ಕಲ್ಪ ಮೀಡಿಯಾ ಹೌಸ್ | ಲೇಖನ: ರಘುರಾಮ |
ಅರಬ್ #Arab ರಾಷ್ಟ್ರದ ದುಬೈನ #Dubai ಅಜ್ಮಾನ್ ಇಂಡಿಯನ್ ಅಸೋಸಿಯೇಷನ್‌ನಲ್ಲಿ ಸೆ. 8ರ ಶುಕ್ರವಾರ ಯತಿಶ್ರೇಷ್ಠರೆಂದೇ ಪರಿಚಿತರಾದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352 ನೇ ಆರಾಧನಾ ಮಹೋತ್ಸವದ ಅಂಗವಾಗಿ ವಿಶೇಷ ಧಾರ್ಮಿಕ ಮಹೋತ್ಸವ ಆಯೋಜನೆಗೊಂಡಿದೆ. ಇದಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳೇ ಪ್ರಧಾನರು. ಸಾಗರದ ಆಚೆ ಇರುವ ರಾಯರ ಸೇವಕರು ಒಂದೆಡೆ ಮಿಲನಗೊಂಡು ಭಕ್ತಿ ಭಾವದಿಂದ ಈ ಮಹೋತ್ಸವವನ್ನು ಸಂಪನ್ನಗೊಳಿಸಲು ಈಗ ಸಂಭ್ರಮದಿಂದಲೇ ಅಣಿಯಾಗಿದ್ದಾರೆ. ಶ್ರೀ ರಾಘವೇಂದ್ರ ಸೇವಾ ಸಮಿತಿ ಯುಎಇ #UAE ನೇತೃತ್ವದಲ್ಲಿ ನಡೆಯಲಿರುವ ಆರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ಒಂದು ವಿಶೇಷ ಲೇಖನ…
ಎತ್ತಣ ಮಾಮರ, ಎತ್ತಣ ಕೋಗಿಲೆ, ಎತ್ತಣ ರಾಘವೇಂದ್ರ ಗುರು ಸಾರ್ವಭೌಮರು-ಎಲ್ಲಿಯ ದುಬೈ….. ಇದೇನು ಸಂಬಂಧ ಎಂದು ಎಣಿಸಬೇಡಿ. ರಾಯರ ಹೆಸರೊಂದೇ ಈ ಎಲ್ಲ ಸಂಬಂಧವನ್ನು ಜೋಡಿಸಿ, ಸಾವಿರಾರು ಮೈಲು ದೂರದಲ್ಲಿರುವ ಭಾರತೀಯ ಮೂಲದ ಭಕುತರನ್ನು ಒಂದುವೇದಿಕೆಯಡಿ ಬಂಧಿಸಿದೆ. ಅದೂ ಪ್ರೀತಿಯಿಂದ, ವಿಶ್ವಾಸದಿಂದ ಮತ್ತು ರಾಯರ ಬಗ್ಗೆ ಇರುವ ಅಪಾರ ಭಕ್ತಿ, ಶ್ರದ್ಧೆಗಳಿಂದ….
ಗಗನಚುಂಬಿ ಕಟ್ಟಡಗಳ ನಗರ ಹಾಗೂ ವಿದೇಶಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವೆಂದೇ ಹೆಸರಾಗಿರುವ ದುಬೈ #Dubai ನಗರಕ್ಕೆ ಈಗ ಮತ್ತೊಂದು ಆಕರ್ಷಣೀಯ ಛಾಪು ಮೂಡಿಸಿದವರು ಮಂತ್ರಾಲಯ ಮಂದಿರ ನಿವಾಸಿ ರಾಘವೇಂದ್ರ ಸ್ವಾಮಿಗಳು. ವಿವಿಧ ಮಹಲು, ಕಟ್ಟಡ, ವಸ್ತು ಸಂಗ್ರಹಾಲಯ ಮತ್ತು ಮರಳುಗಾಡಿನ ಸಾರಿ ಮೂಲಕ ದುಬೈ ಕೀರ್ತಿ ಪಾತಕೆ ವಿಶ್ವ ಮಟ್ಟದಲ್ಲಿ ಹಾರಿದೆ. ಇದಕ್ಕೆಲ್ಲ ಮುಕುಟಮಣಿಯಾಗಿ ಮತ್ತೊಂದು ಹೊಸ ದಾಖಲೆಗೆ ದುಬೈ ನಗರ ಸಾಕ್ಷಿಯಾಗಲು ಗುರು ರಾಯರು ಹೊಸ ಮುನ್ನುಡಿ ಬರೆಸಿದ್ದಾರೆ. ಅದುವೇ ಶ್ರೀ ರಾಘವೇಂದ್ರರ ಆರಾಧನೋತ್ಸವ.
