ಸುಬ್ರಹ್ಮಣ್ಯದಲ್ಲಿ ನೃಸಿಂಹ ಮಠ
ಈಗ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯ ದೇವರ ಬಲಭಾಗದಲ್ಲಿ ನೃಸಿಂಹ ದೇವರ ಗುಡಿಯೂ, ಎಡ ಭಾಗದಲ್ಲಿ ಉಮಾಮಹೇಶ್ವರ ದೇವರ ಗುಡಿಯೂ ಇದೆ. ಈ ನೃಸಿಂಹಸ್ವಾಮಿ ದೇವರ ಗುಡಿಯು ಸಿದ್ಧಿ ವಿನಾಯಕನ ಗುಡಿ ಎಂದು ಈಗಿನ ವಾದ.
ವಿನಾಯಕನನ್ನು ಸ್ಥಳಾಂತರ ಮಾಡಿ ನೃಸಿಂಹ ದೇವರನ್ನು ಮಾಧ್ವರು ಇಟ್ಟಿದ್ದಾರೆ ಎಂದು ಯಾರೋ ಒಂದು ಪುಸ್ತಕವನ್ನೂ ಬರೆದು ಹಾಕಿದರು. ಅವರು ದೇವಸ್ಥಾನದಲ್ಲಿ ಸಂಶೋಧನೆ ಮಾಡಿ ಬರೆದಿದ್ದಾಗಿದೆ ಎಂದೂ ಹೇಳಿಕೊಂಡಿದ್ದಾರೆ. ಮುಂದೆ ಈ ಪುಸ್ತಕದಲ್ಲಿ ಏನೇನೋ ಬರೆಯುತ್ತಾ ಹಿಂದೆ ಹಿಂದೆ ಹೋಗುತ್ತಾ ಸುಮಾರು 1850 ರ ವರೆಗೆ ಹೋಗಿದ್ದಾರೆ. ಅಲ್ಲಿಂದ ಹಿಂದೆ ದಾರಿ ಸಿಗಲಿಲ್ಲ.
ಮೊದಲೇನಿತ್ತು ಅಲ್ಲಿ? ಎಂಬುದು ತಿಳಿಯಬೇಕಾದರೆ, ವಿಷ್ಣು ತೀರ್ಥರಿಂದ ಬರಬೇಕು. ಅದಕ್ಕೆ 18 ನೆಯ ಶತಮಾನದ ಚಿಂತನೆ ಸಾಲದು. ಅದನ್ನು ತಿಳಿಯಬೇಕಾದರೆ 12 ನೆಯ ಶತಮಾನದಿಂದ ಬರಬೇಕು.
1238 ರಲ್ಲಿ ಮಧ್ವಾಚಾರ್ಯರ ಜನನ. ಅಲ್ಲಿಂದ ನಂತರ ಅವರ ಯತಿದೀಕ್ಷೆ, ತಮ್ಮ ವಿಷ್ಣು ತೀರ್ಥರ ಯತಿದೀಕ್ಷೆ, ಸುಬ್ರಹ್ಮಣ್ಯಕ್ಕೆ ಆಗಮನ, ಇತ್ಯಾದಿ ಅನೇಕಾನೇಕ ವಿಚಾರಗಳಿವೆ. ಆಗಲೇ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯ ದೇವರ ಸಾನ್ನಿಧ್ಯ ಇತ್ತು. ಬಹುಷಃ ಇದರ ಕಾಲ ಮಾನದ ಬಗ್ಗೆ ಸ್ಕಾಂದ ಪುರಾಣವನ್ನು ಅಧ್ಯಯನ ಮಾಡಿದರೆ ತಿಳಿಯಬಹುದು.
