ಕಲ್ಪ ಮೀಡಿಯಾ ಹೌಸ್ | ಕೊಲಂಬಿಯಾ |
ಜವಾಬ್ದಾರಿಯುತ ಲೋಕಸಭೆ ಪ್ರತಿಪಕ್ಷ ನಾಯಕನ ಹುದ್ದೆಯಲ್ಲಿರುವ ರಾಹುಲ್ ಗಾಂಧಿ (Rahul Gandhi) ಅವರು ವಿದೇಶಿ ನೆಲೆದಲ್ಲಿ ಕುಳಿತು ಭಾರತದ ಆರ್ಥಿಕತೆ (Indian Ecenomy) ಕುರಿತಾಗಿ ಟೀಕೆ ವ್ಯಕ್ತಪಡಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ಭಾರತದ ಆರ್ಥಿಕತೆ, ನಿರುದ್ಯೋಗ, ಶಿಕ್ಷಣ ವ್ಯವಸ್ಥೆ ಹಾಗೂ ಚುನಾವಣಾ ಪ್ರಕ್ರಿಯೆಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.
ಭಾರತವು ಭಾರೀ ಆರ್ಥಿಕ ಸಂಕಷ್ಟದತ್ತ ಸಾಗುತ್ತಿದೆ ಎಂದು ಹೇಳಿರುವ ಅವರು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗಿದ್ದು, ಶಿಕ್ಷಣ ವ್ಯವಸ್ಥೆಯಲ್ಲೂ ಹಲವು ಮೂಲಭೂತ ಸಮಸ್ಯೆಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ತಮ್ಮ `ವೋಟ್ ಚೋರಿ’ ಆರೋಪವನ್ನು ಪುನರುಚ್ಚರಿಸಿ ಚುನಾವಣಾ ಆಯೋಗದ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.
ಇನ್ನು, ರಾಹುಲ್ ಗಾಂಧಿಯ ಈ ಹೇಳಿಕೆಗಳು ಬಿಜೆಪಿ ನಾಯಕರ ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿದ್ದು, ವಿದೇಶಿ ನೆಲದಲ್ಲಿ ಭಾರತದ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆಡಳಿತ ಪಕ್ಷ ಆರೋಪಿಸಿದೆ.
ಭಾರತದ ಆರ್ಥಿಕತೆ ವಿಪತ್ತಿನ ತುದಿಯಲ್ಲಿದೆ
ದೇಶದಲ್ಲಿ ನಿರುದ್ಯೋಗ ಸಮಸ್ಯೆ ವ್ಯಾಪಕವಾಗಿದೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಯುವಜನರ ಭವಿಷ್ಯವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿವೆ ಎಂದು ಹೇಳಿದರು.
ಭಾರತ ಆರ್ಥಿಕ ವಿಪತ್ತಿನ ಅಂಚಿನಲ್ಲಿದೆ. ಅದೇ ವಾಸ್ತವ. ಇದನ್ನು ಯಾರಾದರೂ ನಿರ್ಲಕ್ಷಿಸಬಹುದು, ಮಾಧ್ಯಮಗಳು ಕೂಡ ಮುಚ್ಚಿಹಾಕಬಹುದು. ಆದರೆ ಭಾರತದಲ್ಲಿ ಭಾರೀ ನಿರುದ್ಯೋಗ ಸಮಸ್ಯೆ ಇದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ದೊಡ್ಡ ಸಮಸ್ಯೆಗಳಿವೆ ಎಂದಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ ಕುರಿತು ಹೊರಬರುತ್ತಿರುವ ಅಂಕಿಅಂಶಗಳು ಮತ್ತು ಸಾರ್ವಜನಿಕ ಚರ್ಚೆಗಳ ನಡುವೆಯೂ ನಿರುದ್ಯೋಗದ ವಾಸ್ತವ ಸಮಸ್ಯೆಯನ್ನು ಕಡೆಗಣಿಸಲಾಗುತ್ತಿದೆ ಎಂಬುದು ಅವರ ಮಾತಿನ ಸಾರವಾಗಿತ್ತು.
Rahul Gandhi : ಯುವಜನರಲ್ಲಿ ಭವಿಷ್ಯದ ಬಗ್ಗೆ ಆತಂಕ
ಸಂವಾದದ ನಿರೂಪಕಿ ಲಿಡಿಯಾ ಪೋಲ್ಗೆನ್ ಭಾರತದ ಯುವಜನರ ಕುರಿತು ಪ್ರಶ್ನಿಸಿದಾಗ ಉತ್ತರಿಸಿದ ರಾಹುಲ್ ಗಾಂಧಿ, ಇಂದಿನ ಪರಿಸ್ಥಿತಿಯಿಂದ ಅಸಮಾಧಾನ ವ್ಯಕ್ತಪಡಿಸುತ್ತಿರುವ ಯುವಜನರಲ್ಲಿ ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರು ಹಾಗೂ ಔಪಚಾರಿಕ ಶಿಕ್ಷಣ ಪಡೆದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದರು.