ಅಲ್ಲೋ ಇಲ್ಲೋ ಕೆಲ ಮನೆಗಳಲ್ಲಿ, ಕೆಲವು ಜನಗಳಿಗೆ ಮಾತ್ರ, ಕೆಲವೊಮ್ಮೆ ಮನೆ ಮಂದಿಗಷ್ಟೇ ಸೀಮಿತವಾಗಿ ನಡೆಯುತ್ತಿದ್ದ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಈಗ ಒಂದು ಮಹೋತ್ಸವವಾಗಿ ರೂಪುಗೊಂಡಿದೆ.
ಧಾರ್ಮಿಕ ವಿಧಿಯಂತೆ ಮಹೋತ್ಸವದ ಪೂರ್ತಿ ದಿವಸ ಅಚ್ಚುಕಟ್ಟಾಗಿ ನಡೆಸಿಕೊಡುವುದಕ್ಕೆ ಪೂನಾದ ರಾಯರ ಮಠದ ವ್ಯವಸ್ಥಾಪಕರಾದ ಶ್ರೀ ದತ್ತಾತ್ರೇಯ ಜೋಶಿ ಮತ್ತವರ ಶಿಷ್ಯ ವೃಂದ ಆಗಮಿಸಿ ಪೂಜಾ #Pooja ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ.
ರಾಘವೇಂದ್ರ ಗುರುಗಳ ಮಹೋತ್ಸವದ ವಿಶೇಷತೆಯ ಸುದಿನ. ಧ್ಯಾನದ ಬಗ್ಗೆ ಹಾಗೂ ಸನಾತನ ಧರ್ಮದ ವಿಚಾರಗಳನ್ನು ಮನಮುಟ್ಟುವಂತೆ ತಿಳಿಸಿಕೊಡಲು ಅಧ್ಯಾತ್ಮಿಕ ಚಿಂತಕರಾದ, ರಾಯರ ಅನನ್ಯ ಭಕ್ತರಾದ ಶ್ರೀ ವೇಣುಗೋಪಾಲ ಗುರೂಜಿ ಆಗಮಿಸಲಿದ್ದಾರೆ. ಯುಎಇ ನ ಹಲವು ಭಜನಾ ಮಂಡಳಿಗಳಿಂದ ರಾಯರ ಭಜನೆ, ಸ್ತೋತ್ರ ಹಾಗೂ ನೃತ್ಯ ರೂಪಕ ರೂಪಕಗಳನ್ನು ಆಯೋಜಿಸಲಾಗಿದೆ . ರಾಯರ ಪರಮ ಭಕ್ತರಾದ ಕಲಾವಿದ ರವಿ ಸಂತು ರಾಯರ ಕುರಿತಾದ ಭಕ್ತಿಗೀತೆಗಳನ್ನು ಹಾಡಿ ರಂಜಿಸಲಿದ್ದಾರೆ.
ರಾಯರ ಅಭಿಲಾಷೆಯಂತೆ ಈ ರೀತಿಯ ರಾಯರ ಮಹೋತ್ಸವಗಳನ್ನು ಹಾಗೂ ಆರಾಧನೆಗಳನ್ನು ಯುಎಇ ಯಲ್ಲಿ ನಡೆಸಿಕೊಡಲು ಪ್ರಮುಖ ಪಾತ್ರ ವಹಿಸುತ್ತಿರುವ ಡಾ. ವಿಜಯ್, ಸದನ್ ದಾಸ್ ಮತ್ತು ಮಧು ಅವರ ವಿಶೇಷ ಸೇವೆಗೆ ಇಡೀ ಯುಎಇ ಗುರುರಾಯರ ಭಕ್ತ ವೃಂದ ಶರಣಾಗಿದೆ. ಭಕ್ತಿಯಿಂದ ಕೈಜೋಡಿಸಿದೆ. ಧನ್ಯತೆಯಿಂದ ಸಹಕಾರ ನೀಡಿದೆ.
