ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-9 |

ನಾವು ಮಾಡಿದ ರಾಸಾಯನಿಕ ಪ್ರಯೋಗಗಳಿಂದ ಪಕೃತಿಯನ್ನು ನಾಶದ ಅಂಚಿನಲ್ಲಿ ನಿಲ್ಲಿಸಿದ್ದೇವೆ. ಅದೂ ಕೂಡ ನಶಿಸಿದರೆ ಮುಂದೇನಾಗಬಹುದು ಎಂಬ ಕಿಂಚಿತ್ತು ಅರಿವು ಕೂಡ ಇಲ್ಲ ಮಾನವನಿಗೆ. ಈಗಾಗಲೇ ಮಾನವನ ಕ್ರೌರ್ಯ ಮತ್ತು ಅವನ ಕ್ರೂರತನ ವಿನಾಶದ ತುತ್ತ ತುದಿಯನ್ನು ತಲುಪಿದೆ.
ಭೂಮಿಯಲ್ಲಿ ತಮ್ಮ ಪಾಡಿಗೆ ಕಾಡಿನಲ್ಲಿ ಹಾಗೂ ನೀರಿನಲ್ಲಿರುವ ಕಾಡು ಪ್ರಾಣಿಗಳನ್ನು #WildAnimals ಮತ್ತು ಜಲಚರಗಳನ್ನು ನಾಶಮಾಡುತ್ತಾ ಬಂದಿದ್ದಾನೆ. ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಮೂಕ ಪ್ರಾಣಿಗಳನ್ನು ಬಲಿ ಕೊಡುತ್ತಿದ್ದಾನೆ. ಬಟ್ಟೆಗಾಗಿ ಮತ್ತು ಹೊಟ್ಟೆಗಾಗಿ ಎಷ್ಟೆಲ್ಲ ಕುಕೃತ್ಯಯಗಳನ್ನು ಮಾಡುತ್ತಿರುವ ಮಾನವ. ಇನ್ನು `ಪ್ಲಾಸ್ಟಿಕ್’ ಎಂಬ ಮಹಾ ಅಸುರನಿಂದ ಎಷ್ಟೋ ಪ್ರಾಣಿಗಳು ಜೀವವನ್ನು ತ್ಯಾಗ ಮಾಡಿವೆ.
ಮಾನವ ತನ್ನ ಸ್ವಾರ್ಥದ ಕೃತ್ಯಗಳಿಗೆ ಈ ಭೂಮಿಯನ್ನು #Earth ತಲ್ಲಣಗೊಳಿಸಿದ್ದಾನೆ. `ಪ್ರಕೃತಿಯಿಲ್ಲದೆ ನಾವಿಲ್ಲ’ ಎಂಬ ಮಹಾಸತ್ಯವನ್ನು ಮರೆತಿರುವ ಮಾನವನ ಮತಿ ಇನ್ನೇನು ಯೋಚಿಸಿ, ಮತ್ತಿನ್ನೇನು ಸಂಕಷ್ಟಗಳನ್ನು ತರುತ್ತದೋ ಗೊತ್ತಿಲ್ಲ. ಕೋತಿ ತಾನು ಕೆಡವುದಲ್ಲದೇ; ವನವನ್ನು ಕೆಡಿಸಿತು ಎಂಬಂತೆ ಮಾನವ ತಾನು ನಾಶವಾಗುವ ಜೊತೆಗೆ ತನಗೆ ಉಪಕಾರ ಮಾಡಿದ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ.

