ಕಲ್ಪ ಮೀಡಿಯಾ ಹೌಸ್ | ನವದೆಹಲಿ |
-
ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಭಾರತ ಈಗಾಗಲೇ ನಿರ್ಧರಿಸಿದೆ
-
ಭಾರತದಲ್ಲಿ ಹುಟ್ಟುವ ನದಿ ನೀರಿನ ಹಕ್ಕು ಭಾರತೀಯರಿಗಿದೆ
-
ಸಿಂಧು ನದಿ ಒಪ್ಪಂದಕ್ಕೆ ಮುಂದೆಂದೂ ಒಪ್ಪಿಗೆ ನೀಡುವುದಿಲ್ಲ
-
ಉಗ್ರರಿಗೆ ಸಹಾಯ ಮಾಡುವವರೆಲ್ಲರನ್ನು ಭಯೋತ್ಪಾದಕರಂತೆ ಕಾಣುತ್ತೇವೆ
-
ನಾವು ಯಾವುದೇ ಬೆದರಿಕೆಗೆ ಹೆದರುವುದಿಲ್ಲ, ಬಲಿಯಾಗುವುದಿಲ್ಲ
-
ಭಾರತವು ಇನ್ನು ಮುಂದೆ ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ
-
ಶತ್ರುಗಳು ಪರಮಾಣು ಬೆದರಿಕೆ ಮುಂದುವರೆಸಿದರೆ, ನಾವು ಸೂಕ್ತ ಉತ್ತರಕ್ಕೆ ಸಿದ್ಧ
79ನೇ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಜನರಿಗೆ ಮುಂಬರುವ ದೀಪಾವಳಿಗೆ ಎರಡು ಬಿಗ್ ಉಡುಗೊರೆ ಘೋಷಣೆ ಮಾಡಿದ್ದಾರೆ.
ದೇಶದ ಜನತೆಯನ್ನುದ್ದೇಶಿಸಿ ಮಾತನಾಡುವ ವೇಳೆ, ಈ ದೀಪಾವಳಿಗೆ, ನಾನು ನಿಮಗಾಗಿ ಡಬಲ್ ಧಮಾಕ ನೀಡಲಿದ್ದೇನೆ. ಈ ದೀಪಾವಳಿಯಲ್ಲಿ ನಾಗರಿಕರು ದೊಡ್ಡ ಉಡುಗೊರೆಯನ್ನು ಪಡೆಯಲಿದ್ದಾರೆ ಎಂದಿದ್ದಾರೆ.
ನಾವು ಮುಂದಿನ ಪೀಳಿಗೆಯ ಜಿಎಸ್ಟಿ ಸುಧಾರಣೆಗಳನ್ನು ತರುತ್ತಿದ್ದೇವೆ. ಇದು ದೇಶದಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ. ಇದು ದೀಪಾವಳಿ ಉಡುಗೊರೆಯಾಗಲಿದೆ ಎಂದಿದ್ದಾರೆ.
8 ವರ್ಷಗಳ ಹಿಂದೆ ಸರ್ಕಾರವು ಪ್ರಮುಖ ಸುಧಾರಣೆಗಳನ್ನು ಕೈಗೊಂಡಿದೆ. ಸರ್ಕಾರವು ದೇಶದಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡಿ, ತೆರಿಗೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಎಂದು ಭರವಸೆ ನೀಡಿದ್ದಾರೆ.ಇನ್ನು ಎರಡನೇ ಉಡುಗೊರೆಯಾಗಿ, ವಿಕಸಿತ ಭಾರತ ರೋಜ್’ಗಾರ್ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ಖಾಸಗಿ ವಲಯದ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ ಯುವಕರಿಗೆ 15,000 ರೂ. ನೆರವನ್ನು ಮೋದಿ ಘೋಷಿಸಿದ್ದಾರೆ.
ನನ್ನ ದೇಶದ ಯುವಕರೇ, ಈ ದಿನವೇ ನಮ್ಮ ದೇಶದ ಯುವಕರಿಗಾಗಿ 1 ಲಕ್ಷ ಕೋಟಿ ಮೌಲ್ಯದ ಯೋಜನೆಯನ್ನು ನಾವು ಪ್ರಾರಂಭಿಸುತ್ತಿದ್ದೇವೆ. ಇಂದಿನಿಂದ ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್’ಗಾರ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಖಾಸಗಿ ವಲಯದಲ್ಲಿ ಮೊದಲ ಉದ್ಯೋಗ ಪಡೆಯುವ ಯುವಕ-ಯುವತಿಯರು ಸರ್ಕಾರದಿಂದ 15,000 ರೂ. ಪಡೆಯುತ್ತಾರೆ ಎಂದಿದ್ದಾರೆ.
ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕಂಪನಿಗಳಿಗೆ ಪ್ರೋತ್ಸಾಹ ಮೊತ್ತವನ್ನು ಸಹ ನೀಡಲಾಗುತ್ತದೆ. ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್’ಗಾರ್ ಯೋಜನೆಯು ಯುವಕರಿಗೆ ಸುಮಾರು 3.5 ಕೋಟಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದಿದ್ದಾರೆ.
ಪ್ರಧಾನಿ ಭಾಷಣದಲ್ಲಿ ಇನ್ನೇನು ಪ್ರಸ್ತಾಪ ಆಯ್ತು?
