ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಿವಿಧತೆಯಲ್ಲಿ ಏಕತೆ ಸಾರಿದ ಭಗದ್ರಮಾನುಜರ ಅವತಾರದ ಸಹಸ್ರಮಾನದ ಆಚರಣೆಯ ನಿಮಿತ್ತ ಅವರ ದಾರ್ಶನಿಕ ಕ್ರಾಂತಿ, ಸಾಮಾಜಿಕ ಸುಧಾರಣೆಗಳ ಕುರಿತು ಕಿರು ಪರಿಚಯಾತ್ಮಕ ಬರಹ.
ಸೂರ್ಯ ಚಂದ್ರರು ಹೇಗೆ ಎಲ್ಲಾ ಕಾಲದಲ್ಲೂ ಪ್ರಸ್ತುತರೋ ಹಾಗೆ ವೇದಾಂತ ಅಂದರೆ ತತ್ವಜ್ಞಾನ ಪ್ರಸರಣ ಮಾಡಿದ ಆಚಾರ್ಯರು ನೀಡಿದ ಜ್ಞಾನ – ಭಕ್ತಿಗಳ ಪ್ರಕಾಶವೂ ಸರ್ವಕಾಲಕ್ಕೂ ಪ್ರಸ್ತುತ. ಸಾವಿರ ವರ್ಷ ಕಳೆದರು ಅಚ್ಚಳಿಯದ ಪ್ರಭಾವವನ್ನು ಉಳಿಸಿಹೋಗಿರುವ ಮಹಾನುಭಾವರು ರಾಮಾನುಜಾಚಾರ್ಯರು. ಭರತಖಂಡವು ಬಹಳ ಸಂದಿಗ್ದ ಕಾಲದಲ್ಲಿದ್ದಾಗ ನವಗ್ರಂಥ ರಚನೆಯ ಮೂಲಕ ವಿಶಿಷ್ಟಾದ್ವೈತವೆಂಬ ಆಧ್ಯಾತ್ಮಿಕ ಸಿದ್ಧಾಂತವನ್ನು ಪಸರಿಸಿ, ಭಾರತದ ತತ್ವಶಾಸ್ತ್ರ ಕ್ಷಿತಿಜದ ಧ್ರುವತಾರಾ ಸದೃಶ ಆಚಾರ್ಯತ್ರಯರಲ್ಲಿ ಮಧ್ಯದವರು ಸಂತ ರಾಮಾನುಜರು. ಮೋಕ್ಷಪ್ರಾಪ್ತಿಯ ಅವಕಾಶವನ್ನು ಸರ್ವರಿಗೂ ಸಮಾನವೆಂದು ಸಾರಿದ ಸಾಮಾಜಿಕ ಕ್ರಾಂತಿ ತೇಜ.
ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಷ್ಠಾಪಿಸಲು ಆದಿಶೇಷ ಅವತಾರಿಗಳಾಗಿ ತ್ರೇತಾಯುಗದಲ್ಲಿ ಶ್ರೀರಾಮನ ತಮ್ಮ ಲಕ್ಷ್ಮಣನಾಗಿ, ದ್ವಾಪರದಲ್ಲಿ ಶ್ರೀಕೃಷ್ಣನ ಅಣ್ಣ ಬಲರಾಮನಾಗಿ ಕಲಿಯುಗದಲ್ಲಿ ತಮಿಳುನಾಡಿನ ಶ್ರೀ ಪೆರಂಬದೂರಿನಲ್ಲಿ ಆಸೂರಿ ಕೇಶವ ಪೆರುಮಾಳ್ ಮತ್ತು ಭೂದೇವಿ ದಂಪತಿಯರಲ್ಲಿ ರಾಮಾನುಜರು ಜನಿಸಿದರು. ಮಾಧವ ಪ್ರಕಾಶರೇ ರಾಮಾನುಜರ ಶಿಷ್ಯತ್ತ್ವವನ್ನು ಸ್ವೀಕರಿಸುವಂತಾದುದು ವೈಶಿಷ್ಟ್ಯ.
ಮೊದಲಿನಿಂದಲೂ ವೈಷ್ಣವ ಧರ್ಮದ ಪ್ರಭಾವ ಇವರ ಮೇಲಿತ್ತು. ಭಕ್ತಿಮಾರ್ಗ ಇವರನ್ನು ಆಳವಾಗಿ ಆಕರ್ಷಿಸಿತ್ತು. ಶ್ರೀರಂಗದಿಂದ ಮಧುರೈಗೆ ಬೇಸರವಿಲ್ಲದೆ 18 ಬಾರಿ ಹೋಗಿ ಗೋಷ್ಠಿಪೂರ್ಣರನ್ನು ಒಲಿಸಿಕೊಂಡು ಅವರಿಂದ ಬಹಳ ಶ್ರಮಪಟ್ಟು, ಕಲಿತ ಗೋಪ್ಯವಾದ ‘‘ಆಷ್ಟಾಕ್ಷರಿ ಮಂತ್ರದ’’, ರಹಸ್ಯಾರ್ಥವನ್ನು ಸಕಲ ಚೇತನರ ಉದ್ಧಾರ ಮಾಡುವ ಉದ್ದೇಶದಿಂದ ತಿರುಕೋಟ್ಟಿಮಾರಿನ ನರಸಿಂಹ ದೇವಾಲಯದ ಗೋಪುರದ ಮೇಲಿಂದ ಮಂತ್ರವನ್ನು ಘಂಟಾಘೋಷವಾಗಿ ಸಾರಿದರು.
