ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಸಂತ್ರಸ್ತರ ಆಕ್ರಂದನ ಮುಗಿಲು ಮುಟ್ಟಿದ್ದು, ಶ್ರೀಮಠದ ಶಿಷ್ಯರು, ಭಕ್ತರು ಹಾಗೂ ಅಭಿಮಾನಿಗಳು ರಕ್ಷಣಾ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀಮಹಾ ಸ್ವಾಮೀಜಿ ಕರೆ ನೀಡಿದ್ದಾರೆ.
ಇದು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಕ್ಕೆ ಧುಮುಕಬೇಕಾದ ಸಮಯ; ನೊಂದವರ ಬದುಕನ್ನು ಕಟ್ಟಿಕೊಡಲು, ನಮ್ಮ ಸಂಪಾದನೆಯ ಒಂದಿಷ್ಟು ಮೊತ್ತವನ್ನು ಸಮರ್ಪಿಸಬೇಕಾದ ಹೊತ್ತು. ಆದ್ದರಿಂದ ಶ್ರೀಮಠದ ಶಿಷ್ಯಭಕ್ತರೆಲ್ಲರೂ ತಮ್ಮಲ್ಲಿರುವುದನ್ನು ಸಮರ್ಪಿಸಿ ಮಾನವೀಯತೆ ಮೆರೆಯಬೇಕು ಎಂದು ಶಿಷ್ಯಕೋಟಿಗೆ ಕರೆ ನೀಡಿದ್ದಾರೆ.
ಸಂಕಷ್ಟಕ್ಕೆ ಒಳಗಾದವರಿಗೆ ಸಾಂತ್ವನ ಹೇಳುವ ಮೂಲಕ ನಿಮ್ಮೊಂದಿಗೆ ನಾವೆಲ್ಲ ಇದ್ದೇವೆ ಎಂಬ ಭರವಸೆ ನೀಡೋಣ. ಅವರು ಮತ್ತೆ ನಲಿವಿನ ಬೆಳಕು ಕಾಣುವಂತೆ ಮಾಡೋಣ ಎಂದು ಆಶಿಸಿದ್ದಾರೆ.
ಪ್ರಕೃತಿ ಮುನಿದಿದ್ದಾಳೆ. ಅವರ ರೌದ್ರ ನರ್ತನಕ್ಕೆ ಜೀವಸಂಕುಲ ನಲುಗಿದೆ. ಸಹಜೀವಿಗಳು ಬದುಕು ಕಳೆದುಕೊಂಡು ದಿಕ್ಕು ಕಾಣದಾಗಿದ್ದಾರೆ. ಬೆಳೆದ ಬೆಳೆ ನೀರುಪಾಲಾಗಿದೆ. ಎಷ್ಟೋ ಮನೆಗಳು ಕೊಚ್ಚಿಕೊಂಡು ಹೋಗಿವೆ. ಜೀವನಾವಶ್ಯಕ ವಸ್ತುಗಳು ತೇಲಿ ಹೋಗಿವೆ. ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳಲಾಗಿಲ್ಲ. ಕೆಲವೆಡೆ ಪ್ರಾಣಾಪಾಯವೂ ಆಗಿದೆ. ಮೂಲಭೂತ ವ್ಯವಸ್ಥೆಗಳು ಸಂಪೂರ್ಣ ನೆಲಗಚ್ಚಿವೆ. ನಮ್ಮ ಜನ ಕರುಣಾಮಯ ಯಾತನೆಗೆ ಗುರಿಯಾಗಿದ್ದಾರೆ ಎಂದು ಭಾವನೆ ವ್ಯಕ್ತಪಡಿಸಿದ್ದಾರೆ.
Discussion about this post