜಾವರ ಶ್ರೀಗಳು ಸಮಸ್ತರಿಗೂ ಪ್ರೇರಣಾದಾಯಕ ಎಂದು ಶ್ರೀಮಠದ ಹೇಳಿಕೆ ತಿಳಿಸಿದೆ.
ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿಯವರ ನಿಧನದಿಂದ ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಸಕ್ರಿಯರಾಗಿದ್ದ ಕೇವಲ ಓರ್ವ ಸ್ವಾಮೀಜಿಯವರನ್ನು ಮಾತ್ರವಲ್ಲದೇ ಇಳಿ ವಯಸ್ಸಿನಲ್ಲಿಯೂ ಅವಿರತ ಕಾರ್ಯವನ್ನು ನಡೆಸಿದ, ಯುವಕರಿಗೆ ಪ್ರೇರಣಾದಾಯಕರಾಗಿದ್ದ ಓರ್ವ ಮಹಾನ್ ಸ್ವಾಮೀಜಿಯವರನ್ನು ಕಳೆದುಕೊಂಡಿದ್ದೇವೆ. ತಮ್ಮ ಆರನೇ ವಯಸ್ಸಿನಲ್ಲಿ ಸನ್ಯಾಸದೀಕ್ಷೆ ಪಡೆದು 21 ನೇ ವರ್ಷಕ್ಕೆ ಮೊದಲ ಪರ್ಯಾಯ ಪೀಠಾರೋಹಣ ಮಾಡಿದ್ದ ಪೂಜ್ಯ ಶ್ರೀಗಳು ಸತತ ಅನ್ನದಾನ, ಜ್ಞಾನದಾನ ಮುಂತಾದ ರೀತಿಯಲ್ಲಿ ಜನಸಾಮಾನ್ಯರಿಗೆ ಆಸರೆ ನೀಡಿದ ಅವರ ಕಾರ್ಯ ಸ್ಫೂರ್ತಿದಾಯಕವಾಗಿದೆ. ರಾಮಮಂದಿರದ ಹೋರಾಟವು ಅವಿಸ್ಮರಣೀಯವಾಗಿದ್ದು ಬಹಳಷ್ಟು ಶ್ರಮಿಸಿದ್ದರು ಶ್ರೀಮಠ ನೆನೆದಿದೆ.
ತಮ್ಮ ಪೂರ್ಣ ಜೀವನವನ್ನು ಧರ್ಮಕಾರ್ಯಕ್ಕಾಗಿ ಮೀಸಲಿಟ್ಟು ಸಮಸ್ತ ಜನರೆದುರು ಒಂದು ಆದರ್ಶವನ್ನು ನಿರ್ಮಿಸಿದ್ದಾರೆ. ಇಂದಿನ ಯುವಕರು ಸೇರಿದಂತೆ ಸಮಸ್ತರು ಇದರಿಂದ ಪ್ರೇರಣೆ ಪಡೆಬೇಕು. ಇದೇ ಅವರಿಗೆ ಅರ್ಪಿಸುವ ನಿಜವಾದ ಕೃತಜ್ಞತೆಯಾಗಿದ್ದು, ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶ್ರೀಗಳ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತ ಅವರ ಚರಣಗಳಲ್ಲಿ ಭಾವಪೂರ್ಣ ನಮಸ್ಕಾರಗಳನ್ನು ಸಲ್ಲಿಸುತ್ತೇವೆ ಮತ್ತು ಅವರ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲೆಂದು ಪ್ರಾರ್ಥಿಸುತ್ತೇವೆ ಶ್ರೀಮಠದ ಪ್ರಮುಖರು ಹೇಳಿದ್ದಾರೆ.
ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ಟಿ. ಮಡಿಯಾಳ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ. ಭಟ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಪ್ರಧಾನ ಕಾರ್ಯದರ್ಶಿ ಪಿ. ನಾಗರಾಜ್ ಭಟ್, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತಿತರರು ಪೇಜಾವರ ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಹವ್ಯಕ ಮಹಾಮಂಡಲ, ವಿವಿಧ ಮಂಡಲಗಳು, ವಲಯ ಹಾಗೂ ಘಟಕಗಳಲ್ಲಿ ಪೇಜಾವರ ಶ್ರೀಗಳ ಸಂತಾಪ ಸೂಚಕ ಸಭೆಗಳನ್ನು ಹಮ್ಮಿಕೊಳ್ಳಲಾಗಿತ್ತು.
Get in Touch With Us info@kalpa.news Whatsapp: 9481252093
Discussion about this post