ನಾವು ನಮ್ಮ ಸಶಸ್ತ್ರ ಪಡೆಗಳಿಗೆ ಮುಕ್ತ ಹಸ್ತ ನೀಡಿದ್ದೇವೆ. ಇದೀಗ ನಮ್ಮ ದೇಶ ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ನಡುವೆ ವ್ಯತ್ಯಾಸವನ್ನು ನೋಡುವುದಿಲ್ಲ. ಭವಿಷ್ಯದಲ್ಲಿ ಪಾಕಿಸ್ತಾನದಿಂದ ಯಾವುದೇ ದುಷ್ಕೃತ್ಯ ಎದುರಾದರೂ ಅದಕ್ಕೆ ಶಿಕ್ಷೆಯನ್ನು ನಮ್ಮ ಸಶಸ್ತ್ರ ಪಡೆಗಳೇ ನಿರ್ಧರಿಸುತ್ತವೆ ಎಂದು ತಿಳಿಸಿದರು.
ಏಪ್ರಿಲ್ 22 ರಂದು ಪಹಲ್ಗಾಮ್’ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಇಡೀ ರಾಷ್ಟ್ರವು ಆಕ್ರೋಶಗೊಂಡಿದ್ದು, ಆಪರೇಷನ್ ಸಿಂಧೂರ ಆ ಆಕ್ರೋಶದ ಪ್ರತಿಕ್ರಿಯೆಯಾಗಿತ್ತು ಎಂದರು.ಭಾರತದ ಮೇಲೆ ಪರಮಾಣು ಬೆದರಿಕೆಗಳು ಬಹಳ ಸಮಯದಿಂದ ಮುಂದುವರೆದಿವೆ. ಆದರೆ, ಅದನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ. ನಮ್ಮ ಶತ್ರುಗಳು ಪರಮಾಣು ಬೆದರಿಕೆ ಮುಂದುವರೆಸಿದರೆ, ನಾವು ಸೂಕ್ತ ಉತ್ತರವನ್ನು ನೀಡಲು ಸಿದ್ಧರಿದ್ದೇವೆ. ನಮ್ಮ ಸಶಸ್ತ್ರ ಪಡೆಗಳು ಪ್ರತಿಕ್ರಿಯೆ ನೀಡುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ನಮ್ಮ ಸಶಸ್ತ್ರ ಪಡೆಗಳು ಮಾಡಿದ ಹಾನಿ ದೊಡ್ಡದಾಗಿತ್ತು. ಭಾರತವು ಇನ್ನು ಮುಂದೆ ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ ಎಂದು ನಿರ್ಧರಿಸಿದೆ, ನಾವು ಯಾವುದೇ ಬೆದರಿಕೆಗೆ ಹೆದರುವುದಿಲ್ಲ, ಬಲಿಯಾಗುವುದಿಲ್ಲ ಎಂದರು.
ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ಭಾರತ ಈಗಾಗಲೇ ನಿರ್ಧಾರ ಮಾಡಿದೆ. ಸಿಂಧೂ ನದಿ ನೀರು ಒಪ್ಪಂದವು ಅನ್ಯಾಯವಾಗಿದೆ ಎಂದು ನಮ್ಮ ದೇಶದ ಜನರು ಅರಿತುಕೊಂಡಿದ್ದಾರೆ. ಸಿಂಧೂ ನದಿ ಒಪ್ಪಂದದಿಂದ ನೀರು ಶತ್ರುಗಳ ಭೂಮಿಗೆ ನೀರಾವರಿಗೆ ಸಹಾಯಕವಾಗಿದೆ. ಆದರೆ, ನಮ್ಮದೇ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಭಾರತದಲ್ಲಿ ಹುಟ್ಟುವ ನದಿ ನೀರಿನ ಹಕ್ಕು ಭಾರತೀಯರಿಗೆ ಇದೆ. ದೇಶದ ರೈತರಿಗೆ ಇದೆ. ಕಳೆದ ಏಳು ದಶಕಗಳಿಂದ ಒಪ್ಪಂದದ ಮೇರೆಗೆ ಬೇರೆ ದೇಶಗಳಿಗೆ ಭಾರತ ನೀರುಣಿಸುತ್ತಿತ್ತು. ನಮ್ಮ ಭೂಮಿ ಬರಿದಾಗುತ್ತಿತ್ತು. ಅಂದ ಮೇಲೆ ಅಂತಹ ಒಪ್ಪಂದ ಏಕೆ ಬೇಕು ಎಂದು ಪ್ರಶ್ನೆ ಮಾಡಿದರು.
ಭಾರತದ ಹಾಗೂ ನಮ್ಮ ರೈತರ ಹಿತದೃಷ್ಠಿಯಿಂದ ಪಾಕ್ ಜತೆಗಿನ ಸಿಂಧು ನದಿ ಒಪ್ಪಂದಕ್ಕೆ ಮುಂದೆಂದೂ ಒಪ್ಪಿಗೆ ನೀಡುವುದಿಲ್ಲ. ಭಯೋತ್ಪಾದಕತೆ ಪೋಷಿಸುವವರನ್ನು ನಾವು ಇನ್ನು ಮುಂದೆ ಬೇರೆ ಬೇರೆ ಎಂದು ಪರಿಗಣಿಸದೇ ಅವರೆಲ್ಲರನ್ನು ಒಂದೇ ಎಂದು ಕರೆಯುತ್ತೇವೆ. ಉಗ್ರರಿಗೆ ಸಹಾಯ ಮಾಡುವವರೆಲ್ಲರನ್ನು ಭಯೋತ್ಪಾದಕರಂತೆ ಕಾಣುತ್ತೇವೆ ಎಂದು ಪಾಕಿಸ್ತಾನ ಹಾಗೂ ಉಗ್ರ ಬೆಂಬಲಿತ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post