ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇತ್ತೀಚೆಗೆ ಮಂತ್ರಾಲಯದ ಗುರುರಾಯರ ಸನ್ನಿಧಿಯಲ್ಲಿ ಶ್ರೀ ಪುನೀತ್ ರಾಜಕುಮಾರ್ ಸರ್. ಈ ಸಂದರ್ಭದಲ್ಲಿ ಡಾ. ರಾಜ್ ಕುಮಾರ್ ಅವರ ಮಂತ್ರಾಲಯದ ಗುರುರಾಯರ ನಂಟು – ಅನುಗ್ರಹವನ್ನು ಸ್ಮರಿಸಿದ ಪುನೀತ್ ಅವರು, ರಾಯರ ಸನ್ನಿಧಿಯಲ್ಲಿ ವಾರ ಬಂತಮ್ಮಾ ಗುರುವಾರ ಬಂತಮ್ಮ ಭಕ್ತಿಗೀತೆಯನ್ನೂ ಸ್ಮರಿಸಿ ಹಾಡಿದರು.
ಪುನೀತ್ ಅವರನ್ನೂ ಒಳಗೊಂಡಂತೆ ಅವರ ಇಡೀ ಕುಟುಂಬದವರ ರಾಯರ ಸೇವೆ, ಸ್ಮರಣೆ ಅನನ್ಯ.
ರಾಯರ ಅನುಗ್ರಹ ಎಂಥದು ಎಂಬುದನ್ನು ಶ್ರೀಪೂರ್ಣಬೋಧ….. ಸ್ತೋತ್ರದಲ್ಲಿ ಅಪ್ಪಣ್ಣಾಚಾರ್ಯರು ತಿಳಿಸಿಕೊಡುತ್ತಾರೆ.
ಸರ್ವಾಭೀಷ್ಟಾರ್ಥ ಪ್ರವೃದ್ಧಿ: (ಎಲ್ಲಾ ಇಷ್ಟಾರ್ಥಗಳ ಪ್ರಾಪ್ತಿ) ಎಂದು ತಿಳಿಸಿಕೊಡುವ ಅಪ್ಪಣ್ಣಾಚಾರ್ಯರು, ಜೊತೆಗೆ ಸ್ಯಾನ್ನಾತ್ರಕಾರ್ಯಾ ವಿಚಾರಣಾ ಎಂದೂ ಸೇರಿಸುತ್ತಾರೆ. ಅಂದರೆ, ಅದರ ಬಗ್ಗೆ ಮರುಚಿಂತಿಸಬೇಕಾದ ಅಗತ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿ ವಾಕ್ಯವನ್ನು ಪೂರ್ಣಪಡಿಸುತ್ತಾರೆ.
ಹಾಗೆಂದರೇನು?
ಯಾವುದೇ ಗಮ್ಯಸಿದ್ಧಿಗೆ ಧಾರ್ಮಿಕ ಪ್ರಯತ್ನಗಳ ಜೊತೆಗೆ ನಮ್ಮ ಕರ್ಮಭಾಗದ ಪ್ರಯತ್ನಗಳೂ ಇದ್ದೇ ಇರಬೇಕಲ್ಲವೇ?
ಆ ಕರ್ಮಭಾಗದ ಪ್ರಯತ್ನಗಳನ್ನು ರಾಯರು ಯಾವ ರೀತಿ ಮಾಡಿಸುವ ಮೂಲಕ ಗಮ್ಯಸಿದ್ಧಿಯನ್ನು ಅನುಗ್ರಹಿಸುತ್ತಾರೆ??
ಅದನ್ನಿಲ್ಲಿ ಗಮನಿಸೋಣ..
ರಾಯರನ್ನು ತಮ್ಮದೇ ಆದ ರೀತಿಯಲ್ಲಿ ಸೇವಿಸುವವರೆಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಒಳಿತಾಗುವುದು ಬಹಳಷ್ಟು ಜನರಿಗೆ ಅನುಭವಕ್ಕೆ ಬಂದಿರುತ್ತದೆ. ಅಂತಹ ಲಕ್ಷಾಂತರ ಭಕ್ತರು ರಾಯರಿಗಿದ್ದಾರೆ.
