ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ಕಳೆದ ಎರಡು ವರ್ಷ ಯಶಸ್ವಿಯಾಗಿ ನಡೆಸಿಕೊಂಡು ಬಂದ ಶ್ರೀನಿವಾಸ ಕಲ್ಯಾಣೋತ್ಸವ #SrinivasaKalyana ಈ ಬಾರಿಯೂ ಸಹ ವೈಭವೋಪೇತವಾಗಿ ನಡೆಸಲು ದಿನಗಣನೆ ಆರಂಭವಾಗಿದೆ.
ಈ ಕುರಿತಂತೆ ಮಾತನಾಡಿರುವ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, #ArunKumarPuttila ಎಲ್ಲರ ಸಹಕಾರದಿಂದ ಎರಡು ವರ್ಷ ಯಶಸ್ವಿಯಾಗಿ ನಡೆಸಲಾಗಿದ್ದು, ಈಗ ಮೂರನೇ ಬಾರಿ ಯೋಗ ಬಂದಿದೆ. ಈ ಬಾರಿ ಶ್ರೀನಿವಾಸ ಕಲ್ಯಾಣೋತ್ಸವದ ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನ್ಮಶತಾಬ್ಬಿಯನ್ನು ಶಾಶ್ವತವಾಗಿ ಉಳಿಯಬೇಕೆಂಬ ಮತ್ತು ಹಿಂದು ಸಮಾಜ ಸಾಮೂಹಿಕ ವಿವಾಹಕ್ಕೆ ಮುಂದಿನ ದಿನ ಒತ್ತು ಕೊಡಬೇಕೆಂಬ ನಿಟ್ಟಿನಲ್ಲಿ ಹಿಂದವಿ ಸಾಮ್ರಾಜ್ಯೋತ್ಸವ ಮತ್ತು ಸಾಮೂಹಿಕ ವಿವಾಹವನ್ನು ಜೋಡಿಸಿದ್ದೇವೆ ಎಂದರು.
ಸಾಮೂಹಿಕ ವಿವಾಹದ #MassMarriage ಕುರಿತು ಘೋಷಣೆ ಮಾಡಿದ ಆರಂಭದಲ್ಲಿ 243 ಜೋಡಿಗಳು ನೋಂದಾಯಿಸಿಕೊಂಡಿದ್ದರು. ಆದರೆ ಬೇರೆ ಬೇರೆ ಕಾರಣಗಳಿಂದ ಅವರು ಮುಂದೆ ಬರಲಿಲ್ಲ. ಜೊತೆಗೆ ನಾವು ಕೂಡಾ ಪೂರ್ಣಪ್ರಮಾಣದ ಜೋಡಿಗಳಿಗೆ ಮಾತ್ರ ವಿವಾಹಕ್ಕೆ ಅವಕಾಶ ನೀಡಿದ್ದೇವೆ ಎಂದರು.
ಸುಮಾರು 75 ಸಾವಿರ ರೂಪಾಯಿಯಷ್ಟು ಒಂದು ಜೋಡಿಯ ಸಾಹಿತ್ಯಕ್ಕೆ ಖರ್ಚು ತಗಲುತ್ತದೆ. ಸುಮಾರು ರೂ. 50 ಸಾವಿರ ಚಿನ್ನದ ತಾಳಿ, ಕರಿಮಣಿಗೆ ವ್ಯಹಿಸಲಾಗುವುದು. ಉಳಿದಂತೆ ಬಟ್ಟೆಗಳಿಗೆ ಸಹಿತ ಖರ್ಚು ಇದೆ. ಒಟ್ಟಿನಲ್ಲಿ ನಮ್ಮ ಮದುವೆಯಲ್ಲಿ ಯಾವ ಕಾರ್ಯ ಮಾಡಿದ್ದೇವೋ, ಅದೆಲ್ಲವನ್ನು ಸಾಮೂಹಿಕ ವಿವಾಹದ ಜೋಡಿಗಳಿಗೆ ಮಾಡಲಿದ್ದೇವೆ ಎಂದು ತಿಳಿಸಿದರು.
ನ.28ಕ್ಕೆ ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು, ಮೆರವಣಿಗೆ ದರ್ಬೆಯಿಂದ ಸಂಜೆ ಗಂಟೆ 4ಕ್ಕೆ ಹೊರಡಲಿದೆ. ಪ್ರತಿ ಗ್ರಾಮದಿಂದಲೂ ಬಂದ ಹಸಿರುಹೊರೆಕಾಣಿಕೆ ದರ್ಬೆಯಿಂದ ಮೆರವಣಿಗೆ ಮೂಲಕ ದೇವಸ್ಥಾನ ಸಭಾಭವನದಲ್ಲಿರುವ ಉಗ್ರಾಣದಲ್ಲಿ ಜೋಡಿಸಲಾಗುವುದು.
