ಶಿವಮೊಗ್ಗ: ಆರೋಗ್ಯವಂತ ಯುವಪೀಳಿಗೆ ದೇಶದ ಅಭಿವೃದ್ಧಿ ಸೂಚಕ ಎಂದು ತಡಿಕೆಲ ಸುಬ್ಬಯ್ಯ ಟ್ರಸ್ಟ್’ನ ಟ್ರಸ್ಟಿ ಡಾ. ವಿನಯಾ ಶ್ರೀನಿವಾಸ್ ಹೇಳಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಮ್ಯೂನಿಟಿ ಮೆಡಿಸನ್ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಯುವಜನತೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅತಿಯಾದ ಮಾನಸಿಕ ಒತ್ತಡ ಹಾಗೂ ದೈಹಿಕ ಸಾಮರ್ಥ್ಯದ ಕೊರತೆ, ಹದಿಹರೆಯದ ಸಮಸ್ಯೆ, ರಕ್ತಹೀನತೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಾನಸಿಕ ಒತ್ತಡ ಕಡಿಮೆಗೊಳಿಸಿ ದೈಹಿಕ ಸಾಮರ್ಥ್ಯ ಹೆಚ್ಚಾಗಿಸಿಕೊಳ್ಳಲು ಪಠ್ಯೇತರ ಚಟುವಟಿಕೆಗಳಾದ ಸಂಗೀತ, ಸಾಹಿತ್ಯ, ಕ್ರೀಡೆ, ಬರಹದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ. ದಿನದ ಕೆಲವು ಸಮಯವಾದರೂ ಇದರಲ್ಲಿ ತೊಡಗಿಸಿಕೊಂಡರೆ ಉತ್ತಮ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಹೊಂದಲು ಸಾಧ್ಯ ಎಂದರು.
ದೈನಂದಿನ ಚಟುವಟಿಕೆಗಳಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಂಡರೆ ನಮ್ಮ ಶರೀರದಲ್ಲಿ ಎಂಡಾರ್ಫಿನ್ ಎಂಬ ನರವಾಹಕ ಉತ್ಪತ್ತಿಯಾಗುತ್ತದೆ. ಇದು ದೇಹದ ಕಾರ್ಯಕ್ಷಮತೆ ಹೆಚ್ಚಿಸಿ ಮಾನಸಿಕ ಸದೃಢತೆ ಹಾಗೂ ಓದಿನಲ್ಲಿ ಏಕಾಗ್ರತೆ ನೀಡುತ್ತದೆ. ಇದರೊಂದಿತೆ ತಾಳ್ಮೆ, ಉತ್ತಮ ನಡವಳಿಕೆ ಹಾಗೂ ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವ ಮನಸ್ಥಿತಿ ನೀಡುತ್ತದೆ. ಮುಂದಿನ ವೃತ್ತಿಜೀವನ ಹಾಗೂ ಕೌಟುಂಬಿಕ ಒತ್ತಡಗಳ ನಿರ್ವಹಣೆ ಇದರಿಂದ ಹೊರಬರಲು ಸಹಾಯ ಮಾಡುತ್ತದೆ ಎಂದರು.
ದೈಹಿಕ ವ್ಯಾಯಾಮ ದೈನಂದಿನ ಜೀವನದಲ್ಲಿ ಇರಬೇಕಾದಂಹ ಅವಶ್ಯಕವಾದ ಚಟುವಟಿಕೆಯಾಗಿದೆ. ಚಿಕ್ಕ ವಯಸ್ಸಿನಲ್ಲೇ ಮಧುಮೇಹ, ರಕ್ತದೊತ್ತಡ ಬರುವ ಈ ಕಾಲಘಟ್ಟದಲ್ಲಿ ಇಂದಿನಿಂದಲೇ ದಿನಕ್ಕೆ 20 ನಿಮಿಷವಾದರೂ ವ್ಯಾಯಾಮ, ಈಜು, ನಡಿಗೆಯಲ್ಲಿ ನಮ್ಮನ್ನು ತೊಡಿಗಿಸಕೊಂಡರೆ ದೇಹದ ತೂಕವೂ ಕಡಿಮೆಯಾಗುತ್ತದೆ ಹಾಗೂ ದಿನನಿತ್ಯದ ಜೀವನದಲ್ಲಿ ಶಿಸ್ತಿನಿಂದ ಇರುವುದನ್ನು ಕಲಿಸುತ್ತದೆ. ವ್ಯಾಯಾಮದ ಜೊತೆಗೆ ಉತ್ತಮ ಆಹಾರಕ್ರಮವನ್ನೂ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ನಂತರ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಎಂ. ಕಟ್ಟಿ ಹಾಗೂ ಕಾಲೇಜಿನ ಕಮ್ಯೂನಿಟಿ ಮೆಡಿಸನ್ ವಿಭಾಗದ ಡಾ.ದಿವ್ಯಾ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್. ಎಂ. ಕಟ್ಟಿ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ.ಶಶಿರೇಖಾ, ಕಮ್ಯುನಿಟಿ ಮೆಡಿಸನ್ ವಿಭಾಗದ ಡಾ.ದಿವ್ಯಾ, ಡಾ.ಇಮ್ರಾನ್, ವೈದ್ಯರುಗಳಾದ ಡಾ. ಚೇತನ್, ಡಾ.ಇಂದುಮತಿ, ಡಾ.ಪ್ರೀತಿ, ಕಾಲೇಜಿನ ಉಪನ್ಯಾಸಕ ವೃಂದ ಹಾಜರಿದ್ದರು.
Discussion about this post