ಆದರೆ, ರಾಯರು ತೋರುವ ಮಾರ್ಗದರ್ಶನವನ್ನು ಪೂರ್ಣ ನಂಬಿಕೆಯಿಟ್ಟು, ರಾಯರೇ ಅನನ್ಯವಾಗಿ ಸ್ಮರಿಸುವ ಭಕ್ತಿ, ಅನನ್ಯವಾಗಿ ಸೇವೆ ಮಾಡುವ ಶಕ್ತಿ ಕೊಟ್ಟು ಮನೋಭೀಷ್ಟಾದಿಗಳನ್ನು ಅನುಗ್ರಹಿಸಿಕೊಡಲು ಮುನ್ನಡೆಸುವವರ ವಿಚಾರ ಅದಕ್ಕಿಂತಲೂ ಭಿನ್ನ, ಅಪರೂಪ. ಅಂತಹ ಅಪರೂಪದ ವಿಚಾರಗಳು ರಾಯರ ಅನುಗ್ರಹದಿಂದಷ್ಟೇ ಸಾಧ್ಯ.
ಇಂತಹ ಪ್ರಕರಣಗಳಲ್ಲಿ ಭಕುತರು ತಾವು ಸೇವೆ ಮಾಡುತ್ತಿದ್ದೇವೆ ಎಂಬುದಕ್ಕಿಂತಾ ಅನೇಕಾನೇಕ ಅಡೆತಡೆಗಳ ನಡುವೆಯೂ ರಾಯರು ಫಲ ಕೊಡಲೇಬೇಕೆಂದು ಸಂಕಲ್ಪಿಸಿ ಅನನ್ಯವಾಗಿ ಸೇವೆ ಮಾಡಿಸುತ್ತಿರುವುದರಿಂದಲೇ ಸೇವೆಯನ್ನು ಮಾಡಲು ಸಾಧ್ಯವಾಗುತ್ತಿದೆ ಎಂಬುದು ಇಲ್ಲಿ ಹೆಚ್ಚು ಪ್ರಸಕ್ತ ಹಾಗೂ ಸೂಕ್ತ.
ಅಪ್ಪಣ್ಣಾಚಾರ್ಯರು ಸರ್ವಾಭೀಷ್ಟಗಳನ್ನೂ ರಾಯರು ನಿಸ್ಸಂಶಯವಾಗಿ ಅನುಗ್ರಹಿಸುವರೆಂದು ತಿಳಿಸಿಕೊಟ್ಟಿರುವುದು ಇಂತಹ ಅನನ್ಯ ವಿಚಾರಗಳನ್ನುದ್ದೇಶಿಸಿಯೇ.
ಭಕುತರ ಮನೋಭೀಷ್ಟಗಳ ಗುರಿ – ಗಮ್ಯಗಳನ್ನು ಅವಶ್ಯ ತಲುಪಿಸುವುದರೊಂದಿಗೆ, ಭಕುತರೇ ಸ್ವತಃ ಊಹಿಸಿರಲಾರದ ಎತ್ತರಕ್ಕೆ ಹಂತ ಹಂತವಾಗಿ ಏರಿಸುತ್ತಾರೆ.
ಹಾಗೆ ರಾಯರು ಮುನ್ನಡೆಸುವಾಗ ಭಕುತರಲ್ಲಿ ಸಹಜವಾಗಿ ಮನೆಮಾಡಿರುವ, ಸುಲಭಕ್ಕೆ ಗುರುತಿಸಿಬಿಡಬಹುದಾದ ಗುಣಗಳ್ಯಾವುವು?
ಬೆಳ್ಳಿತೆರೆಯ ಮೇಲಿನ ಪಾತ್ರವೃತ್ತಿಯ ಹೊರತಾಗಿಯೂ ಡಾ. ರಾಜ್ ಅವರಲ್ಲಾಗಲಿ ಅಥವಾ ಪುನೀತ್ ಅವರಲ್ಲಾಗಲಿ ನಾವು ಕಾಣುವುದು ಅಂಥದ್ದೇ ಗುಣಗಳು.
- ಎಷ್ಟೇ ಎತ್ತರಕ್ಕೇರುತ್ತಾ ಸಾಗಿದರೂ ಬದಲಾಗದ ವ್ಯಕ್ತಿತ್ವ – ಮನಸು.