ತಮ್ಮ ಮೂವತ್ತನೆಯ ವಯಸ್ಸಿನಲ್ಲಿ ಮಾಧವ ಪ್ರಕಾಶರ ಗೋಷ್ಠಿಯಲ್ಲಿ, ಮಹಾ ಪೂರ್ಣರು ಪಂಚ ಸಂಸ್ಕಾರ ಮಾಡಿ ವಿಶಿಷ್ಟಾದ್ವ್ಯೆತ ಸಿದ್ಧಾಂತದ ಪ್ರವರ್ತಕರಾಗಿ ದೀಕ್ಷೆಯನ್ನಿತ್ತರು.
ಮೇಲುಕೋಟೆಗೆ ಬಂದು ಚೆಲುವನಾರಾಯಣನನ್ನು ಪ್ರತಿಷ್ಠಾಪಿಸಿ, ಉತ್ಸವ ಮೂರ್ತಿಯಾಗಿ ‘‘ರಾಮಪ್ರಿಯ’’ನನ್ನೂ ತಂದು ವೈರಮುಡಿ ಉತ್ಸವವನ್ನು ಪ್ರತಿವರ್ಷವೂ ನೆರವೇರಿಸಿದರು. ದ್ವಾರ ಸಮುದ್ರದ ಹೊಯ್ಸಳ ರಾಜನಾದ ವಿಠಲ ದೇವರಾಯ ಬಿಟ್ಟಿದೇವನ) ಮಗಳ ಭೂತ ಚೇಷ್ಟೆಯನ್ನು ನಿವಾರಿಸಿ, ಅವನಿಗೆ ವಿಷ್ಣುವರ್ಧನ ಎಂಬ ಶ್ರೀವೈಷ್ಣವ ದೀಕ್ಷೆಯನ್ನಿತ್ತು ಅವನಿಂದ ಬೇಲೂರಿನ ಚೆನ್ನಕೇಶವ ದೇವಾಲಯವನ್ನು ಕಟ್ಟಿಸಿದರು.
ಭಗವಂತನ ಕೃಪೆಯ ತಂಪನ್ನು ಸಮನಾಗಿ ಹಂಚಿದ ಸಂತ-ರಾಮಾನುಚಾರ‌್ಯರು
ಶೇಷಾವತಾರಿಗಳಾಗಿ ಧರ್ಮೋದ್ಧಾರಕ್ಕಾಗಿ ಇಳೆಯಲ್ಲಿ ಆವತರಿಸಿದ ಆಚಾರ್ಯರದು ಸಂಘರ್ಷಮಯ ಜೀವನ, ಅವರ ಭಕ್ತಿ ಮಾರ್ಗ ಇಡೀ ಭಾರತದಲ್ಲಿ ಹೆಚ್ಚಿನ ಪ್ರಭಾವ ಬೀರಿ ಸನಾತನ ಧರ್ಮವನ್ನು ಕಾಪಾಡಿದ್ದು ಅವಿಸ್ಮರಣೀಯ.
