ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪದೇ ಪದೇ ಆರ್‍ಎಸ್‍ಎಸ್ ಬಗ್ಗೆ ಮಾತನಾಡುತ್ತಿರುವ ಗೃಹಮಂತ್ರಿ ಪ್ರಿಯಾಂಕ್ ಖರ್ಗೆಯವರಿಗೆ ಸಂವಿಧಾನದ ಬಗ್ಗೆ ಅರಿವೇ ಇಲ್ಲ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‍ಎಸ್‍ಎಸ್ ಸಂಘದ ನೋಂದಣಿ ವಿಷಯವಾಗಿ ಪ್ರಿಯಾಂಕ್ ಖರ್ಗೆಯವರು ಸಂಘದ ಸರಸಂಘ ಸಂಚಾಲಕ ಮೋಹನ್ ಭಾಗವತ್ ಅವರಿಗೆ ಬರೆದಿರುವ ಪತ್ರ ಮತ್ತು ಕೇಳಿರುವ ಪ್ರಶ್ನೆಗಳು ಪ್ರಿಯಾಂಕ್ ಖರ್ಗೆ ಅವರದ್ದೋ… ಅಥವಾ ಕಾಂಗ್ರೆಸ್ ಪಕ್ಷದ್ದೋ… ಸ್ವಾತಂತ್ರ್ಯಪೂರ್ವದಲ್ಲಿಯೇ ಸ್ಥಾಪಿತವಾದ ಸಂಘದ ನೋಂದಣಿ ಬಗ್ಗೆ ಈಗ ಪ್ರಶ್ನಿಸುತ್ತಿರುವವರು ಹಲವು ದಶಕಗಳ ಕಾಲ ದೇಶವನ್ನಾಳಿದ ಸಮಯದಲ್ಲಿ ಏಕೆ ಸುಮ್ಮನಿದ್ದರು ಎಂದು ಪ್ರಶ್ನೆ ಮಾಡಿದರು.
ಅಷ್ಟಕ್ಕೂ ಯಾವುದೇ ಸಂಘಗಳ ಅಥವಾ ಸಂಸ್ಥೆಗಳನ್ನು ನೋಂದಣಿ ಮಾಡಿಸುವುದು-ಬಿಡುವುದು ಆಯಾ ಸಂಸ್ಥೆಗೆ ಸೇರಿದ್ದಾಗಿದೆ. ಒಂದು ಸ್ವಯಂಪ್ರೇರಿತ ವ್ಯಕ್ತಿಗಳ ಸಮೂಹ ಸಂವಿಧಾನದ ಅನುಚ್ಛೇದ 19(1)(ಸಿ)ಪ್ರಕಾರ ದೇಶದ ಯಾವುದೇ ವ್ಯಕ್ತಿ ಸಂಘ-ಸಂಸ್ಥೆಗಳನ್ನು ರಚಿಸುವ ಮೂಲಭೂತ ಹಕ್ಕನ್ನು ಹೊಂದಿರುತ್ತದೆ. ಮತ್ತು ನೋಂದಣಿ ಮಾಡಿಸಲೇಬೇಕೆಂಬ ನಿಯಮವೂ ಇಲ್ಲ. 1982ರ ಸಂಘಗಳ ನೋಂದಣಿ ಕಾರ್ಯಕೂಡ ಇದನ್ನೇ ಹೇಳುತ್ತದೆ. ಸರ್ಕಾರದಿಂದ ಅನುದಾನ ಪಡೆಯಲು ಅಥವಾ ಪ್ರತ್ಯೇಕ ಕಾನೂನುಬದ್ಧ ಘಟಕವಾಗಿ ಕಾರ್ಯನಿರ್ವಹಿಸಲು ಬಯಸಿದಾಗ ಮಾತ್ರ ನೋಂದಣಿ ಬೇಕಾಗುತ್ತದೆ ಎಂದ ಅವರು, ಆರ್‍ಎಸ್‍ಎಸ್ ವ್ಯಕ್ತಿಗಳ ಸಮೂಹವಾಗಿದ್ದು, ಅದು ಯಾವುದೇ ಆಸ್ತಿ ಅನುದಾನವನ್ನು ಬಯಸುವುದಿಲ್ಲ. ಆದ್ದರಿಂದ ಸಂಘದ ನೋಂದಣಿ ಕಡ್ಡಾಯವಲ್ಲ ಇದು ಪ್ರಿಯಾಂಕ್ ಖರ್ಗೆಯವರಿಗೆ ಗೊತ್ತಿರಬೇಕು. ಅವರಿಗೆ ಸಂವಿಧಾನದ ಅರಿವೇ ಇಲ್ಲ ಎಂದು ಟೀಕಿಸಿದರು.