ಇನ್ನು ನಮ್ಮ ರಾಜ್ಯದ ಹೆಮ್ಮೆಯ ರಾಜಧಾನಿ ಹಾಗೂ ಸಿಲಿಕಾನ್ ಸಿಟಿ ಎಂದು ಪ್ರಖ್ಯಾತಗೊಂಡಿರುವ ಬೆಂಗಳೂರಿನಲ್ಲಿ #Bengaluru ಮೈಸೂರು ರಸ್ತೆಯಲ್ಲಿ ಪ್ರಯಾಣಿಸುವಾಗ ಒಂದು ನದಿ ಕಾಣುತ್ತದೆ. ಅದರ ಹೆಸರು ಎಲ್ಲರ ಬಾಯಲ್ಲಿ ಬರುವಂತೆ `ಕೆಂಗೇರಿ ಕೊಚ್ಚೆಮೋರಿ’ ಎಂದು. ಆ ನದಿ ಕಂಡಾಗ ಎಲ್ಲರೂ ತಮ್ಮ ತಮ್ಮ ಮೂಗುಗಳನ್ನು ಮುಚ್ಚುವರೇ ವಿನಃ ಅದು ಏಕೆ ಆ ಪರಿಸ್ಥಿತಿಗೆ ಬಂತು ಎಂದು ಯಾರ ಮೆದುಳಿನಲ್ಲೂ ಕೂಡ ಬರುವುದಿಲ್ಲ. ಇದನ್ನು ಮಾಡಿದ್ದು ಕೂಡ ಮಹಾವ್ಯಕ್ತಿ ಮಾನವನೇ. ಬೆಂಗಳೂರಿನ ಎಲ್ಲಾ ತ್ಯಾಜ್ಯವನ್ನು ಅದಕ್ಕೆ ಬಿಟ್ಟು ದುರ್ವಾಸನೆ ಭರಿತವಾಗಿ ಮಾಡಿದ್ದಾನೆ.
ಶತಮಾನಗಳಿಂದ ಹರಿಯುತ್ತಿದ್ದ ವೃಷಭಾವತಿ ಎಂಬ ನದಿಯನ್ನು ಚರಂಡಿಯಂತೆ ಬಳಸುತ್ತಿದ್ದಾರೆ ನಮ್ಮ ಜನ. ಇನ್ನೇನು ಹೇಳಿದರೂ ಅಷ್ಟೇ ಗಾದೆ ಮಾತಿನ ಹಾಗೆ ಹಲ್ಲಿದ್ದವನಿಗೆ ಕಡ್ಲೆ ಇಲ್ಲ, ಕಡ್ಲೆ ಇದ್ದವನಿಗೆ ಹಲ್ಲಿಲ್ಲ ಎಂಬಂತೆ, ಪ್ರಕೃತಿ ಇದ್ದಾಗ ಅರಿವಾಗದೆ ನಾಶವಾದ ಮೇಲೆ ಜ್ಞಾನೋದಯವಾದರೆ ಏನೂ ಪ್ರಯೋಜನವಿಲ್ಲ. ಆಗ ಜ್ಞಾನೋದಯವಾದರೆ ಪ್ರಯೋಜನವಾದರೂ ಆದೀತೆ?

ಕರ್ನಾಟಕ #Karnataka ಎಂತಹ ಅಮೋಘವಾದ, ಅದ್ಭುತವಾದ, ಊಹಿಸಲಾಗದ ಎಂತಹ ಜಾಗ. ಎರಡನೆಯ ಸ್ವರ್ಗ ಎಂದರೆ ತಪ್ಪಾಗುವುದಿಲ್ಲವೇನೋ! ಇನ್ನೆಷ್ಟೇ ಪ್ರಕೃತಿಯನ್ನು ಹೊಗಳಿದರು ಪದಗಳ ಕೊರತೆ ಉಂಟಾಗುವುದೇ ವಿನಃ ಪ್ರಕೃತಿಯ ಗುಣಗಳು ಅಂತ್ಯವಾಗದ್ದು. ಇಂತಹ ಪಕೃತಿಯನ್ನು ನಾಶ ಮಾಡುತ್ತಿದ್ದಾನಲ್ಲ; ಮಾನವನಿಗೆ ಬುದ್ಧಿ ಇದೆಯೇ? ಸ್ಪಲ್ಪ ಹೊತ್ತು ತಾನು ಮಾಡಿದ್ದೆಲ್ಲವನ್ನು ಪುಟಗಳಂತೆ ತಿರುವಿ ಹಾಕಿದರೆ ಸಾಕು ತಾನು ಮಾಡುತ್ತಿರುವ ಮಹಾದೋಷ ಕಣ್ಣಿಗೆ ಬೀಳುತ್ತದೆ. ನಮ್ಮಿಂದ ಪ್ರಕೃತಿಯಲ್ಲ; ಪ್ರಕೃತಿಯಿಂದ ನಾವು ಎಂಬುವ ಮಹಾಸತ್ಯವನ್ನು ಇನ್ನಾದರೂ ತಿಳಿಯಬೇಕು.
`ತಪ್ಪು ಮಾಡುವುದು ಸಹಜ ತಿದ್ದಿ ನಡೆಯುವವನು ಮನುಜ’ ಎಂಬಂತೆ ಮಾನವ ಇನ್ನಾದರೂ ತನ್ನನ್ನು ಸರಿಪಡಿಸಿಕೊಳ್ಳಲಿ. ನಾವು ಪ್ರಕೃತಿಯಿಂದಲೇ ಜನ್ಮವನ್ನು ಪಡೆದಿದ್ದೇವೆ ಮತ್ತು ಪ್ರಕೃತಿಯಲ್ಲಿಯೇ ಲೀನವಾಗುತ್ತೇವೆ ಎಂಬುದನ್ನು ನೆನಪಿನಲ್ಲಿಡುತ್ತಾ, ಪ್ರಕೃತಿಯೊಂದಿಗೆ ನಾವೂ ಬೆಳೆಯೋಣ ಹಾಗೂ ಪ್ರಕೃತಿಯನ್ನು ಬೆಳೆಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post