- ಅನೇಕ ಚಿತ್ರಗಳು ಯಶಸ್ಸನ್ನು ಕಂಡದ್ದೂ ಉಂಟು, ಹಲವು ಚಿತ್ರಗಳು ಹಿನ್ನಡೆ ಕಂಡದ್ದೂ ಉಂಟು. ಚಿತ್ರಗಳು ಹಿನ್ನಡೆ ಕಂಡಾಗ ನಿಜವಾಗಿ ತೀರ್ಪು ನೀಡುವ ಪೂರ್ಣ ಸ್ವಾತಂತ್ರ್ಯವನ್ನು ಹೊಂದಿರಬೇಕಾದ ತಮ್ಮ ಏಳ್ಗೆಗೆ ಕಾರಣರಾದ ಪ್ರೇಕ್ಷಕರನ್ನೂ ಅರ್ಥಮಾಡಿಕೊಂಡು ಪ್ರೇಕ್ಷಕ ಪ್ರಭುಗಳಿಗೆ ಇನ್ನು ಯಾವ ರೀತಿ ಮನಮುಟ್ಟುವಂತೆ ತಲುಪಬೇಕು ಎಂಬ ಚಿಂತನೆಯಿಂದ ಕಾರ್ಯಪ್ರವೃತ್ತರಾದರು.
- ತನ್ನ ಗುರಿಯ ದಾರಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಚಿಂತನೆ…
- ತಾಳ್ಮೆ… ಆ ಕ್ಷಣಕ್ಕೆ ಯಶಸ್ಸು ಸಿಕ್ಕಿಬಿಡಬೇಕೆಂಬ ತಾರಾತುರಿಯಿರುವುದಿಲ್ಲ… Success can’t be fast tracked. It comes in its own pace, but certainly it comes.
- ಒಂದೊಮ್ಮೆ ಏಕಪಕ್ಷೀಯವಾಗಿ ಅಭಿಪ್ರಾಯ ಬೇಧವಿರುವವರನ್ನೂ ತಾಳ್ಮೆಯಿಂದ ವಿಚಾರಗಳ ನೈಜ ಚಿತ್ರಣ ನೀಡಿ, ಸತತ ಹೋರಾಟದ ಮೂಲಕ ತಾಳ್ಮೆಯಿಂದ ಗೆಲ್ಲುವ ಮನಸ್ಥಿತಿ ಹಾಗೂ ಹೋರಾಟದ ಹಾದಿಯಲ್ಲಿ ಎಲ್ಲರ ಸವಾಲುಗಳ ಪರಿಹಾರಕ್ಕೂ ಆದ್ಯತೆ (ಗೋಕಾಕ್ ಚಳುವಳಿಯು ಅಂತಹ ಉದಾಹರಣೆಗಳಲ್ಲೊಂದು)..
- ತಮ್ಮ ಬೆಳವಣಿಗೆಗೆ ಕಾರಣದ ಭಾಗವಾದ ಯಾರನ್ನೂ ಮರೆಯದಿರುವಿಕೆ.
- Unconditional love towards their people – (ಅಭಿಮಾನಿ ದೇವರುಗಳು ಎಂಬುದು ರಾಜ್ ಅವರ ಕುಟುಂಬದಲ್ಲಿ ಕೇವಲ ವೇದಿಕೆಯ ಮೇಲಿನ ಹೇಳಿಕೆಯಷ್ಟೇ ಅಲ್ಲ, ಅದು ಆ ಇಡೀ ಕುಟುಂಬದ ಆಂತರಿಕ ಭಾವನೆಯೂ ಹೌದು).
- ಅಭಿಪ್ರಾಯ ಬೇಧವಿರುವವರನ್ನೂ ಚಿಂತನೆಯಿಂದಲೂ, ಪದಗಳಲ್ಲೂ ಗೌರವದಿಂದಲೇ ಕಾಣುವ ಸಹಜಾಭಿವ್ಯಕ್ತಿ.
- ಆಡಿಸಿಯೇ ನೋಡು, ಬೀಳಿಸಿಯೇ ನೋಡು.. ಎಂದೂ ಸೋಲದು…. ಎಂಬುದು ಚಿತ್ರಗೀತೆಯ ಸಾಲುಗಳಾದರೆ, ಅಂತೆಯೇ ಅದು ಇಡೀ ರಾಜ್ ಕುಟುಂಬದ ಎಲ್ಲರ ಅನುಭವ ಕಥನವೂ ಹೌದು.
- Not being cinematic- ಚಲನಚಿತ್ರ ಕಲಾವಿದರ ಕಲೆ, ಮನರಂಜನೆ ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಅದ್ಭುತ ವೇದಿಕೆ. ಆದರೆ ಇಡೀ ರಾಜ್ ಕುಟುಂಬದಲ್ಲಿ ಕಲೆಯನ್ನು – ಮನರಂಜನಾ ಪ್ರಪಂಚವನ್ನು ಪೋಷಿಸುವುದರ ಜೊತೆಜೊತೆಗೆ ಚಲನಚಿತ್ರದ ಶೈಲಿಯ ಭ್ರಮಾತ್ಮಕ ಅನುಕರಣೆಯನ್ನು ನೈಜ ಜೀವನದಲ್ಲಿ ಮಾಡದಿರುವ ಪ್ರಬುದ್ಧತೆ.