ಯಾವಾಗ ಮಧ್ವಾಚಾರ್ಯರು ವಿಷ್ಣು ತೀರ್ಥರ ಜತೆಗೆ ಈ ಕ್ಷೇತ್ರಕ್ಕೆ ಆಗಮಿಸಿದರೋ ಅಲ್ಲಿ ಈ ಯತಿವರೇಣ್ಯರು ಅಲ್ಲಿನ ಮಹತ್ವ ತಿಳಿದು ವಿಷ್ಣು ತೀರ್ಥರು ಅಲ್ಲಿಯೇ ಒಂದು ಮಠ ಸ್ಥಾಪನೆ ಮಾಡಿದರು. ಯಾಕೆಂದರೆ ಆ ಕ್ಷೇತ್ರದ ಜನರು ಆಗ ಅರ್ಥ ತಿಳಿಯದ ಶೈವ ಸಂಪ್ರದಾಯ ಪಾಲನೆ ಮಾಡಿಕೊಂಡು, ಶ್ರೀಸುಬ್ರಹ್ಮಣ್ಯನಿಗೆ ಪೂಜೆ ಮಾಡುತ್ತಿದ್ದರು. ಮಧ್ವಾಚಾರ್ಯರು ವಿಷ್ಣು ತೀರ್ಥರೊಂದಿಗೆ ಈ ಪೂಜಾ ವಿಧಾನದಲ್ಲಿ ಒಂದು ಮಾಧ್ವಸಂಪ್ರದಾಯದ ಆಗೋಕ್ತ ವಿಧಾನಕ್ಕೆ ಪರಿವರ್ತನೆ ಮಾಡಿದವರು.
ಈ ಕ್ಷೇತ್ರಕ್ಕೆ ಸಂಬಂಧಿಸಿದ ಸಂಪ್ಯಾಡಿ ಮಠ, ಕಾಣಿಯೂರು ಮಠ, ಕೊಕ್ಕಡದ ಎಡಪ್ಪಾಡಿತ್ತಾಯ ಕುಟುಂಬದ ಮೂಲಕ ಅಭಿವೃದ್ಧಿಪಡಿಸಿದರು. ಅದೇ ಎಡಪ್ಪಾಡಿತ್ತಾಯ ವಂಶಸ್ಥರಿಂದಲೇ ಸುಬ್ರಹ್ಮಣ್ಯ ದೇವರಿಗೆ ಪೂಜೆ ನಡೆಯುವಂತೆಯೂ ಮಾಡಿದರು. ಈಗಲೂ ಈ ಕುಟುಂಬಸ್ಥರಲ್ಲಿ ಅನೇಕ ಪುರಾವೆಗಳಿವೆ. ಉಪ್ಪಿನಂಗಡಿಯ ಹತ್ತಿರದ ಇರ್ಕೀ ಮಠದಲ್ಲಿ ಈಗಲೂ ಮಧ್ವಾಚಾರ್ಯ ಕರಾರ್ಚಿತ ಕೇಶವ ದೇವರು, ಎಡಪ್ಪಾಡಿತ್ತಾಯರ ಕುಟುಂಬದಲ್ಲಿ, ಅಮ್ಮಣ್ಣಾಯರ ಕುಟುಂಬದಲ್ಲಿ ಇತ್ಯಾದಿ ಹನ್ನೆರಡು ವಂಶಗಳಿಗೆ ಕೇಶವಾದಿ ದ್ವಾದಶ ಮೂರ್ತಿಗಳನ್ನು ಕೊಟ್ಟಂತಹ ದಾಖಲೆಗಳಿವೆ.
ಶೈವ ಸಂಪ್ರದಾಯವನ್ನು ಆಚಾರ್ಯರೆಂದೂ ವಿರೋಧಿಸಲಿಲ್ಲ. ಆದರೆ ಅದನ್ನು ವಿಷ್ಣು ಪ್ರೀತ್ಯರ್ಥವಾಗಿಯೇ ಮಾಡಬೇಕೆಂದು ಜಗತ್ತಿಗೆ ಸಾರಿದರು. ಯಾಕೆಂದರೆ ಮಹಾವಿಷ್ಣು ಮಾತ್ರ ಮೋಕ್ಷಕಾರಕ. ಇತರ ದೇವರು ಸಂಪತ್ತು, ರಕ್ಷಣೆ, ಪೀಳಿಗೆಗಳನ್ನು ಕೊಡುವಂತಹ ಶಕ್ತಿಸಂಪನ್ನರು. ಅಂತಹ ದೇವರನ್ನೆಲ್ಲ ಆರಾಧಿಸಿ ಭಗವಾನ್ ‘ವಾಸುದೇವ ಪ್ರಿಯಂತಾಂ’ ಎಂದು ಅರ್ಪಣೆ ಮಾಡಬೇಕು ಎಂದು ತತ್ವೋಪದೇಶ ಮಾಡಿದರು.