ಇಂದಿದ್ದರೆ ಅದೇ ಹೆಚ್ಚು ನಾಳೆ ಏನೋ ತಿಳಿಯದು ಎಂಬಂಥ ತಾತ್ಕಾಲಿಕ ಪ್ರಜ್ಞೆಯಲ್ಲಿ ಜೀವಿಸುತ್ತಿರುವ ಜನ ಸಹಸ್ರಮಾನೋತ್ಸವವನ್ನು ಆಚರಿಸುವುದೇ? ಆಶ್ಚರ್ಯವೆನಿಸಬಹುದು. ಆದರೂ ಸತ್ಯ. ಏಕೆಂದರೆ ಸಾವಿರ ವರ್ಷ ಕಳೆದರೂ ಅಚ್ಚಳಿಯದ ಪ್ರಭಾವವನ್ನು ಉಳಿಸಿ ಹೋಗಿರುವ ಮಹಾನುಭಾವರು ರಾಮಾನುಜಾಚಾರ್ಯರು ಪೂರ್ಣಯುಸ್ಸನ್ನು 120 ವರ್ಷ ಈ ಭೂಮಿಯ ಮೇಲೆ ಕಳೆದದ್ದು ಅವರ ಭಕ್ತರ, ಶಿಷ್ಯರ, ಸಾಮಾನ್ಯಜನರ, ಅವರ ಕೃಪೆಗೆ ಪಾತ್ರರಾದ ದೀನದಲಿತರ ಭಾಗ್ಯವೇ ಸರಿ. ಲಕ್ಷ್ಮಣ ಮುನಿ, ಎಂಬೆರುಮಾನಾರ್, ಶ್ರೀ ಭಾಷ್ಯಕಾರರು, ತಿರುಪ್ಪಾವೈಜೀಯರ್, ರಾಜಹಂಸ, ಒಡೆಯವರ್ ಮುಂತಾದ ಹದಿನೇಳು ಸಾರ್ಥಕವಾದ ನಾಮಧೇಯಗಳಿಂದ ಭೂಷಿತರಾದ ರಾಮಾನುಜಾಚಾರ್ಯರು ನಮ್ಮ ಸಮಾಜಕ್ಕೆ ನೀಡಿದ ಕೊಡುಗೆ ಎಂದರೆ ಭಕ್ತಿಯ ನೆಲೆಯಲ್ಲಿ ಸಾಮಾಜಿಕ ಏರುಪೇರುಗಳನ್ನು ಸಮಗೊಳಿಸಿ ವರ್ಣ ಜಾತಿ ವರ್ಗಗಳ ಅನ್ಯೋನ್ಯತೆಯನ್ನು ಬೆಳೆಸಿದ್ದು. ಅವರ ಶ್ರೀ ಭಾಷ್ಯ ಅಂದರೆ ಬ್ರಹ್ಮ ಸೂತ್ರಗಳಿಗೆ ಬರೆದಿರುವ ವ್ಯಾಖ್ಯಾನದ ಮಂಗಳ ಶ್ಲೋಕವೇ ಅವರು ಭಕ್ತಿಗೆ ನೀಡಿದ ಪಾರಮ್ಯತೆಯನ್ನು ಎತ್ತಿ ತೋರುತ್ತದೆ. ಜಗತ್ತಿನ ಸೃಷ್ಟಿ ಸ್ಥಿತಿ ಲಯಗಳೆಂಬ ಲೀಲಾವಿನೋದದಲ್ಲಿ ನೆಲೆಸಿರುವ ಸಕಲ ಲೋಕನಾಯಕನೂ ಪರಬ್ರಹ್ಮನೂ ಆದ ಶ್ರೀನಿವಾಸನಲ್ಲಿ ನನ್ನ ಬುದ್ಧಿಯೆಲ್ಲವೂ ಭಕ್ತಿಯಾಗಿ ಮಾರ್ಪಡಲಿ, ಎಂದು ಹಾಡಿದ್ದಾರೆ ಆಚಾರ್ಯರು.
ಭಗವದ್ರಾಮಾನುಜರು ಆಧ್ಯಾತ್ಮ ಕ್ಷೇತ್ರದ ದಿಗ್ಗಜರು. ಸ್ವತಃ ಪರಮಾತ್ಮನನ್ನು ಕಂಡು ಆ ದಿವ್ಯವೈಭವವನ್ನು ಅನುಭವಿಸಿ ಪರವಶರಾಗಿ ಹಾಡಿದವರು. ರಾಜಾಶ್ರಯದಲ್ಲಿದ್ದ ಅಂದಿನ ಧರ್ಮ ಮತ್ತು ಸಮಾಜ ವ್ಯವಸ್ಥೆಯನ್ನು ದೇವಸ್ಥಾನದ ತೆಕ್ಕೆಗೆಳೆದು ಅದನ್ನೆ ಸಾಮಾಜಿಕ ಕೇಂದ್ರವಾಗಿ ಪರಿವರ್ತಿಸಿ ಅವರ್ಣಿಯರಿಗೂ ಸಮಾಜದ ಮುಖ್ಯವಾಹಿನಿಯಲ್ಲಿ ಸ್ಥಾನ ಕಲ್ಪಿಸಿದರು.
ರಾಮಾನುಜರು ವಿಶಿಷ್ಟಾದ್ವೈತ ಮತ ಪ್ರಚಾರಕ್ಕಾಗಿ ಭಾರತದಲ್ಲೆಲ್ಲ ಸಂಚಾರ ಮಾಡಿದರು. ತೊಂಡನೂರು ನರಸಿಂಹ ದೇವಾಲಯದಲ್ಲಿ ರಾಮಾನುಜರನ್ನು ವಾದ ಮಾಡಲು ಕರೆದಾಗ, ಆದಿಶೇಷಾಂಶರಾದ ಆಚಾರ್ಯರು ದೇವಾಲಯದ ಹಿಂಬದಿಯಲ್ಲಿ ಒಂದು ಸಾವಿರ ರೂಪದಿಂದ ಅವರಿಗೆ ಉತ್ತರ ಕೊಟ್ಟು ಸಂಪೂರ್ಣವಾಗಿ ಜಯಿಸಿದರು. ಅದರ ನೆನಪಿಗಾಗಿ ಈಗಲೂ ತೊಂಡನೂರು ನರಸಿಂಹ ದೇವಾಲಯದ ಗೋಡೆಯ ಮೇಲೆ ರಾಮಾನುಜರು ಸಹಸ್ರಫಣಿಯುತರಾಗಿ ಗೋಚರಿಸುವುದನ್ನು ಕಾಣಬಹುದು.
