ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಎಲ್ಲರಿಗೂ ತಿಳಿದಿರುವಂತೆ ಚೈನಾ ಒಂದು ಕಮ್ಯುನಿಸ್ಟ್ ರಾಷ್ಟ್ರ. ಪ್ರಜೆಗಳ ಹಕ್ಕುಗಳು, ಪತ್ರಿಕಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಇವೆಲ್ಲಕ್ಕೂ ಇಲ್ಲಿ ಅವಕಾಶವೇ ಇಲ್ಲ. ಅಲ್ಲಿನ ಪ್ರಜೆಗಳಿಗೆ ನಿರಂತರವಾಗಿ ಕತ್ತೆಗಳಂತೆ ದುಡಿಯುವುದಕ್ಕೆ ಮಾತ್ರ ಸ್ವಾತಂತ್ರ್ಯವಿದೆ. ಅದೂ ಅತಿ ಕಡಿಮೆ ಕೂಲಿಗೆ! ಕಮ್ಯುನಿಸ್ಟ್ ನಾಯಕರ ಮಹತ್ವಾಕಾಂಕ್ಷೆಗಳಿಗಾಗಿ ಚೀನಾದ ಮುಗ್ಧ ಜನರು ಇನ್ನಿಲ್ಲದಂತೆ ಜೀವ ತೇಯುತ್ತಿದ್ದಾರೆ. ಎಲ್ಲ ಕಮ್ಯುನಿಸ್ಟ್ ಮತ್ತು ಸರ್ವಾಧಿಕಾರಿ ಸರ್ಕಾರಗಳಂತೆಯೇ ಚೀನಾ ಸರ್ಕಾರವೂ ಪಾರದರ್ಶಕವಾಗಿರದೇ ಕಡು ಭ್ರಷ್ಟವಾಗಿದೆ. ಆದರೆ ಪತ್ರಿಕಾ ಸ್ವಾತಂತ್ರ್ಯವಿಲ್ಲದ್ದರಿಂದ ಹೊರಬರುತ್ತಿಲ್ಲ ಅಷ್ಟೇ.
ಜನರಿಗೆ ಅದನ್ನು ಪ್ರತಿಭಟಿಸುವ ಸ್ವಾತಂತ್ರ್ಯವಿಲ್ಲ. ಒಂದು ವೇಳೆ ಸರ್ಕಾರದ ವಿರುದ್ಧ ಮಾತನಾಡಿದರೆ ಜೈಲು ಗ್ಯಾರಂಟಿ. ಸಾಮಾಜಿಕ ಜಾಲತಾಣಗಳು, ವೆಬ್ ಸೈಟುಗಳು ಇತ್ಯಾದಿಗಳು ಚೈನಾದೊಳಗೆ ಮಾತ್ರ ಸೀಮಿತವಾಗಿದೆ. ಮತ್ತು ಅವು ನಿರಂತರ ಸರ್ಕಾರದ ಕಣ್ಗಾವಲಿನಲ್ಲಿರುತ್ತದೆ. ಖಾಸಗಿತನ ಎಂಬುದು ಚೈನೀಯರಿಗೆ ಅತಿ ದುರ್ಲಭ ವಸ್ತುವಾಗಿಬಿಟ್ಟಿದೆ. ಪ್ರಪಂಚದ ಅನ್ಯ ರಾಷ್ಟ್ರಗಳ ನಡುವೆ ಸಂಪರ್ಕವಿಲ್ಲದೆ ಚೈನಾ ಜನತೆ ಕೂಪಮಂಡೂಕಗಳಾಗಿಬಿಟ್ಟಿದ್ದಾರೆ. ಧರ್ಮವನ್ನು ಅಫೀಮು ಎಂದು ಪರಿಗಣಿಸುವ ನಾಸ್ತಿಕ ಕಮ್ಯುನಿಸ್ಟ್ ಸರ್ಕಾರದ ಕಾರಣ ಚೈನೀಯರಿಗೆ ಧಾರ್ಮಿಕ ಆಚರಣೆಗಳನ್ನು ಸೀಮಿತಗೊಳಿಸಲಾಗಿದೆ. ಹೀಗಾಗಿ ಜೀವನಕ್ಕೊಂದು ಅರ್ಥವಿಲ್ಲದೇ ಮನಶಾಂತಿಯಿಲ್ಲದೆ ಜನ ಸ್ಪೋಟಗೊಳ್ಳುವ ಹಂತ ತಲುಪಿದ್ದಾರೆ.