ಸುಬ್ರಹ್ಮಣ್ಯದಲ್ಲಿ ಮಧ್ವಾಚಾರ್ಯರ ಪ್ರವೇಶಕ್ಕೆ ಮುನ್ನ ಆಗಮಾದಿಗಳು ತಾತ್ವಿಕವಾಗಿ ಇರಲಿಲ್ಲ. ಅಲ್ಲದೆ ಸುಬ್ರಹ್ಮಣ್ಯನ ಆಗ್ನೇಯ ಭಾಗದಲ್ಲಿದ್ದ ಗಣಪತಿಯನ್ನು ತೆಗೆದು ನೃಸಿಂಹ ದೇವರನ್ನಿಟ್ಟರು. ಈ ಗಣಪತಿಗೆ ವಿಶೇಷ ಸಾನ್ನಿಧ್ಯವನ್ನು ಕಲ್ಪಿಸಿ ಗುಪ್ತ ಗಣಪತಿಯಾಗಿ ಸುಬ್ರಹ್ಮಣ್ಯ ದೇವರ ಪಕ್ಕದಲ್ಲೇ ಇರಿಸುವ ಕೆಲಸ ಮಾಡಿದರು. ಇಂದಿಗೂ ಈ ಗಣಪತಿ ಗುಪ್ತವಾಗಿ ಪೂಜಿಸಲ್ಪಡುತ್ತದೆ. ಅರ್ಚಕರ ವಿನಾ ಯಾರೂ ಇದನ್ನು ನೋಡಿದವರಿಲ್ಲ. ಇದುವೇ ಸುಬ್ರಹ್ಮಣ್ಯದ ರಹಸ್ಯ ವಿಚಾರ. ಇದನ್ನು ನೋಡಿ ನಮಗೇನಾಗಬೇಕು ಹೇಳಿ. ಗಣಪತಿ ದೇವರ ಅನುಗ್ರಹ ಸಿಕ್ಕಿದರೆ ಸಾಕು.
ಆದರೆ ಕೆಲವರು ನೋಡಿಯೇ ತೀರಬೇಕೆಂದು ಒಮ್ಮೆ ಹಠ ಹಿಡಿದರು. ಸುಮಾರು ಎಂಬತ್ತು ವರ್ಷದ ಹಿಂದಿನ ಕಥೆ ಇದು. ಆಗ ಅರ್ಚಕರಲ್ಲೊಬ್ಬರು ತನ್ನಿಚ್ಚೆಯ ಮೂಲಕ ಆಗಿನ ಆಡಳಿತ ಸಮಿತಿಗೆ ಈ ಗಣಪತಿಯ ಮೂರ್ತಿಯನ್ನು ತೋರಿಸಿಬಿಟ್ಟರು. ಇದರಿಂದ ಅಂದರೆ ಈ ವೀಕ್ಷಣೆಯಿಂದ ಗಣಪತಿ ಮೂರ್ತಿಯು ಅಶುದ್ಧವಾಯ್ತು. ಪರಿಣಾಮ ಆರ್ಚಕರ ಕೈಗೆ ನಾಗರ ಹಾವು ಕಡಿಯಿತು. ಮುಂದೆ ದೇವರ ಪೂಜೆಯೂ ಕೈತಪ್ಪಿ ಅದೆಷ್ಟೋ ಸಮಯದವರೆಗೆ ಕೊಳೆತ ಕೈಯಲ್ಲಿ ಜೀವನ ಸಾಗಿಸುತ್ತಾ, ವೇಧನೆ ಅನುಭವಿಸುತ್ತಾ ಮೃತಿ ಹೊಂದಿದರು. ಒಂದು ಶಕ್ತಿಯನ್ನು ಕೆಣಕಿದರೆ ಏನಾಗುತ್ತೆ ಎಂಬುದಕ್ಕೆ ಇದೊಂದು ನಿದರ್ಶನವೂ ಆಯಿತು.
