ಬೆಂಗಳೂರು: ನಮ್ಮ ದೇಶದ ಪ್ರಧಾನಿಯವರನ್ನು ಏಕವಚನದಲ್ಲಿ ಸಂಬೋಧಿಸಿ, ಹೀಯಾಳಿಸಿ ಮಾತನಾಡಿದ್ದ ಪ್ರತಿಪಕ್ಷಗಳಿಗೆ ಮತದಾರರು ತಕ್ಕ ಶಾಸ್ತಿ ಮಾಡಿದ್ದು, ಉತ್ತಮ ಆಡಳಿತವನ್ನು ದೇಶವಾಸಿಗಳು ಬೆಂಬಲಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಮೋದಿ ಅವರನ್ನು ಟೀಕಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ನಾಯಕರು ಈಗ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇನ್ನು ಮುಂದಾದರೂ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಚಾಟಿ ಬೀಸಿದರು.
ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಇಲ್ಲದ ಗೆಲುವು ಈಗ ದಾಖಲಾಗಿದ್ದು, ಶೇ. 54 ರಷ್ಟು ಮತ ಬಿಜೆಪಿಗೆ ಲಭಿಸಿದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಭಾಗದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಆಡಳಿತಾರೂಢ ಮೈತ್ರಿ ಸರ್ಕಾರದ ಭ್ರಷ್ಟಾಚಾರ, ವರ್ಗಾವಣೆ ದಂಧೆ, ಅಭಿವೃದ್ಧಿ ಮಾಡುವುದಾಗಿ ಸುಳ್ಳು ಹೇಳುತ್ತಿರುವ ಮೈತ್ರಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಕುಟುಕಿದರು.
Discussion about this post