ನವದೆಹಲಿ: ಅಪ್ರತಿಮ ಸ್ವಾತಂತ್ರ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಗೌರವಾರ್ಥ ಇಂದು ನವದೆಹಲಿಯ ಕೆಂಪು ಕೋಟೆಯಲ್ಲಿ ಸುಭಾಷ್ ಚಂದ್ರ ಬೋಸ್ ಮ್ಯೂಸಿಯಂ ಅನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಇಂದು ದೇಶದಾದ್ಯಂತ ನೇತಾಜಿಯವರ 122ನೆಯ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಮ್ಯೂಸಿಯಂನ್ನು ಲೋಕಾರ್ಪಣೆ ಮಾಡಲಿರುವ ಮೋದಿಯವರು, ಇದನ್ನು ನೇತಾಜಿ ಹಾಗೂ ಇಂಡಿಯನ್ ನ್ಯಾಶನಲ್ ಆರ್ಮಿಗೆ ಸಮರ್ಪಣೆ ಮಾಡಲಿದ್ದಾರೆ.
ಉದ್ಘಾಟನೆಯ ನಂತರ ಯಾದ್ ಜಿ ಜಲೀನ್ ಮ್ಯೂಸಿಯಂ(ಜಲಿಯನ್ ವಾಲಾಬಾಗ್ ಹಾಗೂ 2ನೆಯ ವಿಶ್ವಸಮರ) 1857ರ ಮೊದಲ ಸ್ವಾತಂತ್ರ ಸಂಗ್ರಾಮದ ಮ್ಯೂಸಿಯಂ, ಭಾರತೀಯ ಕಲೆಯ ದೃಶ್ಯಕಲಾ ಮ್ಯೂಸಿಯಂಗೂ ಸಹ ಪ್ರಧಾನಿಯವರು ಭೇಟಿ ನೀಡಲಿದ್ದಾರೆ.
ಬೋಸ್ ಮ್ಯೂಸಿಯಂ ಹಾಗೂ ಇಂಡಿಯನ್ ನ್ಯಾಶನಲ್ ಆರ್ಮಿ ಗ್ಯಾಲರಿಯು ನೇತಾಜಿ ಹಾಗೂ ಐಎನ್’ಎಗೆ ಸಂಬಂಧಿಸಿದ ಹಲವು ಬಗೆಯ ಅಪರೂಪದ ಸಂಗ್ರಹಗಳನ್ನು ಹೊಂದಿದೆ. ಪ್ರಮುಖವಾಗಿ, ನೇತಾಜಿ ಬಳಸಿದ್ದ ಮರದ ಕುರ್ಚಿ, ಕತ್ತಿ, ಮೆಡಲ್’ಗಳು ಬ್ಯಾಡ್ಸ್’ಗಳು, ಯೂನಿಫಾರಂ ಸೇರಿದಂತೆ ಐಎನ್’ಎದಲ್ಲಿದ್ದ ಮಹತ್ವದ ಸಂಗ್ರಹಗಳು ಇಲ್ಲಿವೆ.
Discussion about this post