ಯಾವುದೇ ದೇವಸ್ಥಾನದಲ್ಲಿ ಗಣಪತಿಯ ಗುಡಿಯು ಅಲ್ಲಿನ ಪ್ರಧಾನ ದೇವರಿಗೆ ನೈರುತ್ಯ ಭಾಗದಲ್ಲೇ ಇರಬೇಕು ಎಂಬುದು ಆಗಮ ಶಾಸ್ತ್ರ ವಿಚಾರ. ಅಂತಹದ್ದರಲ್ಲಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈಗ ಇರುವ ನೃಸಿಂಹ ದೇವರ ಗುಡಿಯಲ್ಲೇ ಇರಬೇಕೆಂಬ ವಾದವು ಆಗಮ ಶಾಸ್ತ್ರದ ವಿರೋಧ ವಿಚಾರವೂ ಆಗುತ್ತದೆ. ಹಾಗಾಗಿ ಹಿರಿಯರಿಂದ ಆಗಮೋಕ್ತವಾಗಿ ನಡೆದುಕೊಂಡು ಬಂದದ್ದನ್ನು ಬದಲಾವಣೆ ಮಾಡಲು ಹೋಗುವುದು ಅಪಾಯಕಾರಿ ಕೆಲಸ. ಯಾರೋ ಒಬ್ಬರು ಪುಸ್ತಕದಲ್ಲಿ ಬರೆದರು ಮತ್ತು ಅದುವೇ ಸರಿಯಾದದ್ದು ಎಂಬ ವಿಚಾರವನ್ನು ಮುಂದಿಟ್ಟುಕೊಂಡು ತಕರಾರು ಎಬ್ಬಿಸುವುದು ಸರಿಯಾಗದು.
ಒಟ್ಟಿನಲ್ಲಿ ಹಿಂದೆ ಈ ರೀತಿ ದೇವಸ್ಥಾನ ರಾಜಕೀಯ ಇರಲಿಲ್ಲ. ಅಲ್ಲಿ ಭಕ್ತರ ಮನಸೋಭಿಷ್ಟಾರ್ಥ ಸಿದ್ಧಿಗಾಗಿ ಆಗಮೋಕ್ತ ವಿಚಾರಗಳನ್ನು ತಜ್ಞರು ಅಳವಡಿಸಿದ್ದರು. ಈಗಿನವರಿಗೆ ಅದರ ಬಗ್ಗೆ ನಿಖರ ಮಾಹಿತಿ ಇಲ್ಲದಿರುವುದರಿಂದ ಈ ರೀತಿ ಅಸಂಭದ್ದ ರಾಜಕೀಯ ಮಾಡುತ್ತಾರೆ. ಇದು ಇಡೀ ರಾಜ್ಯದ ಅಭಿವೃದ್ಧಿಗೆ ಮಾರಕವೇ ಆಗುತ್ತದೆ. ಕೇವಲ ಹಣದ ಆಸೆಗಾಗಿ ಬ್ರಾಹ್ಮಣರು ಮಾಡಿದ ಕೆಲಸ ಇದು ಎಂದು ಹೇಳುವುದು ಬಾಲಿಷ ಮಾತಾಗುತ್ತದೆ. ಆದರೆ ಕೆಲ ಬ್ರಾಹ್ಮಣರು ಇಂತಹ ಧನಾಗ್ರಹದ ಕೆಲಸ ಮಾಡಲಾರರು ಎಂದೂ ಹೇಳುತ್ತಿಲ್ಲ. ಬ್ರಾಹ್ಮಣ ಎಂದರೆ ತತ್ವಾಧಾರಿತವಾಗಿ ಮಾಡುವ ಒಂದು ನೀತಿಯಾಗುತ್ತದೆಯೇ ಹೊರತು, ಜಾತಿಯಲ್ಲ.
Discussion about this post