ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದಲ್ಲಿ ಹಿಂದೂಗಳು ಒಗ್ಗಟ್ಟಾಗಿದ್ದರೆ ಸಾಧನೆ ಸಾಧ್ಯ ಎಂಬುದಕ್ಕೆ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿರುವುದೇ ಸಾಕ್ಷಿಯಾಗಿದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಹೇಳಿದರು.
ಶ್ರೀ ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸದ ಅಂಗವಾಗಿ ಪಟ್ಟಣದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷದ್-ಭಜರಂಗದಳ, ಶ್ರೀ ರಾಮ ಮಂದಿರ ಶಿಲಾನ್ಯಾಸ ಉತ್ಸವ ಆಚರಣಾ ಸಮಿತಿ, ಯುವಾ ಬ್ರಿಗೇಡ್ ವಿವಿಧ ಹಿಂದೂ ಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಶ್ರೀ ರಾಮ ತಾರಕ ಹವನ ಹಾಗೂ ಕರ ಸೇವಕರಿಗೆ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನೂರಾರು ವರ್ಷಗಳ ಹೋರಾಟದ ಫಲವಾಗಿ ಆಯೋಧ್ಯೆಯ ಪುಣ್ಯ ಭೂಮಿಯಲ್ಲಿ ಶ್ರೀ ರಾಮ ಮಂದಿರದ ಭವ್ಯ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿರುವುದು ದೇಶ ವಾಸಿಗಳೆಲ್ಲರೂ ಸಂತೋಷ ಪಡುವ ವಿಚಾರವಾಗಿದೆ. ಹಿಂದುತ್ವದ ಬಲಿಷ್ಟತೆಗೆ ಸಾಧು-ಸಂತರು ಹಾಗೂ ಋಷಿ ಮುನಿಗಳ ಕೊಡುಗೆ ಸಾಕಷ್ಟಿದೆ. ಅನೇಕ ಪರಕೀಯರ ದಾಳಿಯ ನಡುವೆಯೂ ಹೋಮ-ಹವನ, ಜಪ-ತಪಗಳು, ಸಂಸ್ಕೃತಿಯ ಪರಿಣಾಮವಾಗಿ ಭಾರತದಲ್ಲಿ ಹಿಂದು ಧರ್ಮ ತನ್ನ ಅಸ್ವಿತ್ವವನ್ನು ಉಳಿಸಿಕೊಂಡಿದ್ದು, ಮುಂದೆಯೂ ಉಳಿಸಿಕೊಳ್ಳಲಿದೆ ಎಂದರು.
ಆಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಶತಮಾನಗಳಷ್ಟು ಹೋರಾಟವಿದೆ. ವಿಶ್ವ ಹಿಂದು ಪರಿಷತ್, ಭಜರಂಗದಳ ಸೇರಿದಂತೆ ಅನೇಕ ಹಿಂದೂ ಪರ ಸಂಘಟನೆಗಳು ನಿರಂತರ ಹೋರಾಟ ಮತ್ತು ತ್ಯಾಗ-ಬಲಿದಾನಗಳಿಂದ ರಾಮನ ಜನ್ಮ ಭೂಮಿಯಲ್ಲಿಯೇ ಹಿಂದೂಗಳ ಬಹು ನಿರೀಕ್ಷಿತ ಮಂದಿರ ನಿರ್ಮಾಣವಾಗುತ್ತಿದೆ. ದೇಶ ಸೇರಿದಂತೆ ಜಗತ್ತಿನಲ್ಲೆಡೆ ಸಂಭ್ರಮ ಎಡೆ ಮಾಡಿದ್ದು, ರಾಮಾಯಣ ಕಾಲದ ಸಾಕಷ್ಟು ಕಥೆಗಳು ಸಹ ತಾಲ್ಲೂಕಿನಲ್ಲಿ ಹಾಸುಹೊಕ್ಕಾಗಿದೆ. ರಾಮಾಯಣದಲ್ಲಿ ಜಟಾಯು ಪಕ್ಷಿಯ ರಕ್ಕೆ ಬಿದ್ದ ಸ್ಥಳವೇ ಜಟಾಯುಪುರ. ಇದೀಗ ಜಡೆ ಎಂದು ಕರೆಯಲ್ಪಡುತ್ತಿದೆ ಎಂದರು.
ಕರ ಸೇವಕರಾದ ಕೆ. ಪ್ರಭಾಕರ ರಾಯ್ಕರ್, ಶ್ರೀಪಾದ ರಾವ್ ಕಂತನಹಳ್ಳಿ, ಸತೀಶ ಮಡಿವಾಳ ಅವರನ್ನು ಸನ್ಮಾನಿಸಲಾಯಿತು. ದಿ. ರಘುಪತಿ ತಲಕಾಲಕೊಪ್ಪ ಅವರ ಪರವಾಗಿ ಪುತ್ರ ಡಾ. ಅಜಿತ್ ಕುಮಾರ್ ಅವರನ್ನು ಗೌರವಿಸಲಾಯಿತು.
