ಜೈಪುರ: ಮುಂದೆ ಶಾಂತಿ ಮಾತುಕತೆ ಆಡಿ, ಹಿಂದೆ ಗುಂಡಿನ ದಾಳಿ ಹಾಗೂ ವಾಮ ಮಾರ್ಗವನ್ನು ಅನುಸರಿಸುತ್ತಿರುವ ಪಾಕಿಸ್ಥಾನಕ್ಕೆ ಸೇರಿದ ಡ್ರೋಣ್ ಭಾರತದ ಗಡಿ ಪ್ರವೇಶಿಸಿದ್ದು, ಅದನ್ನು ಭಾರತೀಯ ಸೇನೆ ಹಿಂದಕ್ಕೆ ಓಡಿಸಿದೆ.
ರಾಜಸ್ಥಾನದಲ್ಲಿ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ಹಾರಾಡುತ್ತಿದ್ದ ಪಾಕಿಸ್ಥಾನದ ಡ್ರೋಣ್‌ನ್ನು ಭಾರತೀಯ ವಾಯುಪಡೆ ವಿಮಾನ ಹೊಡೆದುರುಳಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ಥಾನದ ಮತ್ತೊಂದು ಡ್ರೋಣ್ ಭಾರತೀಯ ಗಡಿಯೊಳಗೆ ನುಸುಳಲು ಯತ್ನಿಸಿದ್ದು, ಭದ್ರತಾ ಪಡೆಗಳ ಕರ್ತವ್ಯ ಪ್ರಜ್ಞೆಯಿಂದಾಗಿ ಡ್ರೋಣ್ ಅನ್ನು ಅಟ್ಟಾಡಿಸಿದ ಭಾರತೀಯ ಪಡೆಗಳು ಹಿಂದಕ್ಕೆ ಓಡಿಸುವಲ್ಲಿ ಯಶಸ್ವಿಯಾಗಿವೆ.
ಭಾರತವನ್ನು ಪ್ರವೇಶಿಸಲು ಯತ್ನಿಸಿರುವ ಎರಡನೇ ಡ್ರೋಣ್ ಇದಾಗಿದ್ದು, ಶ್ರೀರಂಗನಗರದ ಸಮೀಪ ಹಿಂದುಮಲ್‌ಕೋಟ್ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಪ್ರದೇಶವನ್ನು ಮುಂಜಾನೆ 5 ಗಂಟೆ ವೇಳೆಗೆ ಪ್ರವೇಶಿಸಲು ಯತ್ನಿಸಿದೆ. ಅನುಮಾನಾಸ್ಪದ ಡ್ರೋಣ್ ಕಂಡ ನಂತರ ಸಿಬ್ಬಂದಿ ಫೈರಿಂಗ್ ನಡೆಸಿ ಅದನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ವರದಿಯಾಗಿದೆ.
