ನ.29ರಂದು ಏನೆಲ್ಲಾ ಕಾರ್ಯಕ್ರಮ?
ನ.29ಕ್ಕೆ ಬೆಳಿಗ್ಗೆ ಗಣಪತಿ ಹೋಮದಿಂದ ಆರಂಭಗೊಂಡು ಭಜನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ ಗಂಟೆ 4 ರಿಂದ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ವೈಭವದ ಶೋಭಯಾತ್ರೆ ಬೊಳುವಾರಿನಿಂದ ಆರಂಭಗೊಳ್ಳಲಿದೆ. ಸಂಜೆ ಗಂಟೆ 7.30ರಿಂದ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಹಿಂದವಿ ಸಾಮಾಜ್ಯೋತ್ಸವ ನಡೆಯಲಿದೆ. ರಾತ್ರಿ ಮಂಗಳರಾತಿ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಲಾವೈಭವ ಪ್ರದರ್ಶನಗೊಳ್ಳಲಿದೆ.
ನ.30ರಂದು ಏನೆಲ್ಲಾ ಕಾಯಕ್ರಮ ನಡೆಯಲಿದೆ?
ನ.30ಕ್ಕೆ ಬೆಳಿಗ್ಗೆ ಗಂಟೆ 5.30 ರಿಂದ ಸುಪ್ರಭಾತ ಪೂಜಾ ಸೇವೆ, ಬೆಳಿಗ್ಗೆ ಗಂಟೆ 10.30ರ ಮಕರ ಲಗ್ನದಲ್ಲಿ ಸಾಮೂಹಿಕ ವಿವಾಹ, ಮದ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಈ ಸಂದರ್ಭ ಭಜನೋತ್ಸವ ನಡೆಯಲಿದೆ. ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಗೋರ್ಕಣ ಮಂಡಲಾಧೀಶ್ವರ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಚಿತ್ತಾಪುರ ಮಠದ ವಿದ್ಯೆಂದ್ರ ತೀರ್ಥ ಶ್ರೀಪಾದರು, ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಪೀಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ, ಗುರುಪುರ ಶ್ರೀ ಕ್ಷೇತ್ರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಶ್ರೀ ರಾಮ ಕ್ಷೇತ್ರ ಕನ್ಯಾಡಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಒಡಿಯೂರು ಗುರುದೇವದತ್ತ ಸಂಸ್ಥಾನ ಗುರುದೇವಾನಂದ ಸ್ವಾಮೀಜಿ, ಶ್ರೀಕ್ಷೇತ್ರ ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ, ಕನ್ಯಾನ ಶ್ರೀ ಕ್ಷೇತ್ರ ಕಣಿಯೂರು ಮಠದ ಶ್ರೀ ಮಹಾಬಲ ಸ್ವಾಮೀಜಿ, ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ.
ಹೇಗಿದೆ ಸಿದ್ದತೆ?
ಈ ಬಾರಿ 400 ಚದರ ಅಡಿ ಉದ್ದ ಮತ್ತು 140 ಚದರ ಅಡಿ ಅಗಲದ ಸಭಾಂಗಣ ನಿರ್ಮಾಣ ಆಗುತ್ತಿದೆ. ಸಭಾಂಗಣ ಮತ್ತು ವೇದಿಕೆ ಸೇರಿ ಒಟ್ಟು 60 ಸಾವಿರ ಚದರ ಅಡಿ ಆಗಲಿದೆ. ಅನ್ನಛತ್ರವು ಪ್ರತ್ಯೇಕವಾಗಿದ್ದು, ಸುಮಾರು 25 ಸಾವಿರ ಚದರ ಅಡಿಯ ಅನ್ನಛತ್ರ ನಿರ್ಮಾಣದ ಸಿದ್ಧತೆ ಕಾರ್ಯ ನಡೆಯುತ್ತಿದೆ.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಅಧ್ಯಕ್ಷ ನರಸಿಂಹ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರೇಮರಾಜ್, ಸಂಚಾಲಕರಾದ ಉಮೇಶ್ ಕೋಡಿಬೈಲ್ ಮತ್ತು ರವಿ ಕುಮಾರ್ ರೈ ಕೆದಂಬಾಡಿ ಮಠ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post