ಹೌದು… ಈ ಮಾತನ್ನು ತೀವ್ರವಾಗಿ ಉಮ್ಮಳಿಸಿ ಬರುತ್ತಿರುವ ದುಃಖದಿಂದಲೇ ಬರೆಯುತ್ತಿದ್ದೇನೆ…
ನೆನಪಿನಲ್ಲಿಟ್ಟುಕೊಳ್ಳಿ ಅಟಲ್ ಜೀ… ನೀವು ಈ ಭೂಮಿಯ ಋಣ ತೀರಿಸಿಕೊಂಡು ಹೊರಟಿರಬಹುದು. ಆದರೆ, ನಾವು ನಿಮ್ಮ ಋಣ ತೀರಿಸುವುದಕ್ಕೆ ಬಾಕಿ ಇದೆ. ಇದಕ್ಕಾಗಿ ನೀವು ಮತ್ತೆ ಭಾರತಲ್ಲೇ ಹುಟ್ಟಿ ಬರಬೇಕು…
ಎಷ್ಟೆಲ್ಲಾ ಋಣವನ್ನು ನಮ್ಮ ಮೇಲೆ ಹೊರಿಸಿ, ಯಾರಿಗೂ ಹೇಳದ ಹಾಗೆ ನೀವು ಹೊರಟುಬಿಟ್ಟರೆ ಹೇಗೆ.. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಪ್ರತಿನಿತ್ಯ ನೀವು ಮತ್ತೆ ಭಾರತದಲ್ಲೇ ಹುಟ್ಟಿ ಬರಬೇಕು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಲೇ ಇರುತ್ತೇವೆ. ಎಲ್ಲಿಯವರೆಗೆ? ಪ್ರಾರ್ಥನೆ ಭಗವಂತನಿಗೆ ತಲುಪಿ, ಅದು ನಿಮಗೆ ತಲುಪಿ, ನೀವು ಮತ್ತೆ ಹುಟ್ಟಿ ಬರುವವರೆಗೂ… ಭಾರದ ಮನಸ್ಸಿನಿಂದ ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇವೆ ಮರೆಯದಿರಿ.
ಈ ಋಣವನ್ನು ನಾವು ತೀರಿಸಬೇಡವೇ?
ದೇಶಕ್ಕಾಗಿ, ನಮ್ಮಂತಹವರ ಶ್ರೇಯಸ್ಸಿಗಾಗಿ, ತಾಯಿ ಭಾರತಿಗಾಗಿ ನೀವು ವಿವಾಹವಾಗದೇ ಕೊನೆಯವರೆಗೂ ಬ್ರಹ್ಮಚಾರಿಯಾಗಿಯೇ ಇದ್ದು, ನಿಮ್ಮ ವೈಯಕ್ತಿಕ ಜೀವನ ತ್ಯಾಗ ಮಾಡಿದ್ದೀರಿ. ಇದಕ್ಕಾಗಿ ನೀವು ಎಂದಿಗೂ ಪರಿತಪಿಸಿಲ್ಲ ಎನ್ನುವುದು ನಮಗೆ ಗೊತ್ತು. ಆದರೆ, ನಿಮ್ಮ ಈ ತ್ಯಾಗದ ಋಣವನ್ನು ನಾವು ತೀರಿಸಬೇಡವೇ?
ಮೂರು ಬಾರಿ ಪ್ರಧಾನಿಯಾದರೂ ನಮ್ಮ ತೆರಿಗೆ ದುಡ್ಡನ್ನು ತಿನ್ನದೇ, ನಿಮಗಾಗಿ ಏನನ್ನೂ ಮಾಡಿಕೊಳ್ಳದೇ ನಮ್ಮ ಸೇವೆ ಮಾಡಿದ್ದೀರಿ. ಈ ಋಣವನ್ನು ನಾವು ತೀರಿಸಬೇಡವೇ?
ನಿಮ್ಮ ಅವಧಿಯಲ್ಲಿ ನಡೆದ ಅಣ್ವಸ್ತ್ರ ಪರೀಕ್ಷೆಯ ಯಶಸ್ಸಿನಿಂದ ಇಡಿಯ ವಿಶ್ವ ನಮ್ಮನ್ನು ನೋಡುವ ದೃಷ್ಠಿಕೋನವನ್ನೇ ಬದಲಿಸಿಕೊಂಡು, ನಮ್ಮೆಲ್ಲರ ಗೌರವ ಹೆಚ್ಚಾಗುವಂತೆ ಮಾಡಿದಿರಿ. ಈ ಋಣವನ್ನು ನಾವು ತೀರಿಸಬೇಡವೇ?
