ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಸಚಿನ್ ಪಾರ್ಶ್ವನಾಥ್ |
ಅದು ಸರಿ ಸುಮಾರು ಒಂದು ವರ್ಷದ ಹಿಂದಿನ ಘಟನೆ. ದೂರದ ಕತಾರ್ ನಲ್ಲಿ #Qatar ಭಾರತೀಯರ ಬಂಧನ ಆಗಿದೆ. ಎಂಟು ಜನರು ಇದ್ದಾರೆ ಆದರೆ ಯಾವ ಅಪರಾಧ ಎಂದು ಹೇಳಿಲ್ಲ, ಕುಟುಂಬದವರಿಗೂ ಗೊತ್ತಿಲ್ಲ ಎಂಬುದು ಒಂದು ವಿದೇಶೀ ಸುದ್ದಿ ಕಾಲಂನಲ್ಲಿ ಪ್ರಕಟವಾಗಿತ್ತು. ಇದೆಲ್ಲ ಸಾಮಾನ್ಯ ಎಂದು ಅಂದುಕೊಂಡವರೇ ಹೆಚ್ಚು. ಆದರೆ ಅವರೆಲ್ಲರೂ ಕತಾರ್ ನಲ್ಲಿ ಒಂದೇ ರಕ್ಷಣಾ ಸಂಬಂಧೀ ಕಂಪನಿಯಲ್ಲಿ ವೃತ್ತಿ ನಡೆಸುತ್ತಿದ್ದರು. ನಿಜವಾಗಿ ಹೇಳಬೇಕೆಂದರೆ, ಕತಾರ್ ಗುಪ್ತಚರ ಇಲಾಖೆಯು #Intelligence ಆಗಸ್ಟ್ 30, 2022ರ ರಾತ್ರಿ ಅವರನ್ನು ಬಂಧಿಸಿದ್ದು, ಕುಟುಂಬದ ಯಾರಿಗೂ ಚಿಕ್ಕ ಮಾಹಿತಿ ನೀಡಿರಲಿಲ್ಲ.
1. ನವತೇಜ್ ಸಿಂಗ್ ಗಿಲ್
2. ಸೌರಭ್ ವಶಿಷ್ಟ
3. ವೀರೇಂದ್ರ ಕುಮಾರ್ ವರ್ಮಾ
4. ಪೂರ್ಣೇಂದು ತಿವಾರಿ
5. ಸಂಜೀವ್ ಗುಪ್ತ
6. ಅಮಿತ್ ನಾಗಪಾಲ್
7. ಸುಗ್ನಾಕರ್ ಪಕಾಲಾ
8. ರಾಗೇಶ್ ಇವರು ಬಂಧಿತ ಭಾರತೀಯರಾಗಿದ್ದರು.
ಗೌಪ್ಯ ಬಂಧನವಾಗಿ ಬರೋಬ್ಬರಿ ಒಂದು ತಿಂಗಳ ನಂತರ ಬಂಧಿತರಿಗೆ ಕುಟುಂಬದ ಜೊತೆಗೆ ಮಾತನಾಡಲು ಅವಕಾಶ ನೀಡಲಾಯಿತು. ಅನಂತರದಲ್ಲಿ ಬಂಧನದ ವಿಷಯ ಹೊರ ಬಂದು ಅಕ್ಟೋಬರ್ 3, 2022ರಂದು ಭಾರತೀಯ ರಾಯಭಾರ ಅಧಿಕಾರಿಗಳು ಆರೋಪಿತರ ಭೇಟಿ ಮಾಡಿದರು.
ಭಾರತದೊಂದಿಗೆ ದ್ವಿಪಕ್ಷೀಯವಾಗಿ ಬಹಳ ಒಪ್ಪಂದಗಳ ಹೊಂದಿರುವ ಕತಾರ್’ನಿಂದ ಭಾರತ ಇಂತಹ ನಿರೀಕ್ಷೆ ಇಟ್ಟಿರಲಿಲ್ಲ. ಸರಿ, ಕಳೆದ ವರ್ಷದ ಡಿಸೆಂಬರ್ ಹೊತ್ತಿಗೆ ಮತ್ತೊಮ್ಮೆ ಅವರನ್ನು ಭೇಟಿಯಾದ ಭಾರತೀಯ ರಾಯಭಾರ ಅಧಿಕಾರಿಗಳು ಹೆಚ್ಚಿನ ಮಾಹಿತಿ ಪಡೆದರು.

