ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅಯೋಧ್ಯೆಯಂತೆಯೇ ಕಾಶಿ ಹಾಗೂ ಮಥುರಾಗಳಲ್ಲೂ ದೇವಾಲಯ ನಿರ್ಮಾಣವಾಗಬೇಕು ಎಂದು ಹೇಳಿರುವ ವಿಚಾರದಲ್ಲಿ ನನ್ನನ್ನು ಬಂಧಿಸುವುದಾದರೆ ಜೈಲಿಗೆ ಹೋಗಲು ಸಿದ್ದವಾಗಿದ್ದೇನೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಕಾಶಿ ಹಾಗೂ ಮಥುರಾದಲ್ಲೂ ಸಹ ಮಸೀದಿಗಳನ್ನು ತೆಗೆದು, ಪೂರ್ಣ ದೇವಾಲಯದ ನಿರ್ಮಾಣವಾಗಬೇಕು ಎಂಬುದಕ್ಕೆ ನಾನು ಬದ್ದವಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಾಶಿ ಹಾಗೂ ಮಥುರಾಗೆ ನಾನು ಹೋಗಿ ಸ್ವತಃ ಅಲ್ಲಿನ ಪರಿಸ್ಥಿತಿಯನ್ನು ನೋಡಿಕೊಂಡು ಬಂದಿದ್ದೇನೆ. ಅಲ್ಲಿ ಕೃಷ್ಣನ ದೇವಾಲಯವನ್ನು ಧ್ವಂಸ ಮಾಡಿ ಅರ್ಧ ದೇವಾಲಯ ಹಾಗೂ ಅರ್ಧ ಮಸೀದಿ ನಿರ್ಮಿಸಲಾಗಿದೆ. ಅದೇ ರೀತಿ, ಪುಣ್ಯ ಕ್ಷೇತ್ರ ಕಾಶಿಗೆ ನಾನು ಹೋದಾಗಲೂ ಸಹ ನೋಡಿದ್ದೇನೆ. ಅಲ್ಲಿಯೂ ಸಹ ಅರ್ಧ ದೇವಾಲಯ ಹಾಗೂ ಅರ್ಧ ಮಸೀದಿ ಇದೆ. ಇದು ನನಗೆ ಮಾತ್ರವಲ್ಲ ಎಲ್ಲ ಹಿಂದೂಗಳಿಗೂ ನೋವಿನ ವಿಚಾರವಾಗಿದೆ ಎಂದರು.
ಆಗಸ್ಟ್ 5ರಂದು ನಾನು ಮಾತನಾಡಿದ್ದ ವೇಳೆ ಇದೇ ನನ್ನ ಹಾಗೂ ಸಮಸ್ತ ಹಿಂದೂಗಳ ಮನದಾಳದ ಮಾತನ್ನು ಹೇಳಿದ್ದೇನೆ. ಈ ದೇಶದಲ್ಲಿ ಲಕ್ಷಾಂತರ ಮಸೀದಿಗಳಿವೆ ನಾನು ಬೇರೆ ಯಾವುದರ ಬಗ್ಗೆಯೂ ಸಹ ಮಾತನಾಡಿಲ್ಲ. ಸ್ವತಂತ್ರ ಭಾರತದಲ್ಲಿ ಕೇವಲ ರಸ್ತೆ, ಸೇತುವೆ, ಕಟ್ಟಡ ನಿರ್ಮಾಣ ಮಾಡುವುದೇ ಅಭಿವೃದ್ದಿಯಲ್ಲ. ಸ್ವತಂತ್ರ ಹೋರಾಟಗಾರರೂ ಸಹ ಇಚ್ಚೆ ಪಟ್ಟಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಶ್ರದ್ದಾ ಕೇಂದ್ರಗಳು ನಿರ್ಮಾಣವಾಗಬೇಕು. ಇದನ್ನೇ ನಾನು ಹೇಳಿದ್ದೇನೆಯೇ ಹೊರತು, ಮುಸ್ಲಿಂರನ್ನು ನೋಯಿಸುವ ಉದ್ದೇಶ ನನಗಿಲ್ಲ ಎಂದು ಸ್ಪಷ್ಟಪಡಿಸಿದರು.

Get In Touch With Us info@kalpa.news Whatsapp: 9481252093







Discussion about this post