- ಚಿತ್ರರಂಗದಲ್ಲಿ ಬೇರೆಯವರೂ ಬೆಳೆದು, ನೆಲೆನಿಲ್ಲಲು ಅಗತ್ಯ ನೆರವು ನೀಡಿ ಅವಕಾಶ ಮಾಡಿಕೊಡುವುದರ ಜೊತೆಜೊತೆಗೆ ತಾವೂ ಚಿತ್ರರಂಗದಲ್ಲಿ ಬೆಳೆದು ನೆಲೆನಿಲ್ಲುವ ಸಮದರ್ಶಿತ್ವ – ಸಿಕ್ಕಂತಹ ಅವಕಾಶಗಳನ್ನು ಸೂಕ್ತವಾಗಿ ಪಡೆದು ಚಿತ್ರರಂಗದಲ್ಲಿ ನೆಲೆನಿಲ್ಲಬೇಕೆಂಬುದು ಎಲ್ಲರ ಅಪೇಕ್ಷೆ.
- ಅವಕಾಶಗಳನ್ನರಸುವವರು ಹೆಚ್ಚಿನ ಅವಕಾಶಗಳು ಸಿಗಲೆಂದು ಅಪೇಕ್ಷಿಸುವುದು ಸಹಜ. ಆದರೆ, ತಮಗೆ ಅವಕಾಶಗಳು ಸಿಗಬೇಕೆಂಬ ಕಾರಣಕ್ಕೆ ಬೇರೊಬ್ಬರ ಬಹುನಿರೀಕ್ಷೆಯ ಅವಕಾಶಗಳಿಗೆ ಅಡ್ಡಿಯಾಗುವಂತಾಗಬಾರದು, ಅಲ್ಲವೇ?
- ಚಿತ್ರರಂಗದ ಹಿರಿಯ ಕಲಾವಿದರನೇಕರನ್ನು ಮಾತನಾಡಿಸಿದಾಗ ಅನೇಕರು ಇಡೀ ರಾಜ್ ಕುಟುಂಬದವರು ಇಂತಹ ವಿಚಾರಗಳೆದುರಾದಾಗ ಬೇರೆಯವರಿಗೂ ಅವಕಾಶಗಳನ್ನು ಮಾಡಿಕೊಟ್ಟು ತಾವೂ ಚಿತ್ರರಂಗದಲ್ಲಿ ಬೆಳೆದು ನೆಲೆ ನಿಂತಂತಹ ಅನೇಕ ಘಟನೆಗಳನ್ನು ಸ್ವಾರಸ್ಯಪೂರ್ಣವಾಗಿ ವಿವರಿಸುತ್ತಾರೆ.
ಅದಕ್ಕೇ ಹೇಳಿದ್ದು, ಅಪ್ಪಣ್ಣಾಚಾರ್ಯರು ಸುಮ್ಮನೆ ಹೇಳಿಲ್ಲ.. ರಾಯರು ಕೊಡುವವರು. ಬೇಡಿ ಪಡೆಯುವವರನ್ನೂ ಗುಣಗ್ರಾಹಿಗಳನ್ನಾಗಿಸಿ – ವೃತ್ತಿ ಜೀವನದಲ್ಲೂ, ವೈಯಕ್ತಿಕ ಜೀವನದಲ್ಲೂ ಸುಗುಣಸಾರವನ್ನೂ ತುಂಬಿ ಗಮ್ಯವನ್ನು ಅನುಗ್ರಹಿಸುವವರಾಗಿದ್ದಾರೆ. ವೈಯಕ್ತಿಕವಾಗಿಯೂ – ವೃತ್ತಿರಂಗದಲ್ಲೂ ಪುನೀತ್ ತಮ್ಮ ಎಲ್ಲಾ ಗಮ್ಯಗಳನ್ನು ತಲುಪಲು ರಾಯರ ಅನುಗ್ರಹ ಜೊತೆಗಿದೆ.
ಲೇಖನ: ಶಶಿಧರ್ ರಾವ್
Get in Touch With Us info@kalpa.news Whatsapp: 9481252093
Discussion about this post