ಮುಂದುವರಿದಂತೆ, ಬಂಧಿತರನ್ನು ಈ ವರ್ಷದ ಮಾರ್ಚ್ 29 ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಅಕ್ಟೋಬರ್ 03, 2023 ರಂದು ಏಳನೇ ಮತ್ತು ಅಂತಿಮ ಸುತ್ತಿನ ವಿಚಾರಣೆ ನಡೆಸಲಾಯಿತು. ಆಗ ಅಕ್ಟೋಬರ್ ಕೊನೆಯ ಹೊತ್ತಿಗೆ ತೀರ್ಪು ಬರಲಿದೆ ಎಂದು ಹೇಳಲಾಗಿತ್ತು. ಅಲ್ಲಿಯ ತನಕವೂ ಅಧಿಕೃತವಾಗಿ ಕತಾರ್ ಎಲ್ಲಿಯೂ ಭಾರತೀಯರ ತಪ್ಪು ಏನು ಎಂಬುದನ್ನು ಹೇಳಿರಲಿಲ್ಲ. ಅದು ಭಾರತೀಯ ಸರ್ಕಾರಕ್ಕೆ #IndianGovernment ಗೊತ್ತು ಎಂದಷ್ಟೇ ಹೇಳಿತ್ತು. ಹಾಗಾದರೆ ಅವರ ಕುಟುಂಬಗಳಿಗೂ ಗೊತ್ತಿರದ ಅವರ ಅಪರಾಧ ಆದರೂ ಏನು?ಇನ್ನುಳಿದಂತೆ, ಭಾರತೀಯ ವಿದೇಶಾಂಗ ಇಲಾಖೆ ಇದೊಂದು ಸೂಕ್ಷ್ಮ ವಿಷಯವಾಗಿದೆ ಮತ್ತು ಎಲ್ಲಾ ಎಂಟು ಭಾರತೀಯರ ಬಿಡುಗಡೆಗೆ ಪ್ರಯತ್ನ ನಡೆಯಲಿದೆ ಎಂದಿತ್ತು.
ಹೀಗಿರುವಾಗ, ದಿ ಟ್ರಿಬ್ಯೂನ್ ಪತ್ರಿಕೆ ಒಂದು ವರದಿ ಹರಿಯಬಿಟ್ಟಿತ್ತು. ಅದರಂತೆ ಈ ಬಂಧಿತರು ಕತಾರನಲ್ಲಿ ಕೆಲಸ ಮಾಡುತ್ತಾ, ಇಸ್ರೇಲ್ ಗಾಗಿ #Israel ಗೂಡಾಚಾರಿಕೆ ಮಾಡುತ್ತಿದ್ದಾರೆ ಎಂಬುದು. ಕತಾರ್ ಮತ್ತು ಇಸ್ರೇಲ್ ನಡುವೆ ಸಂಬಂಧ ಹಳಸಿಹೋಗಿ ದಶಕಗಳೇ ಕಳೆದಿದ್ದು, ಅದರ ಮಧ್ಯೆ ಈ ಸುದ್ದಿ ಭಾರತ #India ಮತ್ತು ಇಸ್ರೇಲ್ ನಂಟಿನ ತನಕ ಬಂದಿತ್ತು. ಅದಕ್ಕೂ ಮೊದಲು ಕತಾರ್ ಮತ್ತು ಭಾರತದ ಸಂಬಂಧ ನೋಡುವುದಾದರೆ, ಸುಮಾರು ಎಂಟು ಲಕ್ಷಕ್ಕೂ ಹೆಚ್ಚಿನ ಭಾರತೀಯರು ಇಂದಿಗೂ ಕತಾರ್ ನೆಲದಲ್ಲಿ ಬೆವರು ಹರಿಸುತ್ತ ದುಡಿಯುತ್ತಿದ್ದಾರೆ. ಅಷ್ಟಿಷ್ಟು ಅಲ್ಲ, ಹದಿನೈದು ಬಿಲಿಯನ್ ಡಾಲರ್ ಮೌಲ್ಯದ ಇಂಧನ ಸಂಬಂಧೀ ವಹಿವಾಟು ಭಾರತ ಮತ್ತು ಕತಾರ್ ನಡುವೆ ಇದೆ. 