ರಾಮಾನುಜರು ಬೋಧಿಸಿದ ಧರ್ಮಕ್ಕೆ ವಿಶಿಷ್ಟಾದ್ವೈತವೆಂದು ಹೆಸರು. ಶ್ರೀ ಶಂಕರಾಚಾರ್ಯರು ಬೋಧಿಸಿದ್ದು ಅದ್ವೈತ. ಅದ್ವೈತದಲ್ಲಿ ಯಾವ ಗುಣಗಳು ಎಲ್ಲದ ನಿರ್ಗುಣ ಬ್ರಹ್ಮದ ತತ್ತ್ವವನ್ನು ಹೇಳಲಾಗಿದೆ. ಆದರೆ ವಿಶಿಷ್ಟಾದ್ವೈತದಲ್ಲಿ ಸಗುಣೇಶ್ವರ ಉಪಾಸನೆಯನ್ನು ಹೇಳಿದೆ, ಎಂದರೆ ದೇವರಿಗೆ ಅನಂತ ಕಲ್ಯಾಣ ಗುಣಗಳಿವೆ; ದೇವರಿಗಿರುವ ಕಲ್ಯಾಣ ಗುಣಗಳು (ಒಳ್ಳೆಯ ಗುಣಗಳು) ಅನೇಕವಾದರೂ ಅವುಗಳಲ್ಲಿ ಮುಖ್ಯವಾದುವು ಸತ್ಯ, ಸೌಶೀಲ್ಯ ಮತ್ತು ಸೌಂದರ್ಯ. ಜೀವ ಮತ್ತು ಜಗತ್ತುಗಳಿಂದ ವಿಶಿಷ್ಟನಾದ ಬ್ರಹ್ಮನ ಅದ್ವೈತವನ್ನು ಬೋಧಿಸಿದ ಧರ್ಮ ವಿಶಿಷ್ಟಾದ್ವೈತ. ವೈಷ್ಣವ ಸಂಪ್ರದಾಯವೂ, ವಿಷ್ಣು ದೇವಾಲಯಗಳೂ ಬಹಳ ಹಿಂದಿನಿಂದ ಇದ್ದರೂ ವಿಶಿಷ್ಟಾದ್ವೈತವನ್ನು ವಿಶೇಷವಾಗಿ ಪ್ರಚಾರ ಮಾಡಿದವರು ರಾಮಾನುಜಾಚಾರ್ಯರು.
ರಾಮಾನುಜಾಚಾರ್ಯರು ಜಾತಿ ಭೇದವಿಲ್ಲದೆ ಎಲ್ಲರಿಗೂ ಬೋಧಿಸಿದರು. ಎಲ್ಲರನ್ನು ತಮ್ಮ ಮತಕ್ಕೆ ಸೇರಿಸಿಕೊಂಡರು. ಹಿಂದುಳಿದವರನ್ನು ಬಹಳ ಮಮತೆಯಿಂದ, ಪ್ರೇಮದಿಂದ ಕಂಡು ಅವರಿಗೆ ಭಕ್ತಿಮಾರ್ಗ ತೋರಿಸಿದರು.
ಬಿಗಿಯಾಗಿದ್ದ ಅಂದಿನ ಸಾಮಾಜಿಕ ಕಟ್ಟಳೆಗಳನ್ನು ಮೀರಿ ಸಮಾನತೆಯನ್ನು ತಂದ ರಾಮಾನುಜರ ಬೌದ್ಧಿಕ ಸಾಹಸ ಅಸಾಮಾನ್ಯವಾದುದು. ಶ್ರೀವೈಷ್ಣವ ದೇವಾಲಯಗಳನ್ನು ನೋಡಿದಾಗ, ಈ ಸರ್ವಸಮಾನತೆಯು ತತ್ವ, ರಾಮಾನುಜರ ಸುಧಾರಣೆಗಳ ಮಹತ್ವ ತಿಳಿಯುತ್ತದೆ. ಭಕ್ತರೇ ಭಗವಂತನಿಗೆ ಅತಿಪ್ರಿಯರೆಂಬುದನ್ನು ಆಳ್ವಾರರಿಗೆ ಇರುವ ಸನ್ನಿಧಿಗಳು ತಿಳಿಸುತ್ತದೆ.
ಮೇಲುಕೋಟೆಯ ಚೆಲುವನಾರಾಯಣನ ಪದತಲದಲ್ಲಿ ಇರುವ ಬೀಬಿ ನಾಚ್ಚಿಯಾರ್’ಗೆ ನಿತ್ಯ ನೆರವೇರಿಸುವ ಪೂಜಾ ಕಾರ್ಯಕ್ರಮ ರಾಮಾನುಜ ಮತದ ಉದಾರತೆಯನ್ನು ಭಕ್ತಿಯೆಂಬುದು ಮುಕ್ತಿಗೆ ಏಕೈಕ ಅರ್ಹತೆಯಾಗಿದೆ ಎಂದು ಘೋಷಿಸುತ್ತದೆ.
