ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಾದ್ಯಂತ ರೈಲ್ವೆ ಹಳಿ ದಾಟುವ ಜನರಿಗೆ ಜೀವದಾಯಿ ಪರ್ಯಾಯವಾಗಿ ಕೇವಲ 12 ಗಂಟೆಗಳ ಅವಧಿಯಲ್ಲಿ ಕಿರು ಸೇತುವೆ ನಿರ್ಮಾಣ ಮಾಡುವ ವಿನ್ಯಾಸ ಮಾಡಿ, ಜಾರಿಗೆ ತರಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ #AshwiniVaishnaw ಹೇಳಿದ್ದಾರೆ.
ಈ ಕುರಿತಂತೆ ಹಳಿ ದಾಟುವ ಜನರಿಗೆ ಒಂದು ಜೀವದಾಯಿ ಪರ್ಯಾಯವಾಗಿ ಹೊರಹೊಮ್ಮುವಂತಹ ಅನುಕೂಲಕರ ರೈಲ್ವೆ ಕಿರುಸೇತುವೆಯನ್ನು ರೂಪಿಸಲು ರೈಲ್ವೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಕಿರುಸೇತುವೆಗಳನ್ನು ನಿರ್ಮಿಸುವಾಗ ಸಾಮಾನ್ಯ ಮನುಷ್ಯನು ತನ್ನೊಂದಿಗೆ ಸೈಕಲ್, ಮೋಟಾರು ಸೈಕಲ್ ಮತ್ತು ಕೆಲಸಕ್ಕೆ ಸಂಬಂಧಿಸಿದ ಇತರ ವಸ್ತುಗಳನ್ನು ಕೊಂಡೊಯ್ಯಲು ಸಾಧ್ಯವಾಗುವಂತೆ ಗಮನ ಹರಿಸಲಾಗುವುದು. ಇದರಿಂದ ದೇಶದಾದ್ಯಂತ ಹಳಿ ದಾಟುವಾಗ ಸಂಭವಿಸುವ ಅಪಘಾತಗಳಿಗೆ ತಡೆ ಬೀಳಲಿದೆ. ದೇಶದ ದೊಡ್ಡ ಜನಸಂಖ್ಯೆಗೆ ಭಾರತೀಯ ರೈಲ್ವೆಯ #IndianRailway ಈ ಕಿರುಸೇತುವೆಗಳು ವರದಾನವಾಗಲಿವೆ.
ಸುಗಮ ಮತ್ತು ಸುರಕ್ಷಿತ ವಿನ್ಯಾಸ
ದೇಶದ ಈ ದೊಡ್ಡ ಸಮಸ್ಯೆಯಿಂದ ಮುಂದಿನ 5-6 ವರ್ಷಗಳಲ್ಲಿ ಮುಕ್ತಿ ನೀಡುವಂತೆ ರೈಲ್ವೆ ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಹಳಿಗಳ ಅಡಿಯಲ್ಲಿ ಕೇವಲ 12 ಗಂಟೆಗಳಲ್ಲಿ ನಿರ್ಮಾಣ ಪೂರ್ಣಗೊಳ್ಳುವ ರೀತಿಯಲ್ಲಿ ಈ ಕಿರುಸೇತುವೆಗಳನ್ನು ವಿನ್ಯಾಸಗೊಳಿಸಲಾಗುವುದು.
ಜನರು ಇದನ್ನು ಬಳಸಲು ಯಾವುದೇ ಹಿಂಜರಿಕೆ ಪಡದಂತೆ ವಿನ್ಯಾಸವಿರಲಿ. ನೀರಿನ ಹರಿವು ಅಥವಾ ನೀರು ನಿಲ್ಲುವಿಕೆಯಿಂದ ಈ ಕಿರುಸೇತುವೆಗಳಿಗೆ ತೊಂದರೆಯಾಗಬಾರದು ಎಂದಿದ್ದಾರೆ ಸಚಿವರು.
ರೈಲ್ವೆ ಹಳಿ ದಾಟುವಾಗ ಸಂಭವಿಸುವ ಅಪಘಾತಗಳನ್ನು ರೈಲ್ವೆ ಇಲಾಖೆಯು ಈಗ ‘ಮಿಷನ್ ಮೋಡ್’ನಲ್ಲಿ ತಡೆಯಲಿದೆ. ಅನುಕೂಲಕರ ಕಿರುಸೇತುವೆಗಳನ್ನು ನಿರ್ಮಿಸುವ ಮೂಲಕ ಇದನ್ನು ಖಚಿತಪಡಿಸಿಕೊಳ್ಳಲಾಗುವುದು. ಇದರ ಸಮಗ್ರ ಸಿದ್ಧತೆಯ ಅಂಗವಾಗಿ, ರೈಲ್ವೆ ಸಚಿವ ಅಶ್ವಿನಿ ವೈಷವ್ ಅವರು ಇಂದು ನವದೆಹಲಿಯಲ್ಲಿ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಕಾರ್ಯಾಗಾರ ನಡೆಸಿದರು.
ರೈಲ್ವೆ ಹಳಿಯ ಒಂದು ಬದಿಯಲ್ಲಿ ಜನವಸತಿ ಪ್ರದೇಶವಿದ್ದು, ಮತ್ತೊಂದು ಬದಿಯಲ್ಲಿ ಹೊಲಗಳು, ಶಾಲೆಗಳು, ಸ್ಮಶಾನಗಳು ಅಥವಾ ಇತರ ಉಪಯುಕ್ತ ಮತ್ತು ಪ್ರಮುಖ ಸ್ಥಳಗಳಿರುವ ಕಡೆಗಳಲ್ಲಿ ಈ ರೈಲ್ವೆ ಕಿರುಸೇತುವೆಗಳನ್ನು ನಿರ್ಮಿಸಲಾಗುವುದು. ದಿನನಿತ್ಯದ ಜೀವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಳಿಗಳನ್ನು ದಾಟುವ ಅಂತಹ ಸ್ಥಳಗಳನ್ನು ಗುರುತಿಸಿ ದೇಶಾದ್ಯಂತ ಕಿರುಸೇತುವೆಗಳನ್ನು ನಿರ್ಮಿಸಲು ರೈಲ್ವೆ ಸಚಿವರು ಸೂಚಿಸಿದ್ದಾರೆ.
ರೈಲ್ವೆ ಕಿರುಸೇತುವೆ ನಿರ್ಮಿಸುವ ಈ ಪ್ರಮುಖ ನಿರ್ಧಾರವು ಕಳೆದ ಕೆಲವು ದಿನಗಳಿಂದ ಅಧಿಕಾರಿಗಳೊಂದಿಗೆ ನಡೆದ ಸತತ ಸಮಾಲೋಚನೆಯ ಫಲವಾಗಿದೆ. ವ್ಯವಸ್ಥೆಯು ಸಂವೇದನಾಶೀಲವಾಗಿರಬೇಕು ಮತ್ತು ಸಾಮಾನ್ಯ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಮುಂಬರುವ ಹಲವು ದಶಕಗಳವರೆಗೆ ಪರಿಣಾಮಕಾರಿಯಾಗಿರುವಂತಹ ಪರಿಹಾರವನ್ನು ಕಂಡುಹಿಡಿಯಬೇಕು ಎಂಬುದು ರೈಲ್ವೆ ಸಚಿವರ ಆಶಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