ಚೈನಿಯರು ತಮ್ಮದೇ ದೇಶದಲ್ಲಿ ಒಂದು ರೀತಿಯ ಆಧುನಿಕ ಜೀತಪದ್ಧತಿಗೆ ಒಳಪಟ್ಟಿದ್ದಾರೆ. 1989 ರಲ್ಲಿ ತಿಯಾನ್ಮನ್ ಚೌಕಾದಲ್ಲಿ ಪ್ರಜಾಪ್ರಭುತ್ವ ಸರ್ಕಾರಕ್ಕಾಗಿ ಅಗ್ರಹಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನು ಅತ್ಯಂತ ಕ್ರೂರವಾಗಿ ದಮನಿಸಿದ ರೀತಿ ಇಡೀ ದೇಶದ ಪ್ರಜೆಗಳ ನೆನಪಿನಿಂದ ಮಾಸಿಲ್ಲ. ಅಂದು ತನ್ನದೆ ದೇಶದ ಸಾವಿರಾರು ಜನ ಯುವಕರನ್ನು ಚೀನೀ ಸೈನ್ಯವು ಟ್ಯಾಂಕುಗಳನ್ನು, ಬುಲ್ಡೋಜರುಗಳನ್ನು ಹತ್ತಿಸಿ ಕೊಂದಿತು. ಮುಂದಿನ ಹತ್ತಾರು ವರ್ಷಗಳ ಕಾಲ ಪ್ರಜಾಪ್ರಭುತ್ವದ ಸೊಲ್ಲೆತ್ತದಂತೆ ಜನರನ್ನು ಬೆದರಿಸುವ ತಂತ್ರ ಅದು. ಹೀಗಾಗಿ ಬಹು ಸಮಯ ಹತ್ತಿಕ್ಕಿದ ಚೀನಾದ ಪ್ರಜೆಗಳ ಆಕ್ರೋಶ ಹೊರಬರಲು ಕೆಲವೇ ಸಮಯ ಬಾಕಿಯಿದೆ. ಒಂದು ಸಣ್ಣ ಕಿಡಿಯ ಅವಶ್ಯಕತೆಯಿದೆ. ಈ ಕುದಿ ಒಂದು ನಿರ್ದಿಷ್ಟ ಬಿಂದು ಮುಟ್ಟಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಒಂದು ಸಣ್ಣ ಪ್ರಮಾಣದ ಅಲುಗಾಟ ಸಹಾ ಚೀನಾದ ಒಳಗೆ ಬಹುದೊಡ್ಡ ಸ್ಫೋಟವನ್ನೇ ಉಂಟುಮಾಡಬಹುದು. ಅಮೆರಿಕಾದ ಶ್ವೇತಭವನದ ಮಾಜಿ ಚೀಫ್ ಸ್ಟ್ರಾಟಜಿಸ್ಟ್ ಸ್ಟೀವ್ ಬ್ಯಾನನ್ ಹೇಳುವಂತೆ “ಒಂದು ವೇಳೆ ಇಂದಿನ ಪರಿಸ್ಥಿತಿಯಲ್ಲಿ ಚೀನಾದಲ್ಲಿ ಇನ್ನೊಂದು ತಿಯಾನ್ಮನ್ ದುರಂತ ಮರುಕಳಿಸಿದರೆ ಚೈನಾ ಪತನಗೊಳ್ಳುವುದು ನಿಶ್ಚಿತ” ವಾಗಿದೆ.
Get In Touch With Us info@kalpa.news Whatsapp: 9481252093
Discussion about this post