ಜ್ಞಾನ-ಭಕ್ತಿ ವೈರಾಗ್ಯಗಳ ಸಾಮರಸ್ಯವನ್ನು ಸ್ಥಾಪಿಸಿ ವ್ಯಕ್ತಿಶೀಲದೊಂದಿಗೆ ವಿಶ್ವಕಲ್ಪನೆಯನ್ನು ಬೋಧಿಸಿದ ದಿವ್ಯಾತ್ಮ, ಬುದ್ಧಿ ಹೃದಯ ಆದರ್ಶ ಯಥಾರ್ಥ ಇಹ-ಪರ ಇಲ್ಲದರ ಮಧುರ ಮಿಲನವನ್ನು ಸಾಧಿಸಿ ಇಂದ್ರಿಯ ಹಾಗೂ ಆತ್ಮಕಲ್ಯಾಣಗಳಿಗೆ ನೇರವಾಗಿ, ಎಲ್ಲರ ಅನುಭವಕ್ಕೂ ನಿಲುಕುವಂತಹ ಸಿದ್ಧಾಂತವನ್ನು ಸ್ಥಾಪಿಸಿದ ನೇತಾರ.
ಶ್ರೀಲಕ್ಷ್ಮೀನಾರಾಯಣನೇ ಪರತ್ವ, ಚೇತನ, ಅಚೇತನಗಳೆಲ್ಲವೂ ಅವನಿಗೆ ಅಧೀನವಾದುವು ಮಾನವನು ತನ್ನ ಆತ್ಮೋನ್ನತಿ ಮತ್ತು ಶಾಶ್ವತ ಸುಖವಾದ ಮೋಕ್ಷ ಇವೆರಡನ್ನು ಪಡೆಯಲು ಶ್ರೀಮನ್ನಾರಾಯಣನಲ್ಲಿ ದೃಢವಾದ ವಿಶ್ವಾಸಪೂರ್ವಕ ಶರಣಾಗತಿಯಲ್ಲದೆ ಬೇರೆ ಗತಿ ಇಲ್ಲ_ಇದು ರಾಮಾನುಜರ ಉಪದೇಶ.
ತಮ್ಮ ನೂತನ ಶರೀರ-ಶರೀರಿ ಸಂಬಂಧ ಸಿದ್ಧಾಂತದ ಮೂಲಕ ಭೇದ ಅಭೇದ ಶೃತಿವಾಕ್ಯಗಳಲ್ಲಿ ಸಮನ್ವಯ, ಪಾಂಚರಾತ್ರ ಆಗಮದ ಪ್ರಮಾಣ ಸ್ಥಾಪನೆ ದೇವಾಲಯಗಳ ನಿರ್ಮಾಣ ಆಗಮೋಕ್ತ ಪೂಜಾ ವ್ಯವಸ್ಥೆ ಪ್ರಪತ್ತಿಯ ಮೂಲಕ ಎಲ್ಲರಿಗೂ ಮೋಕ್ಷ ಇವು ರಾಮಾನುಜರು ಸಾಧಿಸಿದ ಐದು ಮಹತ್ಕಾರ್ಯಗಳು.
