ನಮ್ಮ ದೇಶದಲ್ಲಿ ಸಾವಿರಾರು ಸಾಮಾಜಿಕ ಸಮಸ್ಯೆಗಳಿದ್ದು, ಇದರ ಬಗ್ಗೆಯೆಲ್ಲಾ ಕೇವಲ ಹೋರಾಟಗಾರರು ಮಾತ್ರ ತಲೆಕೆಡಿಸಿಕೊಳ್ಳಬೇಕು ಕಾಲದಲ್ಲಿ, ತಮ್ಮೂರಿನ ಸಮಸ್ಯೆಯೊಂದನ್ನು ಪರಿಹಾರ ಮಾಡಲು ಪುತ್ತೂರಿನ ವಿದ್ಯಾರ್ಥಿಗಳು ಬೃಹತ್ ಟ್ವೀಟ್ ಅಭಿಯಾನ ಆರಂಭಿಸಿದ್ದು, ಈ ಕುರಿತಂತೆ ಪುತ್ತೂರಿನ ವಿದ್ಯಾರ್ಥಿಯೇ ಬರೆದಿರುವ ವಿಶೇಷ ಲೇಖನ ಓದಿ.
ನೆಹರೂ ನಗರದ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಸಂಘಗಳು ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪುತ್ತೂರು ಘಟಕದ ಸಹಯೋಗದಲ್ಲಿ, ಕಾಲೇಜನ್ನು ಸಂಪರ್ಕಿಸುವ ರೈಲ್ವೆ ಬ್ರಿಡ್ಜ್ ಅಗಲಿಕರಣಕ್ಕಾಗಿ ರೈಲ್ ಬ್ರಿಡ್ಜ್ ವೈಡ್ ಬ್ರಿಡ್ಜ್ ಎಂಬ ಬೃಹತ್ ಟ್ವೀಟ್ ಅಭಿಯಾನವನ್ನು ಕೈಗೊಳ್ಳಲಾಗಿದೆ.
ಏನಿದು ಸಮಸ್ಯೆ?
ವಿವೇಕಾನಂದ ಶಿಕ್ಷಣ ಸಂಸ್ಥೆಗಳನ್ನು ಸಂಪರ್ಕಿಸುವ ಈ ರೈಲ್ವೆ ಬ್ರಿಡ್ಜ್ ನ ಅಗಲ ಕೇವಲ ಮೂರು ಮೀಟರ್! ಈ ಸಂಪರ್ಕ ರಸ್ತೆಯಲ್ಲಿ ನಿತ್ಯ ಸುಮಾರು 8,000 ವಿದ್ಯಾರ್ಥಿಗಳನ್ನು ಒಳಗೊಂಡು 10,000ಕ್ಕೂ ಹೆಚ್ಚು ಮಂದಿ ಸಂಚರಿಸುತ್ತಾರೆ.
ಈ ರೈಲ್ವೆ ಬ್ರಿಡ್ಜ್ ನ ಅಗಲ ಕಡಿಮೆ ಇರುವುದರಿಂದ ವಾಹನ ದಟ್ಟಣೆ, ಪಾದಾಚಾರಿಗಳಿಗೆ ತೊಂದರೆ ಆಗುವಂತಹ ಸ್ಥಿತಿ ದಿನನಿತ್ಯ ಕಾಣಸಿಗುತ್ತದೆ. ಇನ್ನು ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ಸಾಹಸ. ಯಾಕೆಂದರೆ ಮಳೆಯ ನೀರು ಸಲಿಸಾಗಿ ಹರಿದು ಹೋಗದೆ ಸೇತುವೆಯ ಮೇಲೆಯೇ ಒಟ್ಟುಗೂಡುವುದರಿಂದ ಆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಮತ್ತು ಪಾದಾಚಾರಿಗಳಿಗೆ ಇನ್ನಷ್ಟು ಸಮಸ್ಯೆ ಎದುರಾಗುತ್ತದೆ. ಹಾಗೆಯೇ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ವಾಹನ ಬಳಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.
ಹಾಗಿದ್ದರೆ ಈ ಹಿಂದೆ ಇದರ ಪರಿಹಾರಕ್ಕಾಗಿ ಪ್ರಯತ್ನ ನಡೆಯಲಿಲ್ಲವೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ಸಮಸ್ಯೆ ಪರಿಹಾರಕ್ಕಾಗಿ ಪ್ರಯತ್ನವೇನೋ ನಡೆದಿತ್ತು ಆದರೆ ಫಲಕಾರಿಯಾಗಲಿಲ್ಲ. ಇಲ್ಲಿನ ಮಾಜಿ ಶಾಸಕಿ ಮಲ್ಲಿಕಾಪ್ರಸಾದ್ ಅವರ ಅವಧಿಯಲ್ಲಿ, ಬಿ.ಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನೀಡಿದ ವಿಶೇಷ ಅನುದಾನದಿಂದಾಗಿ ಉತ್ತಮ ರಸ್ತೆ ನಿರ್ಮಾಣವಾದರೂ ರೈಲ್ವೆ ಬ್ರಿಡ್ಜ್ ಅಗಲವಾಗಲಿಲ್ಲ.