2008ರಲ್ಲಿ ಮೊದಲ ಬಾರಿಗೆ ದ್ವಿ ಪಕ್ಷೀಯ ಒಪ್ಪಂದವಾಗಿದ್ದು, ಅದು ಮರು ವಿಸ್ತರಣೆಗೊಂಡಿದೆ. ಅಲ್ಲದೇ ವೈಮಾನಿಕ, ರಕ್ಷಣಾ, ಇಂಧನ ಮತ್ತು ಆಹಾರ ಇನ್ನಿತರ ಸರಕು ಸೇವೆಗಳ ಅದಲು ಬದಲು ಆಗುತ್ತಲೇ ಇದೆ. ಇಂತಿಪ್ಪ ಕತಾರ್ ಒಂದೇ ಏಟಿಗೆ ಅಕ್ಟೋಬರ್ ಕೊನೆಯ ವಾರದಲ್ಲಿ ಈ ಭಾರತೀಯರಿಗೆ ಮರಣ ದಂಡನೆ ವಿಧಿಸಿಬಿಟ್ಟಿದೆ.

ಅಕ್ಟೋಬರ್ ತಿಂಗಳ ಕೊನೆ ಹೊತ್ತಿಗೆ ಮರಣ ದಂಡನೆ ತೀರ್ಪು ಹೊರ ಬಂದಾಗ, ಭಾರತದಲ್ಲೇ ಇದ್ದು ಬೇರೆಯವರ ಕಾಲ ಕೆಳಗೆ ನುಸಿಯುವ ಕೆಲ ಜೀವಿಗಳಿಗೆ ಎಲ್ಲಿಲ್ಲದ ಹುರುಪು ಬಂದಿತ್ತು. ಹೋ!! ಭಾರತದ ವಿದೇಶಾಂಗ ನೀತಿ ಇದೇನಾ? ಇಷ್ಟೇನಾ ಇವರ ಕೈಯಲ್ಲಿ ಮಾಡಲು ಸಾಧ್ಯವಾಗುವುದು? ಬಿಡಿ ಆ ಎಂಟು ಜನರ ಶವ ಭಾರತಕ್ಕೆ ಬಂದರೆ ಹೆಚ್ಚು ಅಂತೆಲ್ಲ ಹಾಹಾಕಾರ ಎದ್ದವು. ಅದಕ್ಕೆ ಸರಿಯಾಗಿ ವರದಿಗಳು ಸಾಗರೋಪಾದಿಯಲ್ಲಿ ಪತ್ರಿಕೆ, ನ್ಯೂಸ್ ಗಳಲ್ಲಿ ಹರಿದಾಡಿದವು. ಇದು ಇಸ್ರೇಲ್ ಜೊತೆಗೆ ನಿಂತಿದ್ದಕ್ಕೆ ಬಂದಿರುವ ಸಂಕಷ್ಟ, ಎಲ್ಲೋ ಒಬ್ಬ ಅಭಿನಂದನನನ್ನು ಕರೆದುಕೊಂಡು ಬಂದ ಮಾತ್ರಕ್ಕೆ ಏನು ಬಂತು? ಇದೆಲ್ಲಾ ಅದಾಗ ಹುಯಿಲು ಎಬ್ಬಿಸಿದವರು ಇನ್ನು ಮೂಲದ ತನಕ ತಲುಪಿರಲಿಲ್ಲ. ಅಲ್ಲಿ ಇಲ್ಲಿ ಸಿಕ್ಕ ಮಾಹಿತಿಯ ಚೂರುಗಳ ಜೋಡಿಸಿ ಒಂದು ಸುದ್ದಿ ತಂದು ಹಂಚಿದ್ದರು. ಅಷ್ಟು ಸರಳವಾಗಿ ಸಿಕ್ಕ ಅವಕಾಶ, ಒಂದೇ ಏಟಿಗೆ ಭಾರತದ ಸರ್ಕಾರ ಮತ್ತು ಆತ್ಮೀಯ ಇಸ್ರೇಲ್ ಹಳಿಯುವ ದುರಾವಕಾಶ. ಯಾಕಾದರೂ ಬಿಡುತ್ತಾರೆ?
