ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಮ್ಮಲ್ಲಿ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಸುಧಾಣೆಯಾಗುತ್ತಿದ್ದಂತೆ ಸ್ತ್ರೀ ಪುರುಷರ ನಿಷ್ಪತ್ತಿಯಲ್ಲಿ ಕೆಲವು ಬದಲಾವಣೆಗಳಾಗುತ್ತಿರುವುದನ್ನು ನಾವು ಗಮನಿಸಬಹುದು. 1991ರಲ್ಲಿ ಒಂದು ಸಾವಿರ ಮಂದಿ ಪುರುಷರಿಗೆ 945 ಮಂದಿ ಸ್ತ್ರೀಯರಿದ್ದು 2001ರಲ್ಲಿ ಈ ಸಂಖ್ಯೆ 927ಕ್ಕೆ ಇಳಿದಿತ್ತು.
2011ರ ಸೆನ್ಸಸ್ ಪ್ರಕಾರ ಈ ದೇಶದಲ್ಲಿ ಸಾವಿರ ಗಂಡಸರಿಗೆ 943 ಹೆಂಗಸರು ಹಾಗೂ 1000 ಗಂಡು ಮಕ್ಕಳಿಗೆ 933 ಹೆಣ್ಣು ಮಕ್ಕಳು ಇದ್ದಾರೆ ಎಂತಲೂ ತಿಳಿದುಬಂದಿತು.
ಈಗ ಕರ್ನಾಟಕದಲ್ಲಿ 1000 ಪುರುಷರಿಗೆ 973 ಸ್ತ್ರೀಯರಿದ್ದಾರೆ. ಆದರೆ 1000 ಗಂಡು ಮಕ್ಕಳಿಗೆ 948 ಹೆಣ್ಣುಮಕ್ಕಳಿದ್ದಾರೆ ಎಂದು ತಿಳಿದುಬಂದಿತು. ಹಾಗಾಗಿ, ನಮ್ಮಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿರುವುದು ಆತಂಕಕಾರಿಯಾಗಿದೆ.
ಪುದುಚೇರಿ ಮತ್ತು ಕೇರಳ ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ ಸ್ತ್ರೀಯರ ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ಉತ್ತರ ಭಾರತದ ಹರಿಯಾಣದಲ್ಲಿ 1000 ಪುರುಷರಿಗೆ ಕೇವಲ 877 ಸ್ತ್ರೀಯರಿದ್ದಾರೆ. ಈ ಲಿಂಗ ತಾರತಮ್ಯಕ್ಕೆ ಕಾರಣ ಹುಡುಕಿದಾಗ ಜನಸಂಖ್ಯಾತಜ್ಞರ ಪ್ರಕಾರ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮುಖ್ಯ ಕಾರಣ ಎಂದು ತಿಳಿದುಬಂದಿದೆ.
ಈ ಪ್ರಕ್ರಿಯೆ ಪೇಟೆ-ಪಟ್ಟಣಗಳಲ್ಲಿ ಹಾಗೂ ಆರ್ಥಿಕ ಸಬಲತೆಯನ್ನು ಹೊಂದುತ್ತಿರುವ ಗ್ರಾಮದ ಕುಟುಂಬಗಳಲ್ಲಿ ನಡೆಯುತ್ತದೆ. ಆರ್ಥಿಕ ತಜ್ಞರ ಅಭಿಪ್ರಾಯದಂತೆ ಈ ಲಿಂಗ ತಾರತಮ್ಯಕ್ಕೂ ಆರ್ಥಿಕ ಸಬಲತೆಗೂ ಸಂಬಂಧವಿದೆ. 1971ರ ಮೊದಲು ಬೇಡವಾದ ಹೆಣ್ಣುಮಕ್ಕಳಿಗೆ ಅಗತ್ಯವಿರುವ ಪೋಷಣೆ ಕೊಡದೆ ರೋಗ ಬಂದಾಗ ಔಷಧೋಪಚಾರ ಮಾಡದೆ ಅವರ ಬದುಕನ್ನೇ ಮೊಟಕುಗೊಳಿಸಲಾಗುತ್ತಿತ್ತು.
ಯಾವುದಕ್ಕೇ ಕಾನೂನಿನಲ್ಲಿ ಅವಕಾಶವಿದೆ?
ಅಲ್ಟ್ರಾ ಸೋನೋಗ್ರಫಿ ತಂತ್ರಜ್ಞಾನವನ್ನು ಬಳಸಿ ಗರ್ಭದಲ್ಲಿನ ಶಿಶುವಿನಲ್ಲಿ ಇರಬಹುದಾದ ವಿಭಿನ್ನ ಸಮಸ್ಯೆ, ವಂಶವಾಹಿನಿಗೆ ಸಂಬಂಧಿಸಿದ ಕಾಯಿಲೆ, ಜನ್ಮತಃ ಉಂಟಾಗಬಹುದಾದ ಅಂಗವಿಕಲತೆ, ಅಸಾಮರ್ಥ್ಯ ಇತ್ಯಾದಿಗಳನ್ನು ಪತ್ತೆ ಹಚ್ಚಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದೇ ವಿನಾ ಭ್ರೂಣ ಲಿಂಗ ಪತ್ತೆಗೆ ಬಳಸಿದರೆ ಅದು ಭ್ರೂಣ ಹತ್ಯೆಯಂತಹ ಅಪರಾಧವಾದೀತು.