ರಾಮ ತಾರಕ ಹೋಮದ ನೇತೃತ್ವವನ್ನು ಘನಪಾಠಿ ಶ್ರೀ ನಾರಾಯಣ ಭಟ್ ಮರಾಠೆ ವಹಿಸಿದ್ದರು. ಪುರೋಹಿತರಾದ ಮಹೇಶ ಗೋಖಲೆ, ರಾಮಚಂದ್ರ, ಸತ್ಯನಾರಾಯಣ ರಾವ್ ಸಹಕಾರ ನೀಡಿದರು.
ಶ್ರೀ ರಾಮ ಮಂದಿರ ಶಿಲಾನ್ಯಾಸ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಮಧುರಾಯ್ ಜಿ. ಶೇಟ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದು ಪರಿಷತ್ ತಾಲ್ಲೂಕು ಅಧ್ಯಕ್ಷ ಪ್ರಶಾಂತ ಶ್ಯಾಡಲಕೊಪ್ಪ, ನಗರ ಕಾರ್ಯದರ್ಶಿ ಅಶೋಕ್ ಚಲ್ಲೂರು, ಭಜರಂಗದಳ ತಾಲ್ಲೂಕು ಸಂಚಾಲಕ ಬಿ. ಶಶಿಕುಮಾರ್, ಸಹ ಸಂಚಾಲಕ ಎಸ್.ಎಂ. ಶರತ್, ರವಿ ಜೆ. ಗುಡಿಗಾರ್, ರಜನಿ ನಾಯ್ಕ್, ಯುವಾ ಬ್ರಿಗೇಡ್‌ನ ಮಹೇಶ್ ಖಾರ್ವಿ, ಮಂಜು, ಬಸವರಾಜ್ ಪಾಟೀಲ್, ರಂಗನಾಥ ಮೊಗವೀರ್, ಕೃಷ್ಣಾ, ಮಾತೃ ಶಕ್ತಿ ಪ್ರಮುಖ್ ಎಂ.ಜಿ. ರೂಪದರ್ಶಿನಿ, ದುರ್ಗಾವಾಹಿನಿ ಸಂಚಾಲಕಿ ವಸಂತಿ ರಾಘವೇಂದ್ರ ನಾವುಡ, ಪಪಂ ಸದಸ್ಯರಾದ ವೀರೇಶ್ ಮೇಸ್ತ್ರಿ, ಎಂ.ಡಿ. ಉಮೇಶ್, ನಟರಾಜ ಉಪ್ಪಿನ, ಡಿ.ಎಸ್. ಪ್ರಸನ್ನಕುಮಾರ್ ದೊಡ್ಮನೆ, ಪ್ರೇಮಾ ಟೋಕಪ್ಪ, ಪ್ರಮುಖರಾದ ಸಂಜೀವ್ ಆಚಾರ್, ಅಶೀಕ್ ನಾಗಪ್ಪ, ಎಂ.ಕೆ. ಯೋಗೇಶ್ ವಕೀಲ, ಪುಟ್ಟರಾಜ ಮೇಸ್ತ್ರಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಇದ್ದರು.
ಎಲ್ಲಡೆ ಭಗವಾಧ್ವಜ ಹಾರಾಟ
ಆಯೋಧ್ಯೆಯ ಶ್ರೀ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಪಟ್ಟಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಪಟ್ಟಣ ಮುಖ್ಯ ರಸ್ತೆ ಹಾಗೂ ವಾಹನಗಳು ಸೇರಿದಂತೆ ಎಲ್ಲಡೆ ಭಗವಾಧ್ವಜಗಳ ಹಾರಾಟ ಕಂಡುಬಂದಿತು. ಜೊತೆಯಲ್ಲಿ ದೇವಸ್ಥಾನದಲ್ಲಿ ರಾಮ ಮಂದಿರದ ಇತಿಹಾಸ ಮತ್ತು ಹೋರಾಟದ ರೂಪುರೇಷೆಗಳು ಮತ್ತು ಹಿಂದೂ ಸಂಘಟನೆಗಳಿಗೆ ದೊರೆತ ಜಯ, ನ್ಯಾಯಾಲಯದಲ್ಲಿ ನಡೆದ ವಾದಗಳ ಸಂಪೂರ್ಣ ಚಿತ್ರಣಗಳನ್ನು ಪರಿಚಯಿಸುವ ಫ್ಲೆಕ್ಸ್‌ಗಳು ಗಮನ ಸೆಳೆದವು.
(ವರದಿ: ಮಧುರಾಮ್, ಸೊರಬ)
Get In Touch With Us info@kalpa.news Whatsapp: 9481252093
Discussion about this post