ಯಾರನ್ನೋ ಮೆಚ್ಚಿಸಲು ಹೈಕಮಾಂಡ್‍ಗೆ ಹತ್ತಿರವಾಗಲು ಸಚಿವ ಪಟ್ಟವನ್ನು ಬಯಸುವವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಾ ಹೋಗುತ್ತಾರೆ. ಈಗಾಗಲೇ ಪ್ರಿಯಾಂಕ್ ಖರ್ಗೆಯವರ ಪತ್ರಕ್ಕೆ ಕಾನೂನು ತಜ್ಞರು ಉತ್ತರವನ್ನು ನೀಡಿದ್ದಾರೆ. ಸುಪ್ರಿಂಕೋರ್ಟ್‍ನ ಹಿರಿಯ ವಕೀಲ ಹಾಗೂ ಮಾಜಿ ಅಡ್ವೇಕೇಟ್ ಜನರಲ್ಲ ಬಿ.ವಿ.ಆಚಾರ್ಯ ಹೇಳಿಕೆ ನೀಡಿ, ಖರ್ಗೆ ಅವರಿಗೆ ಸಂಘಕ್ಕೆ ಪತ್ರ ಅಥವಾ ನೋಟೀಸ್ ಕೊಡುವ ಯಾವ ಅಧಿಕಾರವೂ ಇಲ್ಲ ಎಂದಿದ್ದಾರೆ. ಹಾಗೆಯೇ ಹೈಕೋರ್ಟಿನ ಹಿರಿಯ ವಕೀಲ ಸಿ.ಹೆಚ್. ಹನುಮಂತರಾಯ ಅವರು ಕೂಡ ಖರ್ಗೆಯವರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದಿದ್ದಾರೆ. ಇದನ್ನು ಪ್ರಿಯಾಂಕ್ ಖರ್ಗೆ ಅರ್ಥಮಾಡಿಕೊಳ್ಳಬೇಕು ಎಂದರು.
ಅಲ್ಲದೆ ವಕೀಲರು, ಮಾಜಿ ಅಡ್ವೋಕೇಟ್ ಜನರಲ್‍ಗಳು, ಸುಪ್ರಿಂಕೋರ್ಟ್ ನ್ಯಾಯಾಧೀಶರು, ನಿವೃತ್ತ ನ್ಯಾಯಮೂರ್ತಿಗಳು ತಮ್ಮ ಅರಿವಿನ ಮತ್ತು ಜ್ಞಾನದಿಂದ ನೀಡಿದ ಹೇಳಿಕೆಗಳನ್ನು ಪ್ರಿಯಾಂಕ್ ಖರ್ಗೆ ಧಿಕ್ಕರಿಸಿ ಇಂತಹ ವ್ಯಕ್ತಿಗಳನ್ನು ಗುಲಾಮರು ಎಂದು ಕರೆಯುವ ಮೂಲಕ ತಮ್ಮ ಸಂಸ್ಕøತಿಯನ್ನು ಬಹಿರಂಗಪಡಿಸಿದ್ದಾರೆ. ಹಾಗಾಗಿ ಪ್ರಿಯಾಂಕ ಖರ್ಗೆಯವರಿಗೆ ಸಂವಿಧಾನದ ಅರಿವೇ ಇಲ್ಲ ಮತ್ತು ಅವರ ಹೇಳಿಕೆ ಅವರ ವಿದ್ಯೆ, ಜ್ಞಾನ ಮತ್ತು ಅರ್ಹತೆಯನ್ನು ನಿರ್ಧರಿಸುತ್ತದೆ ಎಂದು ವ್ಯಂಗ್ಯವಾಡಿದರು.
ಹೊಸದಾಗಿ ಅಧಿಕಾರದ ಸ್ವೀಕರಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಈ ಇಬ್ಬರು ಒಂದು ರೀತಿಯಲ್ಲಿ ಅರ್ಬನ್ ನಕ್ಸಲರು ಎಂದು ಜರಿದ ಅವರು, ಈ ಇಬ್ಬರೂ ಹಿರಣ್ಯ-ಕಶ್ಯಪು ಇದ್ದಂತೆ. ಇವರನ್ನು ನಾಶಮಾಡಲು ಭಕ್ತಿಪ್ರಹ್ಲಾದನ ರೀತಿಯಲ್ಲಿ ನಾವಿದ್ದೇವೆ ಎಂದು ಪೌರಾಣಿಕೆ ಹಿನ್ನಲೆಯೊಂದಿಗೆ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ. ವಿಶ್ವಾಸ್, ಶೇಷಾಚಲ, ಕುಬೇರಪ್ಪ, ಶ್ರೀಕಾಂತ್, ಬಾಲು, ಸೀತಾಲಕ್ಷ್ಮೀ, ಕೆಂಪಮ್ಮ, ಶಿವಾಜಿ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Comments 1