ಆದರೆ, ಈಗಿನ ತಂತ್ರಜ್ಞಾನ ಪರಿಸ್ಥಿತಿಯನ್ನು ಬದಲಾಯಿಸಿದೆ. ಮೊದಲಿದ್ದ ಹೆಣ್ಣು ಶಿಶು ಹತ್ಯೆ ಈಗ ಭ್ರೂಣ ಹತ್ಯೆಯ ಮಟ್ಟಕ್ಕೆ ಬಂದಿದೆ. ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಇಂದು ವ್ಯಾಪಾರದ ವ್ಯವಸ್ಥೆಯಾಗಿರುವುದು ಗೌಪ್ಯವಾಗಿ ಉಳಿದಿಲ್ಲ. ಅದು ಕಾನೂನು ಕಾಯ್ದೆಗಳನ್ನು ಮೀರಿನಿಂತಿದೆ ಎಂದರೆ ತಪ್ಪಲ್ಲ.
2005ರ ಒಂದು ಅಧ್ಯಯನ ಪ್ರಕಾರ ಏಷ್ಯಾ ಖಂಡದ ಏಳು ರಾಷ್ಟ್ರಗಳಲ್ಲಿ ನಡೆಸಿದ ಸಮೀಕ್ಷೆ ಸುಮಾರು 90 ಮಿಲಿಯನಷ್ಟು ಸ್ತ್ರೀಯರ ಸಂಖ್ಯೆ ಕಡಿಮೆಯಾಗಿದೆ ಎಂದು ವರದಿ ಮಾಡಿದೆ. ಇದಕ್ಕೆ ಮುಖ್ಯಕಾರಣ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಎನ್ನಲಾಗಿದೆ.
ಅಲ್ಟ್ರಾ ಸೌಂಡ್ ಉಪಕರಣದ ಮೂಲಕ ಈ ಕೆಲಸ ಸುಲಭವಾಗಿದೆ. ಇತ್ತೀಚೆಗೆ ಬಂದ ಪಿಸಿಆರ್ ತಂತ್ರಜ್ಞಾನ ಈ ವಿಷಯದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಭ್ರೂಣ ಗರ್ಭಕೋಶ ಸೇರುವ ಮೊದಲೇ ಲಿಂಗಪತ್ತೆ/ಆಯ್ಕೆ ಮಾಡುವ ಸಾಧ್ಯತೆ ಇದ್ದು, ಬಾಹ್ಯ ಗರ್ಭಧಾರಣೆ ವ್ಯವಸ್ಥೆಯಲ್ಲಿ ಇದು ಸಹಕಾರಿಯಾಗಬಹುದು.
ಆದರೆ, ಇಲ್ಲಿ ನೈತಿಕ ಭಿನ್ನಾಭಿಪ್ರಾಯಗಳಿವೆ. ಗರ್ಭಿಣಿಯ ಗರ್ಭ ಧಾರಣಾದ್ರವ ಪರೀಕ್ಷಿಸಿ ಅದರಲ್ಲಿನ ವರ್ಣ ತಂತುಗಳನ್ನು ಗುರುತಿಸಿ ಭ್ರೂಣಲಿಂಗ ಪತ್ತೆ ಮಾಡಬಹುದು. ಮಾತ್ರವಲ್ಲದೇ ಭ್ರೂಣದ ವಂಶವಾಹೀ ಸಾಮಾಗ್ರಿಯಿಂದಲೂ ಮಾಡಬಹುದು. ಅದು ಗರ್ಭಿಣಿಯ ರಕ್ತದಲ್ಲಿರುತ್ತದೆ.
ಭಾರತದಲ್ಲಿ ಈ ಅಲ್ಟ್ರಾ ಸೌಂಡ್ ಪರೀಕ್ಷೆ 1980ರಲ್ಲಿ ಪ್ರಾರಂಭವಾಯಿತು. ಇದರ ದುರುಪಯೋಗ ಆಗದಿರಲಿ ಎಂಬ ದೃಷ್ಠಿಯಿಂದ ಕೇಂದ್ರ ಸರ್ಕಾರ ಇದಕ್ಕಾಗಿ ಕಾನೂನು ಕಾಯ್ದೆಯೊಂದನ್ನು ಜಾರಿಗೊಳಿಸಿತು. ಅದು ಪಿಸಿ-ಪಿಎನ್‌ಟಿಡಿ ಆಕ್ಟ್ 1994. ಈ ಕಾಯ್ದೆಯ ಪ್ರಕಾರ ಗರ್ಭಧಾರಣೆ ಹಾಗೂ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾನೂನು ಬಾಹಿರವಾಗಿದೆ. ಇದು ಶಿಕ್ಷಾರ್ಹ ಅಪರಾಧವೂ ಹೌದು.
