ಉಧಮ್’ಪುರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಯುವಕರನ್ನು ಸಾಮಾಜಿಕ ಜಾಲತಾಣಗಳಲ್ಲಿ ತನ್ನತ್ತ ಸೆಳೆದು, ಭಯೋತ್ಪಾದನೆಗೆ ತೊಡಗಿಸಿಕೊಳ್ಳುವ ಕುತಂತ್ರವನ್ನು ಪಾಕಿಸ್ಥಾನ ಅನುಸರಿಸುತ್ತಿದೆ ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಮಾತನಾಡಿರುವ ಉತ್ತರ ಕಮಾಂಡ್’ನ ಜನರಲ್ ಆಫೀಸರ್ ಕಮ್ಯಾಂಡಿಂಗ್ ಇನ್ ಚೀಫ್ (ಜಿಒಸಿ) ಲೆ.ಜ. ರಣಭೀರ್ ಸಿಂಗ್, ಪಾಕಿಸ್ಥಾನ ಹಾಗೂ ಪಿಒಕೆ ಪ್ರದೇಶಗಳಲ್ಲಿ ಭಯೋತ್ಪಾದನಾ ಮೂಲಭೂತ ಸೌಕರ್ಯಗಳನ್ನು ಪಾಕಿಸ್ಥಾನ ಮುಂದುವರೆಸಿದೆ ಎಂದೂ ಸಹ ಹೇಳಿದ್ದಾರೆ.
ಕಾಶ್ಮೀರದಲ್ಲಿನ ಶಾಂತಿ ಹಾಗೂ ಸುವ್ಯವಸ್ಥೆಯ ಕುರಿತಾಗಿ ತಪ್ಪು ಮಾಹಿತಿಯನ್ನು ಸಾರುವ ಜೊತೆಯಲ್ಲಿ, ಅಲ್ಲಿನ ಚಿತ್ರಣವನ್ನೇ ಹಾಳಾಗಿದೆ ಎಂದು ಅಲ್ಲಿನ ನಿವಾಸಿಗಳ ಮನದಲ್ಲಿ ಮೂಡಿಸಲು ಪಾಕ್ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ವಿಚಾರ ಪಾಕಿಸ್ಥಾನದ ವಿರೋಧ ಎನ್ನುವುದಕ್ಕಿಂತಲೂ ನಮ್ಮ ದೇಶ ಹಾಗೂ ಕಾಶ್ಮೀರದ ಕುರಿತಾಗಿನ ಕಾಳಜಿಯ ವಿಚಾರವಾಗಿದೆ ಎಂದಿರುವ ಅವರು, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು, ಕಾಶ್ಮೀರದ ಯುವಕರನ್ನು ಭಯೋತ್ಪಾದನೆಗೆ ಸೆಳೆಯುವ ಕೃತ್ಯವನ್ನು ಪಾಕ್ ಮಾಡುತ್ತಿದೆ. ಇದು, ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ದುಷ್ಪರಿಣಾಮ ಬೀರಲಿದೆ ಎಂದವರು ಎಚ್ಚರಿಕೆ ನೀಡಿದ್ದಾರೆ.
Discussion about this post