ನವದೆಹಲಿ: ನಿಜಕ್ಕೂ ಇದು ಅತ್ಯಂತ ಹೃದಯವನ್ನೇ ಹಿಂಡುವ ಗಳಿಗೆಗಳು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಸಂಸ್ಕಾರ ಇಂದು ನೆರವೇರಿದ್ದು, ಸ್ಮೃತಿ ಸ್ಥಳದಲ್ಲಿ ಎಲ್ಲ ರೀತಿ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು.
ಸೇನೆಯ ಮೂರೂ ಪಡೆಗಳ ಮುಖ್ಯಸ್ಥರು, ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಗಣ್ಯಾತಿಗಣ್ಯರು ಹಾಗೂ ಸಾರ್ಕ್ ದೇಶಗಳ ಮುಖ್ಯಸ್ಥರು ಅಂತಿಮ ಗೌರವ ಸಲ್ಲಿಸಿದರು.
ಸರ್ಕಾರಿ ನಿಯಮದಂತೆ ರಾಷ್ಟ್ರದ ಪರವಾಗಿ ಅಂತಿಮ ಗೌರವ ಸಲ್ಲಿಸಿದ ನಂತರ ಅಟಲ್ ಜೀ ಅವರ ಕೊನೆಯ ಉಡುಗೊರೆಯನ್ನು ಅವರ ಕುಟುಂಬಸ್ಥರಿಗೆ ನೀಡಲಾಯಿತು. ಆ ಉಡುಗೊರೆ ಏನು ಗೊತ್ತಾ?
ವಾಜಪೇಯಿ ನಿನ್ನೆ ನಿಧನರಾದ ನಂತರ ನಿಯಮದಂತೆ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜ…
ಸಾಮಾನ್ಯವಾಗಿಸುಮಾರು 2 ಗಂಟೆಗೆ ಬಿಜೆಪಿ ಕೇಂದ್ರ ಕಚೇರಿಯಿಂದ ಹೊರಟ ಪಾರ್ಥಿವ ಶರೀರದ ಮೆರವಣಿಗೆ 3.50ರ ವೇಳೆಗೆ ಸ್ಮೃತಿ ಸ್ಥಳ ತಲುಪಿತು. ಇಲ್ಲಿ, ಅಗಲಿದ ಮಾಜಿ ಪ್ರಧಾನಿಗೆ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು.
ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ನೌಕಾಪಡೆಯ ಚೀಫ್ ಅಡ್ಮಿರಲ್ ಸುನಿಲ್ ಲಂಬಾ, ವಾಯ ಸೇನೆಯ ಮುಖ್ಯಸ್ಥ ಮಾರ್ಷಲ್ ಬೀರೇಂದರ್ ಸಿಂಗ್ ಸೇನೆಯ ಪರವಾಗಿ ಪ್ರತ್ಯೇಕವಾಗಿ ಅಂತಿಮ ಗೌರವ ಸಲ್ಲಿಸಿದರು.
ಶಿಷ್ಠಾಚಾರದಂತೆ ಗಣ್ಯಾತಿಗಣ್ಯರಿಗೆ ಅವರು ನಿಧನರಾದ ನಂತರ ಪಾರ್ಥಿವ ಶರೀರದ ಮೇಲೆ ಹೊದಿಸಲಾಗುವ ರಾಷ್ಟ್ರಧ್ವಜವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ.
ವಾಜಪೇಯಿ ಅವರಿಗೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಸೇನಾಧಿಕಾರಿಗಳು ನಿಯಮದಂತೆ ಗೌರವಪೂರ್ವಕವಾಗಿ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ವಾಜಪೇಯಿ ಅವರ ಮೊಮ್ಮಗಳು ನಿಹಾರಿಕಾ ಅವರ ಕುಟುಂಬದ ಪರವಾಗಿ ಧ್ವಜವನ್ನು ಸ್ವೀಕರಿಸಿದರು.
ನಿಜಕ್ಕೂ ಇದೊಂದು ಭಾವನಾತ್ಮಕ ಗಳಿಗೆಯಾಗದ್ದು, ನೋಡುಗರಿಗೆ ಮನಕಲಕುವಂತಿತ್ತು.
Discussion about this post