ಹಿಂದೆ ನಮ್ಮಲ್ಲಿ ಹುಟ್ಟಿದ ಸಾಂಖ್ಯವೇ ಮೊದಲಾದ ದರ್ಶನಗಳು ಇಂದಿನ ವೈಜ್ಞಾನಿಕ ಬೌದ್ಧಿಕ ಅನ್ವೇಷಣೆಗಳಾಗಿ, ಬೌದ್ಧಿಕ ಸಿದ್ಧಿಗಳಾಗಿ ಅಸ್ತಿತ್ವವನ್ನು ಹೊಂದಿದ್ದವು ಅವುಗಳು ಧಾರ್ಮಿಕ ಮತಗಳಾಗಲಿಲ್ಲ ಪಂಥಗಳೂ ಆಗಲಿಲ್ಲ. ಆದರೆ ತ್ರಿಮತಗಳು ಧಾರ್ಮಿಕ ಪಂಥಗಳಿಗೂ ದಾರಿಮಾಡಿಕೊಟ್ಟು ಅನುಯಾಯಿಗಳನ್ನು ಹೊಂದಿ ಆಚಾರ ವಿಚಾರಗಳ ಎರಡೂ ಘಟ್ಟದಲ್ಲಿಯೂ ಅಸ್ತಿತ್ವವನ್ನು ಪ್ರಚಾರವನ್ನು ಪಡೆದವು. ರಾಮಾನುಜ ಮತವು ಶ್ರೀವೈಷ್ಣವ ಮತವಾಗಿ ಪ್ರಖ್ಯಾತವಾಗಿ ಎಲ್ಲ ವರ್ಗಗಳನ್ನು ಆಕರ್ಷಿಸಿ ಏಕಸೂತ್ರದಲ್ಲಿ ಬಂಧಿಸುವುದರಲ್ಲಿ ಯಶಸ್ವಿಯಾಯಿತು. ಅದರ ಸೈದ್ಧಾಂತಿಕ ಉದಾರತೆಯಿಂದ ಒಂದು ಕ್ರಾಂತಿಕಾರಕ ವಾತಾವರಣವನ್ನು ಅದು ಉಂಟುಮಾಡಿತು. ಅಂತೆಯೇ ಅವರು ತಂದ ಸುಧಾರಣಾ ಕ್ರಮಗಳಿಗೆ ಇಟ್ಟ ಸಮಾನತೆಯ ಹೆಜ್ಜೆಗಳಿಗೆ, ಕೊಟ್ಟ ಪಾರಮಾರ್ಥಿಕ ಚಿಂತನೆಗಳಿಗೆ ಮುರಿದ ಭೌತಿಕ, ಸಾಮಾಜಿಕ ಶೃಂಖಲೆಗಳಿಗೆ ಸಿಗಬೇಕಾದ ಗಮನವು ಲಭ್ಯವಾಗಿಲ್ಲ. ಭಾರತೀಯ ಚಿಂತನಕ್ಕೆ ಹೊಸ ಕ್ರಾಂತಿಕಾರೀ ಆಯಾಮವನ್ನು ಕೊಟ್ಟ ರಾಮಾನುಜದರ್ಶನ, ‘‘ಇಹ’’ವನ್ನು ಬದಲಾಯಿಸುತ್ತ, ಪರದ ದರ್ಶನವನ್ನು ಕೊಟ್ಟಿತು ಎಂಬುದನ್ನು ನಾವು ವಿಶೇಷವಾಗಿ ಗಮನಿಸಬೇಕು.
ಮುಸಲ್ಮಾನ ಅರಸನ ಬಳಿ ಹಿಂದೂ ದೇವರ ವಿಗ್ರಹ! ಅದನ್ನು ಬಿಟ್ಟಿರಲಾರೆ ಎಂದು ಅರಸು ಕುವರಿ, ಕನಸಿನಲ್ಲಿ ದೇವರು ತಿಳಿಸಿದಂತೆ ಓರ್ವ ಧರ್ಮಗುರು ವಿಗ್ರಹವನ್ನು ಪಡೆಯುವುದು; ಅದನ್ನೇ ಹಿಂಬಾಲಿಸಿಕೊಂಡು ಬಂದ ಮುಸಲ್ಮಾನ ರಾಜಪುತ್ರಿ ಅವರ ಸೇವೆಯಲ್ಲೇ ಕಣ್ಮರೆಯಾಗುವುದು. ಹಿಂದೂಗಳ ಯಾತ್ರಾ ಸ್ಥಳದಲ್ಲಿ ಮುಸಲ್ಮಾನ ಯುವತಿಯ ಮೂರ್ತಿ! ಎಂಥ ಸೋಜಿಗದ ಕಥೆ!
ಮೇಲುಕೋಟೆ, ಕರ್ನಾಟಕ ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳ, ಅಲ್ಲಿನ ಚೆಲುವನಾರಾಯಣ ಸ್ವಾಮಿಯನ್ನು ಪ್ರತಿಷ್ಠೆ ಮಾಡಿದವರು ಧರ್ಮಗುರು ‘‘ರಾಮಾನುಜಾಚಾರ್ಯರು’’. ವಿಗ್ರಹವನ್ನು ರಾಮಾನುಜಾಚಾರ್ಯರು ದೆಹಲಿಯ ಸುಲ್ತಾನನಿಂದ ಪಡೆದರೆಂದು ನಂಬಿಕೆಯಿದೆ. ಕನಸಿನಲ್ಲಿ ನಾರಾಯಣ ದೇವರು ಹೇಳಿದಂತೆ ತಮಗೆ ಬೇಕಾದ ರಾಮಪ್ರಿಯ ವಿಗ್ರಹವನ್ನು ರಾಮಾನುಜರು ಆರಿಸಿ ಸುಲ್ತಾನನಿಂದ ಪಡೆದರು; ಸುಲ್ತಾನನ ಮಗಳು ಬೀಬಿ ನಾಚ್ಚಿಯಾರ್ ಆ ವಿಗ್ರಹವನ್ನು ಪ್ರೀತಿಸುತ್ತಿದ್ದಳು. ಅದನ್ನು ಬಿಟ್ಟಿರಲಾರದೆ ಮೇಲುಕೋಟೆಗೆ ಬಂದಳು; ಅಲ್ಲಿಯೇ ದೇವನಲ್ಲಿ ಐಕ್ಯಳಾದಳು ಎಂದು ಹೇಳುತ್ತಾರೆ. ಬೀಬಿ ನಾಚ್ಚಿಯಾರ್ ಮೂರ್ತಿಯನ್ನು ಮೇಲುಕೋಟೆಯಲ್ಲಿ ಈಗಲೂ ಕಾಣಬಹುದು.
ರಾಮಾನುಜ ನಮನ
- ಭಗವದ್ ಭಕ್ತಿಯ ನೆಲೆಯಲ್ಲಿ ವರ್ಣ-ಜಾತಿ-ವರ್ಗಗಳ ಅನ್ಯೋನ್ಯತೆಯನ್ನು ಸಮಾಜದಲ್ಲಿ ಬೆಳೆಸಿದುದು. ಕೇವಲ ಸಂಸ್ಕೃತ ವೇದಗಳು ಮಾತ್ರವಲ್ಲದೆ ಜಾನಪದ ದ್ರಾವಿಡ ವೇದಗಳಿಗೂ ದೇವರ ಪೂಜೆಯಲ್ಲಿ ದೇವಾಲಯಗಳಲ್ಲಿ ಸ್ಥಾನಮಾನವನ್ನು ದೃಢಪಡಿಸಿದುದು.
- ಭಗವದ್ ಭಕ್ತಿಯಿರುವಂತಹ ಚಂಡಾಲಜಾತಿಯವರಿಗೆ ಮೇಲುಕೋಟೆ ಚೆಲುವನಾರಾಯಣನ ಸೇವೆ ಮಾಡಲು ಶಾಸ್ತ್ರ ವಿರೋಧವಿಲ್ಲದಂತೆ ವ್ಯವಸ್ಥೆ ಮಾಡಿದುದು.
- ಶ್ರೀ ರಂಗದಲ್ಲಿ ಆರೋಗ್ಯ ಶಾಲೆಯನ್ನು ಏರ್ಪಡಿಸಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ಔಷಧಗಳಿಗೆ ವ್ಯವಸ್ಥೇ ಮಾಡಿದುದು.
- ಎಪ್ಪತ್ನಾಲ್ಕು ಗೃಹಸ್ಥಪೀಠಗಳನ್ನು ಏರ್ಪಡಿಸಿ ನಾನಾ ರಾಜ್ಯದ ಜನಸಾಮಾನ್ಯರಿಗೆ ಭಕ್ತಿ ಪ್ರಪತ್ತಿ ವಿಚಾರಗಳನ್ನು ಪ್ರಚುರ ಪಡಿಸುವಂತೆ ಸಂಚಾರಿ ಗುರುಗಳನ್ನು ಏರ್ಪಡಿಸಿದುದು.
- ಜಾನಪದ ನಾನಾ ಜಾತಿಗಳಲ್ಲೂ ದಾಸಯ್ಯನೆಂಬುವರಿಗೆ ದೀಕ್ಷೆ ಕೊಟ್ಟು ಆಯಾ ಜಾತಿಯವರನ್ನು ಜಾತಿಕೆಡಿಸದೇ ಸ್ವಧರ್ಮದಲ್ಲಿ ಪರಿಶುದ್ಧವಾಗಿರುವಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಿದುದು.
- ಶ್ರೀ ತೊಣ್ಣೂರು ಮುಂತಾದ ಕಡೆ ದೊಡ್ಡ ಕೆರೆಗಳನ್ನು ಕಟ್ಟಿಸಿ ಕೃಷಿಕರಿಗೂ ಸ್ಥಾನಾಣುಷ್ಠಾನಪರರಿಗೂ ತೀರ್ಥಶುದ್ಧಿಯ ಜೊತೆ ಧಾನ್ಯ ಸಮೃದ್ಧಿಯೂ ಆಗುವಂತೆ ಮಾಡಿದುದು.
- ತಿರುಪತಿಯ ಬಳಿ ಮಂಡಯಂ ಎಂಬ ಐದು ಅಗ್ರಹಾರಗಳನ್ನು ಏರ್ಪಡಿಸಿ ಕಾಡುಗಳನ್ನು ನಾಡನ್ನಾಗಿ ಮಾಡಿದುದು. ಇದನ್ನು ರಾಮಾನುಜರು ತಮ್ಮ ಪಾದಕಾಣಿಕೆಯಾಗಿ ಬಂದ ಹಣದಿಂದ ಭೂಮಿಯನ್ನು ಖರೀದಿಸಿ ಮಾಡಿದರು.
- ಬಿಳಿಗಿರಿರಂಗನಬೆಟ್ಟದ ಸೋಲಿಗರಿಗೆ ಅನುಗ್ರಹಿಸಿ ಅವರ ಮೂಲದೇವರಾದ ಕಂಕಣಲಕ್ಷ್ಮಿಗೆ ರಂಗನೊಡನೆ ಮದುವೆ ಮಾಡಿಸಿ ಉಚ್ಛ ನೀಚ ಕುಲಗಳಲ್ಲಿ ಭಗವದ್ ಭಕ್ತಿಯಿಂದ ಅನ್ಯೋನ್ಯತೆ ಏರ್ಪಡಿಸಿದುದು.
- ಅಷ್ಟಾಕ್ಷರವೆಂಬ ಮಂತ್ರಕ್ಕೆ ವೈದಿಕ ಅವೈದಿಕ ಭೇದವಿಲ್ಲದಂತೆ ಪ್ರಯೋಗವಿರುವುದನ್ನು ಅಗಮ ಕಲ್ಪಗಳಿಂದ ನಿರ್ಣಯಿಸಿ, ಅರ್ಹರಾದ ಎಲ್ಲರಿಗೂ ಮಂತ್ರೋಪದೇಶ ಮಾಡಿ, ಮಂತ್ರದ ವಿವರಣೆಯ ಮೂಲಕ ವೇದಂತಾರ್ಥಗಳನ್ನು ತಿಳಿಸಿದುದು.
- ತಮ್ಮ ಜೀವಿತಾವಧಿಯ ಮೂರನೆಯ ಒಂದು ಭಾಗ ಸಮಯವನ್ನು ಸುಮಾರು 36 ವರ್ಷಗಳನ್ನು ಕನ್ನಡನಾಡಿನ ಜನತೆಯ ಏಳಿಗೆಗಾಗಿ ಮೀಸಲಿರಿಸಿ ಸಂಚರಿಸಿದುದು. (ಕೋಣನಕಲ್ ಬೆಟ್ಟದ ಶಾಸನ)
- ಮೇಲುಕೋಟೆಯ ಚೆಲುವನಾರಾಯಣದ ಸೇವೆಗಾಗಿ 18 ಜಾತಿಯ ಜನರಿಗೂ ನಿವಾಸ ಶ್ರೇಣಿಗಳನ್ನು ಏರ್ಪಡಿಸಿ ಹಳೆಯ ಕೋಟೆಯ ಒಳಗೂ ಹೊರಗೂ ‘ತಿರುನಾರಾಯಣಪುರ ನಗರವನ್ನು ಏರ್ಪಡಿಸಿದುದು.
- ದೆಹಲಿಯ ಧಿಲು ಎಂಬ ಪ್ರದೇಶದಲ್ಲಿದ್ದ ರಾಮಪ್ರಿಯ ದೇವಮೂರ್ತಿಯನ್ನು ಯಾದಗಿರಿಗೆ ಹಿಂತಿರುಗಿಸಿ ಕರೆತಂದು ಧಿಲುವಿನ ಮ್ಲೇಚ್ಛರಾಜನ ಮಗಳ ಭಗವದ್ ಭಕ್ತಿಗೆ ಮೆಚ್ಚಿ ದೇವರ ಪಾದದಲ್ಲಿ ಲಕ್ಷ್ಮೀ ರೂಪದಲ್ಲಿ ಅವಳ ವಿಗ್ರಹ ಸ್ಥಾಪಿಸಿದುದು ಮತ್ತು ಮ್ಲೇಚ್ಛರಿಗೂ ದೇವರ ಸೇವೆಗಳಿಗೆ ಅವಕಾಶ ಮಾಡಿದುದು.
- ಏಳುನೂರು (700) ಸನ್ಯಾಸಿಗಳನ್ನು 12,000 ನಾನಾ ವರ್ಣ ಜಾತಿಗಳ ಏಕಾಂಗಿ ಸ್ವಯಂ ಸೇವಕರನ್ನು ಭಕ್ತಿಮಾರ್ಗದ ವಿಸ್ತರಣೆಗೆ ಜೊತೆಗಿಟ್ಟುಕೊಂಡು ಮೂರು ಸಲ ಭಾರತದಾದ್ಯಂತ ಸಂಚರಿಸಿದುದು.
- ಕನ್ನಡ ನಾಡಿನಲ್ಲಿ ರಾಮಾನುಜರ ಪ್ರಭಾವದಿಂದ ಸುಮಾರು ಇನ್ನೂರು (200) ವರ್ಷಗಳಲ್ಲಿ ಇಪ್ಪತ್ತಾರು ಸಾವಿರ 26,000 ದೇವಾಲಯಗಳೂ ಸಾರ್ವಜನಿಕರ ಭಕ್ತಿ ಸೇವೆಗೆ ರಾಜ-ಮಹಾರಾಜ ರಾಣಿ ಮಂತ್ರಿ ಸೇನಾಪತಿ ಧನಿಕ ವೈಶ್ಯರಿಂದಲೂ ಶೂದ್ರ ಭಕ್ತರಿಂದಲೂ ಸ್ಥಾಪಿತವಾಗಿರುವುದು ಗಮನಾರ್ಹ.
ಲೇಖನ: ಕೆ.ವಿ. ಪದ್ಮಾವತಿ
Get in Touch With Us info@kalpa.news Whatsapp: 9481252093
Discussion about this post