ನವವೃಂದಾವನ ಗಡ್ಡೆಯಲ್ಲಿ ಇನ್ನೂ ತೀರದ ಅರ್ಚಕರ ನಡುವಿನ ಗುದ್ದಾಟ
ಕಳೆದ ವಾರವಷ್ಟೇ ಉತ್ತರಾಧಿಮಠ ಮತ್ತು ಶ್ರೀ ರಾಯರಮಠದ ನಡುವಿನ ವೈಮನಸ್ತಾಪ ಕೊನೆಯಾಗಿ ಉಭಯ ಶ್ರೀಗಳು ನವವೃಂದಾವನದಲ್ಲಿ ಒಂದಾಗಿ ಆನೆಗೊಂದಿ ಮತ್ತು ಹಂಪಿ ವಿಜಯನಗರ ಸಾಮ್ರಾಜ್ಯದ ಗುರುಗಳಾದ ಶ್ರೀಶ್ರೀಶ್ರೀ ವ್ಯಾಸರಾಜತೀರ್ಥರ ಧ್ವಂಸ ಮಾಡಲಾದ ವೃಂದಾವನವನ್ನು ಯಾವುದೆ ಗಲಾಟೆ, ಹಿಂಸೆ ಮತ್ತು ಅಹಿತಕರ ಘಟನೆ ನಡೆಯದಂತೆ ಉಭಯ ಮಠದ ಅಂದರೆ ಉತ್ತರಾಧಿಮಠ, ರಾಯರ ಮಠ ಮತ್ತು ಉಡುಪಿಯ ಮಠದ ಗುರುಗಳ ಉಪಸ್ಥಿತಿಯಲ್ಲಿ ಒಂದೇ ದಿನದಲ್ಲಿ ಪುನಃ ಪ್ರತಿಷ್ಠಾಪನೆ ಮಾಡಲಾಯಿತು.
ನಂತರ ಈ ಘಟನೆಯಲ್ಲಿ ವೃಂದಾವನವನ್ನು ಧ್ವಂಸ ಮಾಡಿದವರನ್ನು ಎರಡೇ ದಿನಗಳಲ್ಲಿ ಕೊಪ್ಪಳ ಮತ್ತು ಗಂಗಾವತಿಯ ಪೋಲಿಸ್ ಇಲಾಖೆಯವರ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಜನರಿಂದ ಸರ್ಕಾರದಿಂದ ಪೋಲಿಸ್ ಇಲಾಖೆಗೆ ಪ್ರಶಂಸೆಯೂ ವ್ಯಕ್ತವಾಗಿದೆ.
ಈ ಘಟನೆ ನೆಡೆದ ತಕ್ಷಣ ಮಾನ್ಯ ಲೋಕಸಭಾ ಶಾಸಕರಾದ ಶ್ರೀತೇಜಸ್ವಿಸೂರ್ಯ ಮತ್ತು ಸಚಿವರಾದ ಪ್ರಹ್ಲಾದ್ ಜೋಶಿಯವರು ಲೋಕಸಭೆಯಲ್ಲಿ ಚರ್ಚಿಸಿ ನವವೃಂದಾವನದ ಎಲ್ಲಾ ಕಡೆ ವಿದ್ಯುತ್ ದೀಪ , ಸಿಸಿ ಕ್ಯಾಮೆರಾ ಮತ್ತು ಆ ಸ್ಥಳಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಲು ಪ್ರಸ್ತಾವನೆ ಮಂಡಿಸಿ ಸರ್ಕಾರದ ಮೇಲೆ ಒತ್ತಡ ತಂದಿದ್ದರು.
ಈ ನಡುವೆ ತಾತ್ಕಾಲಿಕವಾಗಿ ಆ ಸ್ಥಳದಲ್ಲಿ ಉತ್ತರಾಧಿ ಮಠದಿಂದ ವಿದ್ಯುತ್ ದೀಪ ಮತ್ತು ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿ ನವವೃಂದಾವನಕ್ಕೆ ವಿದ್ಯುತ್ ಕಂಬ ಮತ್ತು ಸಾಮಗ್ರಿಗಳನ್ನು ತಂದಿದ್ದರು. ಈ ಸಂದರ್ಭದಲ್ಲಿ ಶ್ರೀ ರಾಯರ ಮಠದ ಅರ್ಚಕರಿಂದ ಆಕ್ಷೇಪಣೆ ಉಂಟಾಗಿ ಕೆಲಸ ಸ್ಥಗಿತವಾಗಿದೆ ಎಂದು ತಿಳಿದುಬಂದಿದೆ.
ಇಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ಉಭಯ ಮಠಗಳ ಅನುಮತಿ ಇದ್ದರೆ ಮಾತ್ರ ಮಾಡಬೇಕು ಇಲ್ಲವೆ, ಯತಾಃಸ್ಥಿತಿ ಕಾಪಾಡಬೇಕು ಎಂಬ ವಾದ ಇವರದಾಗಿದೆ.
ಈ ಇಬ್ಬರ ಜಗಳದಿಂದ ಈ ಸ್ಥಳದಲ್ಲಿ ಯಾವುದೇ ರೀತಿಯ ಬೆಳವಣಿಗೆಯಾಗದೆ ಜನರು ಮತ್ತು ಪ್ರವಾಸಿಗರಿಗೆ ಮೂಲಭೂತವಾದ ವ್ಯವಸ್ಥೆ ಮತ್ತು ಭದ್ರತೆಗೆ ಅಡ್ಡಿಯಾಗಿರುತ್ತದೆ. ಉಭಯ ಮಠಗಳು ಒಂದಾಗುವ ತನಕ ಈ ನವವೃಂದಾವನಕ್ಕೆ ಪರ್ಯಯ ವ್ಯವಸ್ಥೆ ಮಾಡಬೇಕಾಗಿದೆ ಮತ್ತು ತಕ್ಷಣ ನವವೃಂದಾವನ ಗಡ್ಡೆಯಲ್ಲಿ ವಿದ್ಯುತ್ ದೀಪ, ಸಿಸಿ ಕ್ಯಾಮರಾ ಅಳವಡಿಸಿ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕಾಗಿದೆ.
ಈ ನಡುವೆ ಶ್ರೀ ವ್ಯಾಸರಾಜತೀರ್ಥರ ಬೃಂದಾವನವನ್ನು ಮರು ಪ್ರತಿಷ್ಠಾಪನೆ ಸಂದರ್ಭದಲ್ಲಿ ಹಾಜರಿದ್ದ ಶ್ರೀ ಮಠದ ಗುರುಗಳು ಇನ್ನು ಮುಂದೆ ಒಟ್ಟಾಗಿ ಸೇರಿ ಯಾವುದೇ ಗಲಾಟೆ ಗದ್ದಲ ಇಲ್ಲದೆ ಮುಂದಿನ ಕೆಲಸ ಕಾರ್ಯಗಳನ್ನು ಮಾಡಿಕೊಂಡು ನವವೃಂದಾವನಗಡ್ಡೆಯಲ್ಲಿ ನಡೆಯುವ ಸಕಲ ಕಾರ್ಯ ಕಲಾಪಗಳನ್ನು ಒಟ್ಟಾಗಿ ಸೇರಿ ನಡೆಸಲಾಗುತ್ತದೆ ಎಂದು ನೆರೆದಿದ್ದ ಮಠಾಧೀಶರುಗಳು ತಿಳಿಸಿದ ಮಾತು ಎಲ್ಲಿ ಹೋಯಿತು ಎಂಬ ಪ್ರಶ್ನೆ ಜನಗಳ ಮುಂದೆ ಎದ್ದಿರುತ್ತದೆ. ಎಲ್ಲದಕ್ಕೂ ಉತ್ತರಬೇಕಾಗಿದೆ.
ಈ ನಡುವೆ ಸರ್ಕಾದಿಂದ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡಬೇಕಾದರೆ ಈ ಸ್ಥಳ ಖಾಸಗಿ ಒಡೆತನಕ್ಕೆ ಸೇರಿರುವುದರಿಂದ ಸರ್ಕಾರದವರು ಭದ್ರತೆ ಒದಗಿಸುವುದು ಕಷ್ಠವಾಗಿದೆ. ಭಕ್ತರ ಭದ್ರತೆಗಾಗಿ ಸರ್ಕಾರ ಮಧ್ಯಸ್ಥಿಕೆ ಮಾಡುವುದಕ್ಕೆ ಇದು ಸೂಕ್ತ ಕಾಲ.
ಉಭಯ ಮಠದ ಭಕ್ತರು ಒಂದಾಗಬೇಕು, ಧಾರ್ಮಿಕ ಕಾರ್ಯ ಕಲಾಪ ಹೆಚ್ಚಾಗಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಅಭಿವೃದ್ದಿ ಮಾಡಿ ನವವೃಂದಾವನಗಡ್ಡೆಯ ಅಭಿವೃದ್ದಿಗೆ ಶ್ರಮಿಸಬೇಕೆಂದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಆಶಿಸುತ್ತದೆ.
ವರದಿ: ಮುರುಳೀಧರ ನಾಡಿಗೇರ್, ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
Discussion about this post