ಯುವಜನರ ಅಸಮಾಧಾನಕ್ಕೆ ಕೇವಲ ಉದ್ಯೋಗದ ಕೊರತೆಯೇ ಕಾರಣವಲ್ಲ; ತಮ್ಮ ಜೀವನದಲ್ಲಿ ಮುಂದೆ ಸಾಗಲು ಅವಕಾಶಗಳಿಲ್ಲ, ಭವಿಷ್ಯದ ಬಗ್ಗೆ ಸ್ಪಷ್ಟ ಭರವಸೆ ಕಾಣುತ್ತಿಲ್ಲ ಎಂಬ ಭಾವನೆಯೂ ಪ್ರಮುಖ ಕಾರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಉತ್ತಮ ಶಿಕ್ಷಣ ಪಡೆದಿದ್ದರೂ ತಮ್ಮ ಸಾಮರ್ಥ್ಯಕ್ಕೆ ತಕ್ಕ ಉದ್ಯೋಗ ಹಾಗೂ ಜೀವನದ ಅವಕಾಶಗಳು ಸಿಗದಿರುವುದು ಯುವಜನರಲ್ಲಿ ನಿರಾಶೆ ಮೂಡಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ತೀವ್ರ ಆಕ್ರೋಶ
ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿದೇಶಿ ನೆಲದಲ್ಲಿ ಭಾರತದ ಆರ್ಥಿಕತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ದೇಶದ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತಂತೆ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಮಾತನಾಡಿದ್ದು, ರಾಹುಲ್ ಗಾಂಧಿ ಅವರನ್ನು ‘ಭಾರತ ವಿರೋಧಿ ಪ್ರಚಾರದ ನಾಯಕ’. ಅವರು ವಿದೇಶಗಳಿಗೆ ತೆರಳಿ ಭಾರತದ ವಿರುದ್ಧ ಮಾತನಾಡುವ ಅಭ್ಯಾಸ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅಸಹ್ಯಕರ ಹೇಳಿಕೆಗಳನ್ನು ನೀಡುವ ಮೂಲಕ ದೇಶಕ್ಕೆ ಅಪಮಾನ ಮಾಡುತ್ತಿದ್ದಾರೆ. ಇಂತಹ ಅಪಕ್ವ ಹಾಗೂ ಬೇಜವಾಬ್ದಾರಿಯುತ ಪ್ರತಿಪಕ್ಷದ ನಾಯಕ ಭಾರತದಲ್ಲಿರುವುದು ದುರದೃಷ್ಟಕರ ಎಂದು ಗೌರವ್ ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೆ, ರಾಹುಲ್ ಗಾಂಧಿ ಅವರನ್ನು ‘ಹ್ಯಬಿಚುವಲ್ ಆಫೆಂಡರ್’ (ಪದೇಪದೇ ತಪ್ಪು ಮಾಡುವ ವ್ಯಕ್ತಿ) ಹಾಗೂ ‘ಅರಾಜಕತಾವಾದಿ’ ಎಂದು ಕರೆದಿರುವ ಬಿಜೆಪಿ, ವಿದೇಶಗಳಲ್ಲಿ ಭಾರತವನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
ವೋಟ್ ಚೋರಿ ಆರೋಪ ಮತ್ತೆ ಪ್ರಸ್ತಾಪ
ಕೊಲಂಬಿಯಾ ವಿಶ್ವವಿದ್ಯಾಲಯದ ಸಂವಾದದಲ್ಲಿ ರಾಹುಲ್ ಗಾಂಧಿ ತಮ್ಮ ಹಿಂದಿನ ‘ವೋಟ್ ಚೋರಿ’ ಆರೋಪವನ್ನೂ ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ತಮ್ಮ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿ ಟೀಕಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ, ಮತದಾರರ ಹಕ್ಕುಗಳು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿರುವ ಅವರು, ಚುನಾವಣಾ ಆಯೋಗದ ಪಾತ್ರದ ಕುರಿತು ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಈ ಆರೋಪಗಳಿಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿ ರಾಜಕೀಯ ಉದ್ದೇಶದಿಂದ ದೇಶದ ಚುನಾವಣಾ ವ್ಯವಸ್ಥೆಯ ಬಗ್ಗೆ ಅನುಮಾನ ಮೂಡಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.