ಪುತ್ತೂರಿನಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿ, ಕೇಂದ್ರ ರೈಲ್ವೆ ಸಚಿವರಾಗಿ ಅಧಿಕಾರ ನಿಭಾಯಿಸಿದರೂ ಈ ಸಮಸ್ಯೆಯ ಬಗ್ಗೆ ಗಮನವಹಿಸಿರಲಿಲ್ಲ. ಈ ರೈಲ್ವೆ ಬ್ರಿಡ್ಜ್ ಅನ್ನು ಅಗಲಗೊಳಿಸಲು ರೈಲ್ವೆ ಇಲಾಖೆಯು ಶೇ.50ರಷ್ಟು ಹಣಬರಿಸಲು ಸಿದ್ದವಿದೆ. ಇನ್ನುಳಿದ ಮೊತ್ತವನ್ನು ನಗರಸಭೆ ಭರಿಸಬೇಕು ಎಂಬ ತನ್ನ ಮಾಮೂಲಿ ನಿಯಮವನ್ನು ತಿಳಿಸಿದೆ. ಇನ್ನು ರೈಲ್ವೆ ಇಲಾಖೆಯ ನಿಯಮಗಳಲ್ಲಿ ಕೆಲವು ವಿನಾಯತಿಗಾಗಿ ಇಲ್ಲಿನ ರಾಜ್ಯಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹಲವು ವರ್ಷದಿಂದ ಶ್ರಮ ವಹಿಸುತ್ತಿದ್ದರೂ ರೈಲ್ವೆ ಇಲಾಖೆ ಒಪ್ಪದ ಕಾರಣ ಅವರ ಶ್ರಮ ವ್ಯರ್ಥವಾಗಿ ಹೋಯಿತು.
ಟ್ವೀಟ್ ಅಭಿಯಾನದ ಉದ್ದೇಶ
ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಸಾಮಾಜಿಕ ಜಾಲತಾಣವನ್ನು ಗಮನಿಸುವ ಮೂಲಕವೂ ಹಲವಾರು ಸಮಸ್ಯೆಗಳನ್ನು ಪರಿಹರಿಸಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ದರಿಂದ ಉಪನ್ಯಾಸಕರ ಮಾರ್ಗದರ್ಶನದಿಂದ ಟ್ವೀಟ್ ಅಭಿಯಾನಕ್ಕೆ ಮುಂದಾಗಿರುವ ವಿದ್ಯಾರ್ಥಿಗಳು ಆ ಮೂಲಕವಾದರೂ ಸಮಸ್ಯೆ ಪರಿಹಾರವಾಗಬಹುದೆಂಬ ದೃಢ ನಂಬಿಕೆಯಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ 28 ರಂದು ಬೆಳಗ್ಗೆ 9:00 ರಿಂದ ರಾತ್ರಿ 11:59 ರ ವರೆಗೆ ಬೃಹತ್ ಟ್ವೀಟ್ ಅಭಿಯಾನವನ್ನು ಕೈಗೊಂಡಿದ್ದರು. ಆ ಮೂಲಕ ಈ ಟ್ವೀಟ್ ಅಭಿಯಾನವನ್ನು ಟ್ರೆಂಡ್ ಆಗುವಂತೆ ಮಾಡುವ ಕಲ್ಪನೆ ಇದೆ. ಹಾಗೆಯೇ ಟ್ವಿಟರ್ ಮೂಲಕ ಭಾರತೀಯ ರೈಲ್ವೆ ಇಲಾಖೆ, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಪೀಯೂಷ್ ಗೋಯಲ್, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಮುಂತಾದವರಿಗೆ ಟ್ವೀಟ್ ಮಾಡುವ ಮೂಲಕ ಇದರ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.
ಬಹುಷಃ ಒಂದು ತಾಲೂಕಿನ ಸಮಸ್ಯೆಯನ್ನು ರಾಷ್ಟ್ರಮಟ್ಟಕ್ಕೆ ಮುಟ್ಟಿಸುವ ಬೃಹತ್ ಟ್ವೀಟ್ ಅಭಿಯಾನ ಇದೆ ಮೊದಲು. ಸಾವಿರಾರು ಮಂದಿ ಈ ವಿಚಾರದಲ್ಲಿ ಟ್ವೀಟ್ ಮಾಡಿದ್ದಾರೆ. ಆಸಕ್ತರು ಬೆಂಬಲಿಸಬೇಕಾಗಿ ಮನವಿಯನ್ನು ಮಾಡಲಾಗಿದೆ.
ಲೇಖನ: ಅರುಣ್ ಕಿರಿಮಂಜೇಶ್ವರ
8722552497
ವಿವೇಕಾನಂದ ಕಾಲೇಜು,
ಪುತ್ತೂರು
Discussion about this post