ಒಂದು ಕಾಲಕ್ಕೆ ಕನ್ನಡ ಚಿತ್ರ ನಿರ್ಮಾಣವೆಂದರೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇತ್ತೀಚೆಗೆ ಕರಾವಳಿಯಲ್ಲೂ ಕನ್ನಡ ಚಿತ್ರಗಳು ನಿರ್ಮಾಣಗೊಂಡು ಸುದ್ದಿ ಮಾಡುತ್ತಿದೆ. ಇದೀಗ ದೃಶ್ಯ ಮೂವೀಸ್ ಬ್ಯಾನರ್ ಅಡಿಯಲ್ಲಿ, ದಯಾನಂದ್ ಎಸ್ ರೈ ನಿರ್ಮಾಣದಲ್ಲಿ ಪೆನ್ಸಿಲ್ ಬಾಕ್ಸ್ ಎಂಬ ಕನ್ನಡ ಚಿತ್ರವು ತಯಾರಾಗಿದ್ದು, ಬಿಡುಗಡೆಗೆ ಮುಂಚೆಯೇ ಸದ್ದು ಮಾಡುತ್ತಿದೆ.ಸ್ಟಾರ್ ಸುವರ್ಣ ಡ್ಯಾನ್ಸ್ ಡ್ಯಾನ್ಸ್ ಹಾಗೂ ಭರ್ಜರಿ ಕಾಮಿಡಿ ರಿಯಾಲಿಟಿ ಶೋ ಮೂಲಕ ಕರ್ನಾಟಕದಲ್ಲಿ ಮನೆ ಮಾತಾದ ದೀಕ್ಷಾ ಡಿ. ರೈ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಕರಾವಳಿಯ ದೈತ್ಯ ಪ್ರತಿಭೆಗಳಾದ ಅರವಿಂದ್ ಬೋಳಾರ್ ಮತ್ತು ಭೋಜರಾಜ್ ವಾಮಂಜೂರು ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿದ್ದು, ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಅಂತೆಯೇ ರಮೇಶ್ ರೈ ಕುಕ್ಕುವಳ್ಳಿಯವರು ತಮ್ಮ ನೈಜ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ.
ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಅಂದರೆ ಚಿತ್ರದ ಹಾಡುಗಳು. ಜಯಕಾರ್ತಿ ಇವರು ಸಂಗೀತ ಸಂಯೋಜನೆಯಿಂದ ಮೂಡಿಬಂದ ಮೂರು ಗೀತೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ‘ಸ ರಿ ಗ ಮ ಪ’ ಖ್ಯಾತಿಯ ಡಾ.ಅಭಿಷೇಕ್ ರಾವ್, ವೈಷ್ಣವಿ ರವಿ, ಕ್ಷಿತಿ ರೈ ಧರ್ಮಸ್ಥಳ, ಜನ್ಯ ಪ್ರಸಾದ್, ಕನ್ನಡ ಕೊಗಿಲೆ ಖ್ಯಾತಿಯ ಅಪೇಕ್ಷಾ ಪೈ ಮುಂತಾದ ಗಾಯಕರು ಹಾಡುಗಳಿಗೆ ಜೀವ ತುಂಬಿದ್ದಾರೆ. ಚಿತ್ರದ ಕ್ಲೈಮಾಕ್ಸ್’ನಲ್ಲಿ ಬರುವ ಅದ್ಭುತ ನೃತ್ಯ ವೈಭವ ಹೈಲೈಟ್ ಆಗಲಿದೆ.