`ವಿಜಯ’ದಲ್ಲಿ `ಮಧು’ ಹಂಚಿದ ಸೇವಕರು
ಕಲಿಯುಗದ ಕಾಮಧೇನು, ಬೇಡಿದವರ ಇಷ್ಟಾರ್ಥ ನೆರವೇರಿಸುವ ರಾಘವೇಂದ್ರ ಸ್ವಾಮಿಗಳವರ 398 ನೇ ಪಟ್ಟಾಭಿಷೇಕ ಮಹೋತ್ಸವ, ಮತ್ತು 424 ನೇ ವರ್ಧಂತಿ ಉತ್ಸವ ಮಂತ್ರಾಲಯ #Mantralaya ಸೇರಿ ದೇಶದೆಲ್ಲೆಡೆ ಫಾಲ್ಗುಣ ಮಾಸದಲ್ಲಿ ( 2019ರಲ್ಲಿ) ವಿಜೃಂಭಣೆಯಿಂದ ನಡೆಯಿತು. ಇದೇ ಸಂದರ್ಭದಲ್ಲಿ ನಾವೂ ಏಕೆ ರಾಯರ ವರ್ಧಂತಿ ಉತ್ಸವ ಮಾಡಬಾರದು ಎಂಬ ಚಿಂತನೆ ದುಬೈನ ಖ್ಯಾತ ಇಂಜಿನಿಯರ್‌ಗಳಾದ ಡಾ. ವಿಜಯ್, ಮಧು ಅವರಲ್ಲಿ ಉಗಮಿಸಿತು. ತಕ್ಷಣ ಅವರು ಕಾರ್ಯ ಪ್ರವೃತ್ತರಾದರು. ಸಹ ಚಿಂತಕರನ್ನು ಒಗ್ಗೂಡಿಸಿದರು. ದುಬೈ #Dubai ಮಹಾನಗರದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ರಾಯರ ವರ್ಧಂತಿ ಉತ್ಸವ 2019ರ ಮಾರ್ಚಿ 22ರಂದು ಅದ್ದೂರಿಯಾಗಿ ಸಂಪನ್ನಗೊಂಡಿತು. ಈ ಬಾರಿ ಈ ಉತ್ಸವಕ್ಕೆ ಮತ್ತೊಬ್ಬ ಭಕ್ತರಾದ ಸಾಧನ ದಾಸ್ ಕೈಜೋಡಿಸಿರುವುದು ವಿಶೇಷ.
ರಾಯರ ಮಹಿಮೆಗೆ, ಕೃಪೆಗೆ ಒಳಗಾದ, ಒಂದಿಲ್ಲೊಂದು ರೀತಿಯಲ್ಲಿ ರಾಯರ ಪವಾಡ ಮತ್ತು ಕೃಪೆಗೆ ಪಾತ್ರರಾದ ನೂರಾರು ಭಕ್ತರು ಜಾತಿ-ಮತದ ಅಂತರ ತೊರೆದು ರಾಯರ ಹೆಸರಿನಲ್ಲಿ ಒಂದೆಡೆ ಸಂಗಮವಾಗಿದ್ದು ಹೊಸ ಇತಿಹಾಸ ನಿರ್ಮಾಣ ಮಾಡಿತು. ಸಾಮಾನ್ಯವಾಗಿ ದುಬೈ ಎಂದರೆ ಹಲವರ ಕಲ್ಪನೆಯಲ್ಲಿ ಮೂಡುವ ಚಿತ್ರಣವೇ ಬೇರೆ. ಆದರೆ ರಾಘವೇಂದ್ರ ಸ್ವಾಮಿಗಳ #RaghavendraSwamiji ಬಗೆಗಿನ ಭಕ್ತಿ ಮತ್ತು ಅವರೇ ನೀಡಿದ ಅಪಾರ ಶಕ್ತಿ- ಇಂಧನ ಸಾಮ್ರಾಜ್ಯದಲ್ಲೂ ಭಾರತೀಯ ಧರ್ಮ ಸಾಮ್ರಾಜ್ಯವನ್ನೇ ಮನ-ಮನೆಯಂಗಳದಲ್ಲಿ ಸೃಷ್ಟಿ ಮಾಡಿತು. ಈ ವರ್ಧಂತಿ ಉತ್ಸವದ ಪ್ರೇರಣೆಯಿಂದಲೇ ಈಬಾರಿ ಮತ್ತೆ ರಾಯರ ಆರಾಧನಾ ಉತ್ಸವ ಆಯೋಜನೆಗೊಂಡಿದೆ.
