ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಿಚ್ಚಿ ನಾಯಕನಾಗಿ ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಾಣ ಮಾಡಿರುವ ರಿಚ್ಚಿ #Ricchi ಚಿತ್ರಕ್ಕಾಗಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ #KunalGanjawala ಹಾಡಿರುವ ಕಳೆದು ಹೋಗಿರುವೆ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು.
ಈ ಕಾರ್ಯಕ್ರಮಕ್ಕೆ ಕುನಾಲ್ ಗಾಂಜಾವಾಲ ಸ್ವತಃ ಹಾಡು ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರಕ್ಕೆ ಶುಭ ಕೋರಿದ್ದು ವಿಶೇಷವಾಗಿತ್ತು.
ಸಾಮಾನ್ಯವಾಗಿ ನಾನು ನನ್ನ ಹಾಡುಗಳ ಬಿಡುಗಡೆ ಸಮಯದಲ್ಲಿ ಹೆಚ್ಚು ಕಾಣಿಸುವುದಿಲ್ಲ. ಆದರೆ, ಇಲ್ಲಿ ಸಂಗೀತ ನಿರ್ದೇಶಕ ಅಗಸ್ತ್ಯ ಸಂತೋಷ್ ಹಾಗೂ ರಿಚ್ಚಿ ಅವರಿಗಾಗಿ ಬಂದಿದ್ದೇನೆ.
ಈ ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದ್ದೇನೆ. ಒಂದು ಮೆಲೋಡಿ, ಮತ್ತೊಂದು ಪ್ಯಾಥೋ ಸಾಂಗ್ ಇಂದು ಮೆಲೋಡಿ ಸಾಂಗ್ ಬಿಡುಗಡೆಯಾಗಿದೆ.
ಅಗಸ್ತ್ಯ ಅವರ ಸಂಗೀತ ಸಂಯೋಜನೆ ಚೆನ್ನಾಗಿದೆ. ಚಿನ್ನಿಪ್ರಕಾಶ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಗೌಸ್ ಫಿರ್ ಬರೆದಿದ್ದಾರೆ. ರಿಚ್ಚಿ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಕುನಾಲ್ ಗಾಂಜಾವಾಲ ಹಾರೈಸಿದರು.
2005ರಲ್ಲಿ ಆಕಾಶ್ ಚಿತ್ರದ ಹಾಡು ಹಾಡಲು ಬಂದಾಗ ಡಾ.ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಅವರು ನನ್ನ ಕೈಗೊಂದು ಮುತ್ತು ಕೊಟ್ಟಿದ್ದರು. ಅದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆ ಎಂದ ಕುನಾಲ್ ಗಾಂಜಾವಾಲ, ಪುನೀತ್ ರಾಜಕುಮಾರ್ ಅವರೊಟ್ಟಿಗಿನ ಒಡನಾಟವನ್ನು ನೆನಪಿಸಿಕೊಂಡರು.
ರಿಚ್ಚಿ ಒಂದು ಪ್ರೇಮಕಥೆಯ ಚಿತ್ರ. ನಾನು ಚಿಕ್ಕಂದಿನಿಂದಲೇ ಕುನಾಲ್ ಗಾಂಜಾವಾಲ ಅವರ ಅಭಿಮಾನಿ. ನನ್ನ ಚಿತ್ರಕ್ಕೆ ಅವರು ಹಾಡಬೇಕೆಂಬುದು ನನ್ನ ಆಸೆ. ಅದು ಈಡೇರಿದೆ. ಎರಡು ಹಾಡುಗಳನ್ನು ಅವರು ಹಾಡಿದ್ದಾರೆ. ಒಂದು ಈಗ ಬಿಡುಗಡೆಯಾಗಿದೆ. ಕನ್ನಡ ಹಾಗೂ ಹಿಂದಿಯಲ್ಲಿ ಈ ಚಿತ್ರ ಬರಲಿದೆ.
ಆಗಸ್ಟ್’ನಲ್ಲಿ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಾಯಕ, ನಿರ್ಮಾಪಕ ಹಾಗೂ ನಿರ್ದೇಶಕ ರಿಚ್ಚಿ ಹೇಳಿದರು.
ಸಂಗೀತ ನಿರ್ದೇಶಕ ಅಗಸ್ತ್ಯ ಸಂತೋಷ್ ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ಸಹ ನಿರ್ಮಾಪಕ ರಾಕೇಶ್ ರಾವ್, ಪ್ರಕೃತಿ ಬನವಾಸಿ, ನಿರ್ಮಾಪಕರಾದ ಅಣಜಿ ನಾಗರಾಜ್, ವೆಂಕಟೇಶ್ ಮುಂತಾದವರು ಹಾಡು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post