ಅಮೆರಿಕಾದ ಸಂಸತ್‌ನಲ್ಲಿ ನಮ್ಮ ದೇಶದ ಅಧಿಕೃತ ಭಾಷೆ ಹಿಂದಿಯಲ್ಲಿ ಮಾತನಾಡಿ, ವಿಶ್ವದ ದೊಡ್ಡಣ್ಣ ನಮ್ಮ ವಿಚಾರದಲ್ಲಿ ಮೃದುವಾಗುವಂತೆ ಮಾಡಿದ್ದೀರಿ. ಈ ಋಣವನ್ನು ನಾವು ತೀರಿಸಬೇಡವೇ?
ಕಾರ್ಗಿಲ್ ಯುದ್ಧವನ್ನು ಸಾರಿ, ಸೈನಿಕರಿಗೆ ಬಲ ತುಂಬಿ, ಪಾಪಿ ಪಾಕಿಸ್ಥಾನ ಕನಸಿನಲ್ಲೂ ಉಚ್ಚೆ ಮಾಡಿಕೊಳ್ಳುವಂತೆ ಬಡಿದು ಹಾಕುವಲ್ಲಿ ಸೇನೆಯ ಮೂಲಕ ನೀವು ಯಶಸ್ವಿಯಾಗಿದ್ದಿರಿ. ಇದನ್ನು ನಿಮಗಾಗಿ ಮಾಡಿಕೊಂಡಿರೇ? ಇಲ್ಲವಲ್ಲ ನಮಗಾಗಿ ಅಲ್ಲವೇ ಮಾಡಿದ್ದು. ಈ ಋಣವನ್ನು ನಾವು ತೀರಿಸಬೇಡವೇ?
ಇಂಡಿಯನ್ ಏರ್ ಲೈನ್‌ಸ್ ವಿಮಾನ ಹೈಜಾಕ್ ಆದಾಗ, ಉಗ್ರರನ್ನು ಬಿಟ್ಟು ಆನಂತರ ನೋಡಿಕೊಳ್ಳೋಣ. ಆದರೆ, ಈಗ ನಮ್ಮ ಕುಟುಂಬ(ದೇಶದ) ಸದಸ್ಯರು ಮುಖ್ಯ ಎಂದು ಉಗ್ರರನ್ನು ಬಿಡುಗಡೆ ಮಾಡಿ, ನಮ್ಮವರನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬಂದಿರಲ್ಲ. ಆ ನಮ್ಮವರೆಲ್ಲಾ ನಿಮ್ಮ ಋಣ ತೀರಿಸಬೇಡವೇ?
ದೇಶದಲ್ಲಿ ಸುವರ್ಣ ಚತುಷ್ಪತ ಹೆದ್ದಾರಿ ನಿರ್ಮಾಣ ಮಾಡುವ ಮೂಲಕ ನಾವೆಲ್ಲಾ ನೆಮ್ಮದಿಯಿಂದ ಸುಖಕರ ಪ್ರಯಾಣ ಮಾಡಲು ಕಷ್ಟಪಟ್ಟಿರಲ್ಲ ನಮಗಾಗಿ.. ಆ ಋಣವನ್ನು ನಾವು ತೀರಿಸಬೇಡವೇ?
ಸರ್ವ ಶಿಕ್ಷಾ ಅಭಿಯಾನದ ಮೂಲಕ ದೇಶದ ಭವಿಷ್ಯಗಳಾದ ಮಕ್ಕಳನ್ನು ಶಿಕ್ಷಿತರಾಗಿ ರೂಪಿಸುವಂತೆ ಪರಮ ಪವಿತ್ರವಾದ ಕಾರ್ಯ ಮಾಡಿದ್ದಿರಲ್ಲಾ. ಆ ಋಣವನ್ನು ನಾವು ತೀರಿಸಬೇಡವೇ?
ನೀವು ಇಂದು ನಮ್ಮನ್ನು ಬಿಟ್ಟು ಹೋಗುತ್ತಿದ್ದೀರಿ. ಆದರೆ, ನಿಮ್ಮನ್ನು ಎಂದಿಗೂ ನೇರವಾಗಿ ಕಾಣದ ಕೋಟ್ಯಂತರ ಭಾರತೀಯರು ನಿಮಗಾಗಿ ಕಣ್ಣೀರಿಡುತ್ತಿದ್ದಾರೆ ಎಂದರೆ ಅದು ನೀವು ದೇಶವಾಸಿಗಳಲ್ಲಿ ಹುಟ್ಟು ಹಾಕಿದ ಅನುಬಂಧ ಹಾಗೂ ಭಾವನೆ. ಇಷ್ಟು ಆತ್ಮೀಯತೆಯನ್ನು ನಮ್ಮಲ್ಲಿ ಹುಟ್ಟು ಹಾಕಿದ ನಿಮ್ಮ ಆ ಋಣವನ್ನು ನಾವು ತೀರಿಸಬೇಡವೇ?
