ಮಂಗಳೂರು: ಉರಿ ಸೆಕ್ಟರ್ ಹಾಗೂ ಪುಲ್ವಾಮಾದಲ್ಲಿ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರ ನಡೆಸಿದ ಎರಡು ಸರ್ಜಿಕಲ್ ಸ್ಟ್ರೈಕ್ ಹಿನ್ನೆಲೆಯಲ್ಲೇ ಮೂರನೆಯ ಸ್ಟೈಕ್ ನಡೆಯಲಿದೆಯೇ ಎಂಬ ಪ್ರಶ್ನೆಗಳನ್ನು ಸ್ವತಃ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹುಟ್ಟು ಹಾಕಿದ್ದಾರೆ.
ಮಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಉರಿ, ಬಾಲಕೋಟ್ ಸೇರಿದಂತೆ ಮೂರು ಬಾರಿ ಗಡಿ ದಾಟಿ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದೆ. ಉರಿ, ಬಾಲಕೋಟ್ ಬಗ್ಗೆ ನಿಮಗೆಲ್ಲಾ ಗೊತ್ತಿದೆ ಆದರೆ ಮೂರನೇ ಸ್ಟ್ರೈಕ್ ಬಗ್ಗೆ ನಾನು ಹೇಳಲಾರೆ ಎಂದು ತೀವ್ರ ಕುತೂಹಲ ಮೂಡಿಸಿದ್ದಾರೆ.
ಇಂದು ಭಾರತ ಸದೃಢವಾಗಿದ್ದು, ಎಲ್ಲ ವಿರೋಧಿಗಳಿಗೆ ತಕ್ಕ ಉತ್ತರವನ್ನು ನೀಡುತ್ತಿದೆ. ನಾವು ಯಾರ ತಂಟೆಗೂ ಹೋಗಲ್ಲ. ಒಂದು ವೇಳೆ ನಮ್ಮ ತಂಟೆಗೆ ಯಾರದರೂ ಬಂದರೆ ಸುಮ್ಮನೆ ಬಿಡಲ್ಲ ಎಂಬ ನಿಯಮ ನಮ್ಮಲ್ಲಿದೆ. ಈಗಾಗಲೇ ಅಂತವರಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿದ್ದೇವೆ ಎಂದರು.
ಇನ್ನು, ಭಾರತ ವೈಮಾನಿಕ ದಾಳಿ ನಡೆಸುವ ಮೂಲಕ ಪಾಕಿಸ್ಥಾನಕ್ಕೆ ಕಠಿಣ ಸಂದೇಶ ರವಾನಿಸಿದೆ. ಆದರೆ ಕೆಲವು ಪಕ್ಷಗಳು ಈ ದಾಳಿಯನ್ನು ಅನುಮಾನದಿಂದ ನೋಡುತ್ತಿದ್ದು, ಹತರಾದ ಉಗ್ರ ಸಂಖ್ಯೆಯ ಬಗ್ಗೆ ಸಾಕ್ಷ್ಯ ಕೇಳುತ್ತಿವೆ. ಅವರಿಗೆ ಹತ್ಯೆಯಾದ ಉಗ್ರರ ಸಂಖ್ಯೆ ಬೇಕು. ಆದರೆ ಶೌರ್ಯವಂತರು ಮೃತ ದೇಹಗಳನ್ನು ಲೆಕ್ಕ ಹಾಕುವುದಿಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಕಿಡಿ ಕಾರಿದರು.
Discussion about this post