ದತ್ತಾತ್ರೇಯ ಜೋಶಿ ತಂಡದ ಸಾರಥ್ಯ
ಮಂತ್ರಾಲಯದಲ್ಲಿ ಅಧ್ಯಯನ ಮಾಡಿ ಸದ್ಯ ಪೂನಾದ ರಾಘವೇಂದ್ರ ಸ್ವಾಮಿಗಳ ಮಠದ ಉಸ್ತುವಾರಿ ವಹಿಸಿಕೊಂಡಿರುವ ದತ್ತಾತ್ರೇಯ ಜೋಷಿ ಅವರು ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಲು ಈ ಬಾರಿಯೂ ಆಗಮಿಸುತ್ತಿದ್ದಾರೆ. ರಾಯರ ಪ್ರತಿಮೆಗೆ ಮತ್ತು ವಿವಿಧ ಸಾಲಿಗ್ರಾಮಗಳಿಗೆ ಅಭಿಷೇಕ, ಪಂಚಾಮೃತ, ಅಲಂಕಾರ, ಕನಕಾಭಿಷೇಕ – ಈ ಸಂದರ್ಭದಲ್ಲಿ ರಾಯರ ಅಷ್ಟೋತ್ತರ ಪುನಶ್ಚರಣಗಳೆಲ್ಲವೂ ಮಂತ್ರಾಲಯದ ವಿಧಿಗಳ ಪ್ರಕಾರವೇ ನಡೆಯಲಿದೆ.
ಪರಿಮಳ ಭರಿತ ವಿವಿಧ ಹೂವುಗಳಲ್ಲಿ ಪರಿಮಳಾಚಾರ್ಯರೆಂದೇ #Parimalacharya ಖ್ಯಾತರಾದ ರಾಯರ ವೃಂದಾವನದ ಪ್ರತಿಕೃತಿಯನ್ನು ನಿರ್ಮಿಸಲಾಗುತ್ತದೆ. ಇಡೀ ಸಭಾಂಗಣದಲ್ಲಿ ಹೊಸದಾಗಿ ವೃಂದಾವನ ಪ್ರತಿಷ್ಠಾಪನೆ ಆಗಿದೆಯೋ ಎಂಬಂತೆ ಭಾಸವಾಗುವುದು ಇಲ್ಲಿನ ವಿಶೇಷತೆ. ಇದು ಧನಾತ್ಮಕ ಬೆಳವಣಿಗೆ. ಮಾತ್ರವಲ್ಲ, ಭಾರತೀಯ ಸನಾತನ ಪರಂಪರೆಗೆ ಕಲಶ ಇಟ್ಟು, ಸಕಲ ಮತದವರಿಗೂ ದರ್ಶನ ನೀಡಿದ, ಅವರೆಲ್ಲರ ಅಪೇಕ್ಷೆ, ಬೇಡಿಕೆ ಈಡೇರಿಸಿದ ರಾಘವೇಂದ್ರ ಸ್ವಾಮಿಗಳ ಮಹಿಮೆಯ ಪ್ರತೀಕವೇ ಆಗಿದೆ ಈ ಆರಾಧನಾ ಉತ್ಸವ.