ನಿಮ್ಮನ್ನು ನೋಡಿ ನಾವೂ ಹೀಗೆ ಬದುಕಬೇಕು, ದೇಶಕ್ಕಾಗಿ ಏನಾದರೂ ಮಾಡಬೇಕು, ನಮ್ಮ ಮಕ್ಕಳನ್ನೂ ಸಹ ನಿಮ್ಮಂತೆಯೇ ರೂಪಿಸಬೇಕು ಎಂಬ ಕನಸು, ಛಲ ಹಾಗೂ ಆತ್ಮವಿಶ್ವಾಸವನ್ನು ನಮಗೆ ಕಲಿಸಿದ್ದೀರಿ. ಈ ಋಣವನ್ನು ನಾವು ತೀರಿಸಬೇಡವೇ?
ಎಲ್ಲಕ್ಕೂ ಮಿಗಿಲಾಗಿ, ನರೇಂದ್ರ ಮೋದಿ ಅವರಂತಹ ಮಹಾನ್ ಪ್ರಧಾನ ಸೇವಕನನ್ನು ಈ ದೇಶಕ್ಕೆ ಕೊಡುಗೆಯನ್ನಾಗಿ ನೀಡುವ ಮೂಲಕ ದೇಶಕ್ಕೆ ನೀವು ಎಂತಹ ಕೊಡುಗೆ ನೀಡಿದ್ದೀರಿ ಗೊತ್ತೇನು. ಹಿಂದೆ 100 ವರ್ಷ, ಮುಂದೆ 100 ವರ್ಷ ಇಂತಹ ಕೊಡುಗೆ ನೀಡಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಈ ಕೊಡುಗೆಯಿಂದ ನಾವೆಲ್ಲಾ ವಿಶ್ವದಲ್ಲಿ ಹೆಮ್ಮೆಯಿಂದ ಬೀಗುತ್ತಾ ಮನದುಂಬಿಕೊಳ್ಳುತ್ತಿದ್ದೇವೆ. ಆ ಋಣವನ್ನು ನಾವು ತೀರಿಸಬೇಡವೇ?
ನೀವು ಹೊರಿಸಿರುವ ಋಣದ ಪಟ್ಟಿಯನ್ನು ಅಷ್ಟು ಸುಲಭವಾಗಿ ಹೇಳಲು ಸಾಧ್ಯವಿಲ್ಲ.
ಎಷ್ಟೆಲ್ಲಾ ಋಣಗಳನ್ನು ನಮ್ಮ ಮೇಲೆ ಹೊರಿಸಿ, ಹೇಳದೇ ಕೇಳದೇ ಹೊರಟುಬಿಟ್ಟರೆ ನಾವೇನು ಮಾಡಬೇಕು? ನೀವು ಭೂಮಿಯ ಋಣ ತೀರಿಸಿಕೊಂಡು ತಾಯಿ ಭಾರತಿಯ ಪಾದಪದ್ಮಗಳಿಗೆ ಹೊರಟುಬಿಟ್ಟಿರಿ.
ನಿಜ… 2004ರಲ್ಲಿ ನಮ್ಮ ಜನ ತಪ್ಪು ನಿರ್ಧಾರ ಕೈಗೊಂಡು ನಿಮಗೆ ಇನ್ನಿಲ್ಲದಂತೆ ನೋವು ನೀಡಿದ್ದರು. ಆದರೆ, ಈಗ ಜನ ಬದಲಾಗಿದ್ದಾರೆ. ಇನ್ನು ಮುಂದೆ ಇಂತಹ ತಪ್ಪುಗಳನ್ನು ನಾವು ಮಾಡುವುದಿಲ್ಲ. ಹಿರಿಯರಾದ ನೀವು ಸಮಸ್ತ ಭಾರತೀಯರನ್ನೊಮ್ಮೆ ಕ್ಷಮಿಸಿ ಬಿಡಿ.
ನೀವು ಹೊರಿಸಿದ ಋಣವನ್ನು ನಾವು ತೀರಿಸುವುದು ಇನ್ನೂ ಬಾಕಿಯಿದೆ. ಇದಕ್ಕಾಗಿ ನೀವು ಮತ್ತೆ ಭಾರತದಲ್ಲೇ ಹುಟ್ಟಿ ಬರಬೇಕು ನೆನಪಿರಲಿ..
ನಿಮಗಾಗಿ ನಮ್ಮ ಪ್ರಾರ್ಥನೆ ಸದಾ ನಡೆಯುತ್ತಲೇ ಇರುತ್ತದೆ. ಎಲ್ಲಿಯವರೆಗೆ? ಪ್ರಾರ್ಥನೆ ಭಗವಂತನಿಗೆ ತಲುಪಿ, ಅದು ನಿಮಗೆ ತಲುಪಿ, ನೀವು ಮತ್ತೆ ಹುಟ್ಟಿ ಬರುವವರೆಗೂ… ಭಾರದ ಮನಸ್ಸಿನಿಂದ ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇವೆ ಮರೆಯದಿರಿ.
ಹೋಗಿ ಬನ್ನಿ ಅಟಲ್ ಜೀ…
-ಎಸ್.ಆರ್. ಅನಿರುದ್ಧ ವಸಿಷ್ಠ
Discussion about this post