ಪುಲ್ವಾಮಾ: ಭಾರತೀಯ ಸೇನೆಯ 42 ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಷೀದ್ ಘಾಜಿಯನ್ನು ಭಾರತೀಯ ಸೇನೆ ಬೇಟೆಯಾಡಿ ಹೊಡೆದು ಹಾಕಿದೆ.
ಪುಲ್ವಾಮದ ಪಿಂಗ್ಲಾನ್ ಪ್ರಾಂತ್ಯದಲ್ಲಿ ಉಗ್ರರು ಹಾಗೂ ಸೈನಿಕರ ನಡುವೆ ಭೀಕರ ಚಕಮಕಿ ನಡೆಯುತ್ತಿದ್ದು, ಸೇನೆಯ ಗುಂಡಿಗೆ ಇದೀಗ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಪೈಕಿ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಷೀದ್ ಘಾಜಿ ಕೂಡ ಸೇರಿದ್ದಾನೆ ಎನ್ನಲಾಗಿದೆ. ಅಂತೆಯೇ ಹತನಾದ ಮತ್ತೋರ್ವ ನನ್ನು ಜೆಇಎಂ ಕಮಾಂಡರ್ ಹಿಲಾಲ್ ಎಂದು ಗುರುತಿಸಲಾಗಿದೆ.
ಅಬ್ದುಲ್ ರಷೀದ್ ಘಾಜಿ ಜೆಇಎಂ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಆಗಿದ್ದು, ಕಾಶ್ಮೀರದಲ್ಲಿ ಉಗ್ರ ಸಂಘಟನೆಗೆ ಯುವಕರನ್ನು ಸೆಳೆಯುವ ಮತ್ತು ಅವರಿಗೆ ತರಬೇತಿ ನೀಡುವ ಮೇಲುಸ್ತುವಾರಿ ನೊಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೆ ಕಳೆದ ಫೆಬ್ರವರಿ ನಾಲ್ಕರಂದು ಪುಲ್ವಾಮ ಹೊರವಲಯದಲ್ಲಿ ನಡೆದ ಸೇನಾವಾಹನಗಳ ಮೇಲಿನ ಆತ್ಮಹತ್ಯಾ ಬಾಂಬ್ ದಾಳಿಯ ನೇತೃತ್ವವನ್ನೂ ಕೂಡ ಇದೇ ಅಬ್ದುಲ್ ರಷೀದ್ ಘಾಜಿ ವಹಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಪಿಂಗ್ಲಾ ಪ್ರಾಂತ್ಯದಲ್ಲಿ 4-5 ಉಗ್ರರು ಅಡಗಿರುವ ಶಂಕೆ ಮೇರೆಗೆ ನಸುಕಿನ ಮೂರೂವರೆ ಗಂಟೆಯಿಂದಲೇ ಅಲ್ಲಿ ಸೇನೆ ಶೋಧ ಕಾರ್ಯಕ್ಕೆ ಮುಂದಾಗಿತ್ತು. ಈ ವೇಳೆ ಸೈನಿಕರು ಆಗಮಿಸುತ್ತಿದ್ದಂತೆಯೇ ಅಡಗಿದ್ದ ಉಗ್ರರು ಏಕಾಏಕಿ ಸೈನಿಕರತ್ತ ಗುಂಡಿನ ಸುರಿಮಳೆ ಗರೆದಿದ್ದಾರೆ. ಈ ವೇಳೆ ಸ್ಥಳದಲ್ಲೇ ನಾಲ್ಕು ಮಂದಿ ಸೈನಿಕರು ವೀರಸ್ವರ್ಗ ಸೇರಿದ್ದಾರೆ. ಹುತಾತ್ಮ ಯೋಧರನ್ನು ಮೇಜರ್ ವಿ ಎಸ್ ಧೌಂಡಿಯಾಲ್, ಹವಾಲ್ದಾರ್ ಶಿಯೋ ರಾಮ್, ಸಿಪಾಯಿ ಅಜಯ್ ಕುಮಾರ್ ಮತ್ತು ಸಿಪಾಯಿ ಹರಿ ಸಿಂಗ್ ಎಂದು ಗುರುತಿಸಲಾಗಿದೆ.
Discussion about this post