ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಲಾಕ್ ಡೌನ್ ಇದ್ದರೂ ಸಹ ನಾಗರಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಕೆಲವೊಂದು ವಿನಾಯ್ತಿ ನೀಡಿದೆ. ಪ್ರಮುಖವಾಗಿ, ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದ್ದರೂ, ಕೆಲವೊಂದು ಬಡಾವಣೆಗಳಲ್ಲಿ ಸರಿಯಾದ ಸಂಚಾರವಿರದ ಕಾರಣ ಪ್ರಯಾಣಿಕರು ಪರದಾಡುವಂತಾಗಿದೆ.
ನಿನ್ನೆ ಬನಶಂಕರಿ 3 ನೇ ಹಂತದ ಜನತಾ ಬಜಾರ್’ನಲ್ಲಿ ನಾಗರೀಕರು ಬೆಳಿಗ್ಗೆ 10.30 ರಿಂದ 11.55 ರವರೆಗೆ ಬಸ್’ಗಾಗಿ ಕಾಯುತ್ತಿದ್ದರೂ, ಒಂದೂ ಬಸ್ ಸುಳಿವಿರಲಿಲ್ಲ.
ನಗರದ ಹೃದಯ ಭಾಗವಾದ ಮಾರ್ಕೆಟ್ ಮತ್ತು ಮೆಜೆಸ್ಟಿಕ್ ಕಡೆಗೆ ಬಸ್ ನಿಲ್ದಾಣದಲ್ಲಿ ಸತತ 1.30 ಗಂಟೆ ಕಾಲ ಬಸ್ ಕಾಯುತ್ತಾ ನಿಂತ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಖಾಸಗಿ ಸಂಸ್ಥೆ ಉದ್ಯೋಗಿ ಗೀತಾ, ಇದು ಈಗ ಮಾತ್ರವಲ್ಲ. ಈ ಭಾಗದಲ್ಲಿ ಯಾವಾಗಲೂ ಇದೇ ಗೋಳಾಗಿ ಹೋಗಿದೆ. ಸಾರಿಗೆ ಸಚಿವರು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ.
ಈಗ ಜನರು ಹೆಚ್ಚಾಗಿ ಓಡಾಡುತ್ತಿಲ್ಲ. ಅದಕ್ಕಾಗಿ ದಿನದಲ್ಲಿ 3 ಗಂಟೆ ಕಾಲ ಬಸ್ ವ್ಯವಸ್ಥೆ ಸ್ಥಗಿತ ಮಾಡಲಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸಿದ ಮಹಿಳೆ ಸಿಬ್ಬಂದಿಯೊಬ್ಬರು.
ಅಲ್ಲದೇ, ಸಮರ್ಪಕವಾಗಿ ಬಸ್ ವ್ಯವಸ್ಥೆ ಮಾಡದಿದ್ದರೂ ಬಸ್ ಪಾಸ್ ವಿತರಿಸಿರುವ ಬಗ್ಗೆ ಬನಶಂಕರಿ 3 ನೇ ಹಂತದಲ್ಲಿ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತಾ ನಿಂತಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಗರದ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ನಿಲ್ದಾಣದಲ್ಲಿ ಎಲ್ಲ ಸಮಯದಲ್ಲೂ ಹೆಚ್ಚಿನ ಪ್ರಯಾಣಿಕರು ಇದ್ದೇ ಇರುತ್ತಾರೆ. ಇಂತಹ ಸ್ಥಳದಲ್ಲೇ ಬಸ್ ಸಂಚಾರ ಅಸಮರ್ಪಕವಾಗಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದಕ್ಕೆ ಸಂಬಂಧ ಪಟ್ಟ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸಾರಿಗೆ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬನಶಂಕರಿ 3 ನೆಯ ಹಂತದ ನಾಗರೀಕರು ಒತ್ತಾಯಿಸಿದ್ದಾರೆ .
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ
Get In Touch With Us info@kalpa.news Whatsapp: 8296371083
Discussion about this post