ಭಾರತದ ಆರ್ಥಿಕತೆಯನ್ನು ‘ವಿಪತ್ತು’ ಎಂದು ರಾಹುಲ್ ಗಾಂಧಿ ಬಣ್ಣಿಸಿರುವುದಕ್ಕೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಯ ದರ, ಜಾಗತಿಕ ಸಂಸ್ಥೆಗಳ ರೇಟಿಂಗ್ ಹಾಗೂ ದೇಶದ ಆರ್ಥಿಕ ಪ್ರಗತಿಯನ್ನು ಉಲ್ಲೇಖಿಸಿ, ಭಾರತ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಬಿಜೆಪಿ ಪ್ರತಿಪಾದಿಸಿದೆ.
ಬಿಜೆಪಿ ನಾಯಕ ಭಂಡಾರಿ, ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವುದಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುತ್ತಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ದೇಶವನ್ನು ‘ಆರ್ಥಿಕ ವಿಪತ್ತು’ ಎಂದು ಕರೆಯುತ್ತಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಅಧಿಕಾರದ ಹಸಿವು : ದಿಲೀಪ್ ಘೋಷ್
ಇನ್ನು, ಈ ಕುರಿತಂತೆ ಮಾತನಾಡಿರುವ ಪಶ್ಚಿಮ ಬಂಗಾಳದ ಸಚಿವ ದಿಲೀಪ್ ಘೋಷ್, ರಾಹುಲ್ ಗಾಂಧಿ ಅಧಿಕಾರದ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಟೀಕಿಸಿರುವ ಅವರು, ಭಾರತದಲ್ಲಿ ಯಾರೂ ಅವರ ಮಾತುಗಳನ್ನು ಕೇಳುತ್ತಿಲ್ಲ ಎಂಬ ಕಾರಣಕ್ಕೆ ವಿದೇಶಗಳಲ್ಲಿ ಹೋಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕುರುಡನಿಗೆ ಹಗಲಿನಲ್ಲೂ ಕತ್ತಲೆಯೇ ಕಾಣುತ್ತದೆ. ಇಂದು ಭಾರತದ ಜಿಡಿಪಿ ವಿಶ್ವಕ್ಕೆ ಮಾದರಿಯಾಗಿದೆ. ದೇಶದ ವಿದೇಶಿ ವಿನಿಮಯ ಮೀಸಲು ಕೂಡ ದಾಖಲೆಯ ಮಟ್ಟದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಸುರಕ್ಷಿತವಾಗಿದೆ, ಕಳೆದ 12 ವರ್ಷಗಳಿಂದ ಜನರು ಸಂತೋಷದಿAದ ಇದ್ದಾರೆ. ಅಧಿಕಾರದ ಹಸಿವು ಇರುವವರಿಗೆ ಮಾತ್ರ ಅಸಮಾಧಾನ. ಇಲ್ಲಿ ಯಾರೂ ಅವರ ಮಾತು ಕೇಳದ ಕಾರಣ ವಿದೇಶಕ್ಕೆ ತೆರಳಿ ಮಾತನಾಡುತ್ತಿದ್ದಾರೆ, ಎಂದು ದಿಲೀಪ್ ಘೋಷ್ ಹೇಳಿದ್ದಾರೆ.
ರಾಜಕೀಯ ವಾಕ್ಸಮರ ತೀವ್ರ
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳು ಭಾರತದ ಆರ್ಥಿಕತೆ, ನಿರುದ್ಯೋಗ, ಶಿಕ್ಷಣ ವ್ಯವಸ್ಥೆ ಮತ್ತು ಚುನಾವಣಾ ಪ್ರಕ್ರಿಯೆ ಕುರಿತ ರಾಜಕೀಯ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿವೆ. ದೇಶದ ವಾಸ್ತವ ಸಮಸ್ಯೆಗಳನ್ನು ವಿದೇಶಿ ವೇದಿಕೆಯಲ್ಲಿ ಪ್ರಸ್ತಾಪಿಸುವುದು ವಿರೋಧ ಪಕ್ಷದ ಜವಾಬ್ದಾರಿಯ ಭಾಗವೇ ಅಥವಾ ಭಾರತದ ಘನತೆಗೆ ಧಕ್ಕೆ ತರುವ ರಾಜಕೀಯ ನಡೆವೇ ಎಂಬ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ದಾಳಿ ಮುಂದುವರಿದಿದೆ.
ರಾಹುಲ್ ಗಾಂಧಿ ದೇಶದ ಆರ್ಥಿಕ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನು ಎತ್ತಿದ್ದರೆ, ಬಿಜೆಪಿ ನಾಯಕರು ಭಾರತದ ಅಭಿವೃದ್ಧಿ, ಆರ್ಥಿಕ ಬೆಳವಣಿಗೆ ಮತ್ತು ಪ್ರಧಾನಿ ಮೋದಿ ನಾಯಕತ್ವವನ್ನು ಮುಂದಿಟ್ಟು ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ. ಈ ಬೆಳವಣಿಗೆ ಇದೀಗ ರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ವೇದಿಕೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








