ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅನೇಕ ತಾಯಂದಿರು ಗರ್ಭಾವಸ್ಥೆ ಮತ್ತು ಪ್ರಸವಾ ನಂತರದ ಅವಧಿಯಲ್ಲಿ ವಿವಿಧ ರೀತಿಯ ಭಾವನಾತ್ಮಕ ತೊಂದರೆಗಳನ್ನು ಅನುಭವಿಸುತ್ತಾರೆ. ಪ್ರಸವಾ ನಂತರದ ಅವಧಿ ಬಹಳ ಸೂಕ್ಷ್ಮವಾಗಿದ್ದು, ಬಹಳಷ್ಟು ಮಾನಸಿಕ ಸಮಸ್ಯೆಗಳು ಮರುಕಳಿಸಬಹುದು ಅಥವಾ ಹೊಸದಾಗಿ ಮಾನಸಿಕ ರೋಗಕ್ಕೆ ತುತ್ತಾಗಬಹುದು.
ಪ್ರಸವಾ ನಂತರ ಗರ್ಭಾವಸ್ಥೆಯಲ್ಲಿನ ಮಾನಸಿಕ ರೋಗಗಳನ್ನು ಬಹುತೇಕ ಸಮಯಗಳಲ್ಲಿ ನಿರ್ಲಕ್ಷಿಸಲಾಗುತ್ತದೆ. ಹೀಗೆ ನಿರ್ಲಕ್ಷಿಸಿದ ಖಾಯಿಲೆಯಿಂದ ತಾಯಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತದೆ. ಇಂತಹ ಸ್ಥಿತಿ ಉಂಟಾದಲ್ಲಿ ತತಕ್ಷಣ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ, ಸೂಕ್ತವಾದ ಚಿಕಿತ್ಸೆ ನೀಡಬೇಕಾಗುತ್ತದೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ರೀತಿಯ ಮಾನಸಿಕ ಸಮಸ್ಯೆಗಳು ಶೇ.10-15ರಷ್ಟು ಇದ್ದರೆ, ಅಭಿವೃದ್ಧಿ ಹೊಂದುತ್ತಿರುವ ಅಥವಾ ಹೊಂದದ ದೇಶಗಳಲ್ಲಿ ಇವುಗಳ ಪ್ರಮಾಣ ಶೇ.10-41ರಷ್ಟು ಇರುತ್ತದೆ. ಅವುಗಳು ಈ ಕೆಳಗಿನಂತಿವೆ.
ಪ್ರಸವಾ ನಂತರದ ಭಾವನಾತ್ಮಕ ವೈಪರೀತ್ಯಗಳು
ಪ್ರಸವಾ ನಂತರದ ಖಿನ್ನತೆ
ಪ್ರಸವಾ ನಂತರದ ಸೈಕೋಸಿಸ್
ಇವುಗಳ ಜೊತೆಗೆ ಗೀಳು ರೋಗ ಮತ್ತು ಪಿಟಿಎಸ್’ಡಿ ಖಾಯಿಲೆಗಳಿಂದ ನರಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಪ್ರಸವಾ ನಂತರದ ಭಾವನಾತ್ಮಕ ವೈಪರೀತ್ಯಗಳು
ಈ ಸ್ಥಿತಿ ನೂರರಲ್ಲಿ ಎಪ್ಪತ್ತರಿಂದ-ಎಂಬತ್ತು ತಾಯಂದಿರಲ್ಲಿ ಕಾಣಿಸಿಕೊಳ್ಳುತ್ತದೆ. ಒಂದು ರೀತಿಯ ಅಸಂತೃಪ್ತಿ ನೀಡುತ್ತದೆ. ದುಖಃ, ಬೇಜಾರು, ಕಸಿವಿಸಿ, ತಾಳ್ಮೆ ಕಳೆದುಕೊಳ್ಳುವುದು, ಚಿಕ್ಕ-ಚಿಕ್ಕ ವಿಷಯಗಳಿಗೆ ಕೋಪ ಬರುವುದು, ನಿದ್ರಾಹೀನತೆ ಮುಂತಾದವುಗಳು ಇದರ ಲಕ್ಷಣಗಳು. ಈ ಸ್ಥಿತಿಗೆ ಯಾವುದೇ ರೀತಿಯ ಮಾತ್ರೆಗಳ ಅವಶ್ಯಕತೆ ಇಲ್ಲ. ಆದರೆ ತಾಯಿಗೆ ಸೂಕ್ತವಾದ ಮತ್ತು ಭಾವನಾತ್ಮಕ ನೆರವು ಅಗತ್ಯ.
ಪ್ರಸವಾ ನಂತರದ ಖಿನ್ನತೆ
ಈ ಸ್ಥಿತಿಯು ತಾಯಂದಿರನ್ನು ಅತಿಯಾದ ದುಖಃದಲ್ಲಿರಿಸುವುದಲ್ಲದೇ, ಮಾನಸಿಕವಾಗಿ ಅವರನ್ನು ನಿರ್ಭಲ ಮತ್ತು ನಿಷ್ಕ್ರಿಯವಾಗಿರಿರುಸುತ್ತದೆ. ಈ ಕಾಯಿಲೆಯು ಶೇ.10-15ರಷ್ಟು ತಾಯಂದಿರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತದೆ. ಈ ಕಾಯಿಲೆಯಲ್ಲಿ ತಾಯಿ ವಿಪರೀತವಾದ ನೋವು, ದುಖಃದಲ್ಲಿದ್ದು ಯಾವುದೇ ರೀತಿಯ ಖುಷಿ ಅಥವಾ ಸುಖ ಅನುಭವಿಸಲಾಗದ ಸ್ಥಿತಿಯಲ್ಲಿರುತ್ತಾಳೆ. ನಿಶ್ಯಕ್ತಿ, ವಿಪರೀತ ಬಳಲುವಿಕೆಯಿಂದ ಅವಳು ಯಾವುದೇ ದೈನಂದಿನ ಚಟುವಟಿಕೆ, ಸ್ನಾನ ಮುಂತಾದವುಗಳನ್ನು ಮಾಡಲಾಗದೆ ಹಾಸಿಗೆಯಲ್ಲಿಯೇ ಮಲಗಿರುತ್ತಾಳೆ.
ಊಟ ಮಾಡದೇ, ನಿದ್ದೆ ಬಾರದೆ, ಮತ್ತು ಮಗುವಿಗೆ ಹಾಲನ್ನುಉಣಿಸದ ಸ್ಥಿತಿಯಲ್ಲಿರುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ ತಾಯಿ ಸಾವಿನ ಬಗ್ಗೆ ಯೋಚಿಸುವ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭಗಳು ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ತಾಯಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಸೂಕ್ತವಾದ ಚಿಕಿತ್ಸೆ ನೀಡಬೇಕಾಗುತ್ತದೆ.
ಪ್ರಸವಾ ನಂತರದ ಸೈಕೋಸಿಸ್
ಈ ಕಾಯಿಲೆಯ ಸುಮಾರು 08.-1% ತಾಯಂದಿರಲ್ಲಿ ಕಂಡುಬರುತ್ತದೆ. ಇಲ್ಲಿ ತಾಯಿಯು ಬಲವಾದ ಮತ್ತು ಆಧಾರರಹಿತ ಸಂಶಯಗಳನ್ನು ಹೊಂದಿರುತ್ತಾಳೆ ಮತ್ತು ವಿಪರೀತ ಭಯ ಮತ್ತು ಕೋಪಗಳನ್ನು ವ್ಯಕ್ತಪಡಿಸುತ್ತಾಳೆ.
ಮನೆಯ ಎಲ್ಲಾ ಸದಸ್ಯರೇ ಅವಳ ಶತ್ರುಗಳೆಂದು ಭಾವಿಸುತ್ತಾಳೆ. ಕೆಲವೊಮ್ಮೆ ಸ್ವಂತ ಮಗುವನ್ನೇ ಶತ್ರು ಎಂದು ಭಾವಿಸಿ ಮಗುವಿಗೆ ಹಾನಿ ಮಾಡುವ ಸಾಧ್ಯತೆಗಳಿರುತ್ತವೆ. ಈ ಸ್ಥಿತಿಯಲ್ಲಿ ತಾಯಿಗೆ ಸರಿಯಾಗಿ ಯೋಚಿಸುವ ಮತ್ತು ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಹೀಗಾಗಿ ಇಂತಹ ತಾಯಂದಿರನ್ನು ತತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಸೂಕ್ತವಾದ ಚಿಕಿತ್ಸೆ ನೀಡಬೇಕಾಗುತ್ತದೆ.
ಪ್ರಸವಾ ನಂತರದಲ್ಲಿ ತಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ತಾಯಿ-ತನ್ನ ನವಜಾತ ಶಿಶುವಿಗೆ ಸರಿಯಾದ ರೀತಿಯಲ್ಲಿ ಆರೈಕೆ ಅಥವಾ ಪ್ರಚೋದನೆ ನೀಡದಲ್ಲಿ ಮಗುವಿನ ಬೆಳವಣೆಗೆಯಲ್ಲಿ ಕುಂಠಿತವಾಗುವ ಮತ್ತು ಮಗು ಭಾವನಾತ್ಮಕ ಸಮಸ್ಯೆಯಿಂದ ಬಳಲುವ ಸಾಧ್ಯತೆಇರುವ ಬಗ್ಗೆ ಅಧ್ಯಯನಗಳಿಂದ ತಿಳಿಯಬಹುದಾಗಿದೆ. ತಾಯಿಯ ಮಾನಸಿಕ ಆರೋಗ್ಯ ತೀವ್ರವಾಗಿ ಹದಗೆಟ್ಟಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮತ್ತು ಮಗುವಿನ ಪ್ರಾಣಕ್ಕೆ ಹಾನಿ ಮಾಡುವ ಸಂಭವವಿದ್ದು ಈ ತರಹದ ಕಾಯಿಲೆಗಳನ್ನು ತಕ್ಷಣವೇ ಗುರುತಿಸಿ ಅದಕ್ಕೆ ಸೂಕ್ತವಾದ ಚಿಕಿತ್ಸೆ ನೀಡುವುದು ಅತ್ಯಂತ ಮಹತ್ವದ್ದಾಗಿದೆ. ಇದರೊಂದಿಗೆ ಈ ರೀತಿಯ ಕಾಯಿಲೆಗಳ ಬಗ್ಗೆ ಮತ್ತು ಅವುಗಳ ಚಿಕಿತ್ಸೆಯ ಕುರಿತು ಸಮಾಜದಲ್ಲಿ ಅರಿವು ಮೂಡಿಸುವುದು ಅಷ್ಟೇ ಮಹತ್ವಪೂರ್ಣವಾಗಿದೆ.
Get in Touch With Us info@kalpa.news Whatsapp: 9481252093
Discussion about this post