ನವದೆಹಲಿ: ನಿನ್ನೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಂಚಭೂತಗಳಲ್ಲಿ ಲೀನರಾಗಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ಮಾರಕವಿರುವ ಸ್ಮೃತಿ ಸ್ಥಳ ಪ್ರದೇಶದಲ್ಲಿಯೇ ಅಟಲ್ ಜೀ ಅವರ ಅಂತ್ಯಸಂಸ್ಕಾರ ಹಿಂದೂ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ನೆರವೇರಿಸಲಾಗಿದ್ದು, ಈ ಮೂಲಕ ದೇಶದ ಅಪ್ರತಿಮ ನೇತಾರ, ಅಭಿವೃದ್ಧಿಯ ಹರಿಕಾರ ಹಾಗೂ ಪ್ರಖರ ರಾಷ್ಟ್ರೀಯವಾದಿಯೊಬ್ಬರ ಯುಗಾಂತ್ಯವಾಗಿದೆ.
ಸುಮಾರು 2 ಗಂಟೆಗೆ ಬಿಜೆಪಿ ಕೇಂದ್ರ ಕಚೇರಿಯಿಂದ ಹೊರಟ ಪಾರ್ಥಿವ ಶರೀರದ ಮೆರವಣಿಗೆ 3.50ರ ವೇಳೆಗೆ ಸ್ಮೃತಿ ಸ್ಥಳ ತಲುಪಿತು. ಇಲ್ಲಿ, ಅಗಲಿದ ಮಾಜಿ ಪ್ರಧಾನಿಗೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು.
ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ನೌಕಾಪಡೆಯ ಚೀಫ್ ಅಡ್ಮಿರಲ್ ಸುನಿಲ್ ಲಂಬಾ, ವಾಯ ಸೇನೆಯ ಮುಖ್ಯಸ್ಥ ಮಾರ್ಷಲ್ ಬೀರೇಂದರ್ ಸಿಂಗ್ ಸೇನೆಯ ಪರವಾಗಿ ಪ್ರತ್ಯೇಕವಾಗಿ ಅಂತಿಮ ಗೌರವ ಸಲ್ಲಿಸಿದರು.
ಆನಂತರ ಪ್ರಧಾನಿ ಮೋದಿ ಸೇರಿದಂತೆ ದೇಶ ವಿದೇಶಗಳ ಗಣ್ಯರು ಅಂತಿಮ ನಮನ ಸಲ್ಲಿಸಿದರು.
ಆನಂತರ ಪೆಟ್ಟಿಗೆಯಿಂದ ಪಾರ್ಥಿವ ಶರೀರವನ್ನು ಬ್ರಾಹ್ಮಣ ಸಂಪ್ರದಾಯದಂತೆ ಚಟ್ಟದಲ್ಲಿರಿಸಿ, ವೇದಘೋಷಗಳೊಂದಿಗೆ ಪುರೋಹಿತರು ಅಂತಿಮ ವಿಧಿಗಳನ್ನು ನಡೆಸಿದರು.
ಸೇನೆಯ ವತಿಯಿಂದ ಮೂರು ಸುತ್ತು ಕುಶಾಲ ತೋಪು ಹಾರಿಸಿ ಗೌರವ ಸಲ್ಲಿಸಲಾಯಿತು.
ಕುಟುಂಬಸ್ಥರು ವಾಜಪೇಯಿ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಷ ಮಾಡುವ ಮೂಲಕ ಸಂಸ್ಕಾರ ನೆರವೇರಿಸಿದರು.
Discussion about this post