ಈ ಪರೀಕ್ಷೆ ಗರ್ಭ ಧರಿಸಿದ 3 ತಿಂಗಳೊಳಗೆ ವಿಶೇಷ ಪ್ರಯೋಗಾಲಯಗಲ್ಲಿ ಮಾತ್ರ ಮಾಡಲಾಗುವುದು. ಇದನ್ನು ಅಲ್ಟ್ರಾಸೋನೋಗ್ರಫಿ ವಿಧಾನದಿಂದಲೂ ಸುಮಾರು 15 ವಾರಗಳ ಬಳಿಕ ಪರೀಕ್ಷಿಸಿ ಹೇಳಬಹುದು. ಸುಮಾರು 18ರಿಂದ 20 ವಾರಗಳಲ್ಲಿ ಅಲ್ಟ್ರಾಸೌಂಡ್ ಮೂಲಕ ಲಿಂಗ ಗುರುತಿಸಿ ಮುಂದೆ ಜನಿಸುವ ಮಗು ಗಂಡೋ ಹೆಣ್ಣೋ ಎಂದು ನಿಖರವಾಗಿ ಹೇಳಬಹುದು.
1996ರಿಂದ ಜಾರಿಯಾಗಿರುವ ಪಿಸಿ-ಪಿಎನ್’ಟಿಡಿ ಆಕ್ಟ್ 1994 ಕಾನೂನಿನ್ವಯ ಯಾರಾದರೂ ಕಾನೂನು ಮೀರಿಕಾರ್ಯ ಪ್ರವೃತ್ತರಾದರೆ ಹೆಚ್ಚಿನ ದಂಡ ತೆತ್ತು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಲ್ಟ್ರಾ ಸೋನೋಗ್ರಫಿ ತಂತ್ರಜ್ಞಾನವನ್ನು ಬಳಸಿ ಗರ್ಭದಲ್ಲಿನ ಶಿಶುವಿನಲ್ಲಿ ಇರಬಹುದಾದ ವಿಭಿನ್ನ ಸಮಸ್ಯೆ, ವಂಶವಾಹಿನಿಗೆ ಸಂಬಂಧಿಸಿದ ಕಾಯಿಲೆ, ಜನ್ಮತಃ ಉಂಟಾಗಬಹುದಾದ ಅಂಗವಿಕಲತೆ, ಅಸಾಮರ್ಥ್ಯ ಇತ್ಯಾದಿಗಳನ್ನು ಪತ್ತೆ ಹಚ್ಚಿ ಸೂಕ್ತ ಪರಿಹಾರ ಕಂಡುಕೊಳ್ಳಬಹುದೇ ವಿನಾ ಭ್ರೂಣ ಲಿಂಗ ಪತ್ತೆಗೆ ಬಳಸಿದರೆ ಅದು ಭ್ರೂಣ ಹತ್ಯೆಯಂತಹ ಅಪರಾಧವಾದೀತು.
ಇತ್ತೀಚೆಗಷ್ಟೇ ಚಿತ್ರದುರ್ಗ ಜಿಲ್ಲೆಯಲ್ಲಿನ ಸಂಸ್ಥೆಯೊಂದು ಈ ಕಾನೂನನ್ನು ಮೀರಿ ಭ್ರೂಣ ಲಿಂಗಪತ್ತೆ ಮಾಡಿ ಕಾನೂನು ರಕ್ಷಣಾ ಮೇಲ್ವಿಚಾರಕರ ಕಣ್ಣಿಗೆ ಬಿದ್ದು ಸೂಕ್ತ ಕ್ರಮ ಎದುರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ಬಾಧ್ಯತೆ ಲಭಿಸುತ್ತಿದ್ದು ಸ್ತ್ರೀ ಸಬಲೀಕರಣ, ಸಮಾನತೆ ಎಂಬ ವಿಷಯಗಳು ತೀವ್ರ ಚರ್ಚೆಗೆ ಒಳಗಾಗುತ್ತಿರುವಾಗಲೇ ಇಂತಹ ಪ್ರಕರಣಗಳು ವರದಿಯಾಗುತ್ತಿರುವುದು ವಿಪರ್ಯಾಸವೇ ಸರಿ. ಪ್ರಸ್ತುತ ಜನಾರೋಗ್ಯದ ಕಾಳಜಿ ಎಲ್ಲಾ ವೈದ್ಯರಲ್ಲೂ ಇದೆ. ಅದರೊಂದಿಗೆ ಈ ಆರೋಗ್ಯ ರಕ್ಷಣಾ ಕಾಯ್ದೆಗಳ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕಾದ ಅಗತ್ಯವೂ ಇದೆ.
Get in Touch With Us info@kalpa.news Whatsapp: 9481252093
Discussion about this post