ಚನ್ನಪಟ್ಟಣ: ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ಪಟ್ಟಣದ ಬೀಡಿ ಕಾಲೋನಿ ಹಾಗೂ ಎಪಿಎಂಸಿ ಕ್ವಾರ್ಟಸ್‌ನ ಮನೆಗಳಿಗೆ ನೀರು ನುಗ್ಗಿದ್ದು, ಸ್ಥಳಕ್ಕೆ ಟೆಕ್ಕೀಸ್ ಟೀಂ ಅಧ್ಯಕ್ಷೆ, ಕಾಂಗ್ರೆಸ್ ಯುವ ಮುಖಂಡರಾದ ಆರ್. ನವ್ಯಶ್ರೀ ಅವರು ಭೇಟಿ ನೀಡಿ, ಸಂತ್ರಸ್ಥರ ಸಮಸ್ಯೆ ಆಲಿಸಿ ಸ್ಥಳೀಯ ಶಾಸಕರಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಂತ್ರಸ್ಥರ ಪರವಾಗಿ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಿದರು.
ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿಬಾರಿ ಮಳೆ ಸುರಿದಾಗ ಸಂತ್ರಸ್ತರಾಗುತ್ತಿರುವವರು ಬೀಡಿ ಕಾಲೋನಿ ಹಾಗೂ ಆರ್’ಎಂಸಿ ಕ್ವಾರ್ಟಸ್ ನಿವಾಸಿಗಳು. ಕಳೆದ ಹದಿನೈದು ವರ್ಷಗಳಿಂದಲೂ ಇಲ್ಲಿನ ನಿವಾಸಿಗಳು ಸಮಸ್ಯೆ ಎದುರಿಸುತ್ತಲೇ ಬದುಕು ಸಾಗಿಸುತ್ತಿದ್ದಾರೆ, ಅವರಿಗೆ ಶಾಶ್ವತ ಪರಿಹಾರ ಎಂಬುದು ಮಾತ್ರ ಮರೀಚಿಕೆಯಾಗಿದೆ. ಹಾಗಾಗಿ ಶಾಶ್ವತವಾಗಿ ಸಮಸ್ಯೆ ಪರಿಹರಿಸಿ ಅನುಕೂಲ ಮಾಡಿಕೊಡುವಂತೆ ಅವರು ಕೋರಿದರು.
ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಅವರು, ಇಲ್ಲಿನ ಜನತೆ ಮೂಲಭೂತ ಸೌಲಭ್ಯಗಳಿಂದ ಜನತೆ ವಂಚಿತರಾಗಿದ್ದಾರೆ. ಮಣ್ಣಿನ ರಸ್ತೆಗಳು, ಕಸದ ಹಾವಳಿ, ಎಲ್ಲೆಂದರಲ್ಲಿ ನಿಂತು ಗಬ್ಬುನಾರುವ ನೀರು, ಚರಂಡಿಗಳನ್ನು ಸ್ವಚ್ಚಗೊಳಿಸದ ಪರಿಣಾಮ ಕೊಳೆತು ಸಾಂಕ್ರಾಮಿಕ ರೋಗ ಹರಡುತ್ತಿರುವುದು ನಿರಂತರವಾಗಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಪ್ರತಿಬಾರಿ ಮಳೆ ಬಂದಾಗ ಇದೇ ಸಮಸ್ಯೆ ಎದುರಾಗುತ್ತದೆ ಹಾಗಾಗಿ ಶೀಘ್ರ ಶಾಶ್ವತ ಪರಿಹಾರ ಕಲ್ಪಿಡಬೇಕೆಂದು ಅವರು ಕೋರಿದರು.
ಈ ಸಂದರ್ಭದಲ್ಲಿ ಸಂತ್ರಸ್ಥರು, ನಿವಾಸಿಗಳು ಉಪಸ್ಥಿತರಿದ್ದರು.
Discussion about this post