ಈಗಾಗಲೇ ಕನ್ನಡ ತುಳು ಸೇರಿದಂತೆ ಹಲವಾರು ಚಿತ್ರಗಳಿಗೆ ಸಂಭಾಷಣೆ, ಸಾಹಿತ್ಯ ಬರೆದು ಸಹ ನಿರ್ದೇಶನ ಮಾಡಿರುವ ರಝಾಕ್ ಪುತ್ತೂರು ಇವರು ಪೆನ್ಸಿಲ್ ಬಾಕ್ಸ್ ಚಿತ್ರದ ಕತೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಿದ್ದು ಮೋಹನ್ ಪಡ್ರೆಯವರ ಕ್ಯಾಮರ ಕೈಚಳಕವಿದೆ. ಡಿಪಿನ್ ದಿವಾಕರ್ ಸಂಕಲನ, ಸುದರ್ಶನ್ ಬೆಂಗಳೂರು ಇವರ ನೃತ್ಯ ಸಂಯೋಜನೆಗೆ ಶ್ರೀನಿ ಆಚಾರ್ ಸಹಕರಿಸಿದ್ದಾರೆ. ಮಣಿ ಸೆಲ್ವಂ, ಸುಜಿತ್ ಎಸ್ ಪಾಟಾಲಿ, ಅಕ್ಷತ್ ವಿಟ್ಲ ಇವರ ಸಹ ನಿರ್ದೇಶನವಿದೆ. ಆಗಸ್ಟ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದ್ದು ಸಿನಿ ಪ್ರಿಯರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.
ಏನಿದು ಪೆನ್ಸಿಲ್ ಬಾಕ್ಸ್?
ಹಳ್ಳಿಯ ಮಧ್ಯಮ ವರ್ಗದ ಒಂದು ಕುಟುಂಬ ನಗರಕ್ಕೆ ಬರುತ್ತದೆ. ತಮ್ಮ ಒಬ್ಬಳೇ ಮಗಳನ್ನು ಪ್ರತಿಷ್ಠಿತ ಶಾಲೆಯಲ್ಲಿ ಓದಿಸಬೇಕು ಎಂಬುದು ಆ ಬಾಲಕಿಯ ತಾಯಿಯ ಆಸೆಯಿಂದ ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿಸುತ್ತಾರೆ. ನೆರೆಮನೆಯ ಶ್ರೀಮಂತ ಉದ್ಯಮಿಯ ಮಗ ಈಕೆಯ ಸಹಪಾಠಿ. ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಇಬ್ಬರ ನಡುವೆ ಆರೋಗ್ಯಕರ ಸ್ಪರ್ಧೆ ಇದ್ದರೂ ಇವರ ಗೆಳೆತನಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ಆದರೆ ಅನಿವಾರ್ಯ ಕಾರಣಗಳಿಂದ ಬಾಲಕಿ ಮತ್ತೆ ಹಳ್ಳಿಗೆ ಹೋಗಬೇಕಾಗುತ್ತದೆ. ಇದರಿಂದ ಇಬ್ಬರು ಮಕ್ಕಳು ದೂರವಾಗುತ್ತಾರೆ. ಬಾಲಕಿ ಸರಕಾರಿ ಶಾಲೆಯಲ್ಲಿ ಓದು ಮುಂದುವರೆಸುತ್ತಾಳೆ. ತುಂಬಾ ಪ್ರತಿಭಾವಂತೆಯಾದ ಆಕೆ ಸರಕಾರಿ ಶಾಲೆಯಲ್ಲಿ ದೊಡ್ಡ ಪರಿವರ್ತನೆ ಮಾಡುತ್ತಾಳೆ.
ಬಾಲಕಿ ಮತ್ತೆ ಹಳ್ಳಿಗೆ ಹೋಗಲು ಕಾರಣವೇನು? ಆಕೆಯ ಕೈಯಲ್ಲಿರುವ ಪೆನ್ಸಿಲ್ ಬಾಕ್ಸ್’ನ ರಹಸ್ಯವೇನು? ಆಕೆ ಮತ್ತು ಆಕೆಯ ಸ್ನೇಹಿತ ಮತ್ತು ಎ ಭೇಟಿಯಾಗುತ್ತಾರಾ? ಇವೆಲ್ಲದಕ್ಕೂ ಉತ್ತರ ಕೊನೆಯಲ್ಲಿ ಸಿಗುತ್ತದೆ.
Discussion about this post