ಪುಣೆ: ಭಾರೀ ಮಳೆಯಿಂದಾಗಿ ಹಸಿಯಾಗಿದ್ದ ಪಾರ್ಕಿಂಗ್ ಲಾಟ್ ಕುಸಿದುಬಿದ್ದ ಪರಿಣಾಮ 17 ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಧಾರುಣ ಘಟನೆ ಇಂದು ಮುಂಜಾನೆ ನಡೆದಿದೆ.
ಪುಣೆಯ ಕೊಂಧ್ವ ಎಂಬ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್ ಕಾಂಪೌಂಟ್ ಒಳಗಿನ ಪಾರ್ಕಿಂಗ್ ಲಾಟ್ ಬಹುತೇಕ ಕುಸಿದಿದ್ದು, ಇದರ ಪಕ್ಕದಲ್ಲೇ ಇರುವ ಕೊಳೆಗೇರಿಗೆ ಗೋಡೆ ಅಪ್ಪಳಿಸಿದ್ದ ಕಾರಣ ಪಾರ್ಕಿಂಗ್ ಲಾಟ್’ನಲ್ಲಿ ನಿಲ್ಲಿಸಿದ ಕಾರುಗಳು ಅವಶೇಷಗಳಡಿ ಸಿಕ್ಕಿ ಭಗ್ನಗೊಂಡಿವೆ. ಘಟನೆಯಲ್ಲಿ ಹಲವು ಕಾರುಗಳು ಜಖಂಗೊಂಡಿವೆ. ತಡರಾತ್ರಿ 1.30ಕ್ಕೆ ಘಟನೆ ಸಂಭವಿಸಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿ 17 ಮಂದಿ ಮೃತರಾಗಿದ್ದಾರೆ.
ಈ ಪ್ರದೇಶದಲ್ಲಿ ಪ್ರಮುಖ ಕಟ್ಟಡ ನಿರ್ಮಾಣ ನಡೆಯುತ್ತಿತ್ತು. ಹೆಚ್ಚಾಗಿ ಬಂಗಾಳ ಮತ್ತು ಬಿಹಾರ ಮೂಲದ ಕಾರ್ಮಿಕರು ಸಮಾಜ ಕಟ್ಟಡದ ಹೊರಗೆ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿದ್ದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಮತ್ತು ಅಗ್ನಿಶಾಮಕ ಇಲಾಖೆಯ ರಕ್ಷಣಾ ಸಿಬ್ಬಂದಿ ಅಪಘಾತದ ಸ್ಥಳಕ್ಕಾಗಮಿಸಿ ಅಪಾಯಕ್ಕೆ ಸಿಕ್ಕಿಕೊಂಡಿರುವ ಜನರಿಗಾಗಿ ಶೋಧ ನಡೆಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Discussion about this post