ಪುಣೆ: ಬರ್ಗರ್ ಖರೀದಿ ಮಾಡಿ ತಿಂದ ಗ್ರಾಹಕರೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಪುಣೆಯಲ್ಲಿ ನಡೆದಿದ್ದು, ಅದರಲ್ಲಿದ್ದ ಗಾಜಿನ ಚೂರುಗಳೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಕಳೆದವಾರ ಬರ್ಗರ್ ಕಿಂಗ್ ಮಳಿಗೆಯಲ್ಲಿ ಗ್ರಾಹಕರೊಬ್ಬರು ಬರ್ಗರ್ ಖರೀದಿ ಮಾಡಿದ್ದಾರೆ. ಇದನ್ನು ತಿಂದ ಅವರು ಅಸ್ವಸ್ಥಗೊಂಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾತನಾಡಿರುವ ಸ್ಥಳೀಯ ಪೊಲೀಸ್ ಅಧಿಕಾರಿ ದೀಪಕ್ ಲಗಡ್, ಮೇ 18ರಂದು ಬರ್ಗರ್ ಕಿಂಗ್ ವಿರುದ್ದ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದ್ದು, ವರದಿಯನ್ನು ನಿರೀಕ್ಷಿಸುತ್ತಿದ್ದೇವೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಸುಜಿತ್ ಪಠಾಣ್(31) ಎಂಬ ಆಟೋ ರಿಕ್ಷಾ ಚಾಲಕರೊಬ್ಬರು ತಮ್ಮ ಸ್ನೇಹಿತರೊಂದಿಗೆ ಎಫ್’ಸಿ ರಸ್ತೆಯಲ್ಲಿರುವ ಬರ್ಗರ್ ಕಿಂಗ್ ಮಳಿಗೆಗೆ ತೆರಳಿ ಬರ್ಗರ್, ಫ್ರೈಸ್ ಹಾಗೂ ತಂಪು ಪಾನೀಯಗಳನ್ನು ತೆಗೆದುಕೊಂಡಿದ್ದಾರೆ. ಈ ವೇಳೆ ಸುಜಿತ್ ಅವರು ಬರ್ಗರ್ ತಿಂದಾಕ್ಷಣ ಗಂಟಲಿನಲ್ಲಿ ನೋವುಂಟಾಗಿ ರಕ್ತಸ್ರಾವ ಉಂಟಾಗಿದೆ. ಇದರಿಂದ ಗಾಬರಿಯಾದ ಅವರು ಸ್ನೇಹಿತರು ಗಂಟಲಲ್ಲಿ ಏನಾದರೂ ಸಿಲುಕಿಕೊಂಡಿದೆಯಾ ಎಂದು ನೋಡಿದರೆ, ಗಂಟಲಿನ ಭಾಗದಲ್ಲಿ ಸಣ್ಣ ಸಣ್ಣ ಗಾಜಿನ ಚೂರುಗಳು ಸಿಲುಕಿ ಗಾಯವಾಗಿ, ರಕ್ತ ಸೋರುತ್ತಿತ್ತು.
ಇದರಿಂದ ಗಾಬರಿಗೊಂಡ ಸ್ನೇಹಿತರು ತತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ತತಕ್ಷಣದ ಚಿಕಿತ್ಸೆಗಾಗಿ ಸುಮಾರು 15 ಸಾವಿರ ರೂ. ಹಣ ಪಾವತಿಸಿದ್ದಾರೆ.
ಈ ಕುರಿತಂತೆ ಮಳಿಗೆ ಮ್ಯಾನೇಜರ್ ಅವರನ್ನು ಸಂಪರ್ಕಿಸಿದರೆ ಈ ವಿಚಾರವೇ ನನಗೆ ತಿಳಿದಿಲ್ಲ ಎಂದು ಉದಾಸೀನದ ಮಾತನ್ನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
Discussion about this post