ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಪ್ರಸ್ತುತ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಕ್ಕಳು ಗುರುಗಳೆಂದರೆ ಕೇವಲ ಶಿಕ್ಷಿಸುವ ಹಾಗೂ ದೈನಂದಿನ ಪಠ್ಯ ಬೋಧಿಸುವರೆಂದು ಭಾವಿಸಿರುತ್ತಾರೆ. ಆದರೆ, ವಾಸ್ತವವಾಗಿ ಮಕ್ಕಳ ಜೀವನ ರೂಪಿಸುವವರು ಶಿಕ್ಷಕರು ಎಂದು ನಿವೃತ್ತ ಶಿಕ್ಷಕ ಎಸ್. ರುದ್ರಪ್ಪ ತಿಳಿಸಿದರು.
ತಾಲೂಕಿನ ಬೆಳಗೆರೆ ಬಿ. ಸೀತಾರಾಮಶಾಸ್ತ್ರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ನಡೆದ ಗುರುವಂದನಾ ಮತ್ತು 1993-94 ನೆಯ ಸಾಲಿನ ವಿದ್ಯಾರ್ಥಿಗಳ 25 ನೆಯ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಳೇ ವಿದ್ಯಾರ್ಥಿಗಳು ವಿದ್ಯೆ ಕಲಿಸಿದ ಶಿಕ್ಷಕರನ್ನು ಗುರುವಂದನಾ ಕಾರ್ಯಕ್ರಮದ ಮೂಲಕ ಸ್ಮರಿಸಿವುದು ಸಂತಸ ತಂದಿದೆ. ಕಲಿಯುವ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಕರ ಶ್ರಮದ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಮಕ್ಕಳ ಭಾವನೆಯಲ್ಲಿ ಶಿಕ್ಷಕರೆಂದರೆ ಕೇವಲ ಶಿಕ್ಷಿಸುವ ಹಾಗೂ ದೈನಂದಿನ ಪಾಠ ಭೋದಿಸುವವರೇ ಎಂದು ಭಾವಿಸುತ್ತಾರೆ. ವಿದ್ಯಾರ್ಥಿಗಳು ನಂತರ ಅವರು ಓದಿ ಶಿಕ್ಷಣವಂತರಾದಾಗ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಶಿಕ್ಷಕರು ಹಿಂದೆ ಮಾಡಿದಂತಹ ಕಾರ್ಯಗಳನ್ನು ಮೆಲುಕು ಹಾಕುತ್ತಾರೆ ಮತ್ತು ವಿದ್ಯೆ ಕಲಿಸಿದ ಗುರುಗಳನ್ನು ಮರೆಯದೇ ಗುರುವಂದನಾ ಕಾರ್ಯಕ್ರಮಗಳ ಮೂಲಕ ಗೌರವಿಸುತ್ತಾರೆ ಎಂದರು.
ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ಪುರಾಣ ಕಾಲದಿಂದಲೂ ಅದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಗುರುಕುಲದಲ್ಲಿ ವಿದ್ಯೆಕಲಿತ ರಾಜರ ಮಕ್ಕಳು ಗುರುಗಳಿಗೆ ಗುರುಕಾಣಿಕೆಯಾಗಿ ದನ ಕನಕಾಧಿಗಳನ್ನು ನೀಡುತ್ತಿದ್ದರು. ಗುರು ಕಾಣಿಕೆಯಾಗಿ ಹೆಬ್ಬೆರೆಳು ಕೇಳಿದರು ಎಂದು ಏಕಲವ್ಯ ತನ್ನ ಬಲಗೈಯ ಹೆಬ್ಬೆರಳನ್ನೇ ಗುರುಕಾಣಿಕೆಯಾಗಿ ನೀಡಿದ್ದನು ನಾವು ಓದಿದ್ದೆವೆ ತಿಳಿದಿದ್ದೇವೆ. ಇದೇ ರೀತಿಯಾಗಿ ಈಗಿನ ಕಾಲದಲ್ಲೂ ಗುರುವಂದನಾ ಕಾರ್ಯಕ್ರಮದ ಮೂಲಕ ಗುರುಗಳಿಗೆ ಗೌರವ ನೀಡುತ್ತಿರುವುದು ಶ್ಲಾಘನೀಯ. ಅಂದಿನ ಶಿಕ್ಷಣಕ್ಕೂ, ಇಂದಿನ ಶಿಕ್ಷಣಕ್ಕೂ ತುಂಬಾನೇ ಅಂತರವಿದೆ. ಶಿಕ್ಷಕರು ದಂಡಿಸಿದಾಗ ಪೋಷಕರ ಗಮನಕ್ಕೆ ತಂದು ಶಿಕ್ಷಕರು ದಂಡಿಸಿದ ರೀತಿ ಅಪರಾಧ ಎನ್ನುವ ರೀತಿಯಲ್ಲಿ ಬಿಂಬಿತವಾಗುತ್ತಿರುವ ಎಷ್ಟೋ ಪ್ರಕರಣಗಳು ಪೋಲೀಸ್ ಮೆಟ್ಟಿಲೇರಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಹಳೇ ವಿದ್ಯಾರ್ಥಿ ಹಾಗೂ ಚನ್ನಪಟ್ಟಣ ಭಾರತೀಯ ಜೀವ ವಿಮಾ ನಿಗಮ ಅಭಿವೃದ್ದಿ ಅಧಿಕಾರಿ ಟಿ. ರುದ್ರಣ್ಣ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಹೆಚ್ಚಿಸಿ ಜ್ಞಾನದ ಹಸಿವನ್ನು ತೀರಿಸುವ ಬದುಕನ್ನು ರೂಪಿಸುವ ಶಿಕ್ಷಕರ ಸೇವೆ ಅವಿಸ್ಮರಣೀಯ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಪ್ರಬುದ್ಧಗೊಳಿಸಿದ ಶಿಕ್ಷಕರ ಸೇವೆ ಅಪಾರ. ಗುರುಗಳ ಸೇವೆ ಗುರುತಿಸುವ ಸಲುವಾಗಿ ವಿದ್ಯೆ ಕಲಿತ ಪ್ರತಿಯೊಬ್ಬ ವಿದ್ಯಾರ್ಥಿ ಗುರುವಂದನ ಕಾರ್ಯಕ್ರಮಗಳ ಮೂಲಕ ಗುರುಗಳನ್ನು ಸ್ಮರಿಸಿದಾಗ ಮಾತ್ರ ಗುರುವಂದನಾ ಕಾರ್ಯಕ್ರಮಕ್ಕೆ ಅರ್ಥ ಸಿಗುತ್ತದೆ. ಕಲ್ಲುಗಳಂತಿದ್ದ ನಮ್ಮಂತಹ ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಶಿಲೆಯನ್ನಾಗಿ ಮಾಡಿ ಸಮಾಜದಲ್ಲಿ ಉನ್ನತ ಹುದ್ದೆ, ರಾಜಕಾರಣಿಯನ್ನಾಗಿ ಹಲವು ಹುದ್ದೆಗಳಿಗೆ ಅವಕಾಶ ಮಾಡುವುದು ಶಿಕ್ಷಕರು. ಇತ್ತೀಚಿನ ದಿನಗಳಲ್ಲಿ ಗುರುಗಳ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಶಿಕ್ಷಣದ ಮಹತ್ವ ಇಲ್ಲದಂತಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಆರ್. ರುದ್ರಮ್ಮ, ಎಲ್. ವೆಂಕಟಪ್ಪ, ಕೆ.ಆರ್ .ರಾಜಣ್ಣ, ಹಳೆ ವಿದ್ಯಾರ್ಥಿ ಬಿ.ಟಿ. ಮಹೇಶ್, ಎನ್ ಎಸ್. ರಂಗಸ್ವಾಮಿ. ಹಳೆಯ ನೆನಪುಗಳನ್ನು ನೆನಪು ಮಾಡಿಕೊಂಡು ಮಾತನಾಡಿರು.
ಓದು ಮುಗಿಸಿ ಬಳಿಕ ಉದ್ಯೋಗ ಅರಸಿ ನಾನಾ ಕಡೆ ನೆಲೆಗೊಂಡಿದ್ದ ಹಿರಿಯ ವಿದ್ಯಾರ್ಥಿಗಳೆಲ್ಲರೂ ಒಂದೆಡೆ ಸೇರಿ ಸಂಭ್ರಮಿಸಿದರು. ಶಾಲಾ ಹಳೆಯ ಸವಿನೆನಪುಗಳನ್ನು ಮೆಲುಕು ಹಾಕಿದರು. ಸ್ನೇಹ ಸಮ್ಮಿಲನದೊಂದಿಗೆ ತಮಗೆ ವಿದ್ಯೆ ಕಲಿಸಿದ ಗುರುವಂದನೆ ಸಲ್ಲಿಸಿದರು. ವಿದ್ಯಾರ್ಥಿಗಳ ಪ್ರೀತಿ ಅಭಿಮಾನ ಕಂಡು ಹಲವು ಶಿಕ್ಷಕರು ಆನಂದದ ಕಣ್ಣೀರು ಸುರಿಸಿದರು.
ಈ ಕಾರ್ಯಕ್ರಮದಲ್ಲಿ ಬಿ. ಸೀತಾರಾಮಶಾಸ್ತ್ರೀ ಕಾಲೇಜಿನ ಪ್ರಾಂಶುಪಾಲೆ ಆರ್. ಸರೋಜಮ್ಮ, ಮುಖ್ಯಶಿಕ್ಷಕ ವಿ.ಎಚ್. ವೀರಣ್ಣ. ನಿವೃತ್ತ ಶಿಕ್ಷಕರಾದ ನಾಗಭೂಷಣ್ ರಾವ್, ಸೈಯಾದ್ ಸಾಬ್, ಡಿ ಗ್ರೂಪ್ ನೌಕರರಾದ ತಿಪ್ಪೀರಣ್ಣ. ಎಂ.ಈ. ರಾಜೀವಲೋಚನ್, ಹಳೆ ವಿದ್ಯಾರ್ಥಿಗಳಾದ ಕೆ.ಜಿ. ಶ್ರೀನಿವಾಸ್, ಎಸ್.ಮಲ್ಲೇಶ್, ಎಸ್.ರಂಗಸ್ವಾಮಿ, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಶ್ರೀನಿವಾಸ, ಹೊನ್ನೇಶಪ್ಪ, ಮಂಜುನಾಥ್, ಉಮೇಶ್, ವೆಂಕಟೇಶ, ಚ. ರಾಜಣ್ಣ, ಕೆ. ರಂಗಸ್ವಾಮಿ, ಬಿ.ಎಲ್. ಗಿರಿಜಮ್ಮ, ನೇತ್ರಾವತಿ, ಸುಜಾತ, ಶಿವಲಿಂಗಮ್ಮ, ಓಬಕ್ಕ, ಸುನಂದಮ್ಮ, ರೇಣುಕಮ್ಮ ಅನ್ನಪೂರ್ಣಮ್ಮ, ಗೀತಮ್ಮ, ಭಾರತಮ್ಮ ಇತರರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post