ಕರೆದಲ್ಲಿಗೆ ಬರುವ ವಿಶ್ವಸಂತ ನಮ್ಮ ರಾಯರು…
ಭವ ಜೀವಿಗಳ ದೃಷ್ಟಿಯಿಂದ ಕಣ್ಮರೆಯಾಗಿ 3 ಶತಮಾನ ಕಳೆದರೂ ಮಧ್ವ ಮುನಿಯ ಈ ಮುದ್ದು ಕುವರ ಕರೆದಲ್ಲಿಗೆ ಬರುವಷ್ಟು ದಯಾಮಯಿ. ಹಾಗಾಗಿ ರಾಯರನ್ನು ಭಕ್ತಗಣವೇ ಕಾಮಧೇನು ಎಂದು ಕರೆದು ಧನ್ಯತೆ ಮೆರೆಯಿತು. ನೂರಾರು ದಾಸರು, ಸಾವಿರಾರು ಭಕ್ತರು, ಕೋಟಿ ಕೋಟಿ ಪಾಮರರು ಭಕುತಿಯಿಂದ ಬಯಸುವ ಹೆಸರೇ ರಾಘವೇಂದ್ರ. ಅವರ ಜ್ಞಾನ, ಭಕ್ತಿ ಮತ್ತು ವೈರಾಗ್ಯದ ತಪೋಶಕ್ತಿ ಎಷ್ಟೆಂದು ನಾವು ಊಹಿಸಿದಷ್ಟೂ ಅದು ವಿಸ್ತಾರ. ಹರಿ ಸರ್ವೋತ್ತಮ ತತ್ವವನು ಎಳ್ಳಷ್ಟೂ ಅನುಮಾನವಿಲ್ಲದೆ ನಂಬಿದ ಫಲ, ಅನನ್ಯವಾಗಿ ಮೂಲ ರಾಮದೇವರ ಉಪಾಸನೆಯ ಬಲಗಳಿಂದ ರಾಯರು ಅತ್ಯಂತ ಸರಳವಾಗಿ ಭವ ಲೋಕದ ಜೀವಿಗಳಿಗೆ ಹೇಳಿದ ಸಂದೇಶದ ಉದಾತ್ತತೆಯೇ ಬಣ್ಣಿಸಲು ಅಸದಳ.
ಕಟ್ಟ ಕಡೆಯ ವ್ಯಕ್ತಿಯನ್ನೂ ದೇವರೆಡೆಗೆ ಕರೆದೊಯ್ಯುವ ನಾಯಕರಾಗಿ ರಾಯರು ಧಾರ್ಮಿಕ ರಂಗದಲ್ಲಿ ಪ್ರಧಾನರಾದರು. ಹಾಗಾಗಿ ಮಂಚಾಲೆಯ ಮಹಾ ಮಹಿಮರೆಂದೇ ಖ್ಯಾತರಾದರು. ಅವರ ಜೀವನವೇ ಒಂದು ಭವ್ಯ ವೇದಿಕೆ. ಅದನ್ನು ಎಷ್ಟು ಬಾರಿ ಅವಲೋಕಿಸಿದರೂ ಕನಿಷ್ಠ ಎನಿಸುವುದು ವಾಡಿಕೆ. ಭಾರತೀಯ ಇತಿಹಾಸದಲ್ಲಿ ಆಯಾ ಕಾಲ ಘಟ್ಟಕ್ಕೆ ಹಲವರು ಜನರನ್ನು ಮತ ಪರಿವರ್ತನೆ ಮಾಡಿದರು. ಆದರೆ ರಾಯರು ಮತಿ ಪರಿವರ್ತನೆ ಮಾಡಿ ಬಹು ವಿಶಿಷ್ಠರಾದರು.
ಅದು ಲಕ್ಷಾಂತರ ಜನರ ಜೀವನ ಗತಿಯನ್ನೇ ಸುಧಾರಿಸಿತು. ಸಮಾಜಮುಖಿಯಾಗಿ ಸಮನ್ವಯಿಸಿತು. ತುಂಗೆಯ ತಟದಲ್ಲಿ ಉತ್ತುಂಗ ಮುನಿ ಎನಿಸಿದರು ಈ ರಾಯರು. ಕೋಟಿ, ಕೋಟಿ ಜನರನು ಪಾವನ ಮಾಡಿದ್ದಾರೆ. ಹಾಗಾಗಿ ಪವಿತ್ರ ಮಂತ್ರಾಲಯ #Mantralaya ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ದೇಶ- ವಿದೇಶದಲ್ಲಿ ಇಂದು ರಾಯರ ಆರಾಧನೆ ನಡೆಯುತ್ತಿದೆ ಎಂದರೆ ಅದರಕ್ಕೆ ರಾಯರ ತಪೋ ಮಹತ್ತೇ ಸಾಕ್ಷಿ. ಕರುಣೆಯ ಕಡಲಾಗಿರುವ ರಾಯರು ಕಡಲಾಚೆಗೂ ಭಕುತ ಕೋಟಿಯನ್ನು ಭಕ್ತಿ ಭಾವದಲ್ಲಿ ಮಿಂದೇಳುವ ಕೃಪೆ ತೋರುತ್ತ ಇರುವುದು ಮಹತ್ವದ ಸಂಗತಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post