ಇಸ್ಲಾಮಾಬಾದ್: ಮಹತ್ವದ ಕ್ರಮವೊಂದರಲ್ಲಿ ಮುಂಬೈ ದಾಳಿಗೆ ಕಾರಣವಾದ ಉಗ್ರ ಹಫೀಸ್ ಸಯೀದ್ ನೇತೃತ್ವದ ಜಮಾದ್ ಉದ್ ದವಾ ಹಾಗೂ ಆತನಿಗೆ ಸೇರಿದ ಫಲಾಹ್ ಎ ಇನ್ಸಾನಿಯತ್ ಫೌಂಡೇಶನ್ ಅನ್ನು ನಿಷೇಧಿಸಿರುವ ಪಾಕಿಸ್ಥಾನ ಸರ್ಕಾರ, ಪುಲ್ವಾಮಾ ದಾಳಿ ರೂವಾರಿ ಜೈಷ್ ಸಂಘಟನೆ ತಂಟೆಗೆ ಮಾತ್ರ ಹೋಗಿಲ್ಲದೇ ಇರುವುದು ಆಶ್ಚರ್ಯ ಮೂಡಿಸಿದೆ.
ಈ ಕುರಿತಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ನಡೆದ ರಾಷ್ಟಿಯ ಭದ್ರತಾ ಮಂಡಳಿ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಆತ್ಮಾಹುತಿ ಬಾಂಬ್ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಜಾಗತಿಕ ಮಟ್ಟದಲ್ಲಿ ಒತ್ತಡ ಹಾಕಲು ಕಾರ್ಯತಂತ್ರ ಹೆಣೆದಿತ್ತು. ಅದರಂತೆ ಹಲವು ರಾಷ್ಟಗಳು ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪಾಕ್ ಮೇಲೆ ಒತ್ತಡ ಹೇರಿದ್ದವು. ಈ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಜಮಾತ್ ಉದ್ ದವಾ ಮತ್ತು ಫಲಾಹ್ ಎ ಇನ್ಸಾನಿಯತ್ ಸಂಘಟನೆಗಳನ್ನು ಆಂತರಿಕ ಸಚಿವಾಲಯ ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರಿಸಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಜಮಾತ್ ಉದ್ ದವಾ ಪಾಕಿಸ್ತಾನದಲ್ಲಿ 300 ಮದರಸಾಗಳನ್ನು ಹೊಂದಿದೆ. ಜತೆಗೆ ಶಾಲೆಗಳು, ಆಸ್ಪತ್ರೆಗಳು, ಪಬ್ಲಿಕೇಷನ್ ಹೌಸ್‌ಗಳು ಮತ್ತು ಆಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದೆ. ಈ ಎರಡೂ ಸಂಘಟನೆಗಳಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಾಕಿಸ್ಥಾನದ ಈ ನಿರ್ಧಾರ ಕಣ್ಣೊರೆಸುವ ತಂತ್ರವಾಗಿದೆ ಎಂದು ಆರೋಪಿಸಲಾಗುತ್ತಿದ್ದು, ಪುಲ್ವಾಮಾದ ಭೀಕರ ದಾಳಿಗೆ ಕಾರಣವಾದ ಜೈಷ್ ಎ ಮೊಹಮದ್ ಉಗ್ರ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದೆ. ಪಾಕ್ ನ ಈ ನಡೆ ಉಗ್ರರಿಗೆ ಪಾಕಿಸ್ಥಾನ ಸಹಕಾರ ನೀಡುತ್ತಿದೆ ಎಂಬುದು ತಿಳಿಯುತ್ತದೆ.

















