ಕಲ್ಪ ಮೀಡಿಯಾ ಹೌಸ್ | ಮುಂಬೈ |
ಸುಮಾರು 60 ವರ್ಷಗಳ ಹಿಂದೆ ಕಂಡಿದ್ದ ಸಮುದ್ರ ಸೇತುವೆಯ #SeaBridge ಕನಸು ಇಂದು ಸಾಕಾರಗೊಂಡಿದ್ದು, ರಾಷ್ಟ್ರದ ಐತಿಹಾಸಿಕ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿ #PMNarendraModi ಲೋಕಾರ್ಪಣೆಗೊಳಿಸಿದ್ದಾರೆ.
ಹೌದು… ದೇಶದ ಅತಿ ಉದ್ದದ ಸಮುದ್ರ ಸೇತುವೆ, ಮುಂಬೈ ಟ್ರಾನ್ಸ್ ಹಾರ್ಬರನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದು, ಭಾರತದ ಅಭಿವೃದ್ಧಿಯ ಹಾದಿಯಲ್ಲಿ ಐತಿಹಾಸಿಕ ಹೆಜ್ಜೆಯನ್ನಿಟ್ಟಂತಾಗಿದೆ.
ಮುಂಬೈನ #Mumbai ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶದ ನಡುವಿನ 21.8 ಕಿಮೀ ಉದ್ದದ ಸೇತುವೆಯು ಪ್ರಸ್ತುತ ಎರಡು ಗಂಟೆಗಳಿಂದ ಸುಮಾರು 15-20 ನಿಮಿಷಗಳಿಗೆ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ.
ಸಮುದ್ರದ ಮೇಲೆ 16.50 ಕಿಮೀ ಮತ್ತು ಭೂಮಿಯಲ್ಲಿ 5.50 ಕಿಲೋಮೀಟರ್ ಉದ್ದವನ್ನು ಹೊಂದಿದೆ. ಈ ಸೇತುವೆಗೆ ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು #AtalSetu ಎಂದು ಹೆಸರಿಡಲಾಗಿದೆ.
1962ರಲ್ಲೆ ಎರಡು ನಗರಗಳ ಮಧ್ಯೆ ಸಂಚಾರ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಜಾರಿ ಸಂಬಂಧ ಹಲವು ಅಧ್ಯಯನಗಳು ನಡೆದಿದ್ದವು.
2008ರಲ್ಲಿ ಮಹಾರಾಷ್ಟ್ರ ಸರ್ಕಾರ ಈ ಯೋಜನೆ ಜಾರಿಗೆ ಸಂಬಂಧ ಟೆಂಡರ್ ಆಹ್ವಾನಿಸಿತ್ತು. ಈ ಯೋಜನೆಯಲ್ಲಿ ರಾಜಕೀಯದ ಗಾಳಿ ಬೀಸಿ ಭಾರೀ ಟೀಕೆ ಬಂದ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಕೊನೆಗೆ ಎಲ್ಲಾ ಇಲಾಖೆಗಳ ಅನುಮತಿ ಪಡೆದ ಬಳಿಕ 2016ರ ಡಿ. 24 ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಭೂಸ್ವಾಧೀನ ಪಡಿಸಿದ ಬಳಿಕ 2018ರ ಎ.24 ರಂದು ಕಾಮಗಾರಿ ಆರಂಭವಾಗಿತ್ತು.
ಈ ಸೇತುವೆಯ ವಿಶೇಷತೆಯೇನು?
- ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶದ ನಡುವಿನ ಅತ್ಯಾಧುನಿಕ ಸೇತುವೆ
- ಸರಿಸುಮಾರು 21 ಕಿಮೀ ಉದ್ದದ 6 ಲೇನ್ (3+3-ಲೇನ್, 2 ತುರ್ತು ಲೇನ್) ಸೇತುವೆಯನ್ನು ಮುಂಬೈ ನಗರದ ಶಿವಡಿ ಮತ್ತು ಮುಖ್ಯ ಭೂಭಾಗದ ನ್ಹಾವಾ ನಡುವಿನ ಸಂಪರ್ಕ
- ಮುಂಬೈ-ಪುಣೆ ಎಕ್ಸ್’ಪ್ರೆಸ್ ವೇ, ಮುಂಬೈ-ಗೋವಾ ಎಕ್ಸ್’ಪ್ರೆಸ್ ವೇ, ವಿರಾರ್-ರಾಯ್ಘಡ್ ಕಾರಿಡರ್ ಸಂಪರ್ಕ ಇನ್ನು ಮುಂದೆ ಸುಲಭ
- 4 ಚಕ್ರದ ವಾಹನಗಳಿಗೆ ಗಂಟೆಗೆ ಗರಿಷ್ಠ 100 ಕಿ.ಮೀ ವೇಗದ ಮಿತಿ ನಿಗದಿ. ಬೈಕ್, ಅಟೋರಿಕ್ಷಾ, ಟ್ರಾಕ್ಟರ್ ಸಂಚಾರವನ್ನು ನಿರ್ಬಂಧ
- ಆರಂಭದಲ್ಲಿ ಈ ಯೋಜನೆ ನಿರ್ಮಾಣಕ್ಕೆ 14,712.70 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಈ ವೆಚ್ಚ 16,904.43 ಕೋಟಿ ರೂ.ಗೆ ಏರಿಕೆಯಾಗಿದೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post