ಕಲ್ಪ ಮೀಡಿಯಾ ಹೌಸ್ | ರಾಮನಗರ |
ನೀಟ್ #NEET ಪರೀಕ್ಷೆಯಲ್ಲಿ ಆಗಿರುವ ವಿಳಂಬದಿಂದಾಗಿ, ಈಗಾಗಲೇ ಎಂಜಿನಿಯರಿಂಗ್ ಸೀಟು ಪಡೆದುಕೊಂಡು ಈಗ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ರದ್ದುಪಡಿಸಲಾಗಿದೆ. ಹಾಗೆಯೇ ಈ ವರ್ಷ ವಿದ್ಯಾರ್ಥಿಗಳಿಂದ ಸಂಗ್ರಹ ಮಾಡಿದ್ದ ಶುಲ್ಕವನ್ನೂ ಹಿಂದಿರುಗಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಸುದ್ದಿ ಮಾಧ್ಯಮಗಳಲ್ಲಿ ಈ ಬಗ್ಗೆ ಬಂದಿರುವ ವರದಿಗಳಿಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳು ಶುಕ್ರವಾರ ಇಲ್ಲಿ ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಈ ವಿನಾಯಿತಿ ಈ ವರ್ಷಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
‘ಸಾಮಾನ್ಯವಾಗಿ ಎಂಜಿನಿಯರಿಂಗ್ #Engineering ಮತ್ತು ವೈದ್ಯಕೀಯ #Medical ಸೀಟು ಹಂಚಿಕೆ ಒಟ್ಟಿಗೇ ನಡೆಯುತ್ತಿತ್ತು. ಆದರೆ ಈ ವರ್ಷ ನೀಟ್ ಪರೀಕ್ಷಾ ವಿಚಾರ ಕೋರ್ಟ್ ಮೆಟ್ಟಿಲೇರಿದ್ದರಿಂದ ವೈದ್ಯಕೀಯ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ, ಅನಿಶ್ಚಿತ ಪರಿಸ್ಥಿತಿ ತಲೆದೋರಿದೆ. ಇದರಿಂದಾಗಿ, ಈಗಾಗಲೇ ಎಂಜಿನಿಯರಿಂಗ್ ಪ್ರವೇಶಾತಿ ಪಡೆದಿರುವವರಿಗೆ ಈಗ ವೈದ್ಯಕೀಯ ಸೀಟು ಸಿಕ್ಕಿದ್ದರೆ, ಆಸಕ್ತರು ಅಲ್ಲಿಗೆ ಹೋಗಬಹುದು. ಅದಕ್ಕೆ ಯಾವುದೇ ದಂಡ ವಸೂಲಿ ಮಾಡುವುದಿಲ್ಲ. ಹಾಗೆಯೇ ಈ ವರ್ಷ ಕಟ್ಟಿದ್ದ ಶುಲ್ಕವನ್ನೂ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳಿಗೆ ಹಿಂದಿರುಗಿಸಲಾಗುವುದು ಎಂದರು.
ಪ್ರವೇಶ ಪಡೆದ ನಂತರ ಸೀಟು ಬಿಟ್ಟು ಹೋಗುವವರಿಗೆ ಶುಲ್ಕದ ಐದು ಪಟ್ಟು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ ಈ ಬಾರಿ ಇದಕ್ಕೆ ವಿನಾಯಿತಿ ನೀಡಲಾಗಿದೆ ಎಂದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post