ಇದೆಲ್ಲವನ್ನೂ ಒಂದೆಡೆ ಇಟ್ಟು, ಇನ್ನೊಂದು ಬದಿಯಿಂದ ನೋಡುವುದಾದರೆ ನಿಜವಾಗಿಯೂ ಪರವಾಲಂಬಿ ಕತಾರ್ ಇಷ್ಟು ದೊಡ್ಡ ಹೆಜ್ಜೆ ಇಡಲು ಕಾರಣವಾಗಿದ್ದು, #GST ಗುಪ್ತಚರ ನಿರ್ದೇಶನಾಲಯದ #DDGI – Directorate General of GST Intelligence ಕೆಲವು ದಾಳಿಗಳು. ಇದು ಇತಿಹಾದ್, ಅಮಿರೇಟ್, ಸೌದಿ ಏರ್ಲೈನ್ಸ್, ಓಮನ್ ಏರ್ಲೈನ್ಸ್, ಕುವೈಟ್, ಕತಾರ್ ಏರ್ವೇಸ್ ಕಚೇರಿಗಳ ಮೇಲೆ DDGI ತನಿಖೆ ಆರಂಭಿಸಿತು. ಇದರಿಂದ ಬಂದ ಸುದ್ದಿ ಏನೆಂದರೆ ಭಾರತದಲ್ಲಿ ಈ ವಿದೇಶೀ ವೈಮಾನಿಕ ಸಂಸ್ಥೆಗಳು ತೆರಿಗೆ ಸಂಬಂಧೀ ಅವ್ಯವಹಾರ ಮಾಡಿರುವುದು ಕಂಡು ಬಂದಿತ್ತು. ವಿಪರ್ಯಾಸ ಎಂದರೆ ಜಗತ್ತಿನ ಅನಂತ ತೈಲ ಮಾರುಕಟ್ಟೆಯಲ್ಲಿ ಸಿರಿವಂತ ದೇಶಗಳು ಎಂದೇ ಕರೆಸಿಕೊಳ್ಳುವ ಈ ದೇಶಗಳು ತೆರಿಗೆ ಕಳ್ಳತನದಲ್ಲಿ ತೊಡಗಿದ್ದವು.

ಹೀಗೆಲ್ಲಾ ಇರುವಾಗ, ಸರಿ ಅಲ್ಲಿಗೆ ಭಾರತ ಮತ್ತು ಕಳ್ಳ ಕತಾರ್ ಹೊಂದಾಣಿಕೆ ಮಾಡಿಕೊಂಡು ಈ ಅದಲು ಬದಲು ವ್ಯವಹಾರಕ್ಕೆ ತೊಡಗಬಹುದು ಎಂದುಕೊಂಡರೆ ಅದು ತಪ್ಪು. ಭಾರತಕ್ಕೆ ಅದರ ಅವಶ್ಯಕತೆ ಕೂಡ ಇಲ್ಲ. ಯಾಕೆಂದರೆ ಭಾರತೀಯ ಸರ್ಕಾರದ ಕಾನೂನಿನ ಪ್ರಕಾರ ಈಗ ಭಾರತ ಈ ಕಳ್ಳ ದೇಶಗಳ ಅಷ್ಟೂ ಭಾರತೀಯ ಕಛೇರಿ ಹಾಗೂ ವಿಮಾನಯಾನಗಳ ರದ್ದು ಮಾಡುವ ಅಧಿಕಾರ ಹೊಂದಿದೆ. ಅದರಿಂದ ದೊಡ್ಡ ಏಟು ಬೀಳುವುದು ಕತಾರ್ ನಂತಹ ಜಿಗಣೆಗೆ ಹೊರತು, ಭಾರತಕ್ಕಲ್ಲ. ಈಗಾಗಲೇ ಕತಾರ್ ಗೆ ಪರ್ಯಾಯವಾಗಿ ವೆನೆಜುವೆಲಾ ದೇಶವನ್ನು ಭಾರತದ ಕೇಂದ್ರ ಸರ್ಕಾರ ಆರಿಸಿದ್ದು, ಅದರೊಂದಿಗೆ ರಸ್ತೆ ನಿರ್ಮಾಣ, ರಫ್ತು ಮುಂತಾದ ದ್ವಿ ಪಕ್ಷೀಯ ಕಾರ್ಯಗಳಲ್ಲಿ ತೊಡಗಿದೆ. ಅಲ್ಲದೇ ಕತಾರನ್ನು ಹಮಾಸ್ ಇನ್ನಿತರ ಉಗ್ರ ಸಂಘಟನೆಗಳ ಪೋಷಕ ಎಂದು ಹೇಳುತ್ತಿರುವ ದೇಶಗಳ ಜೊತೆಗೆ ಭಾರತ ನಿಲ್ಲಬಹುದಾಗಿದೆ. ಇದೇನು ಕೈಗೆ ಎಟುಕದ ದ್ರಾಕ್ಷಿ ಹುಳಿ ಎನ್ನುವ ನರಿಯ ಮಾತಿನಂತಲ್ಲ. ಈ ಹಿಂದೆಯೇ ಕತಾರ್ ಮತ್ತು ಉಗ್ರ ಸಂಘಟನೆಗಳ ಈಡು ಜೋಡು ಎಲ್ಲೆಡೆ ಜಾಹೀರಾಗಿದೆ. 2014ರಲ್ಲಿ ಕತಾರ್ ದೇಶವು ಐಸಿಸ್ ಗೆ #ISIS ಹಣ ನೀಡಿದ ಆರೋಪ, 2020ರಲ್ಲಿ ಹಿಜ್ಬುಲ್ಲಾಗೆ ಆರ್ಥಿಕ ಸಹಾಯ ನೀಡಿದ ಆರೋಪ, 2021ರಲ್ಲಿ ಅಲ್ ನುಸ್ರ ಫ್ರಂಟ್ ಗೆ ಹಣ ನೀಡಿದ ಆರೋಪ ಇದಾಗಲೇ ಸಾಬೀತಾಗಿವೆ.
2020ರಲ್ಲಿ ತಾಲಿಬಾನ್ ಮತ್ತು ಅಮೇರಿಕಾ #America ನಡುವೆ ಹೊಂದಾಣಿಕೆದಾರನಾಗಿ ಕತಾರ್ ನಿಂತಿದ್ದು ಇಡೀ ಜಗತ್ತೇ ನೋಡಿದೆ. ನಿಮಗಿದು ತಿಳಿದಿರಲಿ ಕತಾರ್ ರಾಜಧಾನಿ ದೋಹಾದಲ್ಲಿ ತಾಲಿಬಾನ್ ರಾಜತಾಂತ್ರಿಕ ಕಾರ್ಯಾಲಯ ತೆರೆಯಲಾಗಿದೆ. ನಿವೃತ್ತ, ವೃದ್ಧ ಹಾಗೂ ಪ್ರಮುಖ ಉಗ್ರರ ದಂಡೇ ಕತಾರ್ ಅಂಗಳದಲ್ಲಿ ಬೀಡು ಬಿಟ್ಟಿದೆ. ಕತಾರ್ ದೇಶವನ್ನು ಹೆಡೆಮುರಿ ಕಟ್ಟುವ ಕೇಂದ್ರ ಸರ್ಕಾರದ ಪ್ರಯತ್ನ ಅದರ ಆಪ್ತ ಮಿತ್ರ ಅಮೇರಿಕಾವನ್ನು ಬಿಗಿ ಮಾಡುವ ಮೂಲಕ ಆರಂಭವಾಗಿದೆ. ಈಗ ಅದರ ಫಲವಾಗಿ ಕತಾರ್ ತಾನು ಭಾರತದ ಮನವಿ ಪುರಸ್ಕರಿಸಿದ್ದೇನೆ ಎಂದು ಹೇಳಿದೆ. ಏನೇ ಆದರೂ ಕತಾರನ ಜುಟ್ಟು ಭಾರತವೆಂಬೊ ಕರ್ತಾರನ ಕೈಯಲ್ಲೇ ಇದೆ ಎಂಬುದೇ ಸತ್ಯ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post