ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಮೇಶ್ವರಂ ಕೆಫೆ ಸ್ಪೋಟ #RameshwaramCafeBlast ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಬಂಧಿಸಲಾಗಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ತನಿಖಾ ಬೆಳವಣಿಗೆ ಹಾಗೂ ಸಾಕ್ಷಿಯ ಗುರುತುಗಳನ್ನು ಬಹಿರಂಗ ಪಡಿಸದಂತೆ ಎನ್’ಐಎ #NIA ಎಚ್ಚರಿಕೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯಲ್ಲಿ ಬಿಜೆಪಿ #BJP ಕಾರ್ಯಕರ್ತನೊಬ್ಬರನ್ನು ಬಂಧಿಸಲಾಗಿದೆ ಎಂಬ ವರದಿಗಳು ಪ್ರಕಟವಾಗಿದೆ. ಇದರೊಂದಿಗೆ ಸಚಿವ ದಿನೇಶ್ ಗುಂಡೂರಾವ್ ಸಹ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಮಹತ್ವದ ಎಚ್ಚರಿಕೆ ಹೇಳಿಕೆ ಬಿಡುಗಡೆ ಮಾಡಿರುವ ಎನ್’ಐಎ, ಪ್ರಕರಣವು ಭಯೋತ್ಪಾದಕ ಘಟನೆಯಾಗಿರುವುದರಿಂದ, ಸಾಕ್ಷಿಗಳ ಗುರುತಿನ ಯಾವುದೇ ಮಾಹಿತಿಯು ತನಿಖೆಗೆ ಅಡ್ಡಿಯಾಗುವುದಲ್ಲದೆ, ವ್ಯಕ್ತಿಗಳಿಗೆ ಸಮನ್ಸ್ ನೀಡುವ ಅಪಾಯವನ್ನು ಉಂಟುಮಾಡಬಹುದು ಎಂದಿದೆ.
ಎನ್’ಐಎ ಅಧಿಕಾರಿಗಳು ಪ್ರಕರಣದ ಸಾಕ್ಷಿ ಮತ್ತು ಮಾಹಿತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ತಲೆಮರೆಸಿಕೊಂಡಿರುವ ಮತ್ತು ಬಂಧಿತ ಆರೋಪಿಗಳ ಕಾಲೇಜು ಮತ್ತು ಶಾಲಾ ಸಮಯದ ಸ್ನೇಹಿತರು ಸೇರಿದಂತೆ ಎಲ್ಲ ಪರಿಚಯಸ್ಥರನ್ನು ಕರೆಸಿ ವಿಚಾರಣೆ ನಡೆಸುತ್ತಿದೆ ಎಂದಿದೆ.
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನನ್ನು ಎನ್’ಐಎ ವಶಕ್ಕೆ ಪಡೆದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಆರೋಪಿಸಿದ್ದರು.
ಎನ್’ಐಎ ಹೇಳಿಕೆಯು ವ್ಯಕ್ತಿಯ ವಿವರಗಳನ್ನು ನೇರವಾಗಿ ನಿರಾಕರಿಸದಿದ್ದರೂ, ಆ ವ್ಯಕ್ತಿ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾನೆ ಮತ್ತು ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ, ಆದರೆ ಬಂಧಿಸಲಾಗಿಲ್ಲ ಎಂದು ಸೂಚಿಸಿದೆ. ಪ್ರಕರಣದ ಆರೋಪಿಯೊಬ್ಬ ತೀರ್ಥಹಳ್ಳಿಯಲ್ಲಿ #Thirthahalli ಬಿಜೆಪಿ ಕಾರ್ಯಕರ್ತ ನಡೆಸುತ್ತಿದ್ದ ಅಂಗಡಿಯಿಂದ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸಿದ್ದ ಎನ್ನಲಾಗಿದೆ.
ಮಾರ್ಚ್ 26 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಪ್ರಮುಖ ಆರೋಪಿ ಮುಝಮ್ಮಿಲ್ ಶರೀಫ್ ನನ್ನು ಎನ್’ಐಎ ಬಂಧಿಸಿತ್ತು. ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶ ಎಂಬ ಮೂರು ರಾಜ್ಯಗಳ ಅನೇಕ ಸ್ಥಳಗಳಲ್ಲಿ ಬೃಹತ್ ದಾಳಿಯ ನಂತರ ಈ ಬಂಧನ ನಡೆದಿದೆ. ಮುಝಮ್ಮಿಲ್ ಷರೀಫ್ ಇತರ ಇಬ್ಬರು ಆರೋಪಿಗಳಿಗೆ ಲಾಜಿಸ್ಟಿಕ್ ಬೆಂಬಲವನ್ನು ನೀಡಿದ್ದರು.
ದಿನೇಶ್ ಗುಂಡೂರಾವ್ ಅವರು ಎಕ್ಸ್’ನಲ್ಲಿ ಪೋಸ್ಟ್ ಮಾಡಿ, ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ವಶಕ್ಕೆ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
— NIA India (@NIA_India) April 5, 2024
ಸ್ಫೋಟಕ್ಕೆ ನಮ್ಮ ಸರ್ಕಾರವೇ ಕಾರಣ ಎಂದ ರಾಜ್ಯದ ಕೇಸರಿ ಮೊಗ್ಗುಗಳು ಈಗ ಏನು ಹೇಳುತ್ತವೆ? ಬಿಜೆಪಿ ಮುಖಂಡನನ್ನು ಎನ್’ಐಎ ವಶಕ್ಕೆ ಪಡೆದಿರುವುದರಿಂದ ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಭಾಗಿಯಾಗಿದೆ ಎಂದರ್ಥವಲ್ಲವೇ? ಧಾರ್ಮಿಕ ರಕ್ಷಣೆಯ ಹೆಸರಿನಲ್ಲಿ ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ಕೇಸರಿ ಭಯೋತ್ಪಾದನೆ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಆರ್’ಎಸ್’ಎಸ್ ಸಿದ್ಧಾಂತಗಳನ್ನು ದೇಶದ ಮೇಲೆ ಹೇರುತ್ತಿರುವ ಕೇಂದ್ರ ಬಿಜೆಪಿ ಇದಕ್ಕೆ ಏನು ಹೇಳುತ್ತದೆ ಎಂದು ಟೀಕಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕ, ಕಾಂಗ್ರೆಸ್ ತಮ್ಮ ಸಹೋದರರನ್ನು ರಕ್ಷಿಸುವ ಸಲುವಾಗಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಅಜ್ಞಾನಿ ಕಾಂಗ್ರೆಸ್ ನಾಯಕರಿಗೆ ಸಾಕ್ಷಿಯನ್ನು ಪ್ರಶ್ನಿಸುವುದು ಮತ್ತು ಆರೋಪಿಯನ್ನು ಪ್ರಶ್ನಿಸುವ ವ್ಯತ್ಯಾಸ ತಿಳಿದಿಲ್ಲ ಎಂದು ಪೋಸ್ಟ್ ಮಾಡಿದೆ.
ಮಾರ್ಚ್ 13 ರಂದು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಉಸ್ತುವಾರಿ ವಹಿಸಿದ್ದ ಎನ್’ಐಎ, ಸ್ಫೋಟದ ಪ್ರಮುಖ ಮಾಸ್ಟರ್ ಮೈಂಡ್ ಎಂದು ನಂಬಲಾದ ಮುಝಮ್ಮಿಲ್ ಶರೀಫ್’ನನ್ನು ಈ ಹಿಂದೆ ಬಂಧಿಸಿತ್ತು. ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ ನಡೆದ ದಾಳಿಗಳ ನಂತರ ಷರೀಫ್ ಬಂಧನವಾಗಿದೆ.ಪ್ರಮುಖ ಶಂಕಿತ ಮುಸ್ಸಾವಿರ್ ಶಜೀಬ್ ಹುಸೇನ್ ಮತ್ತು ಸಹ ಸಂಚುಕೋರ ಅಬ್ದುಲ್ ಮಥೀನ್ ತಾಹಾ ಅವರನ್ನು ಇನ್ನೂ ಬಂಧಿಸಬೇಕಾಗಿದೆ. ಸ್ಫೋಟಕ್ಕೆ ಕಾರಣರಾದವರ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್’ಐಎ ಘೋಷಿಸಿತ್ತು. ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡುವುದಾಗಿ ಸಂಸ್ಥೆ ಭರವಸೆ ನೀಡಿತ್ತು.
ಮಾರ್ಚ್ 1 ರಂದು ಬೆಂಗಳೂರಿನ ಬ್ರೂಕ್ಫೀಲ್ಡ್ ಪ್ರದೇಶದ ಐಟಿಪಿಎಲ್ ರಸ್ತೆಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಸ್ಫೋಟಗೊಂಡಿದ್ದು, ಗ್ರಾಹಕರು ಮತ್ತು ಸಿಬ್ಬಂದಿಗೆ ಗಾಯಗಳಾಗಿವೆ ಮತ್ತು ಸಂಸ್ಥೆಗೆ ಹಾನಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post