ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ತಾಲೂಕಿನ ತೊಂಡೇಬಾವಿ ಹೋಬಳಿಯ ಕಲ್ಲಿನಾಯಕನಹಳ್ಳಿಯಲ್ಲಿ ಮುಖಂಡರಾದ ಕೆ.ವಿ. ರಾಮಕುಮಾರ್ ಗ್ರಾಮದಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಕಡಲೆಕಾಯಿ ಯನ್ನು ವಿತರಣೆ ಮಾಡಿದರು.
ದಶಕಗಳಿಂದಲೂ ಗ್ರಾಮದಲ್ಲಿನ ಬಹುತೇಕ ಕುಟುಂಬಗಳಿಗೆ ಸಂಕ್ರಾಂತಿ ಹಬ್ಬದ ದಿನದಂದು ಕಡಲೆಕಾಯಿ ನೀಡುವ ಪದ್ದತಿಯನ್ನು ಕೆ.ವಿ. ಬ್ರಹ್ಮರಾಜು ಅವರು ರೂಢಿಸಿಕೊಂಡಿದ್ದರು. ಅವರ ಬಳಿಕ ಅವರ ಪುತ್ರ ಕೆ.ವಿ. ರಾಮಕುಮಾರ್ ಈ ಪದ್ದತಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಬಳಿಕ ಮಾತನಾಡಿದ ಅವರು, ಗ್ರಾಮದಲ್ಲಿನ ಪ್ರತೀ ಕುಟುಂಬವು ಸುಮಾರು ನಾಲ್ಕೈದು ದಶಕಗಳಿಂದಲೂ ನಮ್ಮ ಕುಟುಂಬದೊಂದಿಗೆ ಅನ್ಯೋನ್ಯತೆ ಹೊಂದಿದ್ದು ಇದಕ್ಕೆ ಪೂರಕವಾಗಿ ಪ್ರತೀ ಸಂಕ್ರಾಂತಿ ಹಬ್ಬದ ದಿನದಂದು ಕಡಲೆಕಾಯಿ ವಿತರಣೆ ಮಾಡುತ್ತಿದ್ದವು. ಇಂದಿಗೂ ಕೂಡ ಈ ಆಚಾರವನ್ನು ಮುಂದುವರೆಸಿದ್ದೇವೆ. ಇದರಿಂದ ಪ್ರತೀ ಕುಟುಂಬದ ಸದಸ್ಯರೊಡನೆ ಸಾಮರಸ್ಯ ಹಾಗೂ ಸೋದರತ್ವ ಭಾವನೆ ಬೆಳೆಯುತ್ತದೆ. ಅಲ್ಲದೆ ನಾಡಿನಲ್ಲಿ ಹಬ್ಬಗಳ ಆಚರಣೆ ಮತ್ತು ಆಚಾರಗಳನ್ನು ಉಳಿಸಿ ಬೆಳೆಸುವ ಪ್ರಯತ್ನ ನಮ್ಮದಾಗಿದೆ ಎನ್ನುತ್ತಾರೆ ಕೆ.ವಿ.